JDS MLA’s Cross Voting: ಜೆಡಿಎಸ್​​ ಶಾಸಕರ ಅಡ್ಡ ಮತದಾನದ ಬಗ್ಗೆ ಕುಮಾರಸ್ವಾಮಿ ಅಚ್ಚರಿಯ ಹೇಳಿಕೆ!

ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ ತಮ್ಮ ಪಕ್ಷದ ಶಾಸಕರ ವಿರುದ್ಧ ಕಾನೂನು ಕ್ರಮದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ  (ಸಂಗ್ರಹ ಚಿತ್ರ)

ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ (ಸಂಗ್ರಹ ಚಿತ್ರ)

  • Share this:
ಬೆಂಗಳೂರು, ಜೂ. 24: ಬಿಜೆಪಿಗೆ (BJP) ಅಧಿಕಾರ ದಾಹ ಹೆಚ್ಚಾಗಿದೆ. ಬೇರೆ ಪಕ್ಷ ಅಧಿಕಾರದಲ್ಲಿ ಇರುವುದನ್ನು ಬಿಜೆಪಿಗೆ ಸಹಿಸುವುದಕ್ಕೆ ಆಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿ ನಾಯಕರ ಮೇಲೆ ವಾಗ್ದಾಳಿ ನಡೆಸಿದ್ದಾರೆ.  ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಡೆದಿದ್ದ ರಾಜ್ಯಸಭಾ ಚುನಾವಣೆಯಲ್ಲಿ JDS ಶಾಸಕರ ಅಡ್ಡ ಮತದಾನದ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ. ಜೆಡಿಎಸಿ ರಾಜ್ಯ ಕಚೇರಿ (JDS Office) ಜೆಪಿ ಭವನದಲ್ಲಿ (JP Bhavan) ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ‘ಮಹಾರಾಷ್ಟ್ರದಲ್ಲಿ ಆಪರೇಶನ್ ಕಮಲ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ. ‘ಬಿಜೆಪಿಯ ಅಧಿಕಾರ ದಾಹ ಎಷ್ಟು ಕೆಟ್ಟದಾಗಿದೆ ಎಂದರೆ, ಮುಂದಿನ ದಿನಗಳಲ್ಲಿ ಸ್ಪಷ್ಟ ಬಹುಮತ ಬಂದ ಸರಕಾರವೂ ಉಳಿಯುವುದು ಅನುಮಾನ. ಈ ಬಿಜೆಪಿ‌ ಪೂರ್ಣ ಬಹುಮತ ಪಡೆದ ಇತರೆ ಯಾವುದೇ ಪಕ್ಷದ ಸರಕಾರದ  ಅವಧಿ ಮುಗಿಸುವುದಕ್ಕೂ ಬಿಡುವುದಿಲ್ಲ ಅನ್ನಿಸುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಮೇಲ್ನೋಟಕ್ಕೆ ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ಅವರು ಶಾಸಕರ ವಿಶ್ವಾಸ ಗಳಿಸಿಲ್ಲವೆಂದು ಹೇಳುತ್ತಿದ್ದಾರೆ. ಆದರೆ ಅದರ ಹಿಂದೆ ಇರುವುದು ಬಿಜೆಪಿಯೇ. ಇದರಲ್ಲಿ ಯಾವುದೇ ಅನುಮಾನ ಇಲ್ಲ’ ಎಂದು ಬಿಜೆಪಿ ಆಪರೇಶನ್ ಕಮಲ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಕರ್ನಾಟಕದಲ್ಲಿ ನನಗೂ ಇದೇ ಅನುಭವವಾಗಿದೆ 
ಮಹಾರಾಷ್ಟ್ರದಲ್ಲಿ ಈಗ ನಿರ್ಮಾಣವಾಗಿರುವ ಸ್ಥಿತಿ ರಾಜ್ಯದಲ್ಲಿಯೂ ನಿರ್ಮಾಣವಾಗಿತ್ತು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ‘ಕರ್ನಾಟಕದಲ್ಲಿ ನನಗೂ‌ ಇದರ ಅನುಭವ ಆಗಿದೆ. ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲವೆಂದು ನನ್ನ ಮೇಲೂ  ಆರೋಪ ಮಾಡಿದರು. ಶಾಸಕರನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂದು ಸುಳ್ಳು ಪ್ರಚಾರ ಮಾಡಿದರು. ನಾನು ಕಾಂಗ್ರೆಸ್ ಶಾಸಕರ ಕ್ಷೇತ್ರದ ಅಭಿವೃದ್ದಿಗೆ 19 ಸಾವಿರ ಕೋಟಿ ರೂ. ಕೊಟ್ಟಿದ್ದೆ. ಆ ಪಕ್ಷದ ಶಾಸಕಾಂಗ ಪಕ್ಷದ ನಾಯಕ( ಸಿದ್ದರಾಮಯ್ಯ)ರಿಗೆ ಆ ಮಾಹಿತಿ ಇದ್ದ ಪಟ್ಟಿಯನ್ನೇ ನೀಡಿದ್ದೆ. ಆದರೂ ಶಾಸಕರನ್ನು ಆಪರೇಶನ್ ಕಮಲ ಮಾಡಿ ಸರಕಾರವನ್ನು ತೆಗೆದರು’ ಎಂದು ಕುಮಾರಸ್ವಾಮಿ  ಆರೋಪಿಸಿದರು.

“ಮಹಾರಾಷ್ಟ್ರದ ಬಿಜೆಪಿ ನಡವಳಿಕೆ ಸಂವಿಧಾನಕ್ಕೆ ಮಾಡುತ್ತಿರುವ ಅಪಚಾರ. ಈ ಅನಾಚಾರವನ್ನು ಬಿಜೆಪಿ ದೇಶವ್ಯಾಪಿ ವಿಸ್ತಾರ ಮಾಡುತ್ತಿದೆ. ಸಂವಿಧಾನ ರಕ್ಷಣೆ ಅನ್ನುವುದು ಇವತ್ತು ಉಳಿದಿಲ್ಲ. ಎಷ್ಟೇ ಒಳ್ಳೆಯ ಸರಕಾರ  ಮಾಡಿದರೂ ಬೆಲೆ ಇಲ್ಲದಂತೆ ಆಗಿದೆ” ಎಂದು ಬಿಜೆಪಿ ವಿರುದ್ದ ಎಚ್ ಡಿ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. ಜೊತೆಗೆ ಪಠ್ಯಪುಸ್ತಕ ಪರಿಷ್ಕರಣೆ ಕುರಿತೂ ಅವರು ಮಾತನಾಡಿದ್ದಾರೆ.
ನಾನೂ ಅಧ್ಯಯನ ಮಾಡುತ್ತೇನೆ.

ಇದನ್ನೂ ಓದಿ: BJPಗೂ ಹೋಗಲ್ಲ, JDSಗೂ ಹೋಗಲ್ಲ! ಕಾಂಗ್ರೆಸ್​ನಲ್ಲೇ ಇರ್ತೀನಿ ಎಂದ ಹೆಚ್.ಸಿ.ಬಾಲಕೃಷ್ಣ

ಪಠ್ಯಪುಸ್ತಕದ ಬಗ್ಗೆ ನಾನು ಅಧ್ಯಯನ ಮಾಡುತ್ತಿರುವೆ

ಪಠ್ಯಪುಸ್ತಕ ಬಿಕ್ಕಟ್ಟಿಗೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ ಡಿಕೆ, ‘ಪಠ್ಯಪುಸ್ತಕದ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಒಂದು ಕಡೆ ಪಠ್ಯದ ವಿರುದ್ದ ಮಾತಾಡುತ್ತಿದೆ. ಈಗ ಬಿಜೆಪಿ ಸಚಿವರು ಸಿದ್ದರಾಮಯ್ಯ ಸರಕಾರ ಪಠ್ಯ ರಚನೆ ಮಾಡಿದ ವಿರುದ್ದ ಆಪಾದನೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಸರಕಾರ ತಪ್ಪು ಮಾಡಿದೆ ಎಂದು ಹೇಳುತ್ತಿದ್ದಾರೆ.’  ‘ಕುವೆಂಪು ಅವರಿಗೆ ಅಪಮಾನ ಮಾಡಿದ್ದಾರೆಂದು ಕುವೆಂಪು ವೇದಿಕೆ ಅವರು ಹೆಚ್.ಡಿ. ದೇವೇಗೌಡರಿಗೆ ಅಹ್ವಾನ ಕೊಟ್ಟಿದ್ದರು. ಹಾಗಾಗಿ, ದೇವೇಗೌಡರು ಹೋರಾಟಕ್ಕೆ ಹೋಗಿದ್ದರು. ಎರಡೂ ಸರಕಾರಗಳ ಅವಧಿಯಲ್ಲಿ ಪಠ್ಯಕ್ಕೆ ಏನೆಲ್ಲಾ ಅಪಚಾರ ಆಗಿದೆ ಎಂಬುದನ್ನು ನಾನು ಕೂಡ ಅಧ್ಯಯನ ಮಾಡುತ್ತಿದ್ದೇನೆ’ ಎಂದು ಸಮಜಾಯಿಸಿ ಕೊಟ್ಟಿದ್ದಾರೆ. ಇದೇ ವೇಳೆ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ ತಮ್ಮ ಪಕ್ಷದ ಶಾಸಕರ ವಿರುದ್ಧ ಕಾನೂನು ಕ್ರಮದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಶಾಸಕರ ಉಚ್ಚಾಟನೆ ನನ್ನ ನಿರ್ಧಾರವಲ್ಲ ಎಂದ ಕುಮಾರಸ್ವಾಮಿ!
ಶಾಸಕರಾದ ಗುಬ್ಬಿ ಶ್ರೀನಿವಾಸ್ ಮತ್ತು ಕೆ. ಶ್ರೀನಿವಾಸಗೌಡ ಉಚ್ಚಾಟನೆ ಮಾಡಿರುವುದು ಕೋರ್ ಕಮಿಟಿ ನಿರ್ಧಾರ. ಪಕ್ಷದ ವಿರುದ್ದ ಅಡ್ಡ ಮತದಾನ ಮಾಡಿದ್ದಕ್ಕೆ ಉಚ್ಚಾಟನೆ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
“ಈ ಸಂಬಂಧ ಕೋರ್ಟ್ ಗೆ ಹೋಗುವುದು ಅಥವಾ ವಿಧಾನಸಭೆ ಸ್ಪೀಕರ್​ಗೆ ದೂರು ನೀಡುವುದರಿಂದ  ಏನು ಆಗದು. ಈಗ ಇರುವ ಪಕ್ಷಾಂತರ ನಿಷೇಧ ಕಾಯ್ದೆ ಯಶಸ್ವಿಯಾಗುವುದಿಲ್ಲ. ಮೊದಲು ಈ ವ್ಯವಸ್ಥೆ ಬದಲಾವಣೆ ಆಗಬೇಕು. ನಮ್ಮ ಸರಕಾರ ಬಂದರೆ ಈ ಕಾನೂನುಗಳಿಗೆ ಬಲ ಕೊಡುವ ಕೆಲಸ ಮಾಡಲಾಗುವುದು”ಎಂದು ಕುಮಾರಸ್ವಾಮಿ ಹೇಳಿದರು.

ವರದಿ: ಅನಿಲ್ ಬಾಸೂರ್
Published by:Kavya V
First published: