ರೇವಣ್ಣ 'ಎರಡು ಕನಸು 2.0': ಲೋಕೋಪಯೋಗಿಯೂ ಬೇಕು, ಇಂಧನ ಖಾತೆಯೂ ಬೇಕು!


Updated:June 4, 2018, 5:33 PM IST
ರೇವಣ್ಣ 'ಎರಡು ಕನಸು 2.0': ಲೋಕೋಪಯೋಗಿಯೂ ಬೇಕು, ಇಂಧನ ಖಾತೆಯೂ ಬೇಕು!

Updated: June 4, 2018, 5:33 PM IST
- ಡಿ.ಪಿ. ಸತೀಶ್​, ನ್ಯೂಸ್​ 18 ಕನ್ನಡ

ಬೆಂಗಳೂರು, ಜೂನ್​ 4: ಹಿರಿಯ ರಾಜಕಾರಣಿ ಮತ್ತು ದೇವೆಗೌಡರ ಹಿರಿಯ ಪುತ್ರ ಎಚ್​.ಡಿ. ರೇವಣ್ಣ ಎರಡು ಬಲಿಷ್ಠ ಖಾತೆಯ ಮೇಲೆ ಕಣ್ಣಿಟ್ಟಿದ್ದಾರೆ. 2004 ಮತ್ತು 2006ರಲ್ಲಿ ನಿಭಾಯಿಸಿದ್ದ ಖಾತೆಗಳನ್ನೇ ಮತ್ತೆ ನೀಡುವಂತೆ ದೇವೆಗೌಡರ ಮೇಲೆ ರೇವಣ್ಣ ಒತ್ತಡ ಹೇರುತ್ತಿದ್ದಾರೆ, ಎಂಬ ಮಾಹಿತಿ ಜೆಡಿಎಸ್​ ಮೂಲಗಳಿಂದ ಕೇಳಿ ಬರುತ್ತಿದೆ. ಮೈತ್ರಿಯ ಪ್ರಕಾರ, ಜೆಡಿಎಸ್​ಗೆ ಒಟ್ಟೂ 12 ಮಂತ್ರಿ ಸ್ಥಾನ ಸಿಗಲಿದ್ದು, ಕುಮಾರಸ್ವಾಮಿಯವರು ಮುಖ್ಯಮಂತ್ರಿ ಮತ್ತು ಹಣಕಾಸು ಮಂತ್ರಿಯಾಗಿದ್ದಾರೆ. ಸಹೋದರರಿಬ್ಬರೂ ಎರಡು ಖಾತೆಗಳನ್ನು ಪಡೆದರೆ, ಮಿಕ್ಕ 8 ಖಾತೆಗಳಲ್ಲಿ ಜೆಡಿಎಸ್​ನ ಉಳಿದ 35 ಶಾಸಕರನ್ನು ಸಮಾಧಾನ ಪಡಿಸಬೇಕಾಗುತ್ತದೆ. ಸಂಪುಟ ವಿಸ್ತರಣೆ ಕಸರತ್ತಿನ ಆಂತರಿಕ ಸತ್ಯಗಳನ್ನು ನ್ಯೂಸ್​ 18 ಬಿಚ್ಚಿಡುವ ಪ್ರಯತ್ನ ಮಾಡಲಿದೆ.

ಎರಡು ಕನಸು 2.0: ಮೈತ್ರಿ ಸರ್ಕಾರ ರಚನೆಯ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಕಾಂಗ್ರೆಸ್​ ಪಕ್ಷದ ವರಿಷ್ಠರನ್ನು ನಿಭಾಯಿಸುವುದು ಕಷ್ಟದ ಕೆಲಸ ಅನಿಸದಿರಬಹುದು. ಆದರೆ ಅಣ್ಣ ರೇವಣ್ಣರನ್ನು ನಿಯಂತ್ರಣದಲ್ಲಿಡುವುದು ದೊಡ್ಡ ಕೆಲಸವಾಗಿದೆ. ಅದಕ್ಕೆ ಕಾರಣ, ದೇವೆಗೌಡರಿಗೆ ಕುಮಾರಸ್ವಾಮಿಗಿಂತ ರೇವಣ್ಣ ಪ್ರೀತಿ ಪಾತ್ರ ಎಂಬುದು. ಮೈತ್ರಿ ಸರ್ಕಾರ ರಚನೆಯಾದ ಬೆನ್ನಲ್ಲೇ ಡಿ.ಕೆ. ಶಿವಕುಮಾರ್​ ಮತ್ತು ರೇವಣ್ಣ ಇಬ್ಬರೂ ಇಂಧನ ಖಾತೆಯ ಮೇಲೆ ಕಣ್ಣಿಟ್ಟಿದ್ದರು. ಮೈತ್ರಿ ಸರ್ಕಾರ ರಚನೆಗೆ ಕಾರಣವಾಗಿದ್ದ ಡಿಕೆಶಿಯವರನ್ನು ಹೈಕಮಾಂಡ್​ ಸಮಾಧಾನಪಡಿಸಿ, ಇಂಧನ ಖಾತೆಯನ್ನು ಜೆಡಿಎಸ್​ಗೆ ಬಿಟ್ಟುಕೊಟ್ಟಿದ್ದರು. ಆದರೆ ಈಗ ರೇವಣ್ಣ ಹೊಸ ವರಸೆ ಆರಂಭಿಸಿದ್ದಾರೆ.

2004ರಲ್ಲಿ ಕಾಂಗ್ರೆಸ್​ - ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗಲೂ ರೇವಣ್ಣ ಇಂಧನ ಮತ್ತು ಲೋಕೋಪಯೋಗಿ ಖಾತೆಯನ್ನು ತಮ್ಮದಾಗಿಸಿಕೊಂಡಿದ್ದರು. ಅದಾದ ನಂತರ 2006ರಲ್ಲಿ ಜೆಡಿಎಸ್ - ಬಿಜೆಪಿ ಮೈತ್ರಿ ಸರ್ಕಾರದಲ್ಲೂ ಮತ್ತದೇ ಖಾತೆಗಳನ್ನು ರೇವಣ್ಣ ಪಡೆದಿದ್ದರು. ಈಗ ಮತ್ತೆ ಎರಡು ಖಾತೆಗಳು ಬೇಕು ಎಂದು ರೇವಣ್ಣ ಪಟ್ಟು ಹಿಡಿದಿದ್ದಾರೆ. ರೇವಣ್ಣ ಅವರ ಆಸೆಗೆ ಅಸ್ತು ಎಂದಿದ್ದಾರೆ ಎಂಬ ಮಾತುಗಳೂ ಜೆಡಿಎಸ್​ ವಲಯದಲ್ಲಿ ಕೇಳಿ ಬರುತ್ತಿದೆ. ಈ ವಿಚಾರ ಕುಮಾರಸ್ವಾಮಿಯವರಿಗೂ ಇಷ್ಟವಾಗಿಲ್ಲ ಎನ್ನಲಾಗಿದೆ. ರೇವಣ್ಣ ಅವರಿಗೆ ಎರಡು ಖಾತೆ ನೀಡಿದರೆ ಕಾಂಗ್ರೆಸ್​ ಪಕ್ಷದ ನಾಯಕರು ಮತ್ತು ಜೆಡಿಎಸ್​ ಶಾಸಕರ ನಡುವೆ ​ಭಿನಾಭಿಪ್ರಾಯ ಉಂಟಾಗುವ ಸಾಧ್ಯತೆಯಿದೆ. ಒಂದು ಮೂಲಗಳ ಪ್ರಕಾರ ದೇವೆಗೌಡರು ಈ ಬಗ್ಗೆ ರಾಹುಲ್​ ಗಾಂಧಿಯವರ ಜತೆ ಮಾತನಾಡಿ ಒಪ್ಪಿಸಿದ್ದಾರೆ ಎನ್ನಲಾಗಿದೆ. ಇದು ಸತ್ಯವೇ ಆಗಿದ್ದಲ್ಲಿ, ಕಾಂಗ್ರೆಸ್​ ಮತ್ತು ಜೆಡಿಎಸ್​ ಆಂತರಿಕ ಬಿನ್ನಮತ ಸ್ಪೋಟಗೊಳ್ಳುವ ಸಾಧ್ಯತೆಯಿದೆ.

ರಾಹುಲ್​ ಗಾಂಧಿ ಮತ್ತು ದೇವೆಗೌಡರ ಈ ನಡೆಯಿಂದ ಕಾಂಗ್ರೆಸ್​ ರಾಜ್ಯ ನಾಯಕರು ಬೇಸರ ಗೊಂಡಿದ್ದಾರೆ ಎನ್ನಲಾಗಿದೆ. ಇಂಧನ ಖಾತೆ ಕೈತಪ್ಪಿದ್ದಕ್ಕೆ ಡಿ.ಕೆ. ಶಿವಕುಮಾರ್​ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ನ್ಯೂಸ್​ 18 ಕನ್ನಡದ ಜತೆ ಮಾತನಾಡಿದ ಅವರು, ಇಂಧನ ಖಾತೆ ಹೋಗಿದ್ದಕ್ಕೆ ಬೇಸರವಿಲ್ಲ, ರೇವಣ್ಣ ದೊಡ್ಡ ನಾಯಕರು ಅವರ ಬಗ್ಗೆ ಮಾತನಾಡುವುದಿಲ್ಲ ಎನ್ನುತ್ತಾರೆ. ಜತೆಗೆ ಕಾಂಗ್ರೆಸ್​ ಪಕ್ಷ ವಾಚ್​ಮನ್​ ಕೆಲಸ ನೀಡಿದೆ, ಮಾಡುತ್ತೇನೆ ಎನ್ನುವ ಮೂಲಕ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ಇಂಧನ ಇಲಾಖೆ ಕೈತಪ್ಪಿದ ನಂತರ, ಕಾಂಗ್ರೆಸ್​ ರಾಜ್ಯಾಧ್ಯಕ್ಷ ಹುದ್ದೆ ಮತ್ತು ಬೆಂಗಳೂರು ನಗರಾಭಿವೃದ್ಧಿ ಅಥವಾ ಜಲಸಂಪನ್ಮೂಲ ಖಾತೆಗಳನ್ನು ಪಡೆಯಲು ಯತ್ನಿಸುತ್ತಿದ್ದರು. ಈಗ ಇಂಧನ ಮತ್ತು ಲೋಕೋಪಯೋಗಿ ಎರಡೂ ಖಾತೆಗಳನ್ನು ರೇವಣ್ಣ ಪಡೆದರೆ, ಡಿ.ಕೆ. ಶಿವಕುಮಾರ್​ ಸಿಟ್ಟಿಗೇಳುವ ಸಾಧ್ಯತೆಯೇ ಹೆಚ್ಚು. ಜತೆಗೆ ಕ್ಯಾಬಿನೆಟ್​ನಲ್ಲಿ ಖಾತೆ ನೀಡಿದರೆ ಮಾತ್ರವೇ ರಾಜ್ಯಾಧ್ಯಕ್ಷ ಸ್ಥಾನವನ್ನು ಅಲಂಕರಿಸುವುದಾಗಿ ಡಿಕೆಶಿ ಹೈಕಮಾಂಡ್​ಗೆ ತಾಕೀತು ಮಾಡಿದ್ದಾರೆ.

ರೇವಣ್ಣ ಎರಡು ಖಾತೆಗಳನ್ನು ಪಡೆಯಲು ಕೈಹಾಕಿರುವುದು ಜೆಡಿಎಸ್​ನ ಇನ್ನೊಬ್ಬ ಶಾಸಕ ಸಾ ರಾ ಮಹೇಶ್​ ಕೋಪಕ್ಕೆ ಕಾರಣವಾಗಿದೆ. ಚುನಾವಣೆಯಲ್ಲಿ ಸಾ ರಾ ಮಹೇಶ್​ರನ್ನು ಸೋಲಿಸಲು ಭವಾನಿ ರೇವಣ್ಣ ಯತ್ನಿಸಿದ್ದರು ಎಂಬ ಮಾಹಿತಿಯೂ ಇದೆ. ಜತೆಗೆ ಹಾಸನ ಜಿಲ್ಲೆಯಿಂದ ಬೇರೆ ಯಾರಿಗೂ ಮಂತ್ರಿ ಸ್ಥಾನ ನೀಡಬಾರದು ಎಂಬ ಬೇಡಿಕೆಯನ್ನು ರೇವಣ್ಣ ಇಟ್ಟಿದ್ದಾರೆ. ಈ ಬಗ್ಗೆ ಮಾಧ್ಯಮ ವರದಿಗಾರರ ಮುಂದೆ ಮಾತನಾಡಿದ ಸಾ ರಾ ಮಹೇಶ್​, ರೇವಣ್ಣ ಅವರಿಗೆ ಎರಡೆರಡು ಖಾತೆಗಳನ್ನು ಕೊಡುವುದು ನ್ಯಾಯಸಮ್ಮತವಲ್ಲ ಎಂಬ ಹೇಳಿಕೆ ನೀಡಿದ್ದರು. ಕುಮಾರಸ್ವಾಮಿಯವರ ಕೃಪಾಶೀರ್ವಾದ ಇದೆ ಎಂಬ ಕಾರಣಕ್ಕೆ ಸಾರಾ ಮಹೇಶ್​, ರೇವಣ್ಣ ವಿರುದ್ಧ ಧೈರ್ಯವಾಗಿ ಹೇಳಿಕೆ ನೀಡಿದ್ದಾರೆ ಎಂಬ ಮಾತುಗಳೂ ಜೆಡಿಎಸ್​ ಸದಸ್ಯರಿಂದ ಕೇಳಿಬರುತ್ತಿದೆ.
Loading...

ಇನ್ನೊಂದೆಡೆ ಪ್ರಜ್ವಲ್​ ರೇವಣ್ಣ, ಕುಮಾರಸ್ವಾಮಿ ಮೇಲೆ ಸಿಟ್ಟಾಗಿದ್ದಾರೆ. ಚುನಾವಣೆಯಲ್ಲಿ ಟಿಕೆಟ್​ ನೀಡಿಲ್ಲ ಎಂಬ ಕಾರಣಕ್ಕೆ ಬಹಿರಂಗವಾಗಿಯೂ ಪ್ರಜ್ವಲ್​ ಹೇಳಿಕೆಗಳನ್ನು ನೀಡಿದ್ದರು. ನಂತರ ಪ್ರಜ್ವಲ್​ರನ್ನು ಸಮಾಧಾನ ಪಡಿಸಲು ದೇವೆಗೌಡರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ವಕ್ಷೇತ್ರ ಹಾಸನವನ್ನೇ ಪ್ರಜ್ವಲ್​ಗೆ ಬಿಟ್ಟುಕೊಡುವುದಾಗಿ ಹೇಳಿದ್ದರು. ಒಟ್ಟಿನಲ್ಲಿ ದೇವೆಗೌಡ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಈ ಆಂತರಿಕ ಬೆಳವಣಿಗೆಗಳು ಸಾಕ್ಷಿಯಂತಿವೆ.

ಚುನಾವಣೆ ವೇಳೆ ಕುಮಾರಸ್ವಾಮಿ, ರೇವಣ್ಣ ಅವರ ಹೊಳೆನರಸೀಪುರದ ನಿವಾಸಕ್ಕೆ ಭೇಟಿ ನೀಡಿದಾಗಲೂ, ಪ್ರಜ್ವಲ್​ ಮತ್ತು ಭವಾನಿ ರೇವಣ್ಣ ಮನೆಯಲ್ಲಿರಲಿಲ್ಲ. ಆ ಮೂಲಕ ಎಚ್​ಡಿಕೆ ಮೇಲಿನ ಅಸಮಾಧಾನವನ್ನು ಹೊರ ಹಾಕಿದ್ದರು. ಇಡೀ ಕುಟುಂಬವನ್ನು ಒಂದಾಗಿಡುವ ಕೆಲಸವನ್ನು ದೇವೆಗೌಡರು ಒಬ್ಬಂಟಿಯಾಗಿ ಮಾಡುತ್ತಿದ್ದಾರೆ. ಕುಟುಂಬ ಒಡೆದು ಹೋಗಬಾರದು ಎಂಬ ಕಾರಣಕ್ಕೆ, ಎಷ್ಟು ಸಾಧ್ಯವೋ ಅಷ್ಟು ಎಚ್​ಡಿಕೆ ಮತ್ತು ರೇವಣ್ಣರನ್ನು ನಿಯಂತ್ರಣ ಮಾಡುತ್ತಿದ್ದಾರೆ, ಎಂಬ ಮಾತು ಕುಟುಂಬದ ಆಪ್ತರು ಹೇಳುತ್ತಾರೆ.

ಪ್ರಜ್ವಲ್​ ರೇವಣ್ಣ ಸಕ್ರಿಯ ರಾಜಕಾರಣದಲ್ಲಿ ಈಗಾಗಲೇ ಗುರುತಿಸಿಕೊಂಡಿದ್ದಾರೆ. ಆದರೆ ಪ್ರಜ್ವಲ್​ರನ್ನು ಹಿಂದಕ್ಕೆ ತಳ್ಳಿ ಪುತ್ರ ನಿಖಿಲ್​ ಕುಮಾರ್​ರನ್ನು ರಾಜಕೀಯಕ್ಕೆ ಕುಮಾರಸ್ವಾಮಿ ತರಬಹುದು ಎಂಬ ಬೀತಿಯೂ ರೇವಣ್ಣ ಅವರಿಗಿದೆ.

ಜೆಡಿಎಸ್​ - ಕಾಂಗ್ರೆಸ್​ ಸದಸ್ಯರ ಬಿನ್ನಮತದ ನಡುವೆಯೂ ರೇವಣ್ಣರಿಗೆ ಲೋಕೋಪಯೋಗಿ ಮತ್ತು ಇಂಧನ ಖಾತೆಯನ್ನು ಕುಮಾರಸ್ವಾಮಿ ನೀಡಿದಲ್ಲಿ, ಸಮ್ಮಿಶ್ರ ಸರ್ಕಾರದ ಮೊದಲ ಹೆಜ್ಜೆಯಲ್ಲಿಯೇ ಬಿರುಕು ಮೂಡುವ ಸಾಧ್ಯತೆಯಿದೆ. ಆದರೆ ಯಾವ ಕಾರಣಕ್ಕೂ ದೇವೆಗೌಡರ ಮಾತಿನ ವಿರುದ್ಧ ಹೋಗುವ ಯೋಚನೆ ಕುಮಾರಸ್ವಾಮಿ ಮಾಡಲಾರರು. ಏಕೆಂದರೆ ಈಗಲೂ ಪಕ್ಷದ ಮೇಲೆ ದೇವೆಗೌಡರಿಗೆ ಹಿಡಿತವಿದೆ.

ಬುಧವಾರ ಸಂಪುಟ ವಿಸ್ತರಣೆ ಆಗಲಿದ್ದು, ರೇವಣ್ಣ ಅವರ ಎರಡು ಕನಸು 2.0 ಯಶಸ್ವಿಯಾಗಲಿದೆಯಾ ಅಥವಾ ಒಂದೇ ಖಾತೆಗೆ ಸುಮ್ಮನಾಗಲಿದ್ದಾರ ಎಂಬುದು ತಿಳಿಯಲಿದೆ.
First published:June 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ