ಹಾಸನ: ಪೊಲೀಸರು ಯಾವಾಗಲೂ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಆದ್ರೆ ಪೊಲೀಸರೇ ಸೈಟ್ ದಂಧೆಗೆ ಇಳಿದಿದ್ದಾರೆ. ಪೊಲೀಸರ ಗೃಹ ನಿರ್ಮಾಣ ಸಂಘದ ಹೆಸರಿನಲ್ಲಿ ಬಡಾವಣೆ ನಿರ್ಮಿಸಿ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಕಾನೂನಿನ ಪ್ರಕಾರ ಖಾಸಗಿಯವರಿಗೆ ನಿವೇಶನ ಮಾರುವಂತಿಲ್ಲ. ಇದು ರಾಜಕಾರಣಿಗಳ ಕೆಂಗಣ್ಣಿಗೆ ಕಾರಣವಾಗಿದೆ.
ಹಿಂದಿನ ಹಾಸನದ ಎಸ್ಪಿಯಾಗಿದ್ದ ಪ್ರಕಾಶ್ ಗೌಡ ಮತ್ತು ಇನ್ಸ್ಪೆಕ್ಟರ್ ಶ್ರೀಧರ್ ಎಂಬುವರು ಪೊಲೀಸ್ ಗೃಹನಿರ್ಮಾಣ ಸಂಘದ ಹೆಸರಿನಲ್ಲಿ ಸತ್ಯಮಂಗಲ ಕೆರೆಯ ಸುತ್ತಮುತ್ತ 70 ಎಕರೆ ಜಾಗದಲ್ಲಿ ಲೇಔಟ್ ನಿರ್ಮಿಸಿದ್ದಾರೆ. ಖಾಸಗಿಯವರಿಗೆ ಚದರ ಅಡಿಗೆ 900 ರೂನಂತೆ ಮಾರಾಟ ಮಾಡುತ್ತಿದ್ದಾರೆ. ಮಾಜಿ ಸಚಿವ ಹೆಚ್.ಡಿ. ರೇವಣ್ಣ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ರಾಜ್ಯದ ಗೃಹ ಮಂತ್ರಿಗಳೆ, ಪೊಲೀಸರನ್ನು ಸೈಟ್ ಮಾರಿ ದುಡ್ಡು ಮಾಡಲು ಬಿಟ್ಟಿದ್ದೀರಾ” ಎಂದು ಮಾಜಿ ಲೋಕೋಪಯೋಗಿ ಸಚಿವರು ಆಕ್ರೋಶ ಹೊರಹಾಕಿದ್ದಾರೆ.
ಕೆರೆಗಳಿಂದ ಪೊಲೀಸರು ಲೇಔಟ್ಗೆ ಮಣ್ಣು ಹೊಡೆಯುತ್ತಿದ್ದಾರೆ. ಚದರ ಅಡಿಗೆ 900 ರೂಪಾಯಿಯಂತೆ ಮಾರಾಟ ಮಾಡುತ್ತಿದ್ದಾರೆ. ಪೋಲೀಸ್ರು ಅವರ ಕುಟುಂಬಕ್ಕೆ ಜಮೀನು ನೀಡಬೇಕು. ಆದರೆ ಖಾಸಗಿಯವರಿಗೆ ಮಾರಾಟ ಮಾಡಿ ದಂಧೆ ಮಾಡುತ್ತಿದ್ದಾರೆ ಎಂದು ರೇವಣ್ಣ ಆರೋಪಿಸಿದ್ದಾರೆ.
ಇದನ್ನೂ ಓದಿ: ಕನ್ನಡಾಭಿಮಾನದ ಬಗ್ಗೆ ಮಾತನಾಡಿದ್ದು ಬಿಟ್ಟು, ಮಹಾರಾಷ್ಟ್ರ ಕುರಿತದ್ದನ್ನು ಮಾತ್ರ ವೈರಲ್ ಮಾಡಿದ್ದಾರೆ; ನಾರಾಯಣ ಗೌಡ
ಹಾಸನದಲ್ಲಿ ಸೈಟ್ ದಂಧೆ ನಡೆಯುತ್ತಿರುವ ಬಗ್ಗೆ ಅಸಮಾಧಾನ ಹೊರಹಾಕಿದ ರೇವಣ್ಣ, ಹಾಸನ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ರೈತರು 700 ಎಕರೆ ಜಮೀನು ಕೊಟ್ಟಿದ್ದಾರೆ. ಇದರಿಂದ ಸುಮಾರು 12 ಸಾವಿರ ನಿವೇಶನ ಆಗಲಿದೆ. ಜನರಿಗೂ ಕೂಡ ಕಡಿಮೆ ದರಕ್ಕೆ ಸೈಟ್ ಸಿಗುತ್ತೆ. ಇದ್ರಿಂದ ಜಮೀನು ಕೊಟ್ಟ ರೈತರಿಗೂ ಶೇಕಡ 50 ರಷ್ಟು ಹಣ ದೊರೆಯಲಿದೆ. ಆದರೆ ಹಾಸನದಲ್ಲಿ ಹೌಸಿಂಗ್ ಬೋರ್ಡ್, ಪ್ರಾಧಿಕಾರಗಳಿಂದ ಕೆಲಸ ಆಗುತ್ತಿಲ್ಲ. ಇದ್ರಿಂದ ಖಾಸಗಿಯವರ ಸೈಟ್ ದಂಧೆ ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲದೇ ಈಗ ಪೊಲೀಸರೂ ಕೂಡ ಸೈಟ್ ಮಾಡಲು ಹೊರಟಿದ್ದಾರೆ. ಈ ಬಗ್ಗೆ ಡಿಸಿಯವರ ಗಮನಕ್ಕೆ ತಂದಿದ್ದೇನೆ ಎಂದರು.
ಪಿಡಿಓಗಳು ಕೂಡ ದುಡ್ಡು ಕೊಟ್ಟರೆ ಯಾವುದಕ್ಕೆ ಬೇಕಾದರೂ ಎನ್ಓಸಿ ಕೊಡ್ತಿದ್ದಾರೆ. ಸೈಟ್ ದಂಧೆಯಿಂದಾಗಿ ಹಾಸನ ನಗರ ನಾಶ ಆಗುತ್ತಿದೆ. ಆದರೆ ಹೇಳೋರು ಕೇಳೋರು ಯಾರೂ ಇಲ್ಲ. ರೌಡಿಗಳು ಚಾಕು ತೋರಿಸಿ ಹೆದರಿಸುತ್ತಿದ್ದಾರೆ. ಸರ್ಕಾರ ಖಾಸಗಿಯವರ ಜೊತೆ ಶಾಮೀಲಾದಂತೆ ಕಾಣುತ್ತಿದೆ ಎಂದು ರೇವಣ್ಣ ಅಸಮಾಧಾನ ಹೊರಹಾಕಿದ್ದಾರೆ.
ಹೆಚ್.ಡಿ. ರೇವಣ್ಣ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ, ಮಾಧ್ಯಮಗಳ ಎದುರೇ ರೇವಣ್ಣ ಆರೋಪಕ್ಕೆ ಡಿಸಿಯಿಂದ ಮಾಹಿತಿ ಕೇಳಿದ್ದಾರೆ.
ಅವರಿಬ್ಬರ ನಡುವಿನ ಮಾತಿನ ಸಂಭಾಷಣೆಯ ವಿವರ ಇಲ್ಲಿದೆ:
ಇದನ್ನೂ ಓದಿ: ದೊರೆಸ್ವಾಮಿಯವರ ಬಳಿ ಯತ್ನಾಳ್ ಕ್ಷಮೆ ಕೇಳದಿದ್ದರೆ ಪರಿಣಾಮ ಎದುರಿಸಬೇಕಾಗುತ್ತೆ: ಎಚ್.ಕೆ. ಪಾಟೀಲ್
ಸಚಿವ ಮಾಧುಸ್ವಾಮಿ: ಡಿಸಿಯವರೇ ಬನ್ನಿ ಇಲ್ಲಿ. ರೇವಣ್ಣ ಚಾರ್ಜ್ ಮಾಡಿದ್ದಾರಂತೆ. ಕಮರ್ಷಿಯಲ್ ಸೈಟ್ಗೆ ಒಪ್ಪಿಗೆ ಕೊಟ್ಟು ಹಾಸನ ಡೆಸ್ಟ್ರಾಯ್ ಮಾಡಿದ್ದಾರೆ ಅಂತ..
ಡಿಸಿ: ಇಲ್ಲ ಸರ್.. ಲೇಔಟ್ಗೆ ಕನ್ವರ್ಷನ್ ಆಗಿದೆ. ಹುಡಾದಲ್ಲಿ ಅಪ್ರೂವ್ ಆಗಬೇಕು. ಇನ್ನೂ ಆಗಿಲ್ಲ..
ಮಾಧುಸ್ವಾಮಿ: ಇನ್ನೂ ಆಗಿಲ್ಲ
ಡಿಸಿ: ಹೊಸದು ಮಾಡುವುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಿದೆ.
ಮಾಧುಸ್ವಾಮಿ: ನನಗೆ ನಿಜವಾಗಿಯೂ ಗೊತ್ತಿಲ್ಲ. ನೀವೀಗ ಗಮನಕ್ಕೆ ತಂದಿದ್ದೀರಿ. ಏನಾದರೂ ಹೆಚ್ಚು ಕಡಿಮೆ ಆಗಿದ್ರೆ ಡಿಸಿ ಮತ್ತು ಆಫೀಸರ್ ಜೊತೆ ಮಾತನಾಡಿ ಸರಿಪಡಿಸುತ್ತೇನೆ
ಖಾಸಗಿಯವರು ಸೈಟ್ ಖರೀದಿಸಿ ಎಂದು ಪೊಲೀಸರು ಎಲ್ಲೆಡೆ ಜಾಹೀರಾತು ನೀಡುತ್ತಿದ್ದಾರೆ. ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಲು ಜಿಲ್ಲಾಧಿಕಾರಿಗೆ ಸಚಿವ ಮಾಧುಸ್ವಾಮಿ ಸೂಚಿಸಿದ್ದಾರೆ. ಈ ಬಗ್ಗೆ ಗೃಹ ಸಚಿವರಿಗೆ ಪತ್ರ ಬರೆಯುವುದಾಗಿ ರೇವಣ್ಣ ಹೇಳಿದ್ದಾರೆ. ಒಟ್ಟಾರೆ, ಶಿಸ್ತಿನ ಇಲಾಖೆ ಎಂಬ ಹೆಸರಿರುವ ಪೊಲೀಸ್ ಇಲಾಖೆಯವರು ಇಂತಹ ಲೇಔಟ್ ನಿರ್ಮಿಸಿ ಖಾಸಗಿಯವರಿಗೆ ಮಾರಾಟ ಮಾಡದೇ ಪೊಲೀಸರ ಕುಟುಂಬಕ್ಕೇ ನಿವೇಶನ ನೀಡಲು ಮುಂದಾಗಬೇಕಿದೆ.
ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ