ಹಾಸನ: ವಿಧಾನಸಭಾ ಚುನಾವಣೆಗೆ (Karnataka Election) ಕೆಲವೇ ದಿನಗಳು ಬಾಕಿ ಉಳಿದಿದೆ. ಈ ವೇಳೆ ಜೆಡಿಎಸ್ನಲ್ಲಿ ಹಾಸನದ (Hassan) ಟಿಕೆಟ್ ವಿಚಾರ ವರಿಷ್ಠರದಲ್ಲಿ ಕುಟುಂಬದಲ್ಲಿ ಫೈಟ್ ಎಬ್ಬಿಸಿದೆ. ಮಾಜಿ ಪ್ರಧಾನಿ ದೇವೇಗೌಡ (HD Devegowda) ಅವರು ಮಧ್ಯೆ ಪ್ರವೇಶಿಸಿ ಖಡಕ್ ಸೂಚನೆ ಕೊಟ್ಟಿದ್ದಾರೆ. ಹಾಸನ ಟಿಕೆಟ್ ವಿಚಾರದಲ್ಲಿ ಬೆರಳಿಟ್ಟಿದ್ದ ಕುಮಾರಸ್ವಾಮಿ (HD Kumaraswamy), ದೇವೇಗೌಡರ ಗುಟುರು ನೋಡಿ ಮೌನವಾಗಿದ್ದಾರೆ. ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಲು ಸಭೆ ಕರೆದಿದ್ದರು. ಕುಮಾರಸ್ವಾಮಿಗೆ ಗೊತ್ತಿಲ್ಲದಂತೆ ಸಭೆ ಮುಂದೂಡಿಕೆ ಆಯ್ತು. ಕುಮಾರಸ್ವಾಮಿ ಬೇಸರಕ್ಕೆ ಒಳಗಾಗಿದ್ದಾರೆ. ಮತ್ತೊಂದು ಕಡೆ ದೇವೇಗೌಡರ ಮೇಲೆ ಒತ್ತಡ ಹಾಕಿಸಿ ಹೆಚ್ಡಿ ರೇವಣ್ಣ (HD Revanna) ಮುಂದೂಡಿಕೆ ಮಾಡಿಸಿದ್ದಾರೆ ಅಂತಾ ಹೇಳಲಾಗುತ್ತಿದೆ.
ಹಾಸನ ಟಿಕೆಟ್ ಘೋಷಣೆಗೆ ಇನ್ನೂ ಸಮಯ ಇದೆ.
ಹಾಸನ ಟಿಕೆಟ್ ಬೇಕೇ ಬೇಕು ಎಂದು ರೇವಣ್ಣ ಕುಟುಂಬ ಬಿಗಿ ಪಟ್ಟು ಹಿಡಿದಿದೆ. ಒಂದು ಕಡೆ ಭವಾನಿ ರೇವಣ್ಣ ಕ್ಷೇತ್ರದಲ್ಲಿ ತಾವೇ ಅಭ್ಯರ್ಥಿ ಎನ್ನುವ ಮಟ್ಟಿಗೆ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಸುತ್ತಾಡುತ್ತಿದ್ದಾರೆ. ಮತ್ತೊಂದೆಡೆ ಟಿಕೆಟ್ ಆಕಾಂಕ್ಷಿ ಸ್ವರೂಪ್ ಭವಾನಿ ಅಬ್ಬರದ ನಡುವೆ ಸೈಲೆಂಟ್ ಆಗಿದ್ದಾರೆ. ಇಂದು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೆಚ್ಡಿ ಕುಮಾರಸ್ವಾಮಿ, ಹಾಸನ ಟಿಕೆಟ್ ಘೋಷಣೆಗೆ ಇನ್ನೂ ಸಮಯ ಇದೆ. ದಿಢೀರ್ ನಿರ್ಧಾರದಿಂದ ಗೊಂದಲ ಸೃಷ್ಟಿಯಾಗುತ್ತೆ. ದೇವೇಗೌಡರ ಆರೋಗ್ಯ ನನಗೆ ಮುಖ್ಯ. ಬೇರೆಯವರಿಗೆ ಈ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ಮಾತಿನಲ್ಲೇ ತಿವಿದಿದ್ದಾರೆ.
ಈ ನಡುವೆ ಇಂದು ಸಂಜೆ ವೇಳೆಗೆ ಪಂಚರತ್ನ ಯಾತ್ರೆಯಲ್ಲಿ ಭಾಗಿಯಾಗಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಸ್ವರೂಪ್ ಬೆಂಬಲಿಗರು ಹೆದ್ದಾರಿ ತಡೆದು ಸ್ವರೂಪ್ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ ಘಟನೆಯೂ ನಡೆದಿದೆ.
ನಿತ್ಯ 18 ಗಂಟೆ ಕೆಲಸ ಮಾಡುತ್ತಿದ್ದೇನೆ
ಈ ವೇಳೆ ಕಾರ್ಯಕರ್ತರಿಗೆ ಸ್ಪಷ್ಟನೆ ನೀಡಿರುವ ಕುಮಾರಸ್ವಾಮಿ ಅವರು, ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ತರಬೇಕೆಂದು ಕೆಲಸ ಮಾಡುತ್ತಿದ್ದೇನೆ. ಅನಾರೋಗ್ಯದ ನಡುವೆ ಕೂಡ ನಿತ್ಯ 18 ಗಂಟೆ ಕೆಲಸ ಮಾಡುತ್ತಿದ್ದೇನೆ. ನೀವು ಹಾಸನದ ವಿಚಾರವಾಗಿ ಕೇಳಲು ನೀವು ಬಂದಿದ್ದೀರಿ. ನನಗೆ ರಾಜಕೀಯವಾಗಿ ಅಗ್ನಿಪರೀಕ್ಷೆ ಇದೆ ಅರ್ಥ ಮಾಡಿಕೊಳ್ಳಿ. ಈಗಾಗಲೇ ರಾಜ್ಯದ 20 ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದೇನೆ. ಇಡೀ ರಾಜ್ಯದಲ್ಲಿ ಸ್ವತಂತ್ರ ಸರ್ಕಾರ ರಚಿಸಲು ಅವಕಾಸ ನೀಡುವ ನಿರ್ಧಾರವನ್ನು ಜನ ಮಾಡುತ್ತಿದ್ದಾರೆ.
ಸಮಾಧಾನವಾಗಿ ಇರದಿದ್ದರೆ ನಾನು ಮಾತನಾಡಲ್ಲ
ಹಾಸನದ ಟಿಕೆಟ್ ವಿಚಾರವಾಗಿ ಪಕ್ಷ ಹಾಳು ಮಾಡಲು ನಾನು ತಯಾರಿಲ್ಲ ಎಂದು ಹೇಳಿದ ವೇಳೆ ಕಾರ್ಯಕರ್ತರು ಗದ್ದಲ ಮಾಡಿ ಈಗಲೇ ಟಿಕೆಟ್ ಘೋಷಣೆ ಮಾಡಿ ಅಂತ ಒತ್ತಾಯ ಮಾಡಿದರು. ಈ ವೇಳೆ ಸ್ವಲ್ಪ ಗರಂ ಆದ ಹೆಚ್ಡಿಕೆ, ನನ್ನ ಧ್ವನಿ ಇನ್ನು ಎರಡು ತಿಂಗಳು ಇರ್ಬೇಕು.
ನನ್ನ ಅರೋಗ್ಯ ಹಾಳಾದರೆ ನೀವು ಬರ್ತೀರಾ? ನೀವು ಸ್ವರೂಪ್ ಗೆಲ್ಲಿಸಲು ಬಂದಿಲ್ಲ, ಅವರ ಮನೆ ಹಾಳು ಮಾಡಲು ಬಂದಿದ್ದೀರಾ. ಏನು ತಮಾಷೆ ಆಡುತ್ತಿದ್ದೀರಾ? ಗೌರವಯುತವಾಗಿ ಕೇಳಿ. ನಾನು ಇಲ್ಲಿ ರಾಜಕೀಯ ಮಾಡದೆ ಇರಬಹುದು, ಈ ಮಣ್ಣಿನಲ್ಲಿ ಹುಟ್ಟಿದವನು. ಸಮಾಧಾನವಾಗಿ ಇರದಿದ್ದರೆ ನಾನು ಮಾತನಾಡಲ್ಲ ಎಂದರು.
ಈ ಮಣ್ಣಿನ ಋಣ ನಾನು ಮರೆಯುವುದಿಲ್ಲ
ಬಳಿಕ ಮಾತು ಮುಂದುವರೆಸಿದ ಹೆಚ್ಡಿಕೆ, ನಿಮ್ಮ ಛಲಕ್ಕೆ ಲೋಪ ಆಗಲು ನಾನು ಬಿಡಲ್ಲ. ನನ್ನ ಕಾರ್ಯಕರ್ತರನ್ನು ನಾನು ಬಿಟ್ಟು ಕೊಡುವುದಿಲ್ಲ. ಕೆಲವು ಕಠಿಣ ತೀರ್ಮಾನ ಮಾಡುವಾಗ ನನಗೂ ಕಷ್ಟ ಇದೆ. ಹಾಸನದ ಏಳೂ ಸ್ಥಾನ ಸೇರಿ 123 ಸ್ಥಾನ ಗೆಲ್ಲವೇಕು.
ಹಾಸನದಲ್ಲಿ ನಾನು ಹುಟ್ಟಿದರೂ ರಾಜಕಾರಣ ಮಾಡಿದ್ದು, ರಾಮನಗರದಲ್ಲಿ. ಅಲ್ಲಿ ಮತ ಕೇಳಲು ನಾನು ಹೋಗದಿದ್ದರೂ ಜನ ಗೆಲ್ಲಿಸುತ್ತಾರೆ. ಈ ಜಿಲ್ಲೆಯ ಅಭಿವೃದ್ಧಿಗೆ ನನ್ನ ಕಾಣಿಕೆ ಕೂಡ ಇದೆ. ಈ ಮಣ್ಣಿನ ಋಣ ನಾನು ಮರೆಯುವುದಿಲ್ಲ. ನಿಮ್ಮ ಅಭಿಲಾಷೆ, ಭಾವನೆಗೆ ನಾನು ಚ್ಯುತಿ ತರುವುದಿಲ್ಲ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದೀರಿ ನಾನು ಅರ್ಥಮಾಡಿಕೊಳ್ಳುತ್ತೇನೆ.
ಇದನ್ನೂ ಓದಿ: Bengaluru: ಅಪಾರ್ಟ್ಮೆಂಟ್ನ 11ನೇ ಮಹಡಿಯಿಂದ ಜಿಗಿದ ಯುವತಿ; ಮೊಬೈಲ್ನಲ್ಲಿ ಮಾತನಾಡುತ್ತಾ ಆತ್ಮಹತ್ಯೆಗೆ ಶರಣು!
ಇದುವರೆಗೆ ನಮ್ಮ ಮೇಲೆ ಯಾರೂ ಬೊಟ್ಟು ಮಾಡಲು ಆಗಿಲ್ಲ. ಬೇರೆ ಪಕ್ಷದದವರಿಗೆ ನಡುಕ ಶುರುವಾಗಿದೆ. ನಮಗೆ ನಮ್ಮ ಪಂಚರತ್ನ ಯಾತ್ರೆ ಶುರುವಾದ ಸಂದರ್ಭದಲ್ಲಿ ಯಾರೂ ನಮಗೆ ಪ್ರಚಾರ ನೀಡಲಿಲ್ಲ. ಆದರೆ ಈಗ ದಿನ ಬೆಳಗಾದರೆ ನಮ್ಮ ಕುಟುಂಬದ ಬಗ್ಗೆ ಸಾಕಷ್ಟು ಬರುತ್ತಿದೆ. ಈ ಬಗ್ಗೆ ಯಾರೂ ಗಂಭೀರವಾಗಿ ತೆಗೆದುಕೊಳ್ಳಬೇಡಿ.
ನಾನು ಯಾವುದೇ ಕಾರಣದಿಂದ ತಪ್ಪು ನಿರ್ಧಾರ ಮಾಡುವುದಿಲ್ಲ. ನೀವು ಪಕ್ಷದ ಸಂಘಟನೆ ಮುಂದುವರೆಸಿ. ನನಗೆ ಎರಡು ಮೂರು ದಿನ ಅವಕಾಶ ಕೊಡಿ, ಸಕಾರಾತ್ಮಕವಾಗಿ ನಾವು ತೀರ್ಮಾನ ಮಾಡುತ್ತೇವೆ. ಕೆಲವೇ ದಿನದಲ್ಲಿ ಎರಡನೇ ಪಟ್ಟಿ ಪ್ರಕಟ ಆಗುತ್ತೆ ಅದರಲ್ಲಿ ಹಾಸನದ ಹೆಸರು ಕೂಡ ಇರುತ್ತೆ ಅಂತ ಹೆಚ್ಡಿಕೆ ಆಶ್ವಾಸನೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ