• Home
  • »
  • News
  • »
  • state
  • »
  • ಪ್ರೀತಮ್ ಗೌಡ ಸಿಎಂ ಮೂಲಕ ಕಾಮಗಾರಿಗೆ ತಡೆಯೊಡ್ಡಿದ್ದಾರೆ; ಹೆಚ್​ಡಿ ರೇವಣ್ಣ ಗಂಭೀರ ಆರೋಪ

ಪ್ರೀತಮ್ ಗೌಡ ಸಿಎಂ ಮೂಲಕ ಕಾಮಗಾರಿಗೆ ತಡೆಯೊಡ್ಡಿದ್ದಾರೆ; ಹೆಚ್​ಡಿ ರೇವಣ್ಣ ಗಂಭೀರ ಆರೋಪ

ಮಾಜಿ ಸಚಿವ ಹೆಚ್.ಡಿ. ರೇವಣ್ಣ

ಮಾಜಿ ಸಚಿವ ಹೆಚ್.ಡಿ. ರೇವಣ್ಣ

ಹಾಸನದಲ್ಲಿ 144 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಮಾಸ್ಟರ್ ಪ್ಲಾನ್ ರೂಪಿಸಲಾಗಿತ್ತು. ಶಾಸಕ ಪ್ರೀತಮ್ ಗೌಡ ಸಿಎಂಗೆ ಪತ್ರ ಬರೆದು ಕಾಮಗಾರಿ ತಡೆ ಹಿಡಿದಿದ್ದಾರೆ ಎಂದು ಹೆಚ್​ಡಿ ರೇವಣ್ಣ ಹೇಳಿದ್ದಾರೆ.

  • Share this:

ಹಾಸನ (ಜ. 2): ಹಾಸನದ ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ ಮೈತ್ರಿ ಸರ್ಕಾರದಲ್ಲಿ ಅನುಮೋದನೆ ನೀಡಲಾಗಿತ್ತು. ಆದರೆ, ಸ್ಥಳೀಯ ಶಾಸಕರು ಸಿಎಂಗೆ ಪತ್ರ ಬರೆದು ಕಾಮಗಾರಿ ತಡೆ ಹಿಡಿದಿದ್ದಾರೆ ಎಂದು ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಮ್ ಗೌಡ ವಿರುದ್ಧ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, 2023ಕ್ಕೆ ಜೆಡಿಎಸ್​ ಅಧಿಕಾರಕ್ಕೆ ಬಾರದಿದ್ದರೆ ನಾನು ರಾಜಕೀಯದಲ್ಲಿರುವುದಿಲ್ಲ ಎಂದು ಸವಾಲು ಹಾಕಿದ್ದಾರೆ.


ಹಾಸನದಲ್ಲಿ 144 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಮಾಸ್ಟರ್ ಪ್ಲಾನ್ ರೂಪಿಸಲಾಗಿತ್ತು. ವಾಯು ವಿಹಾರ, ದೋಣಿವಿಹಾರ, ವಾಟರ್ ಪಾರ್ಕ್ ಮಾಡಲು ಉದ್ದೇಶಿಸಿತ್ತು. ರಾಜಸ್ಥಾನದ ರಾಯಲ್ ಶರ್ಮ ಎಂಬ ಕಂಪನಿಗೆ ಟೆಂಡರ್ ಕರೆಯಲಾಗಿತ್ತು. ಕೆರೆ ಅಭಿವೃದ್ಧಿ ವಿಚಾರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಜಟಾಪಟಿ ನಡೆಯುತ್ತಿದೆ. ಹಾಸನದ ನಗರದ ಹೃದಯಭಾಗದಲ್ಲಿರುವ ಚನ್ನಪಟ್ಟಣ ಕೆರೆ ಹಾಸನ ನಗರದ ಬಸ್ ನಿಲ್ದಾಣದ ಪಕ್ಕದಲ್ಲಿದೆ.


ಈ ಬಗ್ಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮತ್ತು ಹೆಚ್​.ಡಿ. ದೇವೇಗೌಡರು ಸಿಎಂ ಬಿಎಸ್ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ. ಸಿಎಂ ಕೂಡ ಅದಕ್ಕೆ ಒಪ್ಪಿ ಪತ್ರಕ್ಕೆ ಸಹಿ ಹಾಕಿ ಮಂಜೂರು ಮಾಡುವಂತೆ ಸೂಚಿಸಿದ್ದಾರೆ. ಆದರೆ, ಈಗ ಶಾಸಕ ಪ್ರೀತಮ್ ಗೌಡ ಕಾಮಗಾರಿಗೆ ತಡೆಯೊಡ್ಡಿದ್ದಾರೆ. ಪಾರ್ಕ್ ಮಾಡಲು ಬೇರೆ ಹಣ ಬಳಸಿಕೊಳ್ಳಲಿ, ಕೆರೆ ಅಭಿವೃದ್ಧಿ ಹಣದಲ್ಲಿ ಯಾಕೆ ಪಾರ್ಕ್ ಮಾಡುತ್ತಿದ್ದಾರೆ ಎಂದು ಹೆಚ್​ಡಿ ರೇವಣ್ಣ ಅಸಮಾಧಾನ ಹೊರಹಾಕಿದ್ದಾರೆ.


ಇದನ್ನೂ ಓದಿ: Bangalore Crime: ಬೆಂಗಳೂರಿನಲ್ಲಿ ಅಂತಾರಾಜ್ಯ ಕಳ್ಳರ ಬಂಧನ; 2.25 ಕೋಟಿ ಮೌಲ್ಯದ ಚಿನ್ನ ವಶ


ರಾಜಕೀಯ ದ್ವೇಷ ಎಲ್ಲ ಮಾಡೋದಿಲ್ಲ ಎಂದು ಸಿಎಂ ಯಡಿಯೂರಪ್ಪ ಘೋಷಿಸಿದ್ದರು. ಆದರೆ, ಈಗ ಅವರು ಮಾಡುತ್ತಿರುವುದೇನು? ದೇವೇಗೌಡರು ಹೋರಾಟ ಮಾಡೋಣ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಜೆಡಿಎಸ್ ನಿಂದ ಹೋರಾಟ ಮಾಡಲಾಗುವುದು. ಇನ್ನು 50 ವರ್ಷ ಕಳೆದರೂ ಈ ಕಾಮಗಾರಿ ಮಾಡಿಯೇ ತೀರುತ್ತೇನೆ ಎಂದು ಹೆಚ್.ಡಿ. ರೇವಣ್ಣ ಸವಾಲು ಹಾಕಿದ್ದಾರೆ.


ಹಿಂದಿನ ಹಳೆಯ ಪ್ಲಾನ್ ನಂತೆ ಮಾಡಲೇಬೇಕು ಎಂದು ಒತ್ತಾಯಿಸಿ ಹಾಸನ ಜಿಲ್ಲೆಯ ಎಲ್ಲಾ ಜೆಡಿಎಸ್ ಶಾಸಕರೂ ಸಿಎಂಗೆ ಪತ್ರ ಬರೆದಿದ್ದಾರೆ. ಈಗಾಗಲೇ ಟೆಂಡರ್ ಕರೆಯಲು ಮತ್ತು ಪ್ಲಾನ್ ಮಾಡಲು 88.5 ಲಕ್ಷ ರೂ. ಹಣ ಖರ್ಚಾಗಿದೆ. ಈ ಹಣ ಕೊಡೋರು ಯಾರು? ಎಂದು ಮಾಜಿ ಸಚಿವ ಹೆಚ್​ಡಿ ರೇವಣ್ಣ ಪ್ರಶ್ನೆ ಹಾಕಿದ್ದಾರೆ.


ಗುತ್ತಿಗೆ ಕರೆದು ಗುತ್ತಿಗೆ ಕೊಡಬೇಕು ಎನ್ನುವಷ್ಟರಲ್ಲಿ ಶಾಸಕ ಪ್ರೀತಮ್ ಗೌಡ ತಡೆ ಹಿಡಿದಿದ್ದಾರೆ. ಆತನಿಗೆ ಪ್ರಾಕ್ಟಿಕಲ್ ಅನುಭವ ಇದೆಯಾ? ಎಂದು ಶಾಸಕ ಪ್ರೀತಮ್ ಗೌಡ ವಿರುದ್ದ ಹೆಚ್.​ಡಿ ರೇವಣ್ಣ ಕಿಡಿ ಕಾರಿದ್ದಾರೆ. ಅರ್ಜಿ ಬರೆಯುವುದಾದರೆ ಬರೆಯಲಿ, ನನಗೂ ಅರ್ಜಿ ಬರೆಯೋಕೆ ಗೊತ್ತಿದೆ. 2023ಕ್ಕೆ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದೇ ತರುತ್ತೇವೆ. ದೇವೇಗೌಡರ ಮುಂದೆಯೇ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ. ಇಲ್ಲದಿದ್ದರೆ ನಾನು ರಾಜಕೀಯದಲ್ಲಿ ಇರುವುದಿಲ್ಲ ಎಂದು ಹೆಚ್​ಡಿ ರೇವಣ್ಣ ಹೇಳಿದ್ದಾರೆ.

Published by:Sushma Chakre
First published: