ಬೆಂಗಳೂರು (ಏಪ್ರಿಲ್ 28); ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಬಡವರಿಗೆ ಪಡಿತರ ಅಕ್ಕಿಯನ್ನು ಈ ಹಿಂದೆ ತಿಂಗಳಿಗೆ 5 ಕೆ.ಜಿ. ನೀಡಲಾಗುತ್ತಿತ್ತು. ಆದರೆ, ಬಿಜೆಪಿ ಸರ್ಕಾರ ಅದನ್ನು 3 ಕೆ.ಜಿ.ಗೆ ಇಳಿಸಿದೆ. ಇದರಿಂದಾಗಿ ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ರೈತರಿಗೆ ಸಾಕಷ್ಟು ಸಂಷಕ್ಟ ಎದುರಾಗಿದೆ. ಹೀಗಾಗಿಯೇ ರೈತರೊಬ್ಬರು ಸಚಿವ ಆಹಾರ ಸಚಿವ ಉಮೇಶ್ ಕತ್ತಿ ಅವರಿಗೆ ಕರೆ ಮಾಡಿ, "ಸಂಕಷ್ಟದ ಸಂದರ್ಭದಲ್ಲಿ ಅಕ್ಕಿಯ ಪ್ರಮಾಣವನ್ನು ಕಡಿತ ಮಾಡಲಾಗಿದೆ. ನಾವು ಸಾಯಬೇಕಾ ಬದುಕಬೇಕಾ?" ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ದರ್ಪದಿಂದಲೇ ಉತ್ತರಿಸಿದ್ದ ಸಚಿವ ಉಮೇಶ್ ಕತ್ತಿ "ಸಾಯಿ" ಎಂದು ಹೇಳಿರುವುದು ಇದೀಗ ರಾಜ್ಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿದೆ. ಎಲ್ಲಾ ವಿರೋಧ ಪಕ್ಷದ ನಾಯಕರು ಮಾತ್ರವಲ್ಲದೆ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಸಹ ಈ ಹೇಳಿಕೆಗೆ ವಿಷಾಧಿಸಿದ್ದರು. ಇದೀಗ ಉಮೇಶ್ ಕತ್ತಿ ವಿರುದ್ಧ ಟ್ವೀಟ್ನಲ್ಲಿ ಕಿಡಿಕಾರಿರುವ ಮಾಜಿ ಸಿಎಂ ಕುಮಾರಸ್ವಾಮಿ, "ಸಚಿವ ಉಮೇಶ್ ಕತ್ತಿ ಅವರ ದರ್ಪದ ಉತ್ತರ ಮಾನಸಿಕ ವಿಕೃತಿ" ಎಂದು ಆಕ್ರೋಶ ಹೊರಹಾಕಿದ್ದಾರೆ.
ಉಮೇಶ್ ಕತ್ತಿ ಹೇಳಿಕೆ ಸಂಬಂಧ ಟ್ವೀಟ್ ಮಾಡಿರುವ ಕುಮಾರಸ್ವಾಮಿ, "ಕೊರೋನಾ ಸಂಕಷ್ಟದಲ್ಲಿ ಹಸಿವಿನಿಂದ ಬಳಲುವ ಜನರ ನೆರವಿಗೆ ಬರಬೇಕಾದ ಆಹಾರ ಸಚಿವರೇ ದರ್ಪದ ಉತ್ತರ ನೀಡಿ ಮಾನಸಿಕ ವಿಕೃತಿ ಮೆರೆದಿದ್ದಾರೆ. ರಾಜ್ಯ ಸರ್ಕಾರ ಪಡಿತರ ಅಕ್ಕಿ ಕಡಿತಗೊಳಿಸಿದನ್ನು ಸಚಿವರಿಗೆ ಕರೆ ಮಾಡಿ ಪ್ರಶ್ನಿಸಿದ ವ್ಯಕ್ತಿಯೊಬ್ಬರಿಗೆ ಸಾಯೋದು ಒಳ್ಳೆಯದು ಎಂದು ಆಹಾರ ಸಚಿವ ಉಮೇಶ್ ಕತ್ತಿ ಹೇಳಿರುವುದು ಅತ್ಯಂತ ಅಮಾನವೀಯ.
ಇದನ್ನು ತೀವ್ರವಾಗಿ ಖಂಡಿಸುವೆ. ಜನಸಾಮಾನ್ಯರ ಬಗ್ಗೆ ಕನಿಷ್ಠ ಕಾಳಜಿ ಇಲ್ಲದ ಇಂತಹ ಸಚಿವರನ್ನು ಸಂಪುಟದಿಂದ ಕಿತ್ತೊಗೆಯುವಂತೆ ಮುಖ್ಯಮಂತ್ರಿಗಳಿಗೆ ಆಗ್ರಹಿಸುತ್ತೇನೆ.
2/2
— H D Kumaraswamy (@hd_kumaraswamy) April 28, 2021
ಡಿ.ಕೆ. ಶಿವಕುಮಾರ್ ಆಕ್ರೋಶ!:
ಇದು ಬಿಜೆಪಿ ಸಂಸ್ಕೃತಿ. ಸರ್ಕಾರದ ಯಾವ ಮಂತ್ರಿಗಳು ಇದರ ಬಗ್ಗೆ ಮಾತಾಡಿ ಎಂದು ಹೇಳುವುದಿಲ್ಲ. ಮಂತ್ರಿಗಳ ಈ ಧೋರಣೆಗಳಿಂದ ಈ ರೀತಿ ನಡೆಯುತ್ತಿದೆ. ಇದರಲ್ಲಿ ಯಾರು ಹೆಚ್ಚಿಲ್ಲ, ಯಾರು ಕಡಿಮೆಯಿಲ್ಲ. ಇದಕ್ಕೆ ಸಿಎಂ ಉತ್ತರ ಕೊಡಬೇಕು. ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉತ್ತರ ಕೊಡಬೇಕು. ಬಿಜೆಪಿ ನಾಯಕರು ಉತ್ತರ ಕೊಡಬೇಕು ಎಂದು ಡಿಕೆಶಿ ಒತ್ತಾಯಿಸಿದ್ದಾರೆ.
ಅಧಿಕಾರದಲ್ಲಿ ಇದ್ದವರನ್ನು ರೈತರು, ಜನರು ಕೇಳ್ತಾರೆ. ನಮ್ಮ ಸರ್ಕಾರದಲ್ಲಿ ಏಳು ಕೆಜಿ ಅಕ್ಕಿ ಕೊಡುತ್ತಿದ್ದೆವು. ಅದನ್ನು ಈಗ ಕಡಿತ ಮಾಡಿದ್ದಾರೆ. ಅಕ್ಕಿ ಕೇಳುವವರನ್ನು ಸಾಯಿ ಅಂದ್ರೆ ಹೇಗೆ. ನಾನು ಸಿಎಂಗೆ ಒತ್ತಾಯ ಮಾಡ್ತೇನೆ. ಕೂಡಲೇ ಕತ್ತಿ ಅವರನ್ನು ಮಂತ್ರಿ ಸ್ಥಾನದಿಂದ ತೆಗೆಯಬೇಕು. ಜನರ ಬಗ್ಗೆ ಕಾಳಜಿ ಇದ್ದರೇ ಕೂಡಲೇ ತೆಗೆದುಕೊಳ್ಳಬೇಕು. ನಾವು ಕ್ಷಮೆ ಕೇಳಿ ಎಂದು ಹೇಳಲ್ಲ. ಇಂದಿನ ಪರಿಸ್ಥಿತಿಗೆ ಸರ್ಕಾರವೇ ಕಾರಣ. ಸಂಜೆಯೊಳಗೆ ಉಮೇಶ್ ಕತ್ತಿ ಅವರನ್ನು ಆ ಜವಾಬ್ದಾರಿಯಿಂದ ತೆಗೆಯಬೇಕು ಎಂದು ಉಮೇಶ್ ಕತ್ತಿ ರಾಜಿನಾಮೆಗೆ ಡಿಕೆಶಿ ಒತ್ತಾಯ ಮಾಡಿದರು.
ಇದು ಉಢಾಪೆ ಅಲ್ಲ, ಇದು ಬೇಜವಾಬ್ದಾರಿ. ಹಿಂದೆ ಸಣ್ಣ- ಪುಟ್ಟ ವಿಚಾರಗಳಿಗೆ ಸಚಿವರು ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿರುವ ಅನೇಕ ಉದಾಹರಣೆಗಳಿವೆ. ಈಗ ರೈತರನ್ನು ಸಾಯಿ ಎಂದು ಹೇಳಿರುವ ಉಮೇಶ್ ಕತ್ತಿ ರಾಜೀನಾಮೆ ನೀಡಲೇಬೇಕು. ಯಡಿಯೂರಪ್ಪ ಅವರೇ ನಿಮಗೆ ಅಧಿಕಾರ ಮುಖ್ಯವಾದರೆ, ಇದು ನಿಮ್ಮ ಜೀವನದ ಕೊನೆಯ ರಾಜಕಾರಣದಲ್ಲಿ ಒಳ್ಳೆಯ ಬೀಳ್ಕೊಡುಗೆ ತೆಗೆದುಕೊಳ್ಳಬೇಕಾದರೆ ಅವರನ್ನು ಮಂತ್ರಿ ಸ್ಥಾನದಿದ ಕೆಳಗೆ ಇಳಿಸಿ. ಸಿಎಂ ಸ್ಥಾನದಲ್ಲಿ ಇನ್ನು ಒಂದು ವರ್ಷ ಇರುತ್ತಿರೋ, ಆರು ತಿಂಗಳು ಇರುತ್ತಿರೋ ಗೊತ್ತಿಲ್ಲ. ಆದರೆ ರಾಜಕಾರಣದ ಕೊನೆಯಲ್ಲಿ ಜನರ ಪರವಾಗಿ ನಿಂತೆ ಎಂದು ತೋರಿಸಬೇಕು. ಅದಕ್ಕಾಗಿ ಮಂತ್ರಿಯನ್ನು ತೆಗೆದು ನೀವು ಸಾಕ್ಷಿ ಆಗಬೇಕು ಎಂದು ಸಿಎಂ ಬಿಎಸ್ವೈಗೆ ಹೇಳಿದರು.
ಇದನ್ನೂ ಓದಿ: ರೈತನಿಗೆ ಸಾಯಿ ಎಂದು ಹೇಳಿದ ಉಮೇಶ್ ಕತ್ತಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕು; ಡಿಕೆಶಿ ಒತ್ತಾಯ
ನಮ್ಮ ಪಕ್ಷದ ಕಾರ್ಯಕರ್ತರಿಗೆ ಹೇಳುತ್ತೇನೆ. ಒಂದು ಚಟ್ಟ ಕಟ್ಟಿ ಸಿಎಂ ಮನೆಗೆ ಕಳಿಸುತ್ತೇನೆ. ಸಚಿವ ಉಮೇಶ್ ಕತ್ತಿ ಚಟ್ಟ ಕಟ್ಟಿ ಕಳಿಸಿಕೊಡಿ ಎಂದು ಹೇಳ್ತೇನೆ. ಅಕ್ಕಿ ಕೇಳಿದರೆ ಸಾಯಿರೀ ಅಂತಾನಲ್ಲ. ಅದಕ್ಕಾಗಿ ಅವನ ಚಟ್ಟ ಕಟ್ಟಿ ಕಳಿಸಿಕೊಡಿ ಎಂದು ಹೇಳ್ತೇನೆ ಎಂದು ಸಚಿವ ಉಮೇಶ್ ಕತ್ತಿ ವಿರುದ್ಧ ಡಿಕೆ ಶಿವಕುಮಾರ್ ಅವರು ವಾಗ್ದಾಳಿ ನಡೆಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ