ಮೀಸಲಾತಿ ದುರ್ಬಳಕೆಯೊಂದಿಗೆ 48 ಸ್ಥಳೀಯ ಸಂಸ್ಥೆ ವಶಕ್ಕೆ ಬಿಜೆಪಿ ಕುತಂತ್ರ ; ಹೆಚ್ ಡಿ ರೇವಣ್ಣ ಆರೋಪ

ನಗರಸಭೆ ಮೀಸಲಾತಿ ವಿಚಾರದ ಬಗ್ಗೆ ಅಡ್ವೊಕೇಟ್ ಜನರಲ್ ದಿನನಿತ್ಯ ವಿಭಿನ್ನ ಆದೇಶ ಪ್ರತಿಗಳನ್ನು ನ್ಯಾಯಾಲಯಕ್ಕೆ ನೀಡುತ್ತಿದ್ದಾರೆ. ಸಂಪೂರ್ಣ ಆದೇಶ ಪ್ರತಿ ಕೊಡುವಂತೆ ನಾವು ಕೇಳಿದರೆ ಇದುವರೆಗೂ ನೀಡುತ್ತಿಲ್ಲ

ಮಾಜಿ ಸಚಿವ ಹೆಚ್. ಡಿ. ರೇವಣ್ಣ

ಮಾಜಿ ಸಚಿವ ಹೆಚ್. ಡಿ. ರೇವಣ್ಣ

  • Share this:
ಹಾಸನ(ಅಕ್ಟೋಬರ್​. 22): ಮೀಸಲಾತಿ ಅಸ್ತ್ರ ದುರ್ಬಳಕೆ ಮಾಡಿಕೊಂಡು ಬಿಜೆಪಿ ಸರ್ಕಾರ ರಾಜ್ಯದ 48 ಸ್ಥಳೀಯ ಸಂಸ್ಥೆಗಳನ್ನು ತನ್ನ ವಶಕ್ಕೆ ಪಡೆಯಲು ಹವಣಿಸುತ್ತಿದೆ ಎಂದು ಮಾಜಿ ಸಚಿವ ಹೆಚ್. ಡಿ. ರೇವಣ್ಣ ಆರೋಪಿಸಿದರು. ಹಾಸನದಲ್ಲಿ ಮಾತನಾಡಿದ ಅವರು ಬಿಜೆಪಿ ಸರ್ಕಾರದ ಕೆಲ ಮುಖಂಡರು ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಮೀಸಲಾತಿ ಅಸ್ತ್ರವನ್ನು ಬಳಸಿ ಹಿಂಬಾಗಿಲ ಮೂಲಕ ಸ್ಥಳೀಯ ಸಂಸ್ಥೆಗಳ ಅಧಿಕಾರ ಹಿಡಿಯುತ್ತಿದ್ದಾರೆ. ಈ ರೀತಿ ವಾಮಮಾರ್ಗ ಅನುಸರಿಸಿ ಅಧಿಕಾರ ಪಡೆಯುವುದಾದರೆ ಚುನಾವಣೆ ಮಾಡುವ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದರು. ಇದೊಂದು ಭ್ರಷ್ಟ ಹಾಗೂ ಲೂಟಿಕೋರ ಸರ್ಕಾರವಾಗಿದ್ದು, ಇದರೊಂದಿಗೆ ಅಧಿಕಾರಿಗಳು ಸಾಥ್ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ಅದೋಗತಿಗೆ ಹೋಗುತ್ತದೆ ಎಂದು ದೂರಿದರು . ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ ರೇವಣ್ಣ ಅವರು ಎರಡು ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ಮುಗಿಸಲು ಹೊರಟಂತಿದೆ ಎಂದರು.

ಕೆ.ಆರ್. ಪೇಟೆ ಚುನಾವಣೆಯಲ್ಲಿ ರಾತ್ರೋರಾತ್ರಿ ಕಾಂಗ್ರೆಸ್​ನವರು ಬಿಜೆಪಿಗೆ ಮತ ಹಾಕಿಲ್ಲವೇ ಅದೇ ರೀತಿ ಶಿರಾ ಹಾಗೂ ಅರ್ ಆರ್ ನಗರ ಉಪಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿದೆ ಎಂದು ಆರೋಪಿಸಿದರು.

ನಗರಸಭೆ ಮೀಸಲಾತಿ ವಿಚಾರದ ಬಗ್ಗೆ ಅಡ್ವೊಕೇಟ್ ಜನರಲ್ ದಿನನಿತ್ಯ ವಿಭಿನ್ನ ಆದೇಶ ಪ್ರತಿಗಳನ್ನು ನ್ಯಾಯಾಲಯಕ್ಕೆ ನೀಡುತ್ತಿದ್ದಾರೆ. ಸಂಪೂರ್ಣ ಆದೇಶ ಪ್ರತಿ ಕೊಡುವಂತೆ ನಾವು ಕೇಳಿದರೆ ಇದುವರೆಗೂ ನೀಡುತ್ತಿಲ್ಲ. ಅಡ್ವೊಕೇಟ್ ಜನರಲ್ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ 24 ಗಂಟೆಯೂ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, ಹಾಸನದಲ್ಲಿ ಜಿಲ್ಲಾಧಿಕಾರಿ- ಉಪವಿಭಾಗಾಧಿಕಾರಿ ಕಛೇರಿಗಳು ರಾತ್ರಿಯೆಲ್ಲಾ ಕಾರ್ಯನಿರ್ವಹಿಸುವ ಮೂಲಕ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿಯವರು ‌ಹಿಂದೆ ಚುನಾವಣಾ ಪ್ರಚಾರದ ವೇಳೆ ರಾಜ್ಯ ಸಮ್ಮಿಶ್ರ ಸರ್ಕಾರ ಪರ್ಸಂಟೇಜ್ ಸರ್ಕಾರ ಎಂದು ಟೀಕಿಸಿದ್ದರು. ಇದೀಗ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರದ ಕಾರ್ಯ ಚಟುವಟಿಕೆಯನ್ನು ನೋಡಿ ಅವರೇ ಹೇಳಬೇಕು. ಈಗ ಯಾವ ರೀತಿಯ ಪರ್ಸೆಂಟೇಜ್ ಸರ್ಕಾರ ಅಸ್ತಿತ್ವದಲ್ಲಿದೆ ಎಂದು ರೇವಣ್ಣ ಟೀಕಿಸಿದರು.

ರಾಜ್ಯದಲ್ಲಿ ನೆರೆಹಾವಳಿಯಿಂದ ಜನರು ತತ್ತರಿಸಿದ್ದಾರೆ ಈ ಬಗ್ಗೆ ತಲೆಕೆಡಿಸಿಕೊಳ್ಳದ ಸರ್ಕಾರ ಉಪ ಚುನಾವಣೆಯಲ್ಲಿ ಎಲ್ಲಾ ಬಿಜೆಪಿ ನಾಯಕರು ಪ್ರಚಾರದಲ್ಲಿ ಮುಳುಗಿದ್ದಾರೆ . ಸ್ವತಃ ಸಿಎಂ ಅವರೇ ಉಪಚುನಾವಣೆಯ ಪ್ರಚಾರದಲ್ಲಿ ಬ್ಯುಸಿಯಾಗಿದ್ದು, ರಾಜ್ಯದಲ್ಲಿ ಸರ್ಕಾರದ ಆಡಳಿತ ಸಂಪೂರ್ಣ ಕುಸಿದಿದೆ ಎಂದು ದೂರಿದರು.

ಇದನ್ನೂ ಓದಿ : ಪ್ರವಾಹ ಪೀಡಿತ ಪ್ರದೇಶದಲ್ಲಿ ಪಿಎಸ್ಐಗೆ ಚೆಲ್ಲಾಟ ; ಸಂತ್ರಸ್ತರಿಗೆ ಪ್ರಾಣ ಸಂಕಟ

ನ್ಯಾಯಾಲಯಗಳ ಕೆಲವು ಆದೇಶಗಳನ್ನು ಸರ್ಕಾರ ಧಿಕ್ಕರಿಸಿದೆ ಅಡ್ವೊಕೇಟ್ ಜನರಲ್ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಮೀಸಲಾತಿ ಅನ್ಯಾಯದ ವಿರುದ್ಧ ನ್ಯಾಯ ಸಿಗುವವರೆಗೂ ಜೆಡಿಎಸ್ ಹೋರಾಟ ನಡೆಸಲಿದೆ ಎಂದು ತಿಳಿಸಿದರು.

ಹೆಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ರಾಜ್ಯದ ತೆಂಗು ಬೆಳೆಗಾರರಿಗೆ ಎಕರೆಗೆ 18 ಸಾವಿರದಂತೆ 188 ಕೋಟಿ ಪರಿಹಾರ ವಿತರಣೆ ಮಾಡಿದ್ದರು. ಆಲೂಗೆಡ್ಡೆ ಬಿತ್ತನೆ ಬೀಜಕ್ಕೆ ಶೇ. 50 ಸಬ್ಸಿಡಿ ನೀಡಲಾಗಿತ್ತು. ಆದರೆ, ಈ ಬಾರಿ ಕೇಂದ್ರ ರಾಜ್ಯ ಸರಕಾರಗಳು ರೈತರಿಗೆ ಯಾವುದೇ ಪರಿಹಾರ ನೀಡಿಲ್ಲಾ ಎಂದು ದೂರಿದರು.
Published by:G Hareeshkumar
First published: