• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಗ್ರಾಮ ಪಂಚಾಯತ್​ ಚುನಾವಣೆ: ಸಿಪಿ ಯೋಗೇಶ್ವರ್​ ಹುಟ್ಟೂರಿನಲ್ಲಿ ಜಯಭೇರಿ ಬಾರಿಸಿದ ಜೆಡಿಎಸ್​

ಗ್ರಾಮ ಪಂಚಾಯತ್​ ಚುನಾವಣೆ: ಸಿಪಿ ಯೋಗೇಶ್ವರ್​ ಹುಟ್ಟೂರಿನಲ್ಲಿ ಜಯಭೇರಿ ಬಾರಿಸಿದ ಜೆಡಿಎಸ್​

ಎಚ್​.ಡಿ.ಕುಮಾರಸ್ವಾಮಿ ಹಾಗೂ ಸಿ.ಪಿ.ಯೋಗೇಶ್ವರ್.

ಎಚ್​.ಡಿ.ಕುಮಾರಸ್ವಾಮಿ ಹಾಗೂ ಸಿ.ಪಿ.ಯೋಗೇಶ್ವರ್.

ಯೋಗೇಶ್ವರ್ ಹುಟ್ಟೂರು ಚಕ್ಕರೆಯಲ್ಲಿಯೇ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸುವ ಮೂಲಕ ಸಿ.ಪಿ.ಯೋಗೇಶ್ವರ್‌ಗೆ ಭಾರೀ ಮುಖಭಂಗವಾಗಿದೆ. 

  • Share this:

ರಾಮನಗರ (ಫೆ. 12): ನೂತನ ಸಚಿವ ಸಿ.ಪಿ.ಯೋಗೇಶ್ವರ್‌ಗೆ ತವರು ಕ್ಷೇತ್ರದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಜೆಡಿಎಸ್​ ಅಭ್ಯರ್ಥಿಗಳು ಅಧಿಕ ಸಂಖ್ಯೆಯಲ್ಲಿ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ಹೆಚ್.ಡಿ.ಕುಮಾರಸ್ವಾಮಿ ಎದುರು ಸಿ.ಪಿ.ಯೋಗೇಶ್ವರ್‌ಗೆ ಹಿನ್ನಡೆಯಾಗಿದೆ. ಯೋಗೇಶ್ವರ್ ಹುಟ್ಟೂರು ಚಕ್ಕರೆಯಲ್ಲಿಯೇ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸುವ ಮೂಲಕ ಸಿ.ಪಿ.ಯೋಗೇಶ್ವರ್‌ಗೆ ಭಾರೀ ಮುಖಭಂಗವಾಗಿದೆ.  ಬೊಂಬೆನಾಡು ಚನ್ನಪಟ್ಟಣದಲ್ಲಿ ಸತತವಾಗಿ 20 ವರ್ಷಗಳ ಕಾಲ ಸುಧೀರ್ಘ ರಾಜಕೀಯ ಮಾಡಿರುವ ಸಿ.ಪಿ.ಯೋಗೇಶ್ವರ್ 5 ಬಾರಿ ಕ್ಷೇತ್ರದ ಶಾಸಕರಾಗಿದ್ದಾರೆ. ಎರಡನೇ ಬಾರಿ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿದ್ದಾರೆ. ವಿಧಾನಪರಿಷತ್‌ನ ಸದಸ್ಯರಾಗಿಯೂ ಅಧಿಕಾರ ಹಿಡಿದಿದ್ದಾರೆ. ಆದರೆ ಕಳೆದ 2018 ರ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಎದುರು ಯೋಗೇಶ್ವರ್ ಭಾರೀ ಅಂತರದಿಂದ ಸೋತ ನಂತರ ಯೋಗೇಶ್ವರ್ ಅಲೆ ಚನ್ನಪಟ್ಟಣದಲ್ಲಿ ಕಡಿಮೆಯಾಗುತ್ತಲೇ ಬರುತ್ತಿದೆ. ಅದಕ್ಕೆ ಸ್ಪಷ್ಟ ಉದಾಹರಣೆ ಎಂಬಂತೆ ಗ್ರಾಮಪಂಚಾಯಿತಿ ಚುನಾವಣಾ ಫಲಿತಾಂಶ ಹೊರ ಬಿದ್ದಿರುವುದು. ಕ್ಷೇತದ ಒಟ್ಟು32ಪಂಚಾಯಿತಿಗಳ ಪೈಕಿ ಜೆಡಿಎಸ್ 18 ಕಡೆಗಳಲ್ಲಿ ಭರ್ಜರಿ ಗೆಲುವು ಸಾಧಿಸಿ ಮೊದಲ ಸ್ಥಾನದಲ್ಲಿದೆ. 12 ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ, 2 ಸ್ಥಾನ ಪಡೆದಿರುವ ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ.


ಹುಟ್ಟೂರಲ್ಲಿಯೇ ಸೋತ ಸಚಿವ ಸಿ.ಪಿ.ಯೋಗೇಶ್ವರ್!


ಗ್ರಾಮಪಂಚಾಯಿತಿ ಚುನಾವಣೆಯ ಮತದಾನದ ದಿನದಂದು ಸಿ.ಪಿ.ಯೋಗೇಶ್ವರ್ ಸ್ವಗ್ರಾಮ ಚಕ್ಕೆರೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ನಾವು 25 ಕ್ಕೂ ಹೆಚ್ಚು ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯುತ್ತೇವೆ. ಕುಮಾರಸ್ವಾಮಿಯವರ ಕಾರ್ಯವೈಖರಿ, ಕ್ಷೇತ್ರದ ಜನರ ಬಗ್ಗೆ ಇರುವ ಕಾಳಜಿ ಈಗ ಗೊತ್ತಾಗಲಿದೆ ಎಂದು ಭವಿಷ್ಯ ನುಡಿದಿದ್ದರು. ಆದರೆ, ಯೋಗೇಶ್ವರ್ ರಾಜಕೀಯ ಭವಿಷ್ಯ ಸಂಪೂರ್ಣ ಸುಳ್ಳಾಗಿದೆ. ಜೊತೆಗೆ ತಾವು ಹುಟ್ಟಿ ಬೆಳೆದ ಚಕ್ಕೆರೆ ಗ್ರಾಮದಲ್ಲಿಯೇ ಯೋಗೇಶ್ವರ್ ಸೋಲುಂಡಿದ್ದಾರೆ. ಚಕ್ಕೆರೆ ಗ್ರಾಮದಲ್ಲಿ 7 ಸ್ಥಾನಗಳ ಪೈಕಿ 5 ರಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದರೆ, ಬಿಜೆಪಿ ಬೆಂಬಲಿತರು 2 ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಇನ್ನು ಚಕ್ಕೆರೆ ಗ್ರಾಮಪಂಚಾಯಿತಿಯಲ್ಲಿ ಒಟ್ಟು 14 ಸ್ಥಾನಗಳ ಪೈಕಿ ಜೆಡಿಎಸ್ 12 ಕಡೆಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು, ಬಿಜೆಪಿ ಕೇವಲ 2 ಸ್ಥಾನಪಡೆದು ಹೀನಾಯವಾಗಿ ಸೋತಿದೆ. ಹಾಗಾಗಿ ಸಚಿವ ಸಿ.ಪಿ.ಯೋಗೇಶ್ವರ್‌ಗೆ ಇದು ನುಂಗಲಾರದ ತುತ್ತಾಗಿದೆ.


ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ ಹೆಚ್ಡಿಕೆಗೆ ಜೈ ಎಂದ ಜನ!


ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಸಿ.ಪಿ.ಯೋಗೇಶ್ವರ್ ಸಹ ಈ ಸರ್ಕಾರ ಬರಲು ಪ್ರಮುಖ ಕಾರಣಕರ್ತರು ಎಂಬ ಚರ್ಚೆಗಳು ರಾಜಕೀಯ ಪಡಸಾಲೆಗಳಲ್ಲಿ ನಡೆಯುತ್ತಿತ್ತು. ಜೊತೆಗೆ ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ದೊಡ್ಡಮಟ್ಟದ ಲಾಭಿ ನಡೆಸಿದ್ದ ಯೋಗೇಶ್ವರ್ ವಿಧಾನಪರಿಷತ್ ಸದಸ್ಯರಾಗುವ ಮೂಲಕ ಬಿಎಸ್‌ವೈ ಕ್ಯಾಬಿನೆಟ್‌ನಲ್ಲಿ ಮಂತ್ರಿಯೂ ಆಗಿದ್ದಾರೆ. ಆದರೂ ಸಹ ಚನ್ನಪಟ್ಟಣ ಕ್ಷೇತ್ರದ ಹಾಲಿ ಶಾಸಕರಾಗಿರುವ ಹೆಚ್.ಡಿ.ಕುಮಾರಸ್ವಾಮಿ ರಾಜಕೀಯ ಅಲೆಯ ಎದುರು ಸಿ.ಪಿ.ಯೋಗೇಶ್ವರ್‌ಗೆ ಕ್ಷೇತ್ರದ ಜನರು ಅಷ್ಟಾಗಿ ಒಲವು ತೋರಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಗ್ರಾಮಪಂಚಾಯಿತಿ ಚುನಾವಣೆಗಳು ಪಕ್ಷದ ಚಿಹ್ನೆಯಡಿಯಲ್ಲಿ ನಡೆಯುವುದಿಲ್ಲ ಎಂದಾದರೂ ಸಹ ಪಕ್ಷ ಹಾಗೂ ನಾಯಕರ ಹೆಸರು ಅಲ್ಲಲ್ಲಿ ಕೊಂಚ ಚಾಲ್ತಿಯಲ್ಲಿದ್ದು ಕೆಲಸ ಮಾಡಿದೆ ಎನ್ನುವುದು ಸಹ ವಾಸ್ತವ ಸತ್ಯ.


(ವರದಿ : ಎ.ಟಿ.ವೆಂಕಟೇಶ್)

Published by:Seema R
First published: