ಮೇಕೆದಾಟಿನಲ್ಲಿ ಅಣೆಕಟ್ಟು ನಿರ್ಮಾಣ ಮಾಡುವ ವಿಚಾರವನ್ನು ಮತ್ತೆ ಕೆದಕಿರುವ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಕುಮಾರಸ್ವಾಮಿ, ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ಹಾಗು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮೇಕೆದಾಟಿನಲ್ಲಿ ಅಣೆಕಟ್ಟು ನಿರ್ಮಾಣ ಮಾಡುವ ವಿಚಾರದಲ್ಲಿ ಕರ್ನಾಟಕದ ಪರವಾಗಿ ಇರುವವರು ಯಾರು? ಎಂದು ಪ್ರಶ್ನಿಸಿರುವ ಎಚ್ಡಿಕೆ, ಯಾವುದೇ ಕಾರಣಕ್ಕೂ ಯೋಜನೆ ಅನುಷ್ಟಾನಕ್ಕೆ ಬರಬಾರದು ಎಂದು ತಮಿಳುನಾಡಿನ ವಿರೋಧ ಪಕ್ಷ ಎಐಎಡಿಎಂಕೆ ಕೇಂದ್ರ ಬಿಜೆಪಿ ಸರ್ಕಾರದ ಮೇಲೆ ಒತ್ತಡ ಹಾಕಿದೆ. ಆಡಳಿತ ಪಕ್ಷ ಡಿಎಂಕೆ ಕಾಂಗ್ರೆಸ್ ಮೇಲೆ ಒತ್ತಡ ಹಾಕಿದೆ. ಕರ್ನಾಟಕದಲ್ಲಿ ಮಾತ್ರ ಎರಡೂ ಪಕ್ಷಗಳು ಯೋಜನೆ ಜಾರಿಯಾಗಬೇಕು ಎನ್ನುತ್ತವೆ? ಯಾರು ಯಾರ ಪರ ಇದ್ದೀರಿ? ಜನರಲ್ಲಿ ಅನವಶ್ಯಕ ಗೊಂದಲವನ್ನು ಎರಡು ಪಕ್ಷಗಳು ಮಾಡುತ್ತಿವೆ ಎಂದು ಕಿಡಿಕಾರಿದ್ದಾರೆ.
https://twitter.com/hd_kumaraswamy/status/1421006834777747459?s=19
ಎರಡನೇ ಟ್ವೀಟ್ ಮಾಡಿ ಮತ್ತೆ ಮೇಕೆದಾಟು ವಿಚಾರವನ್ನೇ ಪ್ರಸ್ತಾಪಿಸಿರುವ ಎಚ್ಡಿಕೆ ಮೇಕೆದಾಟು ಯೋಜನೆ ಜಾರಿಯಾಗದೆಂದು ಕೇಂದ್ರ ಜಲಸಂಪನ್ಮೂಲ ಸಚಿವರು ಭರವಸೆ ನೀಡಿರುವುದಾಗಿ ತಮಿಳುನಾಡಿನ ಆಡಳಿತ ಪಕ್ಷ, ವಿರೋಧ ಪಕ್ಷಗಳೆರಡೂ ಶುಕ್ರವಾರ ಪುನರುಚ್ಚರಿಸಿವೆ. ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸಿದ್ದ, ತಮಿಳುನಾಡು ಬಿಜೆಪಿ ಮುಖಂಡ, ಮಾಜಿ ಐಪಿಎಸ್ ಅಧಿಕಾರಿಯೊಬ್ಬರು ಮೇಕೆದಾಟು ಯೋಜನೆ ವಿರುದ್ಧ ಉಪವಾಸಕ್ಕೂ ಕೂರುತ್ತಿದ್ದಾರೆ ಎಂದು ಅಣ್ಣಾಮಲೈ ಅವರ ನಿಲುವನ್ನು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ವ್ಯಂಗ್ಯವಾಡಿದ್ದಾರೆ.
https://twitter.com/hd_kumaraswamy/status/1421006836791087105?s=19
ಮೂರನೇ ಟ್ವೀಟ್ ಮೂಲಕ ಬಿಜೆಪಿಗೆ ಚಾಟಿ ಬೀಸಿರುವ ಕುಮಾರಸ್ವಾಮಿ, ಇಲ್ಲೊಂದು ಹೇಳಿಕೆ, ಅಲ್ಲೊಂದು ಹೇಳಿಕೆ ಮೂಲಕ ಬಿಜೆಪಿ ತನ್ನ ಇಬ್ಬಂದಿತನವನ್ನು ತೋರಿಸುತ್ತಿದೆ ಎಂದು ಹೇಳಿದ್ದಾರೆ.
ಮೇಕೆದಾಟು ಅಣೆಕಟ್ಟು ಯೋಜನೆ ತಮಿಳುನಾಡಿನಲ್ಲಿ ರಾಜಕೀಯ ಒಗ್ಗಟ್ಟು ಪ್ರದರ್ಶನಕ್ಕೆ ಕಾರಣವಾಗಿದ್ದರೆ, ಅದೇ ಮೇಕೆದಾಟು ಯೋಜನೆ ರಾಜ್ಯದಲ್ಲಿನ ಒಡಕುತನವನ್ನು ಸ್ಪಷ್ಟವಾಗಿ ತೋರಿಸುತ್ತಿದೆ. ‘ನಾವು ಯೋಜನೆ ಪರ ಇದ್ದೇವೆ’ ಎಂದು ರಾಜ್ಯದ ಮುಖ್ಯಮಂತ್ರಿಯೊಬ್ಬರೇ ಹೇಳಿದರೆ ಸಾಲದು. ಆಡಳಿತ ಪಕ್ಷ ಇದರ ಪರ ಇರುವುದಾಗಿ ಕೆಲಸದ ಮೂಲಕ ಸಾಬೀತು ಮಾಡಬೇಕು.
https://twitter.com/hd_kumaraswamy/status/1421006839643205634?s=19
ನಾಲ್ಕನೇ ಟ್ವೀಟ್ ಮಾಡಿ, ಮಾಜಿ ಸಿಎಂ ಯಡಿಯೂರಪ್ಪ ಹಾಗೂ ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗಳಿಗೆ ತಿರುಗೇಟು ನೀಡಿದ್ದಾರೆ. ಕೇಂದ್ರದ ಬಳಿ ಹೋಗಿ ಮಾತನಾಡಲು ಶಕ್ತಿ ಇಲ್ಲದವರು, ಕೇವಲ ಮಾತಿನಲ್ಲಿ ಹೇಳಿಕೆ ಕೊಟ್ಟು ಸುಮ್ಮನಾಗಬಾರದು ಎನ್ನುವ ಅರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.
ಅಣೆಕಟ್ಟು ನಿರ್ಮಾಣ ಮಾಡಿಯೇ ತೀರುತ್ತೇವೆ ಎಂದು ಹೇಳುತ್ತಿದ್ದ ಯಡಿಯೂರಪ್ಪ ಅವರು ಕೇಂದ್ರ ಸರ್ಕಾರದ ಅನುಮತಿ ಪಡೆಯಲಿಲ್ಲ. ಈಗ ಬೊಮ್ಮಾಯಿ ಅವರೂ ಯೋಜನೆ ಜಾರಿ ಮಾಡುತ್ತೇವೆ ಎನ್ನುತ್ತಿದ್ದಾರೆ. ಇವೆಲ್ಲ ಮಾತಿನಲ್ಲೇ ಉಳಿಯಬಾರದು. ಕೇಂದ್ರದ ಬಳಿಗೆ ಹೋಗಿ ಅನುಮತಿ ಪಡೆಯಲು ಪ್ರಯತ್ನಿಸಬೇಕು. ಈ ಕಾರ್ಯವನ್ನು ಜೆಡಿಎಸ್ ಯಾವಾಗಲೂ ಬೆಂಬಲಿಸುತ್ತದೆ.
https://twitter.com/hd_kumaraswamy/status/1421006841656479747?s=19
ಮೇಕೆದಾಟು, ಕೃಷ್ಣಾ, ಮಹದಾಯಿ ಯೋಜನೆಗಳಿಗೆ ಅನುಮತಿ ನೀಡಲು ಆಗ್ರಹಿಸಿ ಜೆಡಿಎಸ್ ರಾಜ್ಯಪಾಲರ ಮೂಲಕ ರಾಷ್ಟ್ರಪತಿ, ಪ್ರಧಾನಿಗೆ ಮನವಿ ಸಲ್ಲಿಸಿದೆ. ಈ ವಿಚಾರವಾಗಿ ಪ್ರಧಾನಿಯನ್ನೂ ಭೇಟಿಯಾಗಲು ನಿರ್ಧರಿಸಿದ್ದೇವೆ. ರಾಜ್ಯವನ್ನು ಆಳುತ್ತಿರುವ ಬಿಜೆಪಿಗೆ ಈ ಯೋಜನೆಗಳ ವಿಚಾರದಲ್ಲಿ ಬದ್ಧತೆ ಇದ್ದರೆ ಕೇಂದ್ರದ ಮೇಲೆ ಒತ್ತಡ ಹಾಕಿ ಅನುಮತಿ ತರಲಿ.
https://twitter.com/hd_kumaraswamy/status/1421006843631968256?s=19
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ