HD Kumaraswamy: ಕಗ್ಗೊಲೆಗಳ ತನಿಖೆಗೆ ಸಮಾಧಿ ಕಟ್ಟಲು ಹೊರಟಿದ್ಯಾ ಸರ್ಕಾರ? ಎಚ್‌ಡಿ ಕುಮಾರಸ್ವಾಮಿ ಕಿಡಿಕಿಡಿ

"ಪ್ರವೀಣ್ ಹತ್ಯೆ ಪ್ರಕರಣವನ್ನು NIA ತನಿಖೆಗೆ ಒಪ್ಪಿಸಿ ವೀರಾವೇಶ ಮೆರೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾ ಅವರೇ, ಮಂಗಳೂರಿನಲ್ಲಿ ಜನರಿಗೆ ಕೊಟ್ಟ ಸಂದೇಶವೇನು? ಅವರ ನಾಲಿಗೆಯ ಮೇಲೆ ಒಮ್ಮೆಯಾದರೂ "ಶಾಂತಿ ಕಾಪಾಡಿ" ಎನ್ನುವ ಮಾತು ಬಂತಾ?" ಅಂತ ಎಚ್‌ಡಿಕೆ ಪ್ರಶ್ನಿಸಿದ್ದಾರೆ.

ಪ್ರವೀಣ್ ನೆಟ್ಟಾರು ಹತ್ಯೆ ವಿಚಾರದಲ್ಲಿ ಸರ್ಕಾರಕ್ಕೆ ಎಚ್‌ಡಿಕೆ ತರಾಟೆ

ಪ್ರವೀಣ್ ನೆಟ್ಟಾರು ಹತ್ಯೆ ವಿಚಾರದಲ್ಲಿ ಸರ್ಕಾರಕ್ಕೆ ಎಚ್‌ಡಿಕೆ ತರಾಟೆ

  • Share this:
ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ (State BJP Government) ವಿರುದ್ಧ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ (Ex CM HD Kumraswamy) ಅವರು ಕಿಡಿಕಾರಿದ್ದಾರೆ. “ನಾಡಿನ ಜನರನ್ನಷ್ಟೇ ಅಲ್ಲ, ತನ್ನ ಪಕ್ಷದ ಕಾರ್ಯಕರ್ತರನ್ನೇ (Party Workers) ರಕ್ಷಣೆ ಮಾಡಿಕೊಳ್ಳಲಾಗದ ಅಸಮರ್ಥ, ಅಸಹಾಯಕ ಸರ್ಕಾರz” ಅಂತ ಕಿಡಿಕಾರಿದ್ದಾರೆ. ಸರ್ಕಾರ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣವನ್ನು NIA ತನಿಖೆಗೆ ಒಪ್ಪಿಸಿದೆ. ಆದರೆ, ಕರಾವಳಿಯಲ್ಲಿ ನಡೆದ ಎಲ್ಲ ಹತ್ಯೆಗಳನ್ನೂ NIA ತನಿಖೆಗೆ ವಹಿಸಲು ಹಿಂಜರಿಯುತ್ತಿದೆ. ಇದು ಯಾಕೆ ಅಂತ ಎಚ್‌ಡಿಕೆ ಖಾರವಾಗಿ ಪ್ರಶ್ನಿಸಿದ್ದಾರೆ.

“ಕೊಲೆಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇರುತ್ತದೆ”

ಕರಾವಳಿ ಭಾಗದಲ್ಲಿ ಪ್ರತಿ ಕೊಲೆ ಬಗ್ಗೆಯೂ ಸರಕಾರಕ್ಕೆ ಮಾಹಿತಿ ಇದೆ. ಆ ಕೊಲೆಗಳು ಏಕಾಗುತ್ತಿವೆ ಎನ್ನುವುದೂ ಗೊತ್ತಿದೆ. ಆದರೆ, ʼಡಬಲ್ ಎಂಜಿನ್ ಸರಕಾರ ಡಬಲ್ ಗೇಮ್ʼ ಆಡುತ್ತಿದೆ. ಜಗತ್ತಿನ ಅತಿದೊಡ್ಡ ರಾಜಕೀಯ ಪಕ್ಷ ಎಂದು ಬೀಗುವ ಬಿಜೆಪಿ ಪಕ್ಷ, ತನಗೆ ಅಧಿಕಾರ ತಂದುಕೊಟ್ಟ ಯುವಕರ ಜೀವಗಳಿಗೇ ಗ್ಯಾರಂಟಿ ಕೊಡದಷ್ಟು ದುರ್ಬಲವಾಗಿದೆ ಅಂತ ಎಚ್‌ಡಿಕೆ ಕಿಡಿಕಾರಿದ್ದಾರೆ.



ಸಿಎಂ ವಿರುದ್ಧ ಎಚ್‌ಡಿಕೆ ಕಿಡಿ

ಪ್ರವೀಣ್ ಹತ್ಯೆ ಪ್ರಕರಣವನ್ನು NIA ತನಿಖೆಗೆ ಒಪ್ಪಿಸಿ ವೀರಾವೇಶ ಮೆರೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಮಂಗಳೂರಿನಲ್ಲಿ ಜನರಿಗೆ ಕೊಟ್ಟ ಸಂದೇಶವೇನು? ಅವರ ನಾಲಿಗೆಯ ಮೇಲೆ ಒಮ್ಮೆಯಾದರೂ "ಶಾಂತಿ ಕಾಪಾಡಿ" ಎನ್ನುವ ಮಾತು ಬಂತಾ? ಬರಲಿಲ್ಲ!! ನೆಮ್ಮದಿಗಾಗಿ ಕಿಂಚಿತ್ ಕ್ರಮ ವಹಿಸಿದಿರಾ? ಅದೂ ಇಲ್ಲ. ಹಿಂಸೆಗೆ ಇನ್ನಷ್ಟು ತುಪ್ಪಾ ಸುರಿದು ಬಂದರು ಅಂತ ಸಿಎಂ ವಿರುದ್ಧ ಕಿಡಿ ಕಾರಿದ್ದಾರೆ.

ಇದನ್ನೂ ಓದಿ: Siddaramaiah: ಧರ್ಮಕ್ಕಾಗಿ ಕೊಲೆ ಮಾಡಿದ್ದೇವೆ ಎಂದವರನ್ನು ಯಾವ ದೇವರೂ ಕ್ಷಮಿಸಲಾರ -ಬಹಿರಂಗ ಪತ್ರದಲ್ಲಿ ಸಿದ್ದರಾಮಯ್ಯ ಆಕ್ರೋಶ

“ಪೊಲೀಸ್ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ!”

NIA ತನಿಖೆಗೆ ವಹಿಸಿದ ಎಷ್ಟು ಪ್ರಕರಣಗಳಿಗೆ ತಾರ್ಕಿಕ ಅಂತ್ಯ ಸಿಕ್ಕಿದೆ? ಒಂದೂ ಇಲ್ಲ. NIAಗೆ ಒಪ್ಪಿಸಿದ ಮೇಲೆ ತನಿಖೆಯಲ್ಲಿ ಮುಂದೆ ಸಾಗುತ್ತಿದ್ದ ರಾಜ್ಯ ಪೊಲೀಸರಿಗೆ ಮುಖ್ಯಮಂತ್ರಿಗಳು ಕೊಟ್ಟ ಸಂದೇಶವೇನು? ಸ್ವತಃ ಗೃಹ ಸಚಿವರಾಗಿದ್ದ ಅವರು, ಸಿಎಂ ಆದ ಮೇಲೆ ತಮ್ಮ ಅಧೀನದ ಪೊಲೀಸ್ ವ್ಯವಸ್ಥೆಯನ್ನೇ ನಂಬುತ್ತಿಲ್ಲ!! ಇದಲ್ಲವೇ ವಿಪರ್ಯಾಸ ಅಂತ ಹರಿಹಾಯ್ದಿದ್ದಾರೆ.

“ಕಗ್ಗೊಲೆಗಳ ತನಿಖೆಗೆ ಸಮಾಧಿ”

ರಾಜ್ಯದಲ್ಲಿ ದಕ್ಷ ಪೊಲೀಸ್ ಅಧಿಕಾರಿಗಳು ಇಲ್ಲವೆ? ನಿಷ್ಠಾವಂತ, ಪ್ರಾಮಾಣಿಕ ಅಧಿಕಾರಿಗಳಿಗೆ ಮುಕ್ತ ಸ್ವಾತಂತ್ರ್ಯ ಕೊಟ್ಟರೆ ಕರಾವಳಿ ಹಿಂಸಾಕಾಂಡವನ್ನು ಮೂಲೋತ್ಪಾಟನೆ ಮಾಡಬಲ್ಲರು. ಬಿಜೆಪಿ ಸರಕಾರಕ್ಕೆ ಅದು ಬೇಕಿಲ್ಲ. ಸಮರ್ಥ ಅಧಿಕಾರಿಗಳನ್ನು ನಂಬದೆ NIAಗೆ ವಹಿಸುವ ನಾಟಕವಾಡಿ ಕಗ್ಗೊಲೆಗಳ ತನಿಖೆಗೆ ʼಸಮಾಧಿʼ ಕಟ್ಟಲು ಹೊರಟಿದೆ.

“ಶಾಂತಿ ರಕ್ಷಣೆ ಬಗ್ಗೆ ಮಾತನಾಡಿಲ್ಲ”

ಎರಡು ಕೊಲೆಗಳು ನಡೆದ ಬೆಳ್ಳಾರೆ ಗ್ರಾಮದಲ್ಲಾದರೂ ಬಿಎಸ್ ಬೊಮ್ಮಾಯಿ ಅವರು ಮುಖ್ಯಮಂತ್ರಿ ಹೊಣೆಯ ಘನತೆಗೆ ತಕ್ಕಂತೆ ಶಾಂತಿ ರಕ್ಷಣೆ ಬಗ್ಗೆ ಒಂದು ಮಾತನ್ನಾದರೂ ಹೇಳಿದಿರಾ? ಇಲ್ಲ, ಚುನಾವಣೆ ವರ್ಷವಲ್ಲ.. ಕೊಲೆಗಳೇ ಹೆಚ್ಚೆಚ್ಚು ಆಗಬೇಕು, ಅವರ ಮತಪೆಟ್ಟಿಗೆ ಕೊಬ್ಬಬೇಕು. ನೆತ್ತರಧಾರೆ ಹರಿದಷ್ಟೂ ಭರ್ಜರಿ ಮತಧಾರೆ ಅಂತ ವ್ಯಂಗ್ಯವಾಡಿದ್ದಾರೆ.

“ತಾಯಂದಿರಿಗೆ ನಿಮ್ಮ ಉತ್ತರವೇನು?”

ಬೆಳ್ಳಾರೆ ಬೇಗೆ ಇಡೀ ಕರಾವಳಿಯನ್ನು ವ್ಯಾಪಿಸಿದೆ. ಆದರೆ, ಜೀವ ಭಯದಲ್ಲಿರುವ ಎರಡು ಕೋಮುಗಳ ಜನರು ನೆಮ್ಮದಿಯಿಂದ ಬದುಕಲು ಏನು ಮಾಡಿದ್ದೀರಿ ಬೊಮ್ಮಾಯಿ ಅವರೇ? ಅವರ ಜೀವಕ್ಕೆ ಏನು ಖಾತರಿ ಕೊಟ್ಟಿದ್ದೀರಿ? ಪ್ರತಿ ಕೊಲೆ ಆದಾಗಲೂ ಈ ಕೊಲೆಪಾತಕ ರಾಜಕಾರಣ ನಮ್ಮ ಕುಟುಂಬಕ್ಕೇ ಕೊನೆಯಾಗಲಿ ಎನ್ನುವ ತಾಯಂದಿರ ಆರ್ತನಾದಕ್ಕೆ ನಿಮ್ಮ ಉತ್ತರವೇನು? ಅಂತ ಎಚ್‌ಡಿಕೆ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Kolara: ಕಾಂಗ್ರೆಸ್ ಕಿತ್ತಾಟ, ವಿಡಿಯೋ ಶೂಟ್ ಮಾಡಿದ ಪತ್ರಕರ್ತನ ಮೇಲೆ ಮಾಜಿ ಸ್ಪೀಕರ್ ಹಲ್ಲೆ

ರಮೇಶ್ ಕುಮಾರ್ ವಿರುದ್ಧ ಆಕ್ರೋಶ

ಮಾಜಿ ಸ್ವೀಕರ್ ರಮೇಶ್ ಕುಮಾರ್ ಅವರು ಪತ್ರಕರ್ತರ ಮೇಲೆ ಹಲ್ಲೆ ಮಾಡಿರುವುದಕ್ಕೆ ಎಚ್‌ಡಿಕೆ ಖಂಡನೆ ವ್ಯಕ್ತಪಡಿಸಿದ್ದಾರೆ. ಇದನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ಸಂವಿಧಾನದ 4ನೇ ಅಂಗ ಮಾಧ್ಯಮ ಎನ್ನುವುದು ಸ್ವಯಂ ಘೋಷಿತ ಸಂವಿಧಾನ ಪಂಡಿತರಿಗೆ ಗೊತ್ತಿಲ್ಲದಿರುವುದು ವಿಪರ್ಯಾಸ ಅಂತ ವ್ಯಂಗ್ಯವಾಡಿದ್ದಾರೆ.
Published by:Annappa Achari
First published: