ಸರ್ಕಾರ ಅಲುಗಾಡುತ್ತಿದ್ದರೂ ವರ್ಗಾವಣೆ ಕೆಲಸ ಬಿಡದ ರೇವಣ್ಣ; ಸಿದ್ದರಾಮಯ್ಯ ಬಳಿ ದೂರಿತ್ತ ಎಂಬಿ ಪಾಟೀಲ್

ಅನ್ಯ ಇಲಾಖೆಯಲ್ಲಿ ರೇವಣ್ಣ ಹಸ್ತಕ್ಷೇಪ ಮಾಡುತ್ತಾರೆ ಎಂಬ ಅಪಸ್ವರ ಹೆಚ್ಚಾಗಿರುವ ಹೊತ್ತಲ್ಲೇ ಗೃಹ ಸಚಿವ ಎಂ.ಬಿ. ಪಾಟೀಲ್ ಅವರ ಗಮನಕ್ಕೆ ಬಾರದೆಯೇ ನೂರಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳ ವರ್ಗಾವಣೆ ಆದೇಶ ಬಂದಿದೆ.

news18
Updated:July 13, 2019, 7:21 PM IST
ಸರ್ಕಾರ ಅಲುಗಾಡುತ್ತಿದ್ದರೂ ವರ್ಗಾವಣೆ ಕೆಲಸ ಬಿಡದ ರೇವಣ್ಣ; ಸಿದ್ದರಾಮಯ್ಯ ಬಳಿ ದೂರಿತ್ತ ಎಂಬಿ ಪಾಟೀಲ್
ಹೆಚ್.ಡಿ. ರೇವಣ್ಣ
  • News18
  • Last Updated: July 13, 2019, 7:21 PM IST
  • Share this:
ಬೆಂಗಳೂರು(ಜುಲೈ 13): ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಅವರು ಗೃಹ ಇಲಾಖೆಗೆ ಮೂಗು ತೂರಿಸಿದ ಆರೋಪ ಎದುರಿಸುತ್ತಿದ್ದಾರೆ. ಬರೋಬ್ಬರಿ 21 ಡಿವೈಎಸ್​ಪಿ ಹಾಗೂ 110 ಇನ್ಸ್​ಪೆಕ್ಟರ್​ಗಳ ವರ್ಗಾವಣೆ ಮಾಡಿಸಿದ್ಧಾರೆ. ಗೃಹ ಸಚಿವ ಎಂ.ಬಿ. ಪಾಟೀಲ್ ಅವರಿಗೆ ಗೊತ್ತಿಲ್ಲದೆಯೇ ಅಥವಾ ಅವರ ಗಮನಕ್ಕೆ ತರದೆಯೇ ಈ ವರ್ಗಾವಣೆ ನಡೆದಿದೆ. ಇದು ಸಚಿವ ಎಂ.ಬಿ. ಪಾಟೀಲ್ ಅವರನ್ನು ರೊಚ್ಚಿಗೆಬ್ಬಿಸಿದೆ. ಈ ಸಂಬಂಧ ಪಾಟೀಲರು ಸಿದ್ದರಾಮಯ್ಯ ಬಳಿ ದೂರು ತೆಗೆದುಕೊಂಡು ಹೋಗಿರುವ ವಿಚಾರ ಬೆಳಕಿಗೆ ಬಂದಿದೆ.

ಹೆಚ್​ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದರೂ ಸರ್ಕಾರದಲ್ಲಿ ಸೂಪರ್ ಸಿಎಂರಂತೆ ಹೆಚ್.ಡಿ. ರೇವಣ್ಣ ಕಾರ್ಯನಿರ್ವಹಿಸುತ್ತಾರೆ. ಇವರು ಲೋಕೋಪಯೋಗಿ ಮಂತ್ರಿಯಾದರೂ ಸರ್ಕಾರದ ಎಲ್ಲಾ ಇಲಾಖೆಗಳ ಅಧಿಕಾರಿಗಳ ವರ್ಗಾವಣೆ ಮಾಡುವುದರಲ್ಲಿ ಎತ್ತಿದ ಕೈ. ಅದೂ ಆ ಇಲಾಖೆಯ ಸಂಬಂಧಿತ ಸಚಿವರಿಗೆ ಗೊತ್ತಿಲ್ಲದೆಯೇ ವರ್ಗಾವಣೆ ನಡೆದುಹೋಗಿರುತ್ತದೆ. ರೇವಣ್ಣ ಅವರ ಈ ಪ್ರವೃತ್ತಿಯಿಂದ ಅನೇಕ ಮಂತ್ರಿಗಳು ಮತ್ತು ಶಾಸಕರು ಬೇಸರಗೊಂಡಿದ್ದಾರೆ. ಕಾಂಗ್ರೆಸ್ ಪಕ್ಷದೊಳಗೆ ಎದ್ದಿರುವ ಭಿನ್ನಮತಕ್ಕೆ ರೇವಣ್ಣರೂ ಒಬ್ಬ ಕಾರಣ ಕರ್ತರು ಎಂದು ಭಾವಿಸಲಾಗಿದೆ. ಈಗ ರಾಜೀನಾಮೆ ನೀಡಿರುವ ಕೆಲ ಶಾಸಕರು ಹೆಚ್ಚು ಕೈಬೊಟ್ಟು ಮಾಡುತ್ತಿರುವುದು ರೇವಣ್ಣರತ್ತಲೇ ಎಂಬುದು ಗಮನಾರ್ಹ.

ಇದನ್ನೂ ಓದಿ: ಅತೃಪ್ತರಿಗೆ ಅನರ್ಹತೆಯ ಭಯ ನಿವಾರಿಸಲು ಬಿಜೆಪಿಯಿಂದ ಸುಪ್ರೀಂ ರಕ್ಷಣೆಯ ಭರವಸೆ

ಹೀಗೆ ಮೈತ್ರಿ ಸರ್ಕಾರ ತಮ್ಮ ಕಾರಣದಿಂದಲೇ ಅಲುಗಾಡುತ್ತಿರುವುದು ಗೊತ್ತಿದ್ದೇ ಹೆಚ್.ಡಿ. ರೇವಣ್ಣ ಅವರ ವರ್ಗಾವಣೆ ಚಾಳಿ ಬಿಟ್ಟಿಲ್ಲದಿರುವುದು ನಿಜಕ್ಕೂ ಅಚ್ಚರಿ ಹುಟ್ಟಿಸಿದೆ. ಸದ್ಯಕ್ಕೆ ರೇವಣ್ಣ ಮಾಡಿಸಿದ ಎಲ್ಲಾ ವರ್ಗಾವಣೆಯನ್ನೂ ಗೃಹ ಸಚಿವರು ತಡೆ ಹಿಡಿದಿದ್ದಾರೆ. ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರು ಗೃಹ ಸಚಿವರ ಸೂಚನೆಯಂತೆ ವರ್ಗಾವಣೆ ಆದೇಶಗಳನ್ನು ಪೆಂಡಿಂಗ್ ಇಟ್ಟಿದ್ದಾರೆ.

ಒಂದು ವೇಳೆ, ರೇವಣ್ಣ ಅವರ ಪ್ರವೃತ್ತಿ ಹೀಗೇ ಮುಂದುವರಿದರೆ ಅತೃಪ್ತ ಶಾಸಕರನ್ನು ಮನವೊಲಿಸಿ ವಾಪಸ್ ಕರೆಸಿಕೊಳ್ಳುವುದು ಕಷ್ಟವಾಗಬಹುದು ಎಂಬ ಭಯ ಕಾಂಗ್ರೆಸ್ ಪಕ್ಷದ ನಾಯಕರಿಗಿದೆ. ಮೈತ್ರಿ ಸರ್ಕಾರದ ಸಮನ್ವಯತೆ ಸಮಿತಿ ಮುಖ್ಯಸ್ಥರಾಗಿರುವ ಸಿದ್ದರಾಮಯ್ಯ ಅವರು ವರ್ಗಾವಣೆ ವಿಚಾರದಲ್ಲಿ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಅವರಿಗೆ ಮೂಗುದಾರ ಹಾಕುತ್ತಾರಾ ಎಂಬ ನಿರೀಕ್ಷೆ ಇದೆ.

(ವರದಿ: ಚಿದಾನಂದ ಪಟೇಲ್)

ನಿಮ್ಮ ನ್ಯೂಸ್ 18 ಕನ್ನಡವನ್ನು ಹಲೋ-ಆ್ಯಪ್​​ನಲ್ಲೂ ಹಿಂಬಾಲಿಸಿ
First published:July 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ