ದಲಿತ ಜಿ.ಪಂ. ಅಧ್ಯಕ್ಷೆ ಹೇಳಿಕೆಗೆ ಹೆಚ್.ಡಿ. ರೇವಣ್ಣ ತಿರುಗೇಟು; ಲಿಫ್ಟ್ ಘಟನೆ ಸ್ಮರಿಸಿದ ಜೆಡಿಎಸ್ ನಾಯಕ

1995ರಲ್ಲೇ ದೇವೇಗೌಡರು ಹಾಸನ ಜಿಪಂ ಅಧ್ಯಕ್ಷರನ್ನಾಗಿ ದಲಿತರನ್ನ ಮಾಡಿದ್ದರು. ಮೊದಲ ಬಾರಿಗೆ ಮೀಸಲಾತಿ ತಂದವರು ದೇವೇಗೌಡರು ಎಂದು ಶ್ವೇತಾ ದೇವರಾಜ್​ಗೆ ರೇವಣ್ಣ ತಿರುಗೇಟು ನೀಡಿದರು.

ಹೆಚ್.ಡಿ. ರೇವಣ್ಣ

ಹೆಚ್.ಡಿ. ರೇವಣ್ಣ

  • Share this:
ಹಾಸನ: ಹಾಸನ ಜಿಲ್ಲಾ ಪಂಚಾಯತ್​ನಲ್ಲಿ ಈಗ ಜಾತಿ ಜಂಜಾಟದ ಜಗಳ ಜೋರಾಗಿದೆ. ಮೊನ್ನೆಯಷ್ಟೇ ಹಾಸನ ಜಿಲ್ಲಾ ಪಂಚಾಯತ್​ ಅಧ್ಯಕ್ಷೆ ಶ್ವೇತಾ ದೇವರಾಜ್​ ಅವರು ನಾನು ದಲಿತೆ ಎಂಬ ಕಾರಣಕ್ಕೆ ಸಾಮಾನ್ಯ ಸಭೆಗೆ ಎಲ್ಲಾ ಜೆಡಿಎಸ್ ಸದಸ್ಯರು ಗೈರಾಗಿದ್ದರು ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ವಿರುದ್ಧ ಪರೋಕ್ಷವಾಗಿ ಆರೋಪ ಮಾಡಿದ್ದರು. ಇದಕ್ಕೆ ಹೆಚ್.ಡಿ. ರೇವಣ್ಣ ತಿರುಗೇಟು ಕೊಟ್ಟಿದ್ದಾರೆ.

“ಆ ಯಮ್ಮ ಆಕಸ್ಮಿಕ ಅಧ್ಯಕ್ಷೆ. ಆವರು ಹಾಕಿದ ಜಿಲ್ಲಾ ಪಂಚಾಯತ್​ನ ಲಿಫ್ಟ್​ನಲ್ಲಿ ಹೋಗಿ ನಾನು ಗುಂಡಿಗೆ ಬಿದ್ದು ಸುಟ್ಟೋಗಿ ಸತ್ತೇ ಹೋಗ್ತಿದ್ದೆ. ಆ ಲಿಪ್ಟ್​ ಹಾಕಿದವರು ಯಾರು ಅಂತ ಕೇಳಿ” ಎಂದು ರೇವಣ್ಣ ಗಂಭೀರ ಆರೋಪ ಮಾಡಿದರು.

ಶ್ವೇತಾ ಹೇಳಿದ್ದೇನು?

“ನಾನು ದಲಿತ ಅಧ್ಯಕ್ಷೆ. ಇದನ್ನ ಸಹಿಸಲಾಗದೇ ಜೆಡಿಎಸ್​ ನಾಯಕರು ನಾನು ಕರೆದ ಸಾಮಾನ್ಯ ಸಭೆಗೆ ಗೈರಾಗಿ ಕೋರಂ ಕೊರತೆ ಮೂಡಿಸಿ ಸಭೆ ಮುಂದೂಡುವಂತೆ ಮಾಡಿದ್ದಾರೆ… ನಮ್ಮಿಂದ ಮತ್ತು ನಮ್ಮ ಕಾಂಗ್ರೆಸ್​ನಿಂದ ಲಾಭ ಪಡೆದು ಅವರ ಮಗ ಪ್ರಜ್ವಲ್ ರೇವಣ್ಣ ಸಂಸದರಾದರು. ಆದರೆ, ನಮಗೆ ಈಗ ಅಧಿಕಾರ ನಡೆಸಲು ಸಹಕಾರ​ ನೀಡುತ್ತಿಲ್ಲ..” - ಹೀಗಂತ ಹಾಸನ ಜಿಲ್ಲಾ ಪಂಚಾಯತ್​ ಅಧ್ಯೆಕ್ಷೆ ಶ್ವೇತಾ ದೇವರಾಜ್​ ಮೊನ್ನೆಯಷ್ಟೆ ನೇರಾನೇರ ಗಂಭೀರ ಆರೋಪ ಮಾಡಿದರು.

ಇದನ್ನೂ ಓದಿ: ದೆಹಲಿ, ಮಂಗಳೂರು ಗಲಭೆ ಹಿಂದೆ ಕಾಂಗ್ರೆಸ್ ಕೈವಾಡ; ನಳಿನ್ ಕುಮಾರ್ ಕಟೀಲ್ ಗಂಭೀರ ಆರೋಪ

ಹಾಸನ ಜಿಲ್ಲಾ ಪಂಚಾಯತ್​ ಅಧ್ಯಕ್ಷೆಯ ಮಾತು ಬಹಿರಂಗವಾಗಿದ್ದೇ ತಡ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಕೆಂಡಾಮಂಡಲವಾಗಿದ್ದಾರೆ. ಈ ಹಿಂದೆ 1995ರಲ್ಲೇ ದೇವೇಗೌಡರು ಹಾಸನ ಜಿಪಂ ಅಧ್ಯಕ್ಷರನ್ನಾಗಿ ದಲಿತರನ್ನ ಮಾಡಿದ್ದರು. ಮೊದಲ ಬಾರಿಗೆ ಮೀಸಲಾತಿ ತಂದವರು ದೇವೇಗೌಡರು ಎಂದು ಶ್ವೇತಾ ದೇವರಾಜ್​ಗೆ ರೇವಣ್ಣ ತಿರುಗೇಟು ನೀಡಿದರು. ನಂತರ ಲಿಫ್ಟ್ ಅವಘಡ ಘಟನೆಯನ್ನು ಉಲ್ಲೇಖಿಸಿ ಶ್ವೇತಾ ಅವರನ್ನು ತರಾಟೆಗೆ ತೆಗೆದುಕೊಂಡರು.

“ಅವತ್ತು ಸ್ವಲ್ಪ ಹೆಚ್ಚುಕಮ್ಮಿ ಆಗಿದ್ರೆ ನಾನು ಮತ್ತು ಶಿವಲಿಂಗೇಗೌಡರು ಲಿಪ್ಟ್​ ಒಳಗೆ ಸುಟ್ಟು ಹೋಗುತ್ತಿದ್ದೆವು. ಲಿಪ್ಟ್ ದಢಕ್ಕನೆ ಗುಂಡಿಗೆ ಬಿದ್ದಿತ್ತು. ದೇವರ ದಯೆಯಿಂದ ಜೀವ ಉಳಿತು. ನಾನು ಮಾತಾಡೋಕೆ ಹೊರಟರೆ ಬೇರೆ ರೀತಿ ಆಗುತ್ತೆ. ಏನೋ ತಿಂದುಕೊಂಡು ಹಾಳಾಗಿ ಹೋಗಲಿ ಅಂತ ಸುಮ್ಮನಿದ್ಧೇನೆ. ಆಕೆ ಆಕಸ್ಮಿಕವಾಗಿ ಜಿಲ್ಲಾ ಪಂಚಾಯತ್​ ಅಧ್ಯೆಕ್ಷೆ ಆಗಿದ್ದಾರೆ” ಎಂದು ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ದರೋಡೆಗೆ ಬಂದ ಕಳ್ಳ ಹಾಸಿಗೆಯಲ್ಲಿ ಹಾಯಾಗಿ ನಿದ್ರಿಸಿದ!; ಮಂಗಳೂರಿನಲ್ಲೊಂದು ವಿಚಿತ್ರ ಘಟನೆ!

ಏನಿದು ಲಿಫ್ಟ್ ದುರಂತ?

ಲಿಫ್ಟ್ ದುರಂತ ಸಂಭವಿಸಿದ್ದು 2018ರ ನವೆಂಬರ್ 10ರಂದು. ಆಗ ಲೋಕೋಪಯೋಗಿ ಸಚಿವರಾಗಿದ್ದ ರೇವಣ್ಣ ಹಾಸನ ಜಿಲ್ಲಾ ಪಂಚಾಯತ್​ ಸಭೆ ಮುಗಿಸಿ ಹೊರಹೊರಟಿದ್ದರು. ಅವರು ಮತ್ತು ಶಾಸಕರಾದ ಶಿವಲಿಂಗೇಗೌಡ ಹಾಗೂ ಬಾಲಕೃಷ್ಣ ಮೂವರೂ ಲಿಫ್ಟ್​ನಲ್ಲಿ ಕೆಳಗೆ ಬರುವಾಗ ಧಿಡೀರನೇ ನಿಯಂತ್ರಣ ತಪ್ಪಿ ​ ಗುಂಡಿಯೊಳಗೆ ಹೋಗಿ ಬಿದಿತ್ತು. ಪೊಲೀಸರು ಮತ್ತು ಅಧಿಕಾರಿಗಳು ಕಕ್ಕಾಬಿಕ್ಕಿಯಾಗಿ ಹೋರಾಡಿ ಬಾಗಿಲು ತೆಗೆಸಿ ರೇವಣ್ಣ ಮತ್ತಿತರರನ್ನು ಕೈ ಹಿಡಿದು ಮೇಲೆತ್ತಿದ್ದರು. ಇಲ್ಲಿ ವಿಶೇಷ ಅಂದ್ರೆ ಈ ಲಿಪ್ಟ್​ ಅಳವಡಿಸಲು ಗುತ್ತಿಗೆ​ ಪಡೆದವರು ಇದೇ ಹಾಲಿ ಜಿಲ್ಲಾ ಪಂಚಾಯತ್​ ಅಧ್ಯಕ್ಷೆ ಶ್ವೇತಾ ದೇವರಾಜ್ ಅವರ​ ಪತಿ. ಹೀಗಾಗಿ, ಲಿಫ್ಟ್ ಘಟನೆಯನ್ನು ಉಲ್ಲೇಖಿಸಿ ರೇವಣ್ಣ ಜಿ.ಪಂ. ಅಧ್ಯಕ್ಷೆಗೆ ವ್ಯಂಗ್ಯ ಮಾಡಿದ್ಧಾರೆ.

ಒಂದೂವರೆ ವರ್ಷದ ಹಿಂದಿನ ಘಟನೆಯನ್ನೇ ಇಟ್ಟುಕೊಂಡು ಹಾಸನ ಜಿಲ್ಲಾ ಪಂಚಾಯತ್​ ಅಧ್ಯಕ್ಷೆ ಶ್ವೇತಾ ದೇವರಾಜ್​ ಮೇಲೆ ಪ್ರಯೋಗಿಸಿದ್ದು ನಿಜಕ್ಕೂ ರೇವಣ್ಣ ರಾಜಕೀಯ ಚಾಣಾಕ್ಷತೆಗೆ ಹಿಡಿದ ಕನ್ನಡಿಯಾಗಿದೆ. ಇಷ್ಟೆಲ್ಲಾ ಆಗುತ್ತಿದ್ದರೂ ಹಾಸನ ಜಿಲ್ಲಾ ಪಂಚಾಯತ್​ನಲ್ಲಿ ಜಾತಿ ಅಸ್ತ್ರ ಪ್ರಯೋಗಿಸಿ ಕಾಂಗ್ರೆಸ್ ಮತ್ತು ಜೆಡಿಎಸ್​ ನಾಯಕರ ಕಿತ್ತಾಟ ಇನ್ನಷ್ಟು ತಾರಕಕ್ಕೇರೋ ಎಲ್ಲಾ ಲಕ್ಷಣಗಳಿವೆ. ಆದ್ರೆ ಇದೆಲ್ಲಾ ಬಿಟ್ಟು ಹಾಸನ ಜನತೆ ಕಷ್ಟಕೇಳಿ ಎಂದು ಹಾಸನದ ಜನರು ಹೇಳುತ್ತಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: