ಹಾಸನ: ಜೆಡಿಎಸ್ನ ಹಾಸನ ಟಿಕೆಟ್ ವಿಚಾರದಲ್ಲಿ ನಡೆಯುತ್ತಿರುವ ವಿವಾದ ಸದ್ಯಕ್ಕೆ ನಿಲ್ಲುವಂತೆ ಕಾಣುವಂತಿಲ್ಲ. ಸ್ವತಃ ದೇವೇಗೌಡರೇ ತಾವೂ ಕುದ್ದು ಹಾಸನ ಟಿಕೆಟ್ ವಿಚಾರದಲ್ಲಿ ಎದ್ದಿರುವ ಗದ್ದಲಕ್ಕೆ ಬ್ರೇಕ್ ಹಾಕುವುದಾಗಿ ಹೇಳಿದ್ದರೂ ಸಹಾ ಕೆಲವು ಅಭಿಮಾನಿಗಳು ಸಾಮಾಜಿಕ ಜಾಲಾತಾಣದಲ್ಲಿ ಭವಾನಿ ಪರ-ವಿರೋಧ ಚರ್ಚೆ ಆರಂಭಿಸಿದ್ದಾರೆ. ಭವಾನಿ ರೇವಣ್ಣ ಅವರಿಗೆ ಹಾಸನ ವಿಧಾನಸಭಾ ಕ್ಷೇತ್ರ ಟಿಕೆಟ್ ನೀಡಬೇಕು ಎಂದು ಪೋಸ್ಟ್ ಮಾಡುವ ಮೂಲಕ ಅಭಿಯಾನ ಆರಂಭಿಸಿದ್ದಾರೆ. ಈಗಾಗಲೇ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಹಾಸನದಲ್ಲಿ ಭವಾನಿ ರೇವಣ್ಣರಿಗೆ ಟಿಕೆಟ್ ನೀಡುವುದಿಲ್ಲ ಎನ್ನುವುದನ್ನು ಖಚಿತಪಡಿಸಿದ್ದಾರೆ. ಆದರೂ ಸಹಾ ಕೆಲವು ಕಾರ್ಯಕರ್ತರು ಭವಾನಿ ಪರವಾಗಿ ಅಭಿಯಾನ ಮಾಡುತ್ತಿದ್ದಾರೆ.
ಕರ್ನಾಟಕದ ಅಮ್ಮಾ ಭವಾನಿ ರೇವಣ್ಣ
ಹಾಸನದಲ್ಲಿ ಈಗಾಗಲೇ ಸೂಕ್ತ ಅಭ್ಯರ್ಥಿ ಇದ್ದಾರೆ. ಹಾಗಾಗಿ ನಮ್ಮ ಕುಟುಂಬವರು ಅಲ್ಲಿ ಸ್ಪರ್ಧಿಸುವ ಅನಿವಾರ್ಯತೆ ಇನ್ನೂ ಬಂದಿಲ್ಲ ಎಂದು ಎಚ್ಡಿಕೆ ಹೇಳುತ್ತಿದ್ದಂತೆ, ಇತ್ತ ಭವಾನಿ ಅವರಿಗೆ ಟಿಕೆಟ್ ನೀಡಲೇಬೇಕು ಎಂದು ಮಹಿಳಾ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದರು. ಇದೀಗ ಸಾಮಾಜಿಕ ಜಾಲಾತಾಣದಲ್ಲಿ ಹಾಸನ ಮುಂದಿನ ಎಂಎಲ್ಎ ಕರ್ನಾಟಕ ರಾಜ್ಯ ಮಹಿಳಾ ಶಕ್ತಿಗೆ ಮತ್ತೊಂದು ಭರವಸೆ ಅಮ್ಮಾ ಎಂದು ಭವಾನಿ ರೇವಣ್ಣ ಪರ ಪೋಸ್ಟ್ ಮಾಡಲಾಗುತ್ತಿದೆ. ಸದ್ಯಕ್ಕೆ ಇದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿದೆ. ಭವಾನಿ ರೇವಣ್ಣ ಫೋಟೋ ಜೊತೆಗೆ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ ಫೋಟೋವನ್ನು ಸೇರಿಸಿ ವೈರಲ್ ಮಾಡಲಾಗುತ್ತಿದೆ.
ಇನ್ನು ಭವಾನಿ ರೇವಣ್ಣರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯದ ಪೋಸ್ಟರ್ಗಳು ವೈರಲ್ ಆಗುತ್ತಿದ್ದಂತೆ ಎಚ್ಡಿಕೆ ಅಭಿಮಾನಿಗಳು ಕಿಡಿಕಾರಿದ್ದು, ಜೆಡಿಎಸ್ ನಿಂತಿರುವುದೇ ಎಚ್ಡಿ ಕುಮಾರಸ್ವಾಮಿ ಮತ್ತು ದೇವೇಗೌಡ ಎನ್ನುವ ಶಕ್ತಿಯ ಮೇಲೆ. ಅವರು ರಾಜ್ಯದಲ್ಲಿ 120 ಕ್ಷೇತ್ರ ಗೆದ್ದು, ಸ್ವತಂತ್ರ ಪಕ್ಷವಾಗಿ ಅಧಿಕಾರಕ್ಕೆ ಬರಲು ಆರೋಗ್ಯವನ್ನು ಲೆಕ್ಕಿಸದೇ ಪಂಚರತ್ನ ರಥಯಾತ್ರೆ ಮಾಡುತ್ತಿದ್ದರೆ, ಕೇವಲ ಒಂದು ಕ್ಷೇತ್ರಕ್ಕಾಗಿ ಅವರ ಮನಸ್ಸನ್ನು ನೋಯಿಸುವುದು ಸರಿಯಲ್ಲ ಎಂದು ಕಿಡಿ ಕಾರಿದ್ದಾರೆ.
ದೇವೇಗೌಡರ ಮಧ್ಯಸ್ಥಿಕೆ ಅಗತ್ಯ
ಹಾಸನ ಟಿಕೆಟ್ ವಿಚಾರದಲ್ಲಿ ಕುಮಾರಸ್ವಾಮಿ ಮತ್ತು ರೇವಣ್ಣರ ಮಕ್ಕಳು ಹೇಳಿಕೆಗಳು ಮೇಲುನೋಟಕ್ಕೆ ವೈಮನಸ್ಸನ್ನು ತೋರಿಸುತ್ತಿದೆ. ಹೀಗೆ ಮುಂದುವರಿದರೆ ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಲಿದೆ ಎನ್ನುವು ಕೆಲವು ಕಾರ್ಯಕರ್ತರ ಅಭಿಪ್ರಾಯವಾಗಿದೆ. ಹಾಗಾಗಿ ಶೀಘ್ರದಲ್ಲೆ ಕುಮಾರಸ್ವಾಮಿ ಹಾಗೂ ರೇವಣ್ಣರ ಸಮ್ಮುಖದಲ್ಲಿ ಸ್ವತಃ ದೇವೇಗೌಡರೇ ಚರ್ಚೆ ಮಾಡಿ ಗೊಂದಲವನ್ನು ಶಮನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇತ್ತ ಕಾರ್ಯಕರ್ತರು ಕೂಡ ಅದನ್ನೇ ಎದರು ನೋಡುತ್ತಿದ್ದಾರೆ.
ನಮ್ಮನೆ ಹುಡುಗ್ರನ್ನ ದಾರಿ ತಪ್ಪಿಸಲಾಗುತ್ತಿದೆ
ಹಾಸನ ಟಿಕೆಟ್ ವಿಚಾರದಲ್ಲಿ ಸೂರಜ್ ಹಾಗೂ ಪ್ರಜ್ವಲ್ ರೇವಣ್ಣ ತಮ್ಮ ವಿರುದ್ಧ ತಿರುಗಿ ಬಿದ್ದು ಹೇಳಿಕೆ ನೀಡುತ್ತಿರುವುದರ ಬಗ್ಗೆ ರಾಯಚೂರಿನಲ್ಲಿ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ. ನಮ್ಮ ಕುಟುಂಬದ ಮಕ್ಕಳನ್ನು ದಾರಿ ತಪ್ಪಿಸುವ ನೂರಾರು ಶಕುನಿಗಳಿದ್ದಾರೆ. ಪಾಪ ಹುಡುಗರು ಬಾಯಿ ತಪ್ಪಿ ಮಾತನಾಡಿದ್ದಾರೆ. ಇದನ್ನು ಅರಗಿಸಿಕೊಳ್ಳುವ ಶಕ್ತಿ ನನಗೆ ಇದೆ. ಹಾಸನದ ರಾಜಕಾರಣವನ್ನು ಮೊದಲಿನಿಂದಲೂ ರೇವಣ್ಣ ನೋಡಿಕೊಂಡು ಬರುತ್ತಿದ್ದಾರೆ. ಅದಕ್ಕಾಗಿ ಸೂರಜ್ ಹಾಸನದ ಟಿಕೆಟ್ ನಿರ್ಧಾರವನ್ನ ರೇವಣ್ಣ ನೋಡಿಕೊಳ್ಳುತ್ತಾರೆ ಎಂದಿದ್ದಾನೆ. ಅವನ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ಶಮಜಾಯಿಸಿ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ