HD Kumaraswamy: ಶಿವಮೊಗ್ಗದ ಹರ್ಷ ಕೊಲೆಯಾದಗಲೇ ಏಕೆ ಎಚ್ಚೆತ್ತುಕೊಳ್ಳಲಿಲ್ಲ: ಸರ್ಕಾರಕ್ಕೆ ಕುಮಾರಸ್ವಾಮಿ ತರಾಟೆ

ಕೊಲೆಯೇ ಆಗದಂತೆ ತಡೆಯುವ ಪ್ರಯತ್ನ ಮಾಡುತ್ತಿಲ್ಲ ಏಕೆ? ಕೊಲೆಗಳೆಂದರೆ ಕೆಲವರಿಗೇಕೆ ಇಷ್ಟೊಂದು ಇಷ್ಟ? ಚುನಾವಣೆ ಹತ್ತಿರ ಆದಂತೆಲ್ಲ ನೆತ್ತರ ಓಕುಳಿ ಹರಿಯುತ್ತಿದೆ. ಈ ನೆತ್ತರ ಮೇಲೆ ರಾಜಕೀಯ ಆಟ ವಿಜೃಂಭಿಸುತ್ತಿದೆ.

ಹೆಚ್ ಡಿ ಕುಮಾರಸ್ವಾಮಿ

ಹೆಚ್ ಡಿ ಕುಮಾರಸ್ವಾಮಿ

  • Share this:
ಬೆಂಗಳೂರು: ಪುತ್ತೂರಿನ (Puttu) ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು (Hindu Activist Praveen Nettaru) ಕೊಲೆಗೆ (Murder) ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ (HD Kumaraswamy) ಸರಣಿ ಟ್ವೀಟ್​ಗಳ ಮೂಲಕ ಹರಿಹಾಯ್ದಿದ್ದಾರೆ. ರಾಜ್ಯದಲ್ಲಿ ಯುವಕರ ಕೊಲೆಗಳ ಸರಣಿಯೇ ಮುಂದುವರಿದಿದ್ದು, ಇನ್ನೊಂದು ಜೀವ ಹೋಗಿದೆ. ಈ ಹತ್ಯಾಕಾಂಡಕ್ಕೆ ಕೊನೆಯೇ ಇಲ್ಲವೇ? ಕೊಲೆ ಅದ ಮೇಲೆ ನಡೆಯುವ ಹೇಳಿಕೆಗಳ ಭರಾಟೆ, ಕೂಗಾಟದಿಂದ ಪ್ರಯೋಜನ ಏನು? ಶಿವಮೊಗ್ಗದಲ್ಲಿ ಹರ್ಷ ಕೊಲೆ ಅದ ಮೇಲೆ ರಾಜ್ಯ ಬಿಜೆಪಿ ಸರ್ಕಾರ ಸರ್ಕಾರ ಮೈಮರೆತಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.

ಕೊಲೆಗಳನ್ನು ತಡೆಯುತ್ತಿಲ್ಲ ಏಕೆ?                

ಪ್ರತಿ ಕೊಲೆ ಅದ ಮೇಲೆಯೂ ಮೈ ಕೊಡವಿಕೊಂಡು ಎದ್ದೇಳುವ ಬಿಜೆಪಿ ಸರ್ಕಾರ, ಕೊಲೆಯೇ ಆಗದಂತೆ ತಡೆಯುವ ಪ್ರಯತ್ನ ಮಾಡುತ್ತಿಲ್ಲ ಏಕೆ? ಕೊಲೆಗಳೆಂದರೆ ಕೆಲವರಿಗೇಕೆ ಇಷ್ಟೊಂದು ಇಷ್ಟ? ಚುನಾವಣೆ ಹತ್ತಿರ ಆದಂತೆಲ್ಲ ನೆತ್ತರ ಓಕುಳಿ ಹರಿಯುತ್ತಿದೆ. ಈ ನೆತ್ತರ ಮೇಲೆ ರಾಜಕೀಯ ಆಟ ವಿಜೃಂಭಿಸುತ್ತಿದೆ ಎಂದು ಎಚ್​ಡಿಕೆ ಆರೋಪಿಸಿದ್ದಾರೆ.  ಈ ಮೊದಲು ಕೊಲೆಯಾಗಿದ್ದ ಮಸೂದ್ ಕೂಡ ಬಡವ, ಈಗ ಕೊಲೆಯಾದ ಪ್ರವೀಣ್ ನೆಟ್ಟಾರು ಕೂಡ ಬಡ ಕುಟುಂಬದವರೇ. ಶ್ರಮಜೀವಿಗಳ ಕುಟುಂಬದ ಮಕ್ಕಳೇ ಸಾವಿಗೆ ತುತ್ತಾಗುತ್ತಿದ್ದಾರೆ.  ರಾಜಕಾರಣಿಗಳು, ಸಂಘಟನೆಗಳ ಮುಖಂಡರ ಮಕ್ಕಳು ಇಂಥ ಗಲಾಟೆಗಳಲ್ಲಿ ಕಾಣೋದೇ ಇಲ್ಲ ಎಂದು ಟ್ವೀಟಿಸಿದ್ದಾರೆ.





ಹಿಂಸೆಗೆ ಜಾತಿ, ಧರ್ಮ ಎಂಬುವುದಿಲ್ಲ

ರಾಜ್ಯದಲ್ಲಿ ಕೆಲ ಸಂಘಟನೆಗಳು ಬಡ ಯುವಕರನ್ನು ದಾರಿ ತಪ್ಪಿಸಿ ಸ್ವಾರ್ಥ ಸಾಧನೆಗಾಗಿ ಸಾವಿನ ದವಡೆಗೆ ದೂಡುತ್ತಿವೆ. ಬಡ ಕುಟುಂಬಗಳ ಜೀವನಾಧಾರವಾಗಿರುವ ಯುವಕರನ್ನು ಬಲಿ ತೆಗೆದುಕೊಳ್ಳುತ್ತವೆ. ಈ ಬಗ್ಗೆ ಯುವಕರು, ಪೋಷಕರು ಎಚ್ಚೆತ್ತುಕೊಳ್ಳಬೇಕು. ಹಿಂಸೆಗೆ ಜಾತಿ, ಧರ್ಮ ಎಂಬುವುದಿಲ್ಲ. ರಕ್ತಪಿಪಾಸುಗಳಿಗೆ ಮಾನವೀಯತೆ ಇಲ್ಲ. ಕೊಲೆಗೆಡುಕ ಶಕ್ತಿಗಳ ಮುಂದೆ ಸರ್ಕಾರ ಕೋಲೆ ಬಸವನಂತೆ ಆಗಿದೆ. ಈ ಕೊಲೆಗಳ ಹಿಂದಿರುವ ಕಾಣದ ಕೈಗಳಿಗೆ ಕೊಳ ಹಾಕಲು ದೈರ್ಯ ಇಲ್ಲ. ಈ ಅಸಹಾಯಕತೆಗೆ ಕಾರಣ ಏನು ಎಂದು ಸರ್ಕಾರಕ್ಕೆ ಬರವಣಿಗೆಯಲ್ಲೇ ತಿವಿದಿದ್ದಾರೆ.

ಇದನ್ನೂ ಓದಿ: Praveen Murder: ಪ್ರವೀಣ್ ಹತ್ಯೆ, ಸರ್ಕಾರದಲ್ಲಿ ಗಟ್ಸ್ ಇಲ್ಲ! ಗುಡುಗಿದ ಪ್ರಮೋದ್ ಮುತಾಲಿಕ್

ನಿರುದ್ಯೋಗವೇ ಇಂಥ ಘಟನೆಗಳಿಗೆ ಕಾರಣ

ಅಂಕೆಯೇ ಇಲ್ಲದ ಹಂತಕರ ಆಟಕ್ಕೆ ಇತಿಶ್ರೀ ಹಾಡಿ, ಹೆಡೆಮುರಿ ಕಟ್ಟಬೇಕು. ಅದು ಬಿಟ್ಟು ಅಬ್ಬರದ ಹೇಳಿಕೆಗಳಿಂದ ಉಪಯೋಗವೇನು? ಪ್ರತಿ ಕೊಲೆಗೂ ಕೋಮು ಬಣ್ಣ ಹಚ್ಚುವ ರಾಜಕೀಯ ನಾಯಕರ ತಲೆಯಲ್ಲಿ ಭಯಂಕರ ದುರುದ್ದೇಶವೇ ಅಡಗಿದೆ. ಕರ್ನಾಟಕವೂ ಸರ್ವ ಜನಾಂಗದ ಶಾಂತಿಯ ತೋಟ. ಶಾಂತಿ, ಸೌಹಾರ್ದತೆ, ಸಹಿಷ್ಣುತೆಯ ಬೀಡು. ಭಾವನಾತ್ಮಕ ವಿಷಯಗಳಿಂದ ಬಂಡವಾಳ ಹೂಡಿಕೆಯಲ್ಲಿ ಈಗಾಗಲೇ ರಾಜ್ಯಕ್ಕೆ ಹೊಡೆತ ಬಿದ್ದಿದೆ. ಹೊಸ ಕೈಗಾರಿಕೆಗಳು ಬರುತ್ತಿಲ್ಲ. ಶಾಂತಿ, ಸುವ್ಯಸ್ಥೆ ಸಮಸ್ಯೆಯಿಂದ ಆರ್ಥಿಕ ಹಿಂಜರಿತ ಉಂಟಾಗಿ ಕೈಗಾರಿಕೆಗಳು ವಲಸೆ ಹೋದರೆ ಎದುರಾಗುವ ನಿರುದ್ಯೋಗ ಸಮಸ್ಯೆಗೆ ಯಾರು ಹೊಣೆ ಆಗುತ್ತಾರೆ? ನಿರುದ್ಯೋಗವೇ ಇಂಥ ಘಟನೆಗಳಿಗೆ ಕಾರಣ. ಹತಾಶ ಯುವಕರ ಮನಸ್ಸು ಕೆಡಿಸಲಾಗುತ್ತಿದೆ. ಈ ಬಗ್ಗೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

ನಿನ್ನೆ ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಮೃತದೇಹದ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದೆ. ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಸದ್ಯ ಸರಕಾರಿ ಆಸ್ಪತ್ರೆ ಶವಾಗಾರದಲ್ಲಿ ಪ್ರವೀಣ್ ಮೃತದೇಹ ಇಡಲಾಗಿದೆ. ಮೆರವಣಿಗೆ ಮೂಲಕ ಮೃತದೇಹ ಸಾಗಿಸಲು ಬಿಜೆಪಿ ಕಾರ್ಯಕರ್ತರು, ಹಿಂದೂ ಪರ ಸಂಘಟನೆ ಕಾರ್ಯಕರ್ತರು ಸಿದ್ಧತೆ ನಡೆಸಿದ್ದಾರೆ.
Published by:Kavya V
First published: