ನನ್ನ ಮನೆಗೆ ಐಟಿ ರೇಡ್ ಆದರೆ ಯಡಿಯೂರಪ್ಪರ ದಾಖಲೆಗಳು ಸಿಗುತ್ತವೆ: ಕುಮಾರಸ್ವಾಮಿ

ಇವತ್ತಿನ ಕಷ್ಟದ ಸಂದರ್ಭದಲ್ಲಿ ದೇಶವನ್ನು ಯಾರಾದರೂ ಲೀಡ್ ತಗೋಬೇಕಿದೆ. ನಾನು ದೇವೇಗೌಡರನ್ನು ಕರ್ನಾಟಕ ಬಿಡಿ ಎಂದು ಹೇಳುತ್ತಿದ್ದೇನೆ. ಈ ಸಂದರ್ಭದಲ್ಲಿ ಅವರು ಸಂಸತ್​ನಲ್ಲಿ ಇರಬೇಕಿತ್ತು. ನಮ್ಮ ಕುಟುಂಬದಲ್ಲಿ ಕೆಲವು ತಪ್ಪು ಮಾಡಿಕೊಂಡಿದ್ದೇವೆ. ದೇಶದಲ್ಲಿ ಬದಲಾವಣೆಗೆ ಒಂದು ವೇದಿಕೆ ಸಿದ್ಧವಾಗಬೇಕಿದೆ ಎಂದು ಹೆಚ್​ಡಿಕೆ ಅಭಿಪ್ರಾಯಪಟ್ಟಿದ್ದಾರೆ.

news18-kannada
Updated:October 22, 2019, 11:51 AM IST
ನನ್ನ ಮನೆಗೆ ಐಟಿ ರೇಡ್ ಆದರೆ ಯಡಿಯೂರಪ್ಪರ ದಾಖಲೆಗಳು ಸಿಗುತ್ತವೆ: ಕುಮಾರಸ್ವಾಮಿ
ಹೆಚ್​.ಡಿ. ಕುಮಾರಸ್ವಾಮಿ.
  • Share this:
ಹಾಸನ(ಅ. 22): ಹಾಸನಾಂಬೆ ದೇವಿಯ ದರ್ಶನಕ್ಕೆ ಬಂದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ತಮ್ಮ ಮನದಾಳವನ್ನು ಸಾಕಷ್ಟು ತೆರದಿಟ್ಟರು. ದೇಶದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಸಿಎಂ ಯಡಿಯೂರಪ್ಪರಿಂದ ಹಿಡಿದು ಕೇಂದ್ರ ಸರ್ಕಾರದವರೆಗೂ ಎಲ್ಲರನ್ನೂ ತರಾಟೆಗೆ ತೆಗೆದುಕೊಂಡರು.

ದೇಶದಲ್ಲಿ ನಡೆಯುತ್ತಿರುವ ಐಟಿ ರೇಡ್ ಬಗ್ಗೆ ವ್ಯಂಗ್ಯವಾಡಿದ ಅವರು ತಮ್ಮ ಮನೆಯ ಮೇಲೂ ದಾಳಿ ನಡೆಯಲಿ ಎಂದು ಸ್ವಾಗತಿಸಿದರು. ದೇಶದಲ್ಲಿ ಎಮರ್ಜೆನ್ಸಿ ಈಗಾಗಲೇ ಪ್ರಾರಂಭವಾಗಿದೆ. ಆದಾಯ ತೆರಿಗೆ ಅಧಿಕಾರಿಗಳು ನನ್ನ ಮನೆಗೆ ಬರಲಿ ಎಂದು ಕಾಯುತ್ತಿದ್ದೇನೆ. ನನ್ನ ಮನೆಯಲ್ಲಿ ಯಡಿಯೂರಪ್ಪಗೆ ಸಂಬಂಧಿಸಿದ ದಾಖಲೆಗಳಿವೆ. ಅವುಗಳನ್ನ ಐಟಿ ಅಧಿಕಾರಿಗಳಿಗೆ ತೋರಿಸುತ್ತೇನೆ. ನಾನು ಸಿಎಂ ಆಗಿ ಲೂಟಿ ಹೊಡೆಯೋ ಕೆಲಸ ಮಾಡದೇ ಇರೋದರಿಂದಲೇ ಧೈರ್ಯವಾಗಿದ್ದೀನಿ. ನಾನೇನು ಹೆದರಿ ಕೂರೋದಿಲ್ಲ. ಯಾರಾದರೂ ಧ್ವನಿ ಎತ್ತಲೇಬೇಕಿದೆ ಎಂದವರು ಹೇಳಿದರು.

ಇದನ್ನೂ ಓದಿ: ಹುಣಸೂರು ಉಪಚುನಾವಣೆ: ಬಿಜೆಪಿಯಿಂದ ಸಿ.ಪಿ. ಯೋಗೇಶ್ವರ್ ಸ್ಪರ್ಧೆ ಬಹುತೇಕ ಖಚಿತ: ಎಚ್​. ವಿಶ್ವನಾಥ್​​​ಗೆ ಭಾರೀ ಹಿನ್ನಡೆ?

ತಮ್ಮ ತಂದೆ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಈ ದೇಶವನ್ನು ಮುನ್ನಡೆಸಬೇಕೆಂಬ ಇರಾದೆಯನ್ನು ಕುಮಾರಸ್ವಾಮಿ ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು. ಇವತ್ತಿನ ಕಷ್ಟದ ಸಂದರ್ಭದಲ್ಲಿ ದೇಶವನ್ನು ಯಾರಾದರೂ ಲೀಡ್ ತಗೋಬೇಕಿದೆ. ನಾನು ದೇವೇಗೌಡರನ್ನು ಕರ್ನಾಟಕ ಬಿಡಿ ಎಂದು ಹೇಳುತ್ತಿದ್ದೇನೆ. ಈ ಸಂದರ್ಭದಲ್ಲಿ ಅವರು ಸಂಸತ್​ನಲ್ಲಿ ಇರಬೇಕಿತ್ತು. ನಮ್ಮ ಕುಟುಂಬದಲ್ಲಿ ಕೆಲವು ತಪ್ಪು ಮಾಡಿಕೊಂಡಿದ್ದೇವೆ. ದೇಶದಲ್ಲಿ ಬದಲಾವಣೆಗೆ ಒಂದು ವೇದಿಕೆ ಸಿದ್ಧವಾಗಬೇಕಿದೆ ಎಂದು ಹೆಚ್​ಡಿಕೆ ಅಭಿಪ್ರಾಯಪಟ್ಟರು.

ಕೆಲ ಪತ್ರಿಕಾ ವರದಿಗಳನ್ನ ಉಲ್ಲೇಖಿಸಿ ಬಿಜೆಪಿಯ ಹಿಂದುತ್ವವನ್ನು ಕುಮಾರಸ್ವಾಮಿ ಕುಟುಕಿದರು. ಉತ್ತರ ಪ್ರದೇಶದಲ್ಲಿ ಕೇಂದ್ರ ಸಚಿವ ಚಿನ್ಮಯಾನಂದ ಅವರ ಹಲವು ಶಿಕ್ಷಣ ಸಂಸ್ಥೆಗಳಿವೆ. ಓರ್ವ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪ ಈತನ ಮೇಲಿದೆ. ಆದರೆ, ಹಣದ ಬೇಡಿಕೆ ಆರೋಪದ ಮೇಲೆ ಆ ಸಂತ್ರಸ್ತ ಹೆಣ್ಣು ಮಗಳ ಮೇಲೆ ಕೇಸ್  ಹಾಕಿ ಜೈಲಿಗೆ ಕಳುಹಿಸಿದ್ದಾರೆ. ಚಿನ್ಮಯಾನಂದರು ಐಷಾರಾಮಿ ಬಂಗಲೆಯಲ್ಲಿದ್ದಾರೆ. ಅಲ್ಲಿರುವ ಮುಖ್ಯಮಂತ್ರಿ ಯಾರೋ ಯೋಗಿ ಆದಿತ್ಯನಾಥ್ ಅಂತೆ. ಇದು ಬಿಜೆಪಿಯ ಹಿಂದೂ ಸಂಸ್ಕೃತಿಯಾಗಿದೆ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.

ಇದನ್ನೂ ಓದಿ: ಮಲಪ್ರಭಾ ತೀರದಲ್ಲಿ ಹೈ ಅಲರ್ಟ್​; ಬದಾಮಿಯ ನೆರೆಪೀಡಿತ ಪ್ರದೇಶಗಳಿಗೆ ಇಂದು ಸಿದ್ದರಾಮಯ್ಯ ಭೇಟಿ

ಬಿಜೆಪಿಯನ್ನು ಗೆಲ್ಲಿಸಿದರೆ ನಾವು ನೀರು ಕೊಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದರು. ವಿಧಾನಸಭೆಯಲ್ಲಿ ನರೆ ಪರಿಸ್ಥಿತಿ ಬಗ್ಗೆ ಚರ್ಚೆ ಮಾಡಲು ನಾವು ಮುಂದಾದಾಗ ಕಾಲ ಹರಣ ಮಾಡಿದರೆ ನೆರೆ ಪರಿಹಾರ ನೀಡಲು ಆಗಲ್ಲ ಎಂದು ತರಾತುರಿಯಲ್ಲಿ ಕಲಾಪ ಮುಗಿಸಿದರು. ಆದರೆ, ಅವರು ಜನರ ಬಳಿ ಹೋಗದೇ ಮಹಾರಾಷ್ಟ್ರ ಚುನಾವಣಾ ಪ್ರಚಾರಕ್ಕೆ ಹೋದರು ಎಂದು ಯಡಿಯೂರಪ್ಪ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣೆಯ ವೇಳೆ 15 ಬಾರಿ ರಾಜ್ಯಕ್ಕೆ ಬಂದರು. ನೆರೆ ಸಂತ್ರಸ್ತರನ್ನುದ್ದೇಶಿಸಿ ಒಮ್ಮೆಯೂ ಅವರು ಮಾತನಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಕುಮಾರಸ್ವಾಮಿ, ಮಹಾರಾಷ್ಟ್ರ ಮುಖ್ಯಮಂತ್ರಿ ವಿರುದ್ಧ ಕಿಡಿಕಾರಿದರು.

ಇದನ್ನೂ ಓದಿ: ರೇಷನ್ ಅಂಗಡಿಯಲ್ಲೂ ಸಾರಾಯಿ ಕೊಡಿ ಎಂದಿದ್ದು ಯಾರು?; ಸಿದ್ದರಾಮಯ್ಯ ವಿರುದ್ಧ ಅನಂತ್​ಕುಮಾರ್​ ಹೆಗಡೆ ಪರೋಕ್ಷ ವಾಗ್ದಾಳಿ

ನಾನು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ನೀರಿನ ಸಮಸ್ಯೆಗೆ ಮಹಾರಾಷ್ಟ್ರ ನಾಯಕತ್ವ ಸ್ಪಂದಿಸಲಿಲ್ಲ. ಅಲ್ಲಿ ಮಳೆ ಸುರಿದಾಗ ನಮ್ಮ ರಾಜ್ಯಕ್ಕೆ ಸ್ವಲ್ಪವೂ ಮುನ್ನೆಚ್ಚರಿಕೆ ಕೊಡದೇ ಏಕಾಏಕಿ ಜಲಾಶಯದಿಂದ ನೀರು ಬಿಟ್ಟರು ಎಂದು ಹೆಚ್​ಡಿಕೆ ಆರೋಪ ಮಾಡಿದರು.

ರಾಜ್ಯದ ಬೊಕ್ಕಸ ಖಾಲಿಯಾಗಿದೆ ಎಂಬ ಬಿಜೆಪಿ ನಾಯಕ ಆರೋಪವನ್ನು ಅವರು ಸಾರಾಸಗಟಾಗಿ ತಳ್ಳಿಹಾಕಿದರು. “ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಸಂಪದ್ಭರಿತ ರಾಜ್ಯ. ನನ್ನ ಅಭಿಪ್ರಾಯದಲ್ಲಿ ರಾಜ್ಯದ ಹಣಕಾಸು ಸ್ಥಿತಿ ಚೆನ್ನಾಗಿಯೇ ಇದೆ. ಇವರಿಗೆ ಕೆಲಸ ಮಾಡುವ ಬದ್ಧತೆ ಇಲ್ಲ. ಈ ಸರ್ಕಾರಕ್ಕೆ ಅಭಿವೃದ್ಧಿ ಬೇಕಿಲ್ಲ. ಅವರಿಗೆ ಲೂಟಿ ಮಾಡೋದೇ ಮುಖ್ಯ. ಲೂಟಿ ಮಾಡೋದು ಅವರಿಗೆ ಖುಷಿ” ಎಂದು ಕುಮಾರಸ್ವಾಮಿ ಗಂಭೀರ ಆಪಾದನೆ ಮಾಡಿದರು.

(ವರದಿ: ಡಿಎಂಜಿ ಹಳ್ಳಿ ಅಶೋಕ್)
First published: October 22, 2019, 11:48 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading