ಮಂಗಳೂರು ಗಲಭೆ ಸಂಬಂಧ ಸಿಡಿ ಬಿಡುಗಡೆ ವಿಚಾರವಾಗಿ ಬಿಜೆಪಿ ನಾಯಕರ ಹೇಳಿಕೆಗಳಿಗೆ ತಿರುಗೇಟು ನೀಡಿದ ಎಚ್​ಡಿಕೆ

ಮಂಗಳೂರಿನಲ್ಲಿ ನಾನು ರಾಜಕಾರಣ ಮಾಡಬಾರದು ಎನ್ನುತ್ತಾರೆ ಸೋದರಿ ಶೋಭಾ. ಆದರೆ, ರಾಜಕೀಯ ಪಕ್ಷವೊಂದರ ಶಾಸಕಾಂಗ ಪಕ್ಷದ ನಾಯಕನಾದ ನಾನು ಮಂಗಳೂರಲ್ಲಿ ಏಕೆ ರಾಜಕಾರಣ ಮಾಡಬಾರದು? ಹಾಗೇನಾದರೂ ನನಗೆ ನಿರ್ಬಂಧವಿದೆಯೇ? ಮಂಗಳೂರಲ್ಲಿ ನಾನೂ ರಾಜಕಾರಣ ಮಾಡುತ್ತೇನೆ. ಆದರೆ ಬಿಜೆಪಿಯಂತಲ್ಲ. ಸಾತ್ವಿಕವಾಗಿ‌, ನೈತಿಕವಾಗಿ ರಾಜಕೀಯ ಮಾಡುತ್ತೇವೆ ಎಂದು ಹೇಳಿದರು.

HR Ramesh | news18-kannada
Updated:January 11, 2020, 2:59 PM IST
ಮಂಗಳೂರು ಗಲಭೆ ಸಂಬಂಧ ಸಿಡಿ ಬಿಡುಗಡೆ ವಿಚಾರವಾಗಿ ಬಿಜೆಪಿ ನಾಯಕರ ಹೇಳಿಕೆಗಳಿಗೆ ತಿರುಗೇಟು ನೀಡಿದ ಎಚ್​ಡಿಕೆ
ಮಾಜಿ ಸಿಎಂ ಕುಮಾರಸ್ವಾಮಿ
  • Share this:
ಬೆಂಗಳೂರು: ಮಂಗಳೂರು ಗಲಭೆಯ ಸತ್ಯಾಸತ್ಯತೆ ಕುರಿತ ಸಿಡಿ ಬಿಡುಗಡೆಯ ಬಗ್ಗೆ ಬಿಜೆಪಿಯ ನಾಯಕರು ನೀಡಿರುವ ಪ್ರತಿಕ್ರಿಯೆಗಳಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.

"ಅದಕ್ಕೆಲ್ಲಾ ಅರ್ಥ ಇದ್ಯೇನ್ರೀ, ಅದೆಲ್ಲಾ ಕಟ್ ಆಂಡ್ ಪೇಸ್ಟ್ ವೀಡಿಯೋ ಎಂದು ಸಿಎಂ ಹೇಳುತ್ತಾರೆ. ಸಿ.ಡಿ. ಬಿಡುಗಡೆ ವೇಳೆಯೇ ಇಂತಹ ಬಾಲಿಶತನದ ಪ್ರತಿಕ್ರಿಯೆ ಬಿಟ್ಟು ಬಿಜೆಪಿ ನಾಯಕರಿಂದ ಮತ್ತೇನು ನಿರೀಕ್ಷಿಸಲು ಸಾಧ್ಯ? ಎಂದಿದ್ದೆ. ಅದನ್ನು ಅವರು ರುಜುವಾತುಪಡಿಸಿದಿರಿ," ಎಂದು ಎಚ್​ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಸಿ.ಡಿ.ಯ ಸತ್ಯಾಸತ್ಯತೆ ಬಗ್ಗೆ ತಜ್ಞರಿಂದ ವರದಿ ತರಿಸಿ ಕೊಳ್ಳುವ ಧೈರ್ಯ ನಿಮಗಿದೆಯೇ?

ಅದಕ್ಕೂ ಮಿಗಿಲಾಗಿ ನಿಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಿ. ನಾನು ಬಿಡುಗಡೆ ಮಾಡಿರುವ 'ಸಿಡಿ'ಯನ್ನು ನೀವು ಸೃಷ್ಟಿಸಿಕೊಂಡಂತೆ 'ಕಟ್ ಅಂಡ್ ಪೇಸ್ಟ್' ಬಿಜೆಪಿ ಸರ್ಕಾರ ಎಂದುಕೊಂಡಿರಾ? ಎಂದು ಚಾಟಿ ಬೀಸಿದರು.

ಉಪ ಚುನಾವಣೆಯಲ್ಲಿ ಸೋತ ಹತಾಶೆಯಿಂದ ಸ್ಥಿಮಿತ ಕಳೆದುಕೊಂಡ ಕುಮಾರಸ್ವಾಮಿ ಮಂಗಳೂರು ಗಲಭೆ ವಿಡಿಯೊ ಬಿಡುಗಡೆ ಮಾಡಿದ್ದಾರೆ ಎಂದು ಡಿಸಿಎಂ ಲಕ್ಮಣ ಸವದಿ ಆರೋಪಿಸಿದ್ದಾರೆ. ಸರಿ... ಹಾಗಾದರೆ ಸವದಿ ಅದ್ಯಾವ ಸ್ಥಿಮಿತ ಕಳೆದುಕೊಂಡು ಸದನದಲ್ಲಿ ನೀಲಿ ಚಿತ್ರ ನೋಡಿದರು? ಈ ಬಾರಿ ಅವರು ಯಾವ ಚುನಾವಣೆ ಗೆದ್ದಿದ್ದಾರೆ? ಸ್ಥಿಮಿತ ಉಳಿದಿದೆಯೇ? ಎಂದು ಖಾರವಾಗಿ ಸವದಿಗೆ ಪ್ರಶ್ನಿಸಿದರು.

ಪೊಲೀಸರು ಗಲಭೆ ಮಾಡುವುದಿಲ್ಲ, ನಿಯಂತ್ರಿಸುತ್ತಾರೆ. ಕುಮಾರಸ್ವಾಮಿ ಕಾಲದಲ್ಲೂ ಅದೇ ಪೋಲೀಸರೇ ಇದ್ದರು ಎಂದಿದ್ದಾರೆ ಗೃಹ ಸಚಿವರು. ಬೊಮ್ಮಾಯಿ ಅವರೇ ಅದು ನನ್ನ ಕಾಲ. ಶಾಂತಿ-ಸುವ್ಯವಸ್ಥೆಗಷ್ಟೇ ಪೊಲೀಸರ ಸೇವೆ ಪಡೆಯುತ್ತಿದ್ದೆವು. ಇದು ನಿಮ್ಮ ಕಾಲ. ಗಲಭೆ, ಗುಂಡೇಟಿಗೆ ನೀವು ಪೊಲೀಸರನ್ನು ಬಳಸಿಕೊಳ್ಳುತ್ತಿದ್ದೀರಿ. ನನ್ನ ಕಾಲದಲ್ಲೂ ಇದೇ ಪೊಲೀಸರಿದ್ದರು. ಹೌದು. ಆದರೆ ನನ್ನ ಕಾಲದಲ್ಲಿ ಗಲಭೆಗಳು ಯಾಕೆ ಆಗಲಿಲ್ಲ? ಗೋಲಿಬಾರ್​ಗಳು ಯಾಕೆ ಆಗಲಿಲ್ಲ? ಇದಕ್ಕೆ ನೀವು ಉತ್ತರಿಸುವಿರಾ? ಎಂದು ಪ್ರಶ್ನಿಸಿದರು.

ಗಲಭೆಯ ಸಿ.ಡಿ. ಬಿಡುಗಡೆ ಮಾಡಿದ್ದಕ್ಕೆ ಸದಾನಂದಗೌಡ ವ್ಯಂಗ್ಯವಾಡಿದ್ದಾರೆ. ಸಿ.ಡಿ. ಹಲವರಿಗೆ ರಾಜಕೀಯ ಅಸ್ತಿತ್ವದ ಸ್ವತ್ತು ಎಂದಿದ್ದಾರೆ. ಬಿಜೆಪಿಯಲ್ಲಿ ಸದ್ದು ಮಾಡಿದ ಸಿ.ಡಿ.ಗಳ ಸಂಖ್ಯೆ ಒಂದೆರಡೇ? ಎಲ್ಲ ಸಿ.ಡಿ.ಗಳು ಬಯಲಾದರೆ ಬಿಜೆಪಿಗರು ಬೆತ್ತಲಾಗುತ್ತಾರಷ್ಟೇ. ಸಿ.ಡಿ.ಗಳು ಬಿಜೆಪಿಯ ಸ್ವತ್ತು. ಸಿಡಿ ಬಗ್ಗೆ ಮಾತಾಡುವಾಗ ಮೆಕ್ಕಾಕ್ಕೆ ಹೋದಾಗ ಮುಸಲ್ಮಾನರು ಸೈತಾನನಿಗೆ ಕಲ್ಲು ಹೊಡೆಯುತ್ತಾರೆ. ಪೊಲೀಸರ ಮೇಲೆ ಕಲ್ಲು ತೂರಲು ಅವರೇನು ಸೈತಾನರೇ ಎಂದು ಸೋದರಿ ಶೋಭಾ ಪ್ರಶ್ನೆ ಮಾಡಿದ್ದಾರೆ. ಹಾಗಾದರೆ ಪೊಲೀಸರು ಕಲ್ಲು ತೂರಾಟ ಮಾಡಿದರಲ್ಲ. ಹೋರಾಟಗಾರರೇನು ಸೈತಾನರೇ? ಉತ್ತರಿಸುವಿರಾ ಶೋಭಾ ಅವರೇ? ಎಂದು ಎಚ್​ಡಿಕೆ ಕೇಳಿದ್ದಾರೆ.ಮಂಗಳೂರಿನಲ್ಲಿ ನಾನು ರಾಜಕಾರಣ ಮಾಡಬೇಕಿಲ್ಲ. ಅಲ್ಲಿ ರಾಜಕಾರಣ ಮಾಡುತ್ತಿರುವುದು ನೀವು. ಅಲ್ಲಿ ಕೋಮುಗಲಭೆ ಉಂಟು ಮಾಡುತ್ತಿರುವುದು ನೀವು. ವಾಣಿಜ್ಯ ನಗರಿಯಾಗಬೇಕಿದ್ದ ಮಂಗಳೂರು ಕೋಮು ರಾಜಕಾರಣದ ಕಣವಾಗಿದೆ.  ಸಮುದ್ರ ತೀರದ ಜಗತ್ತಿನ ಹಲವು ಪ್ರದೇಶಗಳು ವಾಣಿಜ್ಯ ನಗರಿಗಳಾಗಿವೆ. ಅಷ್ಟೇ ಏಕೆ, ಮುಂಬೈ, ಚೆನ್ನೈ, ಕೊಚ್ಚಿ ಇದಕ್ಕೆ ಉದಾಹರಣೆಗಳು. ಮಂಗಳೂರಿಗೂ ಅಂಥದ್ದೇ ಅವಕಾಶಗಳಿದ್ದವು, ದೇಶಕ್ಕೆ ದೊಡ್ಡ ಬ್ಯಾಂಕ್​ಗ ಳನ್ನು ಕೊಟ್ಟದ್ದು ಇದೇ ಕರಾವಳಿ. ಆದರೆ ನಿಮ್ಮ ಚಿಲ್ಲರೆ ರಾಜಕಾರಣ ಮಂಗಳೂರಿನ ವಾಣಿಜ್ಯ ಬೆಳವಣಿಗೆಗೆ ಅಡ್ಡಗಾಲಾಗಿದೆ.  ಮಂಗಳೂರು ಶಾಂತವಾದರೆ ಅದು ವಾಣಿಜ್ಯಿಕವಾಗಿ ಬೆಳವಣಿಗೆಯಾಗುತ್ತದೆ. ದೇಶಕ್ಕೆ ಮಾದರಿಯಾಗುವ ತನ್ನ ಐತಿಹಾಸಿಕ ಗುಣವನ್ನು ಮುಂದುವರಿಸಿಕೊಂಡು ಹೋಗುತ್ತದೆ. ಶಾಂತಿ ಸ್ಥಾಪನೆಯಾಗಬೇಕಿದ್ದರೆ ಬಿಜೆಪಿ ತೆಪ್ಪಗಿರಬೇಕಷ್ಟೇ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.



ಇದನ್ನು ಓದಿ: ಮಂಗಳೂರು ಗಲಭೆಯ ಆಯ್ದ ವಿಡಿಯೋಗಳನ್ನು ತಮಗೆ ಬೇಕಾದಂತೆ ಎಡಿಟ್​ ಮಾಡಿದ್ದಾರೆ; ಪೊಲೀಸ್​ ಆಯುಕ್ತ ಹರ್ಷ ತಿರುಗೇಟು

ಮಂಗಳೂರಿನಲ್ಲಿ ನಾನು ರಾಜಕಾರಣ ಮಾಡಬಾರದು ಎನ್ನುತ್ತಾರೆ ಸೋದರಿ ಶೋಭಾ. ಆದರೆ, ರಾಜಕೀಯ ಪಕ್ಷವೊಂದರ ಶಾಸಕಾಂಗ ಪಕ್ಷದ ನಾಯಕನಾದ ನಾನು ಮಂಗಳೂರಲ್ಲಿ ಏಕೆ ರಾಜಕಾರಣ ಮಾಡಬಾರದು? ಹಾಗೇನಾದರೂ ನನಗೆ ನಿರ್ಬಂಧವಿದೆಯೇ? ಮಂಗಳೂರಲ್ಲಿ ನಾನೂ ರಾಜಕಾರಣ ಮಾಡುತ್ತೇನೆ. ಆದರೆ ಬಿಜೆಪಿಯಂತಲ್ಲ. ಸಾತ್ವಿಕವಾಗಿ‌, ನೈತಿಕವಾಗಿ ರಾಜಕೀಯ ಮಾಡುತ್ತೇವೆ ಎಂದು ಹೇಳಿದರು.
First published:January 11, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ