ಹಾಸನ: 2023ರ ವಿಧಾನಸಭಾ ಚುನಾವಣೆಯಲ್ಲಿ (Karnataka Elections 2023) ಹಾಸನ (Hassan) ಜಿಲ್ಲೆಯನ್ನು ಜೆಡಿಎಸ್ (JDS) ಭದ್ರಕೋಟೆ ಎಂದು ಸಾಬೀತುಪಡಿಸಲು ಮುಂದಾಗಿರುವ ದಳದ ವರಿಷ್ಠರು ಇಂದು ಅರಸೀಕೆರೆ (Arsikere ) ಕ್ಷೇತ್ರದಲ್ಲಿ ಭರ್ಜರಿಯಾಗಿ ಶಕ್ತಿಪ್ರದರ್ಶನ ಮಾಡಿದ್ದಾರೆ. ನಿರೀಕ್ಷೆಯಂತೆಯೇ ಹಾಲಿ ಶಾಸಕ ಶಿವಲಿಂಗೇಗೌಡ (MLA KM Shivalinge Gowda ) ಸಮಾವೇಶಕ್ಕೆ ಬರಲಿಲ್ಲ. ಆದರೂ ದಳಪತಿಗಳು ತೆರೆದ ವಾಹನದಲ್ಲಿ ಪಂಚರತ್ನ ಯಾತ್ರೆಯ (Pancharatna Yatra) ಬೃಹತ್ ಮೆರವಣಿಗೆ ನಡೆಸಿದ್ದರು. ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಎಡಬಲಕ್ಕೆ ನಿಂತು ಪ್ರಜ್ವಲ್ ರೇವಣ್ಣ ಹಾಗೂ ಸೂರಜ್ ರೇವಣ್ಣ ಸಾಥ್ ಕೊಟ್ಟಿದ್ದಾರೆ. ಅಲ್ಲದೆ ಹೆಚ್ಡಿ ರೇವಣ್ಣ (HD Revanna) ಕೂಡಾ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.
ಕುರುಬ ಸಮುದಾಯಕ್ಕೆ ಟಿಕೆಟ್ ಕೊಟ್ಟರೆ ಗೆಲ್ಲುತ್ತಾರೆ
ಯಾತ್ರೆಯ ವೇಳೆ ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಎಂದು ಸಂಸದ ಪ್ರಜ್ವಲ್ ರೇವಣ್ಣ ಘೋಷಣೆ ಕೂಗಿದ್ದರು. ಕ್ಷೇತ್ರಕ್ಕೆ ಆಗಮಿಸಿದ್ದ ಕುಮಾರಸ್ವಾಮಿಗೆ ಪಕ್ಷದ ಕಾರ್ಯಕರ್ತರು ಬೃಹತ್ ಗಾತ್ರದ ತೆಂಗಿನಗರಿ ಹಾರ ಹಾಕಿ ಸ್ವಾಗತಿಸಿದರು.
ಇದನ್ನೂ ಓದಿ: Relationship: ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದ ನಾಲ್ಕು ಜೋಡಿಗಳನ್ನು ಮತ್ತೆ ಒಂದು ಮಾಡಿದ ಲೋಕ ಅದಾಲತ್
ಇದೇ ಸಂದರ್ಭದಲ್ಲಿ ಮಾತಾಡಿದ ಕುಮಾರಸ್ವಾಮಿ, ಇಲ್ಲಿ ಕುರುಬ ಸಮುದಾಯಕ್ಕೆ ಟಿಕೆಟ್ ಕೊಟ್ಟರೆ ಗೆಲ್ಲುತ್ತಾರೆ ಎಂದು ಕೋಡಿ ಶ್ರೀಗಳು ಭವಿಷ್ಯ ನುಡಿದಿದ್ದಾರಂತೆ. ಅದನ್ನು ನಮ್ಮ ಶಾಸ್ತ್ರಿ ರೇವಣ್ಣ ನಂಗೆ ಈಗ ಹೇಳಿದ್ದಾರೆ. ಹಾಗೆ ನೋಡುವುದಾದರೆ ಅಶೋಕ್‌ಗೆ ಲಕ್ ಹೊಡೆಯುವಂತೆ ಕಾಣುತ್ತಿದೆ ಎನ್ನುವ ಮೂಲಕ, ಕುರುಬ ಸಮುದಾಯದ ಅಶೋಕ್‌ಗೆ ಜೆಡಿಎಸ್ ಟಿಕೆಟ್ ನೀಡುವುದಾಗಿ ಕುಮಾರಸ್ವಾಮಿ ಸುಳಿವು ಕೊಟ್ಟಿದ್ದಾರೆ.
ಕೇವಲ 14 ಮತಗಳ ಅಂತರದಲ್ಲಿ ಸೋತಿರುವ ಇತಿಹಾಸವಿದೆ. ಹಾಗೆ ಸೋತವರನ್ನು ರೇವಣ್ಣ ಅವರು ತಮ್ಮ ಸಂಪೂರ್ಣ ಶಕ್ತಿಯನ್ನು ಧಾರೆ ಎರೆದಿದ್ದಾರೆ. ಅವರು ಕಾಂಟ್ರ್ಯಾಕ್ಟ್ ಮಾಡಿ ಹಣವನ್ನು ಮಾಡಿಕೊಂಡು ಚುನಾವಣೆ ಮಾಡಿದ್ದಾರೆ. ರಾಮನಗರದಲ್ಲಿ ಬಂದು ಕಾಂಟ್ರಾಕ್ಟ್ ಮಾಡಿಕೊಂಡು ದುಡ್ಡು ಮಾಡಿಕೊಂಡಾಗ ನಾನು ಚಕಾರ ಎತ್ತಲಿಲ್ಲ. ಅವರು ಚುನಾವಣೆಯಲ್ಲಿ ಗೆಲ್ಲಲು ಕಾಲು ಹಿಡಿಯುತ್ತಾರೆ. ಅವರು ಒಂದೊಂದು ಚುನಾವಣೆಯಲ್ಲಿಯೂ ಏನು ಮಾಡಿದ್ದಾರೆ ಎಂಬುದು ಗೊತ್ತಿದೆ. ನಿನ್ನೆಯೂ ರೇವಣ್ಣ ಕಾಲ ಮಿಂಚಿಲ್ಲ ಎಂದು ಹೇಳಿದ್ದಾಗಿ ಮಾಧ್ಯಮಗಳಲ್ಲಿ ವರದಿ ಆಗಿದೆ. ಇದು ರೇವಣ್ಣನವರ ದೊಡ್ಡತನ ಎಂದು ತಿಳಿಸಿದರು.
ಎಲ್ಲಾ ಜಾತಿಯವರ ವಿಶ್ವಾಸ ಉಳಿಸಿಕೊಳ್ಳಬೇಕು ಎಂದು ಹೋಗಿದ್ದಾಗಿ ಅವರು ಹೇಳಿದ್ದಾರೆ. ವಿಶ್ವಾಸ ಉಳಿಸಿಕೊಳ್ಳಬೇಕು, ವಂಚನೆ ಮಾಡಬಾರದು. ನಾನು ಯಾವತ್ತೂ ಜಾತಿ ರಾಜಕಾರಣ ಮಾಡಿಲ್ಲ. ಕಳೆದ ಮೂರು ವರ್ಷಗಳಿಂದ ಆ ವ್ಯಕ್ತಿ ನಮ್ಮ ಸಂಪರ್ಕದಲ್ಲಿ ಇಲ್ಲ. ಈ ಕ್ಷೇತ್ರದ ಅಭಿವೃದ್ಧಿಗೆ ನಾನು ಸಿಎಂ ಆಗಿದ್ದಾಗ ಎಲ್ಲವನ್ನು ಮಾಡಿದ್ದೇನೆ. ಇವತ್ತು ಈ ವ್ಯಕ್ತಿ ಜೆಡಿಎಸ್ ನಿಂದ ಗೆದ್ದು ಹೀಗೆ ಮಾಡಿದ್ದಾರೆ. ಕಳೆದ ವಿಧಾನ ಪರಿಷತ್ ಚುನಾವಣೆ ಸಂದರ್ಭದಲ್ಲಿ ಈ ವ್ಯಕ್ತಿ ಏನು ಹೇಳಿದ್ದಾರೆ. ಏನು ದೇವೇಗೌಡರು, ಕುಮಾರಸ್ವಾಮಿ ನೋಡಿದ ತಕ್ಷಣ ವೋಟ್ ಮೇಲೆ ಒತ್ತುತ್ತಾರಾ ಎಂದಿದ್ದರು. ನಾವು ಶಕ್ತಿಯನ್ನು ಕೊಟ್ಟಿದ್ದೀವಿ ಅಷ್ಟೇ. ಇವತ್ತು ಆ ವ್ಯಕ್ತಿ ಸಿದ್ದರಾಮಯ್ಯರನ್ನು ಹೊಗಳುತ್ತಿದ್ದಾರೆ.
ನಾಳೆ 2023ರ ನಂತರ ಸಿದ್ದರಾಮಯ್ಯ ಡೌನ್ ಪಾಲ್ ಶುರುವಾಗಲಿ. ಆ ಬಳಿಕ ನೋಡಿ ಈ ವ್ಯಕ್ತಿ ಏನೂ ಹೇಳುತ್ತಾರೆ ಅಂತ. ಹೇ ಯಾವ ಸಿದ್ದರಾಮಯ್ಯ ಅಂತಾರೆ. ಇವತ್ತು ಈ ವ್ಯಕ್ತಿ ನಮ್ಮ ಪಾರ್ಟಿ ಸೇರ್ತಾರೆ ಅಂತಾ ಸಿದ್ದರಾಮಯ್ಯ ಹೇಳಿದ್ದಾರೆ. ಇದೆಲ್ಲವೂ ನಮಗೆ ಮೂರು ವರ್ಷಗಳಿಂದಲೇ ಗೊತ್ತಾಗಿದೆ ಎಂದು ಶಾಸಕ ಶಿವಲಿಂಗೇಗೌಡ ಹೆಸರು ಹೇಳದೆ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ನಾನು ಈ ಬಾರಿ ಅಧಿಕಾರಕ್ಕೆ ಬಂದರೆ ಕೊಬ್ಬರಿಗೆ ಬೆಂಬಲ ಬೆಲೆ ಘೋಷಣೆ ಮಾಡುತ್ತೇನೆ. ಕ್ವಿಂಟಾಲ್ ಗೆ 15 ಸಾವಿರ ರೂಪಾಯಿ ಘೋಷಣೆ ಮಾಡದಿದ್ದರೆ ಮತ್ತೆ ಯಾವತ್ತೂ ನಿಮಗೆ ಮುಖ ತೋರಿಸುವುದಿಲ್ಲ. ಟಿಪ್ಪು ಸಂಸ್ಕೃತಿಯ ಜೆಡಿಎಸ್, ಕಾಂಗ್ರೆಸ್ ಬೇಕೋ ಅಥವಾ ರಾಣಿ ಅಬ್ಬಕ್ಕನ ಸಂಸ್ಕೃತಿಯ ಬಿಜೆಪಿ ಬೇಕೋ ಎಂದು ನಿನ್ನೆ ಅಮಿತ್ ಶಾ ಮಂಗಳೂರಿನಲ್ಲಿ ಕೇಳಿದ್ದಾರೆ. ಆದರೆ ನನಗೆ ಇಬ್ಬರೂ ಬೇಕು. ಶೃಂಗೇರಿಯಲ್ಲಿ ಶಾರದಾಂಬೆ ಮಠವನ್ನು ಪೇಶ್ವೆಗಳಿಂದ ರಕ್ಷಣೆ ಮಾಡಿದ್ದು ಟಿಪ್ಪು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾತಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಶಿವಲಿಂಗು ನಾವ್ಯಾರೂ ಜೈಲಲ್ಲೂ ಇಲ್ಲ, ಬೇಲ್ನಲ್ಲೂ ಇಲ್ಲ. ಇಲ್ಲಿ ಕುಳಿತರವರ ಮೇಲೆ ಒಂದು ಕೇಸ್ ಇಲ್ಲ. ಕಾಂಗ್ರೆಸ್, ಬಿಜೆಪಿಯವರು ಬೇಲ್ ಮೇಲಿದ್ದಾರೆ. ನಿನ್ನ ಬಗ್ಗೆ ಅನುಕಂಪ ಇದೆ ಎಂದು ಕಾಂಗ್ರೆಸ್ ಸೇರಲು ಮುಂದಾಗಿರುವ ಅರಸಿಕೇರೆ ಹಾಲಿ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರಿಗೆ ಟಾಂಗ್ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ