ಚಿಕ್ಕಮಗಳೂರು : ವಿಧಾನಸಭೆ ಚುನಾವಣೆಗೂ (Assembly Election) ಮುನ್ನವೇ ಜೆಡಿಎಸ್ (JDS) ಪಕ್ಷದಲ್ಲಿ ಟಿಕೆಟ್ಗಾಗಿ ಮುಸುಕಿನ ಗುದ್ದಾಟ ನಡೆಯುತ್ತಿದೆ. ಬೇರೆ ಅಭ್ಯರ್ಥಿಗಳ ನಡುವೆ ಈ ಗುದ್ದಾಟ ನಡೆದಿದ್ದರೆ ಕುಮಾರಸ್ವಾಮಿ (HD Kumaraswamy) ಮಧ್ಯ ಪ್ರವೇಶಿಸಿ ತೀರ್ಮಾನ ತೆಗೆದುಕೊಳ್ಳುತ್ತಿದ್ದರು. ಆದರೆ ಇದೀಗ ಟಿಕೆಟ್ಗಾಗಿ ಗೌಡ್ರ ಕುಟುಂಬದಲ್ಲೇ ಫೈಟ್ ನಡೆಯುತ್ತಿದೆ. ಭವಾನಿ ರೇವಣ್ಣ (Bhavani Revanna) ಹಾಸನ ವಿಧಾನಸಭೆ (Hassan Constituency) ಕ್ಷೇತ್ರದಿಂದ ಸ್ಪರ್ಧಿಸಲು ಆಶಯ ವ್ಯಕ್ತಪಡಿಸಿದ್ದಾರೆ. ಆದರೆ ಕುಟುಂಬ ರಾಜಕಾರಣದ ಟೀಕೆಯಿಂದ ಬೇಸತ್ತಿರುವ ಕುಮಾರಸ್ವಾಮಿ ಹಾಸನದಿಂದ ಭವಾನಿ ರೇವಣ್ಣ ಸ್ಪರ್ಧೆಯಿಲ್ಲ, ಅಲ್ಲಿಗೆ ಈಗಾಗಲೇ ಸಮರ್ಥ ಅಭ್ಯರ್ಥಿ ಇದ್ದಾರೆ ಎಂದು ತಿಳಿಸಿದ್ದಾರೆ. ಅತ್ತ ದೊಡ್ಡ ಗೌಡರ ಮನೆಯಲ್ಲಿ ಗುದ್ದಾಟ ನಡೆಯುತ್ತಿದ್ದರೆ, ಇತ್ತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (CT Ravi) ಭವಾನಿ ರೇವಣ್ಣರಿಗೆ ಟಿಕೆಟ್ ಆಫರ್ ಮಾಡುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ನಲ್ಲಿ ನಡೆಯುತ್ತಿರುವ ಟಿಕೆಟ್ ಫೈಟ್ ಬಗ್ಗೆ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಿ.ಟಿ.ರವಿ ಭವಾನಿ ರೇವಣ್ಣ ಅವರು ಬಿಜೆಪಿಯಿಂದ ಸ್ಪರ್ಧಿಸಲು ಬಯಸಿದರೆ ಟಿಕೆಟ್ ಕೊಡಲು ಸಿದ್ಧ. ಭವಾನಿ ಅಕ್ಕ ನಮ್ಮ ಪಕ್ಷದಿಂದ ಸ್ಪರ್ಧಿಸಬೇಕೆಂದು ಬಯಸಿದರೆ ಹೊಳೆನರಸೀಪುರ ಕ್ಷೇತ್ರದ ಅಭ್ಯರ್ಥಿಯಾಗಲಿ. ಆ ಕ್ಷೇತ್ರಕ್ಕೆ ಭವಾನಿ ಅವರಿಗಿಂತ ಉತ್ತಮ ಅಭ್ಯರ್ಥಿ ಸಿಗಲ್ಲ ಎಂದರು.
ನಾನು ಸಹೋದರಿ ಭವಾನಿಯವರ ಹೇಳಿಕೆಯನ್ನು ಗಮನಿಸಿದ್ದೇನೆ. ಕುಮಾರಸ್ವಾಮಿ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ನಾನು ಅವರ ಮನೆಯಲ್ಲಿ ಗಲಾಟೆಯನ್ನು ಹಚ್ಚಿಸುವುದಕ್ಕೆ ಬಯಸುವುದಿಲ್ಲ. ನನ್ನ ಮನಸ್ಸಿನಲ್ಲಿ ಭವಾನಿ ಅಕ್ಕ ನಮ್ಮ ಪಾರ್ಟಿಯಿಂದ ಅಭ್ಯರ್ಥಿಯಾಗಬೇಕೆಂಬ ಆಸೆ ಇದೆ. ಭವಾನಿ ಹೊಳೆನರಸೀಪುರದಿಂದ ನಮ್ಮ ಪಾರ್ಟಿಯಿಂದ ಅಭ್ಯರ್ಥಿಯಾಗಲಿ. ಆದರೆ ರೇವಣ್ಣ ಮತ್ತು ಭವಾನಿಯ ನಡುವೆ ಜಗಳ ಹಚ್ಚುವ ಕೆಲಸ ಮಾಡಲು ನನಗೆ ಇಷ್ಟವಿಲ್ಲ ಅವರು ಬಿಜೆಪಿಯಿಂದ ಸ್ಪರ್ಧಿಸಬೆಕೆಂಬುದು ನನ್ನ ಆಸೆಯಷ್ಟೆ ಎಂದು ತಿಳಿಸಿದ್ದಾರೆ.
ಸುಮಲತಾ ಸೇರ್ಪಡೆ ಪಕ್ಷದ ಬಲ ಹೆಚ್ಚಿಸಲಿದೆ
ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ ಅವರು, ಪಕ್ಷದ ನೀತಿ ಒಪ್ಪಿಕೊಂಡು ಬರುವವರು ಬರಬಹುದು. ಸುಮಲತಾ ಪ್ರಮುಖ ಜನಪ್ರಿಯ ನಾಯಕಿಯರಲ್ಲಿ ಒಬ್ಬರು. ಪಕ್ಷೇತರ ಅಭ್ಯರ್ಥಿಯಾಗಿ ಘಟಾನುಘಟಿಗಳ ಎದುರಿಸಿ ಗೆದ್ದಿದ್ದಾರೆ. ಸುಮಲತಾ ಬಿಜೆಪಿ ಸೇರ್ಪಡೆಯಾದರೆ ತುಂಬಾ ಸಂತೋಷವಾಗುತ್ತದೆ. ಈಗಾಗಲೆ ಒಂದೇ ಸುತ್ತಿನ ಮಾತುಕತೆ ಅದರಿಂದ ಪಕ್ಷಕ್ಕೆ ಮತ್ತಷ್ಟು ಬಲ ಬರುತ್ತದೆ ಎಂದು ತಿಳಿಸಿದರು.
ನನಗೇನು ಗೊತ್ತಿಲ್ಲ ಎಂದ ಭವಾನಿ ರೇವಣ್ಣ
ಹಾಸನ ಹೊರವಲಯದ ಬುಸ್ತೇನಹಳ್ಳಿ ಗ್ರಾಮದಲ್ಲಿ ಶ್ರೀ ಮಾಸ್ತಿಯಮ್ಮದೇವಿ ದೇವಸ್ಥಾನ ಉದ್ಘಾಟನೆಗೆ ಆಗಮಿಸಿದ ಭವಾನಿ ರೇವಣ್ಣ ಸಿಟಿ ರವಿ ಹೇಳಿಕೆ ಕುರಿತು ಪ್ರಶ್ನಿಸಿದ್ದಕ್ಕೆ ನನಗೆ ಅದರ ಬಗ್ಗೆ ಏನೂ ಗೊತ್ತಿಲ್ಲ, ಅದರ ಬಗ್ಗೆ ಸಿಟಿ ರವಿಯವರನ್ನೇ ಕೇಳಿ ಎಂದರು. ಇನ್ನೂ ಹಾಸನ ಕ್ಷೇತ್ರದ ಜನ ನೀವೆ ಸ್ಪರ್ಧಿಯಾಗಬೇಕೆಂದು ಬಯಸುತ್ತಿದ್ದಾರೆ ಎಂದು ಕೇಳಿದ್ದಕ್ಕೆ ಈಗ ದೇವಸ್ಥಾನಕ್ಕೆ ಬಂದಿದ್ದೇನೆ ರಾಜಕೀಯ ಬೇಡ ಎಂದರು. ಮತ್ತೆ ಒತ್ತಾಯಿಸಿದ್ದಕ್ಕೆ ಪ್ರತಿಕ್ರಿಯಿಸಿ ದೇವರ ಆಶೀರ್ವಾದ ಇದ್ದರೆ ಮುಂದೆ ನೋಡೋಣ ಎಂದು ಹೇಳಿ ಹೋದರು.
ದೇವೇಗೌಡರ ಕುಟುಂಬ ಒಡೆಯೋದು ಸುಲಭವಲ್ಲ
ಸಿ.ಟಿ ರವಿ ಹೊಳೆನರಸೀಪುರ ಕ್ಷೇತ್ರದಿಂದ ಸ್ಪರ್ಧಿಸಲು ಭವಾನಿ ರೇವಣ್ಣರಿಗೆ ಬಿಜೆಪಿ ಟಿಕೆಟ್ ಆಫರ್ ನೀಡಿರುವ ಬಗ್ಗೆ ರಾಯಚೂರಿನಲ್ಲಿ ಪ್ರತಿಕ್ರಿಯಿಸಿದ ಎಚ್ಡಿ ಕುಮಾರಸ್ವಾಮಿ ಬಿಜೆಪಿಯವರಿಗೆ ಮನೆ ಒಡೆಯೋ ಅಭ್ಯಾಸವಿದೆ. ಅವರು ದೇಶಾನೇ ಹೊಡೆದವರಿಗೆ ಮನೆ ಒಡೆಯೋದು ಸರಳ, ಆದರೆ ದೇವೇಗೌಡರ ಮನೆಯನ್ನು ಒಡೆಯೋದು ಸುಲಭ ಅಲ್ಲ. ಹೊಳೆ ನರಸೀಪುರದಲ್ಲಿ ಭವಾನಿ ಅವರಿಗೆ ಟಿಕೆಟ್ ಕೊಡಲಿ ಸಂತೋಷ ಎಂದರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ