ಮಹಾರಾಷ್ಟ್ರ ಬೆಳಗಾವಿಯ ವಿಷಯಕ್ಕೆ ಬಂದರೆ ಕನ್ನಡಿಗರು ಸಿಡಿದೇಳುತ್ತಾರೆ; ಹೆಚ್​ಡಿ ಕುಮಾರಸ್ವಾಮಿ

ಬೆಳಗಾವಿಯಲ್ಲಿ ಕನ್ನಡ ಹೋರಾಟಗಾರರು ನೆಟ್ಟಿದ್ದ ಕನ್ನಡ ಧ್ವಜ ತೆರವು ಮಾಡಬೇಕು ಎಂದು ವಾದಿಸಿದ್ದ ಎಂಇಎಸ್‌ಗೆ ಸರಿಯಾದ ಪೆಟ್ಟು ಕೊಟ್ಟಿದ್ದರೆ, ಇಂದು ಉದ್ಧವ ಠಾಕ್ರೆ ಇಂಥ ಮಾತುಗಳನ್ನು ಆಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಹೆಚ್​.ಡಿ. ಕುಮಾರಸ್ವಾಮಿ

ಹೆಚ್​.ಡಿ. ಕುಮಾರಸ್ವಾಮಿ

 • Share this:
  ಬೆಂಗಳೂರು (ಜ. 18): ಮರಾಠಿ ಭಾಷಿಗರು ಹೆಚ್ಚಾಗಿರುವ ಕರ್ನಾಟಕದ ಗಡಿ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲು ಒಗ್ಗಟ್ಟಾಗಿ ಹೋರಾಡುತ್ತೇವೆ ಎಂದು ಹೇಳಿಕೆ ನೀಡುವ ಮೂಲಕ ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಸುರೇಶ್ ಕುಮಾರ್, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಸೇರಿದಂತೆ ಅನೇಕರು ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರು. ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಕೂಡ ಈ ಬಗ್ಗೆ ಆಕ್ರೋಶ ಹೊರಹಾಕಿದ್ದು, ಗಡಿ ವಿವಾದದಲ್ಲಿ ಮಹಾಜನ ಆಯೋಗದ ತೀರ್ಪೇ ಅಂತಿಮ. ಇತ್ಯರ್ಥ ಆಗಿರುವ ವಿಷಯಗಳ ಬಗ್ಗೆ ತಗಾದೆ ತೆಗೆದು, ಬೆಳಗಾವಿಯಲ್ಲಿ ಸೌಹಾರ್ದತೆಯಿಂದ ಸಹಬಾಳ್ವೆ ನಡೆಸುತ್ತಿರುವವರಲ್ಲಿ ವಿಷ ಬೀಜ ಬಿತ್ತುವುದನ್ನು ದೇಶದ್ರೋಹಿ ಕೃತ್ಯ ಎಂದೆನ್ನಬೇಕಾಗುತ್ತದೆ. ಬೆಳಗಾವಿ ವಿಚಾರಕ್ಕೆ ಬಂದರೆ ಕನ್ನಡಿಗರು ಸಿಡಿದೇಳುತ್ತಾರೆ ಎಂಬುದು ಉದ್ಧವ ಠಾಕ್ರೆಗೆ ಗೊತ್ತಿರಲಿ ಎಂದು ಎಚ್ಚರಿಸಿದ್ದಾರೆ.

  ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುತ್ತೇವೆ’ ಎಂದಿರುವ ಉದ್ಧವ್‌ ಠಾಕ್ರೆ ಅವರ ಹೇಳಿಕೆ ಚೀನಾದ ವಿಸ್ತರಣಾವಾದವನ್ನು ಧ್ವನಿಸುತ್ತಿದೆ. ಒಕ್ಕೂಟ ವ್ಯವಸ್ಥೆ ಒಪ್ಪಿ, ಭಾಷಾ ಆಧಾರದ ಮೇಲೆ ರಾಜ್ಯಗಳನ್ನು ವಿಂಗಡಿಸಿಕೊಂಡು, ಅದಕ್ಕೆ ಬದ್ಧವಾಗಿ ನಡೆಯುತ್ತಿರುವಾಗ ಇಂಥ ವಿಸ್ತರಣಾವಾದದಿಂದ ಸೌಹಾರ್ದಕ್ಕೆ ಧಕ್ಕೆಯಾಗಲಿದೆ ಎಂದಿದ್ದಾರೆ.

  ಬಹುತೇಕ ಕನ್ನಡಿಗ ರಾಜರು ಮಹಾರಾಷ್ಟ್ರದ ಬಹುಪಾಲನನ್ನು ಆಗಲೇ ಆಳಿದ್ದಾರೆ. ಕನ್ನಡಿಗರ ಸಾಹಸ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿದೆ. ಉದ್ಧವ ಠಾಕ್ರೆ ಒಂದು ಬಾರಿ ಇತಿಹಾಸವನ್ನು ಅವಲೋಕಿಸಿದರೆ, ಈಗ ಯಾರು ಯಾರ ಪ್ರದೇಶಗಳನ್ನು ಆಕ್ರಮಿಸಿದ್ದಾರೆ ಎಂಬುದೂ ಗೊತ್ತಾಗುತ್ತದೆ. ಯಾರು ಯಾರ ಪ್ರದೇಶವನ್ನು ಬಿಟ್ಟುಕೊಡಬೇಕೆಂಬುದೂ ತಿಳಿಯುತ್ತದೆ. ಬೆಳಗಾವಿಯಲ್ಲಿ ಕನ್ನಡ ಹೋರಾಟಗಾರರು ನೆಟ್ಟಿದ್ದ ಕನ್ನಡ ಧ್ವಜ ತೆರವು ಮಾಡಬೇಕು ಎಂದು ವಾದಿಸಿದ್ದ ಎಂಇಎಸ್‌ಗೆ ಸರಿಯಾದ ಪೆಟ್ಟು ಕೊಟ್ಟಿದ್ದರೆ, ಇಂದು ಉದ್ಧವ ಠಾಕ್ರೆ ಇಂಥ ಮಾತುಗಳನ್ನು ಆಡಲು ಸಾಧ್ಯವಾಗುತ್ತಿರಲಿಲ್ಲ. ಎಂಇಎಸ್‌ ಅನ್ನು ಪರೋಕ್ಷವಾಗಿ ಬೆಂಬಲಿಸುತ್ತಿರುವವರಿಂದ ಪ್ರೇರಣೆ ಪಡೆದೇ ಉದ್ಧವ ಠಾಕ್ರೆ ಇಂಥ ಮಾತುಗಳನ್ನು ಆಡಿದ್ದಾರೆ ಎಂದು ಹೆಚ್​ಡಿ ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.  ಇದನ್ನೂ ಓದಿ: ಬೆಳಗಾವಿ ನಮ್ಮದು ಎಂದ ಉದ್ಧವ್​ ಠಾಕ್ರೆ; ಉದ್ಧಟತನ ಬೇಡ ಎಂದು ಎಚ್ಚರಿಸಿದ ಸಿಎಂ ಯಡಿಯೂರಪ್ಪ

  ಬೆಳಗಾವಿ ಸಾಂಸ್ಕೃತಿಕವಾಗಿ, ಆಡಳಿತಾತ್ಮಕವಾಗಿ ಕರ್ನಾಟಕದ ಹೆಗ್ಗುರುತು. ಬೆಳಗಾವಿಯ ಬಗ್ಗೆ ಪದೇಪದೆ ಕಿತಾಪತಿ ಮಾಡುವ ಎಂಇಎಸ್‌ ಮತ್ತು ಮಹಾರಾಷ್ಟ್ರಕ್ಕೆ ತಕ್ಕ ಉತ್ತರ ಕೊಡಬೇಕೆಂದೇ ನಾನು ಸಿಎಂ ಆಗಿದ್ದಾಗ ಅಲ್ಲಿ ಸುವರ್ಣ ವಿಧಾನಸೌಧ ನಿರ್ಮಿಸಲಾಗಿತ್ತು. ಅದು, ಬೆಳಗಾವಿ ನಮ್ಮ ಅವಿಭಾಜ್ಯ ಅಂಗ ಎಂಬುದರ ದ್ಯೋತಕ ಎಂಬುದನ್ನು ಠಾಕ್ರೆ ಅರಿಯಲಿ ಎಂದು ಹೆಚ್​ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.  ಇದನ್ನೂ ಓದಿ: ಕರ್ನಾಟಕದ ಗಡಿ ವಿಚಾರದಲ್ಲಿ ರಾಜಿಯೂ ಇಲ್ಲ, ರಾಜಕೀಯವೂ ಇಲ್ಲ; ಉದ್ಧವ್ ಠಾಕ್ರೆಗೆ ಸಿದ್ದರಾಮಯ್ಯ ಎಚ್ಚರಿಕೆ

  ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಿಸಿದ್ದು ಮಾತ್ರವಲ್ಲ, ಅಲ್ಲಿ ವಿಧಾನಸಭೆ ಅಧಿವೇಶನ ನಡೆಯಬೇಕೆಂದು ತೀರ್ಮಾನಿಸಲಾಯಿತು. ಸುವರ್ಣ ಸೌಧ ಮಹಾರಾಷ್ಟ್ರಕ್ಕೆ ಪ್ರತ್ಯುತ್ತರವಾಗಿ ನಿಂತಿರುವ ಒಂದು ನಿರ್ಮಿತಿ. ಅದನ್ನು ಅರಿಯುವ ವಿಚಾರದಲ್ಲಿ ನಮ್ಮಲ್ಲಿನ ಕೆಲವರೂ ಎಡವಿದ್ದಾರೆ ಎಂಬುದೂ ವಾಸ್ತವ. ಅದರ ಸಮರ್ಪಕ ಬಳಕೆಯಿಂದ ಮಾತ್ರ ಅದರ ಉದ್ದೇಶ ಸಾಕಾರ ಎಂದಿದ್ದಾರೆ.  ಬೆಳಗಾವಿ ನಮ್ಮದೆಂಬ ಮಹಾರಾಷ್ಟ್ರಕ್ಕೆ ತಿರುಗೇಟು ನೀಡುವುದು ಒಂದೆಡೆ ಇರಲಿ. ಆದರೆ, ಅಲ್ಲಿನ ಜನರಲ್ಲಿ ಕನ್ನಡಾಭಿಮಾನ ಉತ್ಕಟವಾಗಿದೆ. ಚಿಕ್ಕೋಡಿಯ ಕನ್ನಡ ಪ್ರೇಮಿಗಳಾದ ಸಿದ್ದಗೌಡ ಹಾಗೂ ಅಶ್ವಿನಿ ಪಾಟೀಲ ದಂಪತಿ ತಮ್ಮ ಚೊಚ್ಚಲ ಮಗುವಿಗೆ ‘ಕನ್ನಡದ ವೃದ್ಧಿ’ ಎಂಬ ಹೆಸರಿಟ್ಟಿದ್ದಾರೆ. ಇದು ಅಲ್ಲಿನ ಕನ್ನಡಾಭಿಮಾನಕ್ಕೆ ಸಾಕ್ಷಿ. ಆ ದಂಪತಿಗೆ ನನ್ನ ನಮನ ಎಂದು ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ.

  ಮರಾಠಿ ಭಾಷಿಗರು ಹೆಚ್ಚಾಗಿರುವ ಬೆಳಗಾವಿ ಸೇರಿದಂತೆ ಕರ್ನಾಟಕದ ಕೆಲವು ಪ್ರದೇಶಗಳನ್ನು ಮತ್ತೆ ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು. ಈ ವಿಚಾರದಲ್ಲಿ ಮಹಾರಾಷ್ಟ್ರದ ರಾಜಕೀಯ ಪಕ್ಷಗಳಲ್ಲಿ ಭಿನ್ನಾಭಿಪ್ರಾಯಗಳಿಲ್ಲ. ನಾವೆಲ್ಲರೂ ಒಗ್ಗಟ್ಟಿನಿಂದ ಮಹಾರಾಷ್ಟ್ರದ ಗಡಿಯಲ್ಲಿರುವ ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ವಾಪಾಸ್ ನಮ್ಮ ರಾಜ್ಯಕ್ಕೆ ಸೇರಿಸಿಕೊಳ್ಳಲು ಹೋರಾಡುತ್ತೇವೆ ಎಂದು ನಿನ್ನೆ ಸಿಎಂ ಉದ್ಧವ್ ಠಾಕ್ರೆ ನಿನ್ನೆ ಘೋಷಿಸಿದ್ದರು.
  Published by:Sushma Chakre
  First published: