news18-kannada Updated:July 31, 2020, 3:34 PM IST
ಹೆಚ್.ಡಿ. ದೇವೇಗೌಡ
ಬೆಂಗಳೂರು (ಜುಲೈ.31): ವಿಧಾನ ಪರಿಷತ್ ಸದಸ್ಯ ಸಿ ಪಿ ಯೋಗೇಶ್ವರ್ ಮಾಡಿರುವ ಆರೋಪಕ್ಕೆ ಏನಾದರು ಸಾಕ್ಷಿಯಾಧಾರ ಇದೆಯಾ ? ಕುಮಾರಸ್ವಾಮಿ ಕದ್ದು ಹೋಗಿ ಯಾರನ್ನೂ ಭೇಟಿ ಮಾಡುವ ಅವಶ್ಯಕತೆ ಇಲ್ಲ. ಯಡಿಯೂರಪ್ಪ ಅವರು ಹೇಳಿದಂತೆ ಒಂದು ಕಾಲದಲ್ಲಿ ಕುಮಾರಸ್ವಾಮಿ ಅಧಿಕಾರ ಮಾಡಿದ್ದಾರೆ. ಸುಮ್ಮನೆ ಈ ರೀತಿ ಲಘುವಾಗಿ ಮಾತಾಡಬಾರದು ಎಂದು ಯೋಗೇಶ್ವರ್ ಆರೋಪಕ್ಕೆ ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್ ಡಿ ದೇವೇಗೌಡ ತಿರುಗೇಟು ನೀಡಿದ್ದಾರೆ.
ಕುಮಾರಸ್ವಾಮಿ ಯಾವುದೇ ಕಾರಣಕ್ಕೂ ಸರ್ಕಾರವನ್ನು ಅಸ್ಥಿರ ಮಾಡಲ್ಲ ಅಂತಾ ಹೇಳಿದ್ದಾರೆ. ಅವರಲ್ಲೇ ವ್ಯತ್ಯಾಸಗಳು ಬಂದರೆ ಆಗ ಚುನಾವಣೆ ಬರುತ್ತದೆ. ಅಷ್ಟೇ ಹೊರತು ಬಿಜೆಪಿ ಪರವಾಗಿ ಕುಮಾರಸ್ವಾಮಿ ಇದ್ದಾರೆ ಎನ್ನುವುದು ಸುಳ್ಳು. ನಾವು ಸರ್ಕಾರ ಅಸ್ಥಿರಗೊಳಿಸಲ್ಲ ಅಂತ ಹೇಳಿದ್ದೇವೆ, ನಾವ್ಯಾಕೆ ಬಿಜೆಪಿ ಸರ್ಕಾರ ಅಸ್ಥಿರಗೊಳಿಸಬೇಕು. ಅದರ ಅವಶ್ಯಕತೆ ನನಗೆ ಇಲ್ಲ. ವಿಧಾನಸಭಾ ಚುನಾವಣೆಗೊಸ್ಕರ ನಾನು ಸಭೆ ಕರೆದಿಲ್ಲ. 33 ಜನ ಶಾಸಕರು ನಮ್ಮ ಪಕ್ಷದಲ್ಲಿ ಇದ್ದಾರೆ. ಪಕ್ಷವನ್ನ ಬೆಳೆಸುವುದಕ್ಕೆ ಶಕ್ತಿಮೀರಿ ಪ್ರಯತ್ನ ಮಾಡುತ್ತೇವೆ ಎಂದರು
ರಾಜ್ಯ ಸರ್ಕಾರದ ಜನ ವಿರೋಧಿ ಕಾಯಿದೆ ತಿದ್ದುಪಡಿಗಳ ಬಗ್ಗೆ ಪ್ರತಿಭಟಿಸಲು ಪೂರ್ವ ಭಾವಿ ಸಭೆ ಕರೆದಿದ್ದೇವೆ, ಆಗಸ್ಟ್ 4 ರಂದು ಜೆಪಿ ಭವನದಲ್ಲಿ ಜೆಡಿಎಸ್ ಪಕ್ಷದ ಶಾಸಕರು, ಸೋತ ಅಭ್ಯರ್ಥಿ ಗಳು, ಜಿಲ್ಲಾ ಅಧ್ಯಕ್ಷರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಹಾಗೂ ತಾಲೂಕು ಅಧ್ಯಕ್ಷರ ಸಭೆಯನ್ನು ಮತ್ತೊಂದು ಬಾರಿ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.
ಅಧಿವೇಶನ ಕರೆಯಲು ರಾಜ್ಯ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಈ ಬಗ್ಗೆ ರಾಜ್ಯಪಾಲರಿಗೆ ಪತ್ರ ಬರೆಯುತ್ತೇವೆ. ರಾಜ್ಯಾದ್ಯಂತ ಯಾವ ರೀತಿ ಪ್ರತಿಭಟನೆ ಮಾಡಬೇಕು ಎಂದು ಸಭೆಯಲ್ಲಿ ನಿರ್ಧಾರ ಮಾಡುತ್ತೇವೆ. ರಾಜ್ಯ ಸರ್ಕಾರ ರೈತವಿರೋಧಿ ಕಾಯಿದೆ ತಿದ್ದುಪಡಿ ಗಳ ವಿರೋಧ ಪ್ರತಿಭಟನೆಗೆ ನಿರ್ಧಾರ ಮಾಡುತ್ತೇವೆ ಮಾಜಿ ಪ್ರಧಾನಿ ದೇವೇಗೌಡರು ತಿಳಿಸಿದರು
ಜೆಡಿಎಸ್ ಕಾರ್ಯಕರ್ತರನ್ನ ಡಿಕೆ ಸಹೋದರರು ಕಾಂಗ್ರೆಸ್ ಸೆಳೆಯುತ್ತಾರೆಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ದೇವೇಗೌಡರು, ನಾನು ಊಹಾಪೋಹದ ಮಾತುಗಳಿಗೆ ಉತ್ತರ ನೀಡಲ್ಲ. ನನಗೆ ಸಾಕಷ್ಟು ರಾಜಕೀಯ ಅನುಭವ ಇದೆ. ನನಗೆ ಏನು ನಡೆಯುತ್ತಿದೆ ಎಲ್ಲವೂ ಗೊತ್ತಿದೆ. ಅವರ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಬರುವುದಾದರೆ ಬನ್ನಿ ಎಂದಿದ್ದಾರೆ. ಸೂಕ್ತ ಸಂದರ್ಭದಲ್ಲಿ ಈ ಬಗ್ಗೆ ನಾನು ಮಾತನಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ :
ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕಾಂಗ್ರೆಸ್ ಸುಳ್ಳು ಆರೋಪ - ಸಿದ್ಧರಾಮಯ್ಯ, ಡಿಕೆಶಿಗೆ ನೋಟೀಸ್ ; ರವಿಕುಮಾರ್
ರಾಜ್ಯ ಸರ್ಕಾರ ಟಿಪ್ಪು ವಿಚಾರವನ್ನು ಪಠ್ಯದಿಂದ ತೆಗೆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹಿಂದೆ ಪ್ರಾಥಮಿಕ ಶಾಲೆಯಲ್ಲಿ ಟಿಪ್ಪು ಪಾಠವನ್ನು ನಾವೇ ಓದಿದ್ದೇವೆ. ಟಿಪ್ಪು ಹೆಸರಲ್ಲಿ ಗುಲ್ಬರ್ಗಾ, ಬಿಜಾಪುರ, ಶ್ರೀರಂಗಪಟ್ಟಣ, ರಾಮನಗರ, ಧಾರವಾಡದಲ್ಲಿ ಟಿಪ್ಪು ಹೆಸರಲ್ಲಿ ರೆಸಿಡೆನ್ಸಿಯಲ್ ಶಾಲೆ ಮಾಡಿದ್ದೇವೆ. ಆಗ ಯಾರೂ ವಿರೋಧ ಮಾಡಲಿಲ್ಲ. ಈಗ ಈ ವಿಚಾರದಲ್ಲಿ ಅನಗತ್ಯ ವಿವಾದ ಸೃಷ್ಟಿ ಮಾಡೋದು ಬೇಕಿರಲಿಲ್ಲ. ಈ ಬಗ್ಗೆ ಸರ್ಕಾರ ಮತ್ತೆ ಪರಿಶೀಲನೆ ಮಾಡಬೇಕು. ಎಲ್ಲರಿಗೂ ಸಮಾಧಾನ ಆಗುವಂತಹ ನಿರ್ಧಾರ ಮಾಡಬೇಕು ಎಂದರು.
ದೇವೇಗೌಡರು ಚನ್ನರಾಯಪಟ್ಟಣ ನಗರ ಠಾಣೆ ಪಿಎಸ್ಐ ಕಿರಣ್ ಆತ್ಮಹತ್ಯೆ ಕುರಿತು ಮಾತನಾಡಿದ ಅವರು, ಈ ಪ್ರಕರಣದ ಸಂಪೂರ್ಣ ತನಿಖೆ ಆಗಬೇಕು. ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೆ ಮೇಲಾಧಿಕಾರಿಗಳು ಹಿಂಸೆ ಕೊಟ್ಟಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಈ ಬಗ್ಗೆ ಗೃಹ ಸಚಿವರು ಸೂಕ್ತ ತನಿಖೆ ಮಾಡಬೇಕು ಎಂದು ದೇವಗೌಡರು ಒತ್ತಾಯಿಸಿದರು.
Published by:
G Hareeshkumar
First published:
July 31, 2020, 3:01 PM IST