ಸತತ ಸೋಲಿನಿಂದ ಕಂಗೆಟ್ಟ ಜೆಡಿಎಸ್​; ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ಕುಟುಂಬ ರಾಜಕಾರಣಕ್ಕೆ ಎಚ್​ಡಿಕೆ ಬ್ರೇಕ್?

ದೇವೇಗೌಡರು ಪ್ರಧಾನಮಂತ್ರಿ ಆಗಿದ್ದರು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಎಚ್​ಡಿ ರೇವಣ್ಣ ಮಿನಿಸ್ಟರ್​ ಜೊತೆ ಸೂಪರ್​ ಸಿಎಂ ಆಗಿದ್ದರು. ರೇವಣ್ಣ ಪುತ್ರ ಪ್ರಜ್ವಲ್​ ಸಂಸದ. ಇಷ್ಟೊಂದು ಪ್ರಭಾವ ಇದ್ದರೂ, ಇತ್ತೀಚೆಗೆ ಬದಲಾಗುತ್ತಿರುವ ರಾಜಕೀಯ ಚಿತ್ರಣದಲ್ಲಿ ಜೆಡಿಎಸ್​ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎನ್ನುವುದು ಸ್ಪಷ್ಟವಾಗುತ್ತಿದೆ.

ಹೆಚ್​.ಡಿ. ಕುಮಾರಸ್ವಾಮಿ.

ಹೆಚ್​.ಡಿ. ಕುಮಾರಸ್ವಾಮಿ.

  • Share this:
ಬೆಂಗಳೂರು (ಡಿ.25): ಈ ಬಾರಿಯ ಕರ್ನಾಟಕ ವಿಧಾನಸಭಾ ಉಪಚುನಾವಣೆಯಲ್ಲಿ ದೊಡ್ಡ ಹೊಡೆತ ತಿಂದಿದ್ದು ಜೆಡಿಎಸ್​. ಹದಿನೈದು ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳಲ್ಲಿ ಜೆಡಿಎಸ್​ ಸ್ಪರ್ಧೆ ಮಾಡಿತ್ತಾದರೂ ಒಂದೇ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಿರಲಿಲ್ಲ. ಜೆಡಿಎಸ್​ ಭದ್ರಕೋಟೆ ಕೆ.ಆರ್​. ಪೇಟೆ ಬಿಜೆಪಿ ಪಾಲಾಗಿತ್ತು. ಈ ಹೀನಾಯ ಸೋಲಿಗೆ ಜೆಡಿಎಸ್​ ವರಿಷ್ಠ ಎಚ್​ಡಿ ದೇವೆಗೌಡ ಹಾಗೂ ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ ನಡೆಸುತ್ತಿರುವ ಕುಟುಂಬ ರಾಜಕಾರಣವೇ ಕಾರಣ ಎನ್ನುವ ಮಾತು ಕೇಳಿ ಬಂದಿದೆ. ಹೀಗಾಗಿ ಎಚ್​ಡಿಕೆ ಈಗ ಕುಟುಂಬ ರಾಜಕಾರಣಕ್ಕೇ ಬ್ರೇಕ್​ ಹಾಕಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಚ್​.ಡಿ. ದೇವೇಗೌಡರು ಪ್ರಧಾನಮಂತ್ರಿ ಆಗಿದ್ದರು. ಎಚ್​.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಎಚ್​ಡಿ ರೇವಣ್ಣ ಮಿನಿಸ್ಟರ್​ ಜೊತೆ ಸೂಪರ್​ ಸಿಎಂ ಆಗಿದ್ದರು. ರೇವಣ್ಣ ಪುತ್ರ ಪ್ರಜ್ವಲ್​ ಸಂಸದ. ನಿಖಿಲ್​ ಕುಮಾರಸ್ವಾಮಿ ಜೆಡಿಎಸ್​ ಯುವ ಘಟಕದ ಅಧ್ಯಕ್ಷ. ರೇವಣ್ಣ ಹೆಂಡತಿ ಭವಾನಿ ಹಾಸನ ಜಿಲ್ಲಾ ಪಂಚಾಯ್ತಿ ಸದಸ್ಯೆ. ಇಷ್ಟು ಪ್ರಭಾವ ಇದ್ದರೂ, ಇತ್ತೀಚೆಗೆ ಬದಲಾಗುತ್ತಿರುವ ರಾಜಕೀಯ ಚಿತ್ರಣದಲ್ಲಿ ಜೆಡಿಎಸ್​ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎನ್ನುವುದು ಸ್ಪಷ್ಟವಾಗುತ್ತಿದೆ.

ಕುಮಾರಸ್ವಾಮಿ ನಡೆಸಿದ ಕುಟುಂಬ ರಾಜಕಾರಣದಿಂದ ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್​ ಕೈ ತಪ್ಪಿತ್ತು ಎನ್ನುವ ಮಾತಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಹಠಕ್ಕೆ ಬಿದ್ದು ಮಗ ನಿಖಿಲ್​ರನ್ನು ಮಂಡ್ಯದಿಂದ ಸ್ಪರ್ಧೆಗೆ ಇಳಿಸಿದ್ದರು. ಆದರೆ, ಅವರಿಗೆ ಸೋಲುಂಟಾಗಿತ್ತು. ಉಪಚುನಾವಣೆಯಲ್ಲಿ ಜೆಡಿಎಸ್​ ಭದ್ರಕೋಟೆ ಕೆಆರ್​ ಪೇಟೆ ಕೂಡ ಕೈತಪ್ಪಿದೆ. ಜೆಡಿಎಸ್​ಗೆ ಆಘಾತದ ಮೇಲೆ ಆಘಾತ ಆಗುತ್ತಿದ್ದು, ಇದು ಜೆಡಿಎಸ್​ ವರಿಷ್ಠ ದೇವೇಗೌಡ ಹಾಗೂ ಎಚ್​ಡಿಕೆಗೆ ಆತಂಕ ಸೃಷ್ಟಿಸಿದೆಯಂತೆ. ಈ ಕಾರಣದಿಂದಲೇ ಕುಟುಂಬ ರಾಜಕಾರಣಕ್ಕೆ ಬ್ರೇಕ್​ ಹಾಕಬೇಕು ಎನ್ನುವುದು ಇವರ ಲೆಕ್ಕಾಚಾರ.

ಇದನ್ನೂ ಓದಿ: ಕುಮಾರಸ್ವಾಮಿ ಪುತ್ರ ವ್ಯಾಮೋಹಕ್ಕೆ ಕುಸಿದ ಜೆಡಿಎಸ್​ ಕೋಟೆ; ಮಂಡ್ಯದಲ್ಲೂ ನೆಲೆ ಕಳೆದುಕೊಳ್ಳುವ ಭೀತಿ?

ಪಕ್ಷ ತೊರೆದವರಿಗೆ ಸಿಕ್ಕಿದೆ ದೊಡ್ಡ ದೊಡ್ಡ ಸ್ಥಾನ:

ದೇವೇಗೌಡರ ಜೊತೆ ಮುನಿಸಿಕೊಂಡು ಅವರಿಂದ ದೂರವಾದ ಹಲವರಿದ್ದಾರೆ. ಅಚ್ಚರಿ ಎಂದರೆ ಬೇರೆ ಪಕ್ಷದಲ್ಲಿ ಅವರೆಲ್ಲರಿಗೂ ಒಳ್ಳೆಯ ಸ್ಥಾನ ದೊರೆತಿದೆ. ಜೆಡಿಎಸ್​ ತೊರೆದ ಸಿದ್ದರಾಮಯ್ಯ ಸಿಎಂ ಆಗಿ, ಈಗ ವಿಪಕ್ಷ ನಾಯಕರಾಗಿದ್ದಾರೆ. ಗೌಡರ ಜೊತೆಗಿದ್ದ ವಿ.ಸೋಮಣ್ಣ ಬಿಜೆಪಿ ಸೇರಿ ಸಚಿವರಾಗಿದ್ದಾರೆ. ಬಿಜೆಪಿ ಸೇರಿದ ಬಚ್ಚೇಗೌಡ ಸಂಸದರಾಗಿದ್ದಾರೆ. ಹೆಚ್​ಡಿಕೆ ಆಪ್ತ ಜಮೀರ್ ಅಹ್ಮದ್​ ಕಾಂಗ್ರೆಸ್ ಪ್ರಭಾವಿ ನಾಯಕ. ಈಗ ಕುಟುಂಬ ರಾಜಕಾರಣದಿಂದ ಬೇಸತ್ತ ಅನೇಕರು ಪಕ್ಷ ತೊರೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದಕ್ಕೂ ಮೊದಲೇ ಕುಟುಂಬ ರಾಜಕಾರಣ ಛಿದ್ರ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಮೈತ್ರಿ ಪತನಕ್ಕೂ ಕುಟುಂಬ ರಾಜಕಾರಣದ ನಂಟು:

ಜೆಡಿಎಸ್ ಶಾಸಕರು ಕುಟುಂಬ ರಾಜಕರಣಕ್ಕೆ ಬೇಸತ್ತಿದ್ದಾರೆ. ಮೈತ್ರಿ ಸರ್ಕಾರದ ಅವಧಿಯಲ್ಲಿ ಪಕ್ಷದ ವಿರುದ್ಧ ಜೆಡಿಎಸ್​ ಶಾಸಕರು ಬಂಡಾಯ ಏಳಲು ಇದೇ ಕಾರಣ ಎನ್ನಲಾಗಿದೆ. ಈ ಕಾರಣಕ್ಕೆ ಮೈತ್ರಿ ಸರ್ಕಾರ ಪತನಗೊಂಡಿತ್ತು. ಈ ಬೆಳವಣಿಗೆ ನಂತರ ಕೆಲ ಜೆಡಿಎಸ್​ ಶಾಸಕರು ಕಾಂಗ್ರೆಸ್​ಗೆ ಹಾಗೂ ಕೆಲವರು ಬಿಜೆಪಿಗೆ ಜೈ ಎನ್ನುತ್ತಿದ್ದಾರೆ.

ವರ್ಕ್​ ಆಗತ್ತಾ ವೈಎಸ್​ವಿ ದತ್ತಾ ಐಡಿಯಾ?

ಕುಟುಂಬ ರಾಜಕಾರಣಕ್ಕೆ ಬ್ರೇಕ್​ ಹಾಕುವಂತೆ ಸೂಚನೆ ನೀಡಿದ್ದು ಜೆಡಿಸ್​ ಹಿರಿಯ ನಾಯಕ ವೈಎಸ್​ವಿ ದತ್ತಾ. “ಕುಟುಂಬದವರು ಸಿಎಂ ಅಭ್ಯರ್ಥಿ ಅಂತ ಮುಂದೆ ಘೋಷಿಸಬೇಡಿ. ಪಕ್ಷದ ನಿಷ್ಟಾವಂತ ಕಾರ್ಯಕರ್ತರಿಗೆ ಸಿಎಂ ಸ್ಥಾನ ನೀಡಿ. ಕುಟುಂಬದವರಲ್ಲದೆ ಇತರರಿಗೂ ಹೆಚ್ಚಿನ ಆದ್ಯತೆ ನೀಡಿ,” ಎಂದು ಸೂಚಿಸಿದ್ದಾರಂತೆ. ಈ ಸೂಚನೆಯನ್ನು ದೇವೇಗೌಡರು ಹಾಗೂ ಎಚ್.ಡಿ ಕುಮಾರಸ್ವಾಮಿ ಸ್ವೀಕರಿಸಿದ್ದಾರೆ ಎನ್ನಲಾಗಿದೆ.
Published by:Rajesh Duggumane
First published: