Seema.RSeema.R
|
news18-kannada Updated:March 3, 2020, 5:38 PM IST
ಕುಮಾರಸ್ವಾಮಿ ಕುಟುಂಬ
ರಾಮನಗರ (ಮಾ.03): ಮಗ ನಿಖಿಲ್ ಕುಮಾರಸ್ವಾಮಿ ಮದುವೆ ನೆಪದಲ್ಲಿ ಎಚ್ಡಿ ಕುಮಾರಸ್ವಾಮಿ ಸದ್ದಿಲ್ಲದಂತೆ ಪಕ್ಷವನ್ನು ಪ್ರಬಲಗೊಳಿಸಲು ಮುಂದಾಗಿದ್ದಾರೆ. ಇದಕ್ಕಾಗಿಯೇ ತಮ್ಮ ಕ್ಷೇತ್ರದಲ್ಲಿ ಮದುವೆ ಮಾಡುತ್ತಿದ್ದು, ಕ್ಷೇತ್ರದ ಮತದಾರರಿಗೆ ವಿಶೇಷ ಆಹ್ವಾನ ನೀಡುತ್ತಿದ್ದಾರೆ.
ನಿಖಿಲ್ ಕುಮಾರಸ್ವಾಮಿ ವಿವಾಹದ ಹೆಸರಲ್ಲಿ ಜಿಲ್ಲೆಯ ಜನರನ್ನು ಭಾವನಾತ್ಮಕವಾಗಿ ಸೆಳೆಯುವ ಪ್ರಯತ್ನಕ್ಕೆ ಮುಂದಾಗಿರುವ ಮಾಜಿ ಸಿಎಂ, ಈಗಾಗಲೇ ಮದುವೆ ಆಮಂತ್ರಣ ಪತ್ರಿಕೆ ಜೊತೆಗೆ ಕ್ಷೇತ್ರದ ಜನರಿಗೆ ಸುದೀರ್ಘ ಪತ್ರವನ್ನು ಬರೆದಿದ್ದಾರೆ. ಈ ಪತ್ರದಲ್ಲಿ ರಾಮನಗರದಲ್ಲೇ ಯಾಕೆ ಮದುವೆ ಮಾಡುತ್ತಿರುವ ಬಗ್ಗೆ ವಿವರಣೆ ನೀಡಿದ್ದಾರೆ.
ಈಗ ಇದಕ್ಕೆ ಪುಷ್ಠಿ ನೀಡುವಂತೆ ಕ್ಷೇತ್ರದ ಜನರಿಗೆ ವಿವಾಹ ಆಮಂತ್ರಣ ನೀಡಲು ತಯಾರಿ ನಡೆಸಿರುವ ಅವರು, ಲಗ್ನ ಪತ್ರಿಕೆ ಜೊತೆ ಮತದಾರರಿಗೆ ಭರ್ಜರಿ ಗಿಫ್ಟ್ ನೀಡಲು ಮುಂದಾಗಿದ್ದಾರೆ. ತಮ್ಮ ಕ್ಷೇತ್ರವಾದ ಚನ್ನಪಟ್ಟಣ ಹಾಗೂ ಪತ್ನಿ ಅನಿತಾ ಅವರ ಕ್ಷೇತ್ರವಾದ ರಾಮನಗರ ಮತದಾರರಿಗೆ ಈ ಉಡುಗೊರೆ ನೀಡಲು ಅವರು ನಿರ್ಧರಿಸಿದ್ದಾರೆ.
ರಾಮನಗರದಲ್ಲಿ ಸುಮಾರು 68 ಸಾವಿರ ಕುಟುಂಬ ಹಾಗೂ ಚನ್ನಪಟ್ಟಣದ ಸುಮಾರು 72 ಸಾವಿರ ಕುಟುಂಬಗಳಿಗೆ ಆಮಂತ್ರಣ ಪತ್ರಿಕೆ ಜೊತೆ ಸಂಪ್ರದಾಯದಂತೆ ಗಂಡಸರಿಗೆ ಪಂಚೆ, ಹೆಂಗಸರಿಗೆ ರೇಷ್ಮೆ ಸೀರೆ ನೀಡಲು ಅವರು ಮುಂದಾಗಿದ್ದಾರೆ ಎಂದು ಬಲ್ಲ ಮೂಲಗಳು ನ್ಯೂಸ್ 18 ಕನ್ನಡಕ್ಕೆ ಮಾಹಿತಿ ನೀಡಿವೆ.
ಇದಲ್ಲದೇ ಕುಂಕುಮಕ್ಕೆ ಕರೆಯುವ ನೆಪದಲ್ಲಿ ಒಂದು ಜೊತೆ ಬೆಳ್ಳಿ ಕುಂಕುಮದ ಬಟ್ಟಲು ಇಲ್ಲವಾದಲ್ಲಿ ಬೆಳ್ಳಿ ಕಾಯಿನ್ ನೀಡುವ ಕುರಿತು ಚಿಂತಿಸಲಾಗಿದ್ದು, ಈ ಬಗ್ಗೆ ಇನ್ನು ಸ್ಪಷ್ಟತೆ ಸಿಕ್ಕಿಲ್ಲ.
ಇದನ್ನು ಓದಿ: ನಿಖಿಲ್ ರಾಜಕೀಯ ಅಖಾಡ ಮಂಡ್ಯದಿಂದ ರಾಮನಗರಕ್ಕೆ ಶಿಫ್ಟ್? ಹೆಚ್ಡಿಕೆ ಮಗನ ವಿವಾಹ ಮಹೋತ್ಸವ ಒಂದು ನೆಪವೇ?ಏಪ್ರಿಲ್ 17 ರಂದು ರಾಮನಗರದ ಅರ್ಚಕರಹಳ್ಳಿಯ ಜಾನಪದ ಲೋಕದ ಪಕ್ಕದ ಜಮೀನಿನಲ್ಲಿ ಮದುವೆ ಸಮಾರಂಭ ನಡೆಯಲಿದ್ದು, ಈಗಾಗಲೇ ಸೆಟ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಮದುವೆ ಆಮಂತ್ರಣ ಕೂಡ ಸಿದ್ಧವಾಗಿದ್ದು, ಸೋಮವಾರದಿಂದ ಕ್ಷೇತ್ರದಲ್ಲಿ ಆಮಂತ್ರಣ ನೀಡಿ ಮತದಾರರಿಗೆ ಆಹ್ವಾನ ನೀಡುವ ಬಗ್ಗೆ ಚಿಂತಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
(ವರದಿ: ಎಟಿ ವೆಂಕಟೇಶ್)
First published:
March 3, 2020, 1:18 PM IST