ಹಾಸನ: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Election 2023) ಇನ್ನೇನು ಬೆರಳೆಣಿಕೆಯ ದಿನಗಳು ಮಾತ್ರ ಇದೆ. ಇನ್ನು ಕೆಲವೇ ವಾರಗಳಲ್ಲಿ ರಾಜ್ಯದಲ್ಲಿ ಕೂಡ ಚುನಾವಣಾ ನೀತಿ ಸಂಹಿತೆ ಘೋಷಣೆಯಾಗಲಿದೆ. ಆಡಳಿತಾರೂಢ ಬಿಜೆಪಿ (BJP) ಮತ್ತು ವಿಪಕ್ಷಗಳಾದ ಕಾಂಗ್ರೆಸ್- ಜೆಡಿಎಸ್ (Congress and JDS) ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕೆಂದು ಪಣ ತೊಟ್ಟಿದೆ. ಇದಕ್ಕೆಂದೇ ಚುನಾವಣೆ ಘೋಷಣೆಗೂ ಮುನ್ನವೇ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯ ಆರಂಭಗೊಂಡಿದೆ. ಈಗಾಗಲೇ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಒಂದು ಸುತ್ತಿನ ಪಾದಯಾತ್ರೆ, ಸಮಾವೇಶಗಳನ್ನು ನಡೆಸಿವೆ.
ಈ ಮಧ್ಯೆ ಚುನಾವಣೆಗೂ ಮುನ್ನವೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಹಾಸನ ವಿಧಾನಸಭಾ ಕ್ಷೇತ್ರ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹೈ ವೋಲ್ಟೇಜ್ ಕದನವಾಗಿ ಮಾರ್ಪಟ್ಟಿದೆ. ದಳಪತಿಗಳ ಭದ್ರಕೋಟೆಯಾಗಿರುವ ಹಾಸನ ಜಿಲ್ಲೆಯಲ್ಲಿ ತಮ್ಮ ಹಿಡಿತವನ್ನು ಮತ್ತೆ ಮುಂದುವರಿಸಬೇಕು ಎಂದು ಪಣ ತೊಟ್ಟಿರುವ ಶತಾಯಗತಾಯ ಬಿಜೆಪಿ ಶಾಸಕ ಪ್ರೀತಂಗೌಡ (Preetham Gowda) ಅವರ ಕ್ಷೇತ್ರವನ್ನು ತಮ್ಮ ಹಿಡಿತಕ್ಕೆ ಪಡೆದುಕೊಳ್ಳಬೇಕು ಎಂದು ಈಗಾಗಲೇ ರಣತಂತ್ರವನ್ನು ರೂಪಿಸಲು ಆರಂಭಿಸಿದ್ದಾರೆ.
ತಿಂಗಳ ಹಿಂದೆ ಎಚ್‌ಡಿಡಿ ಕುಟುಂಬದಲ್ಲಿ ರಾಜಕೀಯ ಕಲಹ?
ಕಳೆದ ತಿಂಗಳು ಇದೇ ಹಾಸನ ಕ್ಷೇತ್ರದ ವಿಚಾರವಾಗಿ ಎಚ್‌ಡಿ ರೇವಣ್ಣ (HD Revanna) ಅವರ ಪತ್ನಿ ಶಾಸಕಿ ಭವಾನಿ ರೇವಣ್ಣ ಅವರು ಈ ಬಾರಿ ಹಾಸನ ಕ್ಷೇತ್ರದ ಅಭ್ಯರ್ಥಿ ನಾನೇ ಎಂದು ಬಹಿರಂಗವಾಗಿ ಘೋಷಿಸಿಕೊಂಡಿದ್ದರು. ಅಂದೇ ದಿನ ಸಂಜೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಈ ವಿಚಾರವಾಗಿ ಮಾತನಾಡಿ, ಭವಾನಿ ರೇವಣ್ಣ ಹಾಸನಕ್ಕೆ ಅಭ್ಯರ್ಥಿ ಆಗುವ ಅಗತ್ಯವಿಲ್ಲ. ಸೂಕ್ತ ಅಭ್ಯರ್ಥಿಯನ್ನು ಹುಡುಕಿ ಗೆಲ್ಲಿಸುತ್ತೇವೆ ಎಂದಿದ್ದರು. ಅಷ್ಟರಲ್ಲಾಗಲೇ ದೇವೇಗೌಡ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ ಅಂತಾ ಸುದ್ದಿಯಾಗಿತ್ತು. ಅದರ ಮರುದಿನ ಎಚ್‌ಡಿ ರೇವಣ್ಣ ಪುತ್ರ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರು ಹಾಸನ ವಿಚಾರದಲ್ಲಿ ಎಚ್‌ಡಿ ಕುಮಾರಸ್ವಾಮಿಗಿಂತ ಎಚ್‌ಡಿ ರೇವಣ್ಣ ಅವರಿಗೆ ಒಳ್ಳೆಯ ಹಿಡಿತ ಇದೆ. ಗ್ರಾಮ ಗ್ರಾಮ ಸಂಚಾರ ಮಾಡಿ ಜನರ ನಾಡಿಮಿಡಿತ ಅರ್ಥ ಮಾಡಿಕೊಂಡಿದ್ದರು. ಹಾಸನಕ್ಕೆ ಅಭ್ಯರ್ಥಿ ಆಯ್ಕೆಯನ್ನು ಎಚ್‌ಡಿ ದೇವೇಗೌಡರು ಮತ್ತು ಎಚ್‌ಡಿ ರೇವಣ್ಣ ನಿರ್ಧರಿಸುತ್ತಾರೆ ಎಂದು ಹೇಳಿದ್ದರು.
ಇದನ್ನೂ ಓದಿ: HD Reavanna: ಹಾಸನದಲ್ಲಿ ಸ್ಪರ್ಧೆ ಮಾಡ್ತಾರಾ ಎಚ್‌ಡಿ ರೇವಣ್ಣ? ಕ್ಷೇತ್ರದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ
ಮಾಸ್ಟರ್‌ಮೈಂಡ್ ಉಪಯೋಗಿಸಿದ ರೇವಣ್ಣ
ಇದೆಲ್ಲದರ ಬಳಿಕ ಪ್ಲಾನ್ ರೂಪಿಸಿದ ಎಚ್‌ಡಿ ರೇವಣ್ಣ, ಕುಮಾರಸ್ವಾಮಿ ಜೊತೆ ಮಾತನಾಡಿ ಕುಟುಂಬದ ಕಲಹ ಹೊರಗಿನವರಿಗೆ ಆಹಾರ ಆಗದಂತೆ ನೋಡಿಕೊಂಡರು. ನಂತರ, 2 ವರ್ಷದ ಹಿಂದೆ ಪ್ರೀತಂ ಗೌಡ ಹಾಕಿದ್ದ ಸವಾಲು ಸ್ವೀಕರಿಸಿ ಹಾಸನಕ್ಕೆ ನಾನೇ ಅಭ್ಯರ್ಥಿ ಆಗುತ್ತೇನೆ ಎಂದು ಹೇಳಿದ್ದರು. ಆ ಮೂಲಕ ಭವಾನಿ ರೇವಣ್ಣ ಹಿಂದೆ ಸರಿದಂತೆಯೂ ಆಗುತ್ತೆ, ಎಚ್‌ಡಿಕೆ ತನಗೆ ಆಕ್ಷೇಪ ವ್ಯಕ್ತಪಡಿಸೋದೂ ಇಲ್ಲ ಎಂಬ ಸ್ಪಷ್ಟತೆಯೊಂದಿಗೆ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆಯಲು ಪ್ರಯತ್ನ ಮಾಡಿದ್ದರು. ಇದಕ್ಕೆ ಪೂರಕವಾಗಿ ಹಾಸನದಲ್ಲಿ ಪದೇ ಪದೇ ಮುಖಂಡರು, ಕಾರ್ಯಕರ್ತರುಗಳ ಅಭಿಪ್ರಾಯ ಪಡೆದು ಒಂದು ನಿರ್ಧಾರ ಪಡೆಯುವತ್ತ ಹೆಜ್ಜೆ ಇಟ್ಟಿದ್ದರು. ಆ ಮೂಲಕ ಪಕ್ಷದೊಳಗಿನ ಆಂತರಿಕ ಭಿನ್ನಮತಕ್ಕೆ ಮುಲಾಮು ಹಚ್ಚುವ ಯತ್ನ ಮಾಡಿದ್ದರು.
ರೇವಣ್ಣಗೆ ಸಿಕ್ತಾ ಗ್ರೀನ್ ಸಿಗ್ನಲ್
ಇಷ್ಟೆಲ್ಲಾ ಬೆಳವಣಿಗೆಗಳು ಆದ ಬಳಿಕ ಹಾಸನದಲ್ಲೇ ಚುನಾವಣೆಗೆ ಕಣಕ್ಕಿಳಿಯಬೇಕು ಎಂಬ ವಿಚಾರದಲ್ಲಿ ಎಚ್‌ಡಿ ರೇವಣ್ಣ ಸ್ಪಷ್ಟತೆಯ ಹಂತಕ್ಕೆ ಬಂದಿದ್ದಾರೆ ಎಂದು ಹೇಳಲಾಗ್ತಿದೆ. ಕಾರ್ಯಕರ್ತರು ಮತ್ತು ಮುಖಂಡರ ಜೊತೆ ಸರಣಿ ಸಭೆ ನಡೆಸಿದ ಬಳಿಕ ಹಾಸನದಿಂದಲೇ ಸ್ಪರ್ಧೆ ಮಾಡಲು ರೇವಣ್ಣ ಅಣಿಯಾಗಿದ್ದು, ಆ ಮೂಲಕ ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂಗೌಡ ಸವಾಲು ಸ್ವೀಕಾರಕ್ಕೆ ತಯಾರಾಗಿದ್ದಾರೆ ಎಂದು ಹೇಳಲಾಗ್ತಿದೆ.
ಹಾಸನದಿಂದ ಭವಾನಿಗೆ ಟಿಕೆಟ್ ಸಿಗದ ಕಾರಣ ತಾವೇ ಕಣಕ್ಕಿಳಿಯಲು ತಯಾರಿ ಮಾಡಿದ್ದು, ಆದರೆ ಹೊಳೆನರಸೀಪುರ ಕ್ಷೇತ್ರಕ್ಕಾದ್ರೂ ಭವಾನಿ ರೇವಣ್ಣಗೆ ಟಿಕೆಟ್ ನೀಡಿ ಎಂದು ರೇವಣ್ಣ ಮತ್ತು ಫ್ಯಾಮಿಲಿ ಎಚ್‌ಡಿ ಕುಮಾರಸ್ವಾಮಿ ಅವರ ಮನವೊಲಿಸಲು ಮುಂದಾಗಿದೆ. ಆದರೆ ಕುಮಾರಸ್ವಾಮಿ ಮಾತ್ರ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಭವಾನಿ ರೇವಣ್ಣ ಸ್ಪರ್ಧೆ ಮಾಡೋದು ಬೇಡ ಎಂದು ಪಟ್ಟು ಹಿಡಿದಿದ್ದಾರೆ. ಇತ್ತ ಕುಮಾರಸ್ವಾಮಿ ಮನವೊಲಿಸಿ ಟಿಕೆಟ್ ಪಡೆಯಲು ರೇವಣ್ಣ ಫ್ಯಾಮಿಲಿ ತಂತ್ರ ರೂಪಿಸಿದೆ. ಒಂದು ವೇಳೆ ಕುಮಾರಸ್ವಾಮಿ ಇದಕ್ಕೆ ಒಪ್ಪದೇ ಇದ್ದರೆ ಎರಡೂ ಕ್ಷೇತ್ರದಿಂದ ತಾನೇ ಕಣಕ್ಕಿಳಿಯಲು ಮಾಜಿ ಸಚಿವ ರೇವಣ್ಣ ನಿರ್ಧಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಶಾಸಕ ಪ್ರೀತಂ ಗೌಡ ಹಾಕಿದ್ದ ಸವಾಲು ಏನು?
ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಗೌಡ ಅವರು ಚುನಾವಣೆ ಪೂರ್ವದಿಂದಲೂ ಎಚ್‌ಡಿ ದೇವೇಗೌಡ ಫ್ಯಾಮಿಲಿ ವಿರುದ್ಧ ನಿರಂತರವಾಗಿ ಗುಡುಗುತ್ತಲೇ ಬಂದಿದ್ದರು. ಚುನಾವಣೆ ನಂತರವೂ ಇದು ಮುಂದುವರಿದಿತ್ತು. ಈ ಹಿಂದೆ ಅವರು ಎಚ್‌ಡಿ ರೇವಣ್ಣ ವಿರುದ್ಧ ಕಿಡಿಕಾರಿ ಹಾಸನ ಕ್ಷೇತ್ರದಲ್ಲಿ ತನ್ನ ವಿರುದ್ಧ ಚುನಾವಣೆಗೆ ಸ್ಪರ್ಧಿಸಿ ಐವತ್ತು ಸಾವಿರ ಮತಗಳ ಅಂತರದಲ್ಲಿ ಗೆಲ್ಲುವಂತೆ ಸವಾಲು ಹಾಕಿದ್ದರು. ಅಲ್ಲದೇ, ಐವತ್ತು ಸಾವಿರಕ್ಕೆ ಒಂದೇ ಒಂದು ಮತ ಕಡಿಮೆಯಾದ್ರೂ ಗೆದ್ದ ಬಳಿಕ ರಾಜೀನಾಮೆ ನೀಡಿ ಚುನಾವಣೆ ಎದುರಿಸುವಂತೆ ಸವಾಲು ಹಾಕಿದ್ದರು.
ಹೀಗಾಗಿ ಪ್ರೀತಂ ಗೌಡ ಸವಾಲಿಗೆ ಒಪ್ಪಿಗೆ ಸೂಚಿಸಿರುವ ಎಚ್‌ಡಿ ರೇವಣ್ಣ, ಹೈಕಮಾಂಡ್ ಒಪ್ಪಿದರೆ ಈ ಸವಾಲು ಸ್ವೀಕಾರಕ್ಕೆ ನಾನು ರೆಡಿ ಎಂದಿದ್ದರು. ನಂತರ ಸರಣಿ ಸಭೆ ನಡೆಸಿದ್ದ ರೇವಣ್ಣ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹದ ಬಳಿಕ ಗೆಲುವಿನ ವಿಶ್ವಾಸದಲ್ಲಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ