ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (Former CM HD Kumaraswamy) ಜುಲೈ 11 ರಂದು ಕೋವಿಡ್ ಸೋಂಕಿಗೆ (COVID 19 Positive) ತುತ್ತಾಗಿದ್ದರು. ಹೀಗಾಗಿ ಮನೆಯಲ್ಲಿಯೇ ಕ್ವಾರಂಟೈನ್ (Quarantine) ಆಗಿದ್ದ ಮಾಜಿ ಮುಖ್ಯಮಂತ್ರಿಗಳು, ಈ ಸಮಯದಲ್ಲಿ ತಾವು ನೋಡಿದ ಎರಡು ಸಿನಿಮಾಗಳ (Cinema) ಬಗ್ಗೆ ಹೇಳಿಕೊಂಡಿದ್ದಾರೆ. ಸಿನಿಮಾ ನೋಡಿದ ಬಳಿಕ ತಮ್ಮಲ್ಲುಂಟಾದ ತಳಮಳವನ್ನು ಟ್ವಿಟರ್ ನಲ್ಲಿ (Twitter) ಹಂಚಿಕೊಂಡಿದ್ದಾರೆ. ಸಾಲು ಸಾಲು ಟ್ವೀಟ್ ಮಾಡಿರುವ ಕುಮಾರಸ್ವಾಮಿ ಅವರು, ಚಿತ್ರ ಮತ್ತು ವಾಸ್ತವತೆಯನ್ನು ತೆರೆದಿಡುವ ಪ್ರಯತ್ನ ಮಾಡಿದ್ದಾರೆ. ಕೋವಿಡ್ ಸೋಂಕಿನಿಂದ ಒಂದು ವಾರ ಮನೆಯಲ್ಲೇ ಚಿಕಿತ್ಸೆ ಪಡೆದ ನಾನು, ಓದು & ಸಿನಿಮಾ ವೀಕ್ಷಣೆಯಲ್ಲಿಯೇ (Reading And Watching Cinema) ಸಮಯ ಕಳೆದೆ. ಈ ಬಿಡುವಿನಲ್ಲಿ ಎರಡು ಸಿನಿಮಾಗಳನ್ನು ವೀಕ್ಷಿಸಿದೆ. 1.ʼಜೈ ಭೀಮ್ʼ (Jai Bhim). 2.ಜನ ಗಣ ಮನ (Jana Gana Mana). ಸೂಕ್ಷ್ಮ ಕಥಾಹಂದರದ ಈ ಸಿನಿಮಾಗಳೆರಡೂ ನನ್ನ ಮನ ಕಲಕಿವೆ, ಮತ್ತೂ ತೀವ್ರ ತಳಮಳಕ್ಕೆ ಕಾರಣವೂ ಆಗಿವೆ ಎಂದು ಬರೆದುಕೊಂಡಿದ್ದಾರೆ.
ಸುಪ್ರೀಂ ಕೋರ್ಟ್'ನ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಾದ ರಮಣ ಅವರು; ವಿಚಾರಣಾಧೀನ ಕೈದಿಗಳ ದುಸ್ಥಿತಿಯ ಬಗ್ಗೆ ಜೈಪುರದಲ್ಲಿ ನೀಡಿದ್ದ ಹೇಳಿಕೆ & ʼಜೈ ಭೀಮ್ʼ ಚಿತ್ರದಲ್ಲಿ ಅದೇ ಕೈದಿಗಳ ಸುತ್ತ ಬಿಚ್ಚಿಕೊಳ್ಳುವ ಕಠೋರ ಕಹಿ ಸತ್ಯಗಳ ಬಗ್ಗೆ ಇಡೀ ಭಾರತವೇ ಆಲೋಚಿಸಬೇಕು. ನಾನು ಆಲೋಚಿಸುತ್ತಿದ್ದೇನೆ. ಬದಲಾವಣೆಗೆ ಖಂಡಿತಾ ಪ್ರಯತ್ನಿಸುವೆ ಎಂದಿದ್ದಾರೆ.
ಸರಳುಗಳ ಹಿಂದಿನ ನರಕದ ನೈಜ ದರ್ಶನ
ಭಾರತೀಯ ನ್ಯಾಯ ವ್ಯವಸ್ಥೆ ಬಡವರು ದಲಿತರು, ಅಶಕ್ತರಿಗೆ ಗಗನ ಕುಸುಮವಾ? ಓರ್ವ ಸಿರಿವಂತ ಅಪರಾಧಿಗೆ ಕೆಲ ಗಂಟೆಗಳಲ್ಲೇ ಜಾಮೀನು ಸಿಕ್ಕಿದರೆ, ಅದೇ ಬಡ ಅಪರಾಧಿಗಳ (ಅನೇಕ ಪ್ರಕರಣಗಳಲ್ಲಿ ಮುಗ್ಧರು) ಅರ್ಜಿಗಳಿಗೆ ಮೋಕ್ಷವೇ ಕಾಣುವುದಿಲ್ಲ. ಸರಳುಗಳ ಹಿಂದಿನ ನರಕವನ್ನು ʼಜೈ ಭೀಮ್ʼ ನೈಜವಾಗಿ ತೋರಿಸಿದೆ.
ಇದನ್ನೂ ಓದಿ: GST Rate Hike: ಊಟದ ತಟ್ಟೆಯಲ್ಲಿನ ಆಹಾರ ಕಿತ್ತುಕೊಳ್ತಿರೋದು ಬಡವರ ಹತ್ಯೆಗೆ ಸಮ: ಸಿದ್ದರಾಮಯ್ಯ ಆಕ್ರೋಶ
ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದು ಇದನ್ನೇ. ವಿಚಾರಣೆಯೇ ಇಲ್ಲದೆ ಕೈದಿಗಳ ದೀರ್ಘಾವಧಿ ಸೆರೆ ಪ್ರಶ್ನಾರ್ಹ.ನಮ್ಮ ದೇಶದಲ್ಲಿ ಸೆರೆವಾಸದಲ್ಲಿರುವ 6.10 ಲಕ್ಷ ಕೈದಿಗಳಲ್ಲಿ ಶೇ.80ರಷ್ಟು ಜನ ವಿಚಾರಣಾಧೀನ ಕೈದಿಗಳೇ!! ಇವರೆಲ್ಲರೂ ವಿಚಾರಣೆ ಪೂರ್ಣಗೊಳ್ಳದೇ ಕಂಬಿಗಳ ಹಿಂದೆ ಜೀವಶ್ಚವಗಳಂತೆ ಬದುಕುತ್ತಿದ್ದಾರೆ.
ಬುಡಕಟ್ಟು ಜನರ 5 ವರ್ಷಗಳ ಸೆರೆವಾಸಕ್ಕೆ ಉತ್ತರದಾಯಿ ಯಾರು?
2017ರಲ್ಲಿ ಛತ್ತೀಸಗಢದಲ್ಲಿ CRPF ಜವಾನರ ಮೇಲೆ ನಡೆದ ದಾಳಿ ಪ್ರಕರಣದಲ್ಲಿ 121 ಬುಡಕಟ್ಟು ಜನರನ್ನು ಬಂಧಿಸಲಾಗಿತ್ತು. 5 ವರ್ಷ ಅವರು ಜೈಲುಗಳಲ್ಲಿ ನರಕ ಅನುಭವಿಸಿದರು. ಕೊನೆಗೆ ಅವರ ಪಾತ್ರದ ಬಗ್ಗೆ ಸಾಕ್ಷ್ಯ ಇಲ್ಲ ಎಂದು ಎನ್ಐಎ ಕೋರ್ಟ್ ತೀರ್ಪು ನೀಡಿ, ಆ ಮುಗ್ಧರನ್ನು ಖುಲಾಸೆಗೊಳಿಸಿದೆ. ಇದು ಸಮಾಧಾನದ ಸಂಗತಿ. ಹಾಗಾದರೆ, 5 ವರ್ಷಗಳ ಅವರ ಸೆರೆವಾಸಕ್ಕೆ ಉತ್ತರದಾಯಿಗಳು ಯಾರು? ಅವರ ಕುಟುಂಬ ಸದಸ್ಯರು ಅನುಭವಿಸಿದ ಕಷ್ಟಕ್ಕೆ ಪರಿಹಾರವೇನು?
ಆತುರಗೆಟ್ಟ ಆರೋಪ ಪಟ್ಟಿ, ವಿವೇಚನೆ ಇಲ್ಲದ ಬಂಧನ, ಜಾಮೀನು ಪಡೆಯಲು ಹೆಣಗಾಟದ ಕರಾಳತೆಯ ಮೇಲೆ ʼಜೈ ಭೀಮ್ʼ ಬೆಳಕು ಚೆಲ್ಲಿದೆ. ಮಾನ್ಯ ಮುಖ್ಯ ನ್ಯಾಯಮೂರ್ತಿಗಳು ಇದನ್ನೇ ಹೇಳಿ ಕಳವಳ ವ್ಯಕ್ತಪಡಪಡಿಸಿದ್ದಾರೆ. ಅವರ ದನಿ ದೇಶಕ್ಕೇ ಕೇಳಿಸಿದೆ. ಹಾಗಾದರೆ, ನಾವು ಬದಲಾಗುವುದು ಯಾವಾಗ? ಸುಧಾರಣೆಗಳು ಎಂದು? ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುವೆ.
ಮನುಷ್ಯತ್ವಕ್ಕೇ ಸವಾಲೆಸೆಯುವ ಪ್ರಶ್ನೆಗಳನ್ನು ಎತ್ತಿದೆ
ಸಂವಿಧಾನ ನಮಗೆ ಶ್ರೇಷ್ಠ ನ್ಯಾಯಾಂಗವನ್ನು ಕೊಟ್ಟಿದೆ. ಕಷ್ಟ ಎದುರಾದಾಗ ಬಿಲಿನಿಯರ್ʼನಿಂದ ಕಟ್ಟಕಡೆಯ ಬಡಪ್ರಜೆವರೆಗೂ ಎಲ್ಲರೂ ಕೋರ್ಟ್ ಕಡೆ ನೋಡುತ್ತಾರೆ. ಎಲ್ಲರೂ ಇಲ್ಲಿ ಸಮಾನರು. ಅದು ಹಕ್ಕು ಹೌದು. ತಮಿಳುನಾಡಿನ ಕಡಲೂರಿನಲ್ಲಿ ನಡೆದ ನೈಜ ಘಟನೆ ಆಧರಿಸಿದ 'ಜೈ ಭೀಮ್' ಚಿತ್ರ ಮನುಷ್ಯತ್ವಕ್ಕೇ ಸವಾಲೆಸೆಯುವ ಅನೇಕ ಪ್ರಶ್ನೆಗಳನ್ನು ಎತ್ತಿದೆ.
ಇದನ್ನೂ ಓದಿ: Saffron Shawl: ಬೇಡ ಬೇಡ ಅಂದ್ರು ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ಗೆ ಕೇಸರಿ ಶಾಲು ಹಾಕಿದ ರಾಜೂಗೌಡ
ʼಜನ ಗಣ ಮನʼ ಚಿತ್ರ ಇವತ್ತಿನ ರಾಜಕೀಯ ಕಪಟತೆ, ಕುಟಿಲತೆ, ಲಂಪಟತೆಯನ್ನು ಮನೋಜ್ಞವಾಗಿ ತೆರೆದಿಟ್ಟಿದೆ. ರಾಜಕೀಯದ ಕಪಿಮುಷ್ಠಿಗೆ ಸಿಲುಕಿ ನರಳುವ ವ್ಯವಸ್ಥೆಯ ಅಸಹಾಯಕ ಮುಖದ ದರ್ಶನ ಮಾಡಿಸಿದೆ. ವ್ಯವಸ್ಥೆಗೆ ಕನ್ನಡಿಯಂತಿರುವ ಸಿನಿಮಾಗಳು ಆವೇಶಕ್ಕೆ, ಆಲೋಚನೆಗೆ ದೂಡುತ್ತವೆ. ಎರಡೂ ಚಿತ್ರಗಳ ನಿರ್ದೇಶಕರು ಅಭಿನಂದನಾರ್ಹರು ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ