HD Kumaraswamy: ಜೆಡಿಎಸ್ ವಿಲೀನದ ಮಾತೇ ಇಲ್ಲ, ನನ್ನ ನಿಜವಾದ ರಾಜಕಾರಣ ಶುರುವಾಗೋದೇ 2023ಕ್ಕೆ!; ಹೆಚ್​ಡಿ ಕುಮಾರಸ್ವಾಮಿ ಸವಾಲು

HD Kumaraswamy: ನನ್ನ ನಿಜವಾದ ರಾಜಕಾರಣ ಶುರುವಾಗುವುದು 2023ಕ್ಕೆ. 2023ಕ್ಕೆ ಸ್ವತಂತ್ರವಾಗಿ ಜೆಡಿಎಸ್​ ಪಕ್ಷವನ್ನು ಅಧಿಕಾರಕ್ಕೆ ತರುವುದು ನನ್ನ ಗುರಿ. ಸಿದ್ದರಾಮಯ್ಯನವರೇ ನನ್ನ ಭಜನೆ ಮಾಡಿದಷ್ಟು ನನ್ನ ಶಕ್ತಿ ಹೆಚ್ಚಾಗುತ್ತದೆ. ನೀವು ನನ್ನ ಋಣದಲ್ಲಿದ್ದೀರಿ ಎಂದು ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಸಿಎಂಗಳಾದ 
ಎಚ್.ಡಿ. ಕುಮಾರಸ್ವಾಮಿ-ಸಿದ್ದರಾಮಯ್ಯ.

ಮಾಜಿ ಸಿಎಂಗಳಾದ ಎಚ್.ಡಿ. ಕುಮಾರಸ್ವಾಮಿ-ಸಿದ್ದರಾಮಯ್ಯ.

  • Share this:
ಬೆಂಗಳೂರು (ಡಿ. 21): ನಾವು ಬದುಕಿರುವವರೆಗೂ ಜೆಡಿಎಸ್​ ಪಕ್ಷವನ್ನು ಯಾವ ಪಕ್ಷದ ಜೊತೆಗೂ ವಿಲೀನ ಮಾಡುವುದಿಲ್ಲ. ಜೆಡಿಎಸ್​ನಿಂದ ಕಾಂಗ್ರೆಸ್​ಗೆ ಹೋದ ಕೆಲವು ನಾಯಕರೇ ಜೆಡಿಎಸ್ ಪಕ್ಷವನ್ನು ಮುಗಿಸಲು ಪ್ರಯತ್ನಿಸುತ್ತಿದ್ದಾರೆ. ನಮ್ಮ ಪಕ್ಷದಿಂದ ಕಾಲು ಹೊರಗಿಟ್ಟವರು ಕೆಲವು ಹೇಳಿಕೆ ಕೊಡುತ್ತಾರೆ. ಅದಕ್ಕೆಲ್ಲ ಯಾರೂ ತಲೆ ಕೆಡಿಸಿಕೊಳ್ಳುವುದು ಬೇಡ. ನಾನು ಎಂದಿಗೂ ಸಿದ್ದರಾಮಯ್ಯನವರ ಋಣದಲ್ಲಿಲ್ಲ. ಆದರೆ, ಸಿದ್ದರಾಮಯ್ಯ ಈಗಲೂ ನನ್ನ ಋಣದಲ್ಲಿದ್ದಾರೆ ಎನ್ನುವ ಮೂಲಕ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ವಿಪಕ್ಷಗಳ ಟೀಕೆಗೆ, ವದಂತಿಗಳಿಗೆ ತಿರುಗೇಟು ನೀಡಿದ್ದಾರೆ.

2004ರಲ್ಲಿ ನಿಮ್ಮನ್ನು ಅಧಿಕಾರಕ್ಕೆ ತರಲು ನನ್ನ ದುಡಿಮೆ ಇದೆ ನನ್ನನ್ನು ಸಿಎಂ ಮಾಡುವಲ್ಲಿ ನಿಮ್ಮ ದುಡಿಮೆ ಇಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಈಗ ಈ ಸ್ಥಾನಕ್ಕೆ ಬರಲು ನನ್ನ ದುಡಿಮೆ ಇದೆ. 2004ರಲ್ಲಿ ನನ್ನ ಆರ್ಥಿಕ ಶಕ್ತಿಯನ್ನು ಬಳಸಿ ನಿಮ್ಮನ್ನು ಡಿಸಿಎಂ ಮಾಡಿದ್ದೇನೆ. ನಾನು ಸಿದ್ದರಾಮಯ್ಯ ಋಣದಲ್ಲಿ ಇಲ್ಲ, ಸಿದ್ದರಾಮಯ್ಯ ನನ್ನ ಋಣದಲ್ಲಿ ಇದ್ದಾರೆ ಎಂದು ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ನನ್ನ ನಿಜವಾದ ರಾಜಕಾರಣ ಶುರುವಾಗುವುದು 2023ಕ್ಕೆ. ಇದುವರೆಗಿನ ರಾಜಕಾರಣವನ್ನು ತಾತ್ಕಾಲಿಕವಾಗಿ ಮಾಡಿದ್ದು. 2023ಕ್ಕೆ ಸ್ವತಂತ್ರವಾಗಿ ಜೆಡಿಎಸ್​ ಪಕ್ಷವನ್ನು ಅಧಿಕಾರಕ್ಕೆ ತರುವುದು ನನ್ನ ಗುರಿ. ಕೊರೋನಾದ ಅನಾಹುತಗಳಿಂದ ಸಂಘಟನೆಗೆ ಹಿನ್ನಡೆ ಆಗಿದೆ. ಜನವರಿ 15ರ ನಂತರ ಹೊಸ ರೂಪದಲ್ಲಿ ಪಕ್ಷ ಸಂಘಟನೆಯಾಗಲಿದೆ. ಗ್ರಾಮದಿಂದ ಪಕ್ಷ ಸಂಘಟನೆ ಮಾಡಲು, ಹೊಸ ಕಾರ್ಯಕ್ರಮ ಮೂಲಕ ಪಕ್ಷ ಬಲಿಷ್ಠವಾಗಲಿದೆ. ಅಷ್ಟು ಸುಲಭವಾಗಿ ಈ ಕುಮಾರಸ್ವಾಮಿ ರಾಜಕೀಯದಿಂದ ಕಣ್ಮರೆ ಆಗೋದಿಲ್ಲ. ಅಷ್ಟು ಸುಲಭವಾಗಿ ನಾನು ಎಲ್ಲೂ ಬಿಟ್ಟು ಹೋಗಿಲ್ಲ. 2023ಕ್ಕೆ ರಾಜ್ಯದ ಜನರು ಹೊಸ ಬದಲಾವಣೆ ತರಲಿದ್ದಾರೆ. 2023ಕ್ಕೆ ನನ್ನ ರಾಜಕಾರಣದ ರಿಯಲ್ ಹೋರಾಟ ಏನೆಂದು ಗೊತ್ತಾಗುತ್ತದೆ ಎಂದು ಕುಮಾರಸ್ವಾಮಿ ಸವಾಲ್ ಹಾಕಿದ್ದಾರೆ.

ಸಿದ್ದರಾಮಯ್ಯನವರೇ ನನ್ನ ಭಜನೆ ಮಾಡಿದಷ್ಟು ನನ್ನ ಶಕ್ತಿ ಹೆಚ್ಚಾಗುತ್ತದೆ. ಅದಕ್ಕಾಗಿ ನೀವು ಮುಂಜಾಗ್ರತಾ ಕ್ರಮ ವಹಿಸಿ. ಅದು ಯಾವುದೋ ಭಾಗ್ಯಗಳನ್ನು ಕೊಟ್ಟಿದ್ದೇನೆ ಅಂತೀರಲ್ಲ. ನಿಮ್ಮ ಸುವರ್ಣ ದಿನಗಳನ್ನು ನೋಡಿಯೇ ಚುನಾವಣೆಯಲ್ಲಿ ನಿಮಗೆ ಜನರು 78 ಸ್ಥಾನ ಕೊಟ್ಟಿರೋದು. ಇನ್ನಾದರೂ ನನ್ನ ಬಗ್ಗೆ ಮಾತಾಡೋದು ಬಿಡಿ. ಪದೇ ಪದೇ ನನ್ನ ಬಗ್ಗೆ ಮಾತಾಡೋದು ಬಿಡಿ ಎಂದು ಸಿದ್ದರಾಮಯ್ಯನವರಿಗೆ ಹೆಚ್​ಡಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಜೆಡಿಎಸ್​ನಿಂದ ಕಾಂಗ್ರೆಸ್​ಗೆ ಹೋದ ಕೆಲವು ನಾಯಕರೇ ಜೆಡಿಎಸ್ ಪಕ್ಷವನ್ನು ಮುಗಿಸಲು ಪ್ರಯತ್ನಿಸುತ್ತಿದ್ದಾರೆ. ಡಿಎಂಕೆ,‌ ನಿತೀಶ್ ಕುಮಾರ್ ಮೊದಲಾದವರು ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡರ ಜೊತೆಗೂ ಹೋಗಿದ್ದಾರೆ. ಈ ದೇಶದಲ್ಲಿ ಯಾವ ಪಕ್ಷಕ್ಕೂ ಯಾವ ಸಿದ್ಧಾಂತವೂ ಇಲ್ಲ. ವಿರೋಧ ಪಕ್ಷ ಹೇಗೆ ಅಧಿಕಾರ ಹಿಡಿಯಬೇಕು ಎಂಬುದನ್ನು ನೋಡುತ್ತವೆ ಅಷ್ಟೆ. ಕಾಂಗ್ರೆಸ್​ನ ಕೆಲವು ನಾಯಕರಿಂದ ನಮಗೆ ಹಿನ್ನಡೆಯಾಗಿದೆ. ಉಪ ಚುನಾವಣೆ ಯಾವುದೇ ಮಾನದಂಡವಲ್ಲ. ನಮಗೆ 2023ರ ಚುನಾವಣೆ ಮುಖ್ಯವೇ ಹೊರತು ಉಪಚುನಾವಣೆಯಲ್ಲ. ಸಂಕ್ರಾಂತಿ ನಂತರ ಪಕ್ಷ ಸಂಘಟನೆ ಕಾರ್ಯವನ್ನು ಶುರು ಮಾಡುತ್ತೇವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ: Gold Rate Today: ಬೆಂಗಳೂರಿನಲ್ಲಿ 51 ಸಾವಿರ ದಾಟಿದ ಚಿನ್ನದ ಬೆಲೆ; ಬೇರೆ ನಗರಗಳಲ್ಲಿ ಇಂದಿನ ಚಿನ್ನದ ದರವೆಷ್ಟು?

ಇತ್ತೀಚಿನ ದಿನಗಳಲ್ಲಿ ರಾಜ್ಯ ರಾಜಕಾರಣದ ಊಹಾಪೋಹಗಳನ್ನು ಗಮನಿಸಿದ್ದೇನೆ. ನಾವು ಬದುಕಿರುವವರೆಗೂ ಜೆಡಿಎಸ್​ ಪಕ್ಷವನ್ನು ಯಾವ ಪಕ್ಷದ ಜೊತೆಗೂ ವಿಲೀನ ಮಾಡುವುದಿಲ್ಲ. ದೇವೇಗೌಡರ 60 ವರ್ಷದ ರಾಜಕಾರಣದಲ್ಲಿ ಕೇವಲ 4ರಿಂದ 5 ವರ್ಷ ಅವರು ಅಧಿಕಾರದಲ್ಲಿ ಇದ್ದರು. ಕಾಂಗ್ರೆಸ್ ನಿರಂತರವಾಗಿ ಜೆಡಿಎಸ್ ಕತ್ತು ಹಿಸುಕುವ ಪ್ರಯತ್ನಕ್ಕೆ ಮುಂದಾಗಿದೆ. ಆ ಕಾರಣಕ್ಕೆ ಅನಿವಾರ್ಯವಾಗಿ ಕೆಲವು ನಿರ್ಧಾರಗಳನ್ನು ಮಾಡಿದ್ದೇವೆ. ಯಾವ ಪಕ್ಷದ ಜೊತೆಗೂ ಜೆಡಿಎಸ್​ ವಿಲೀನದ ಪ್ರಸ್ತಾಪವಿಲ್ಲ ಎಂದಿದ್ದಾರೆ..

ತಾಜ್ ವೆಸ್ಟ್ ಎಂಡ್​ ಹೋಟೆಲ್​ನಲ್ಲಿ ಇದ್ದು ಆಡಳಿತ ಮಾಡಿದೆ ಅಂತ ಸಿದ್ದರಾಮಯ್ಯ ನನ್ನ ಬಗ್ಗೆ ಲಘುವಾಗಿ ಮಾತನಾಡುವುದು ಬೇಡ. ನಾನು ಬಿಜೆಪಿಯ ಬಿ ಟೀಮ್ ಆಗಿದ್ದರೆ ಕಾಂಗ್ರೆಸ್ ಜೊತೆ ಸರ್ಕಾರ ಮಾಡುತ್ತಿರಲಿಲ್ಲ. ಕಾಂಗ್ರೆಸ್​ನವರೇ ಸರ್ಕಾರ ಮಾಡಿ ಎಂದು ದೇವೇಗೌಡರು ಸಿದ್ದರಾಮಯ್ಯನವರ ಎದುರು ಹೇಳಿದ್ದರು. ಆಗ ಗುಲಾಂ ನಬಿ ಆಜಾದ್, ಡಿಕೆ ಶಿವಕುಮಾರ್ ಎಲ್ಲರೂ ಇದ್ದರು ಎಂದು ಕುಮಾರಸ್ವಾಮಿ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಇತ್ತೀಚಿನ ರಾಜಕೀಯ ಟೀಕೆಗಳು ಜೆಡಿಎಸ್ ಸುತ್ತಲೇ ಸುತ್ತುತ್ತಿವೆ. ಇತ್ತೀಚಿಗೆ ಮೈತ್ರಿ ಸರ್ಕಾರದ ಘಟನೆ ಗಳ ಬಗ್ಗೆ ಸಾರ್ವಜನಿಕ ಮುಂದೆ ಪ್ರಸ್ತಾಪ ಮಾಡಿದ್ದೇನೆ. ಈ ಗಿರಾಕಿ ಶಾಸಕರ ಕೈಗೆ ಸಿಗ್ತಿಲ್ಲ ಎಂದು ಸಿದ್ದರಾಮಯ್ಯ ಏಕವಚನದಲ್ಲಿ ಪದ ಬಳಕೆ ಮಾಡಿದ್ದಾರೆ. ಆದರೆ ಅದಕ್ಕಿಂತ ಹೆಚ್ಚಿನದಾಗಿ ನಾನು ಏಕವಚನದಲ್ಲೇ ಪದ ಬಳಕೆ ಮಾಡಬಲ್ಲೆ. ಸಿದ್ದರಾಮಯ್ಯನವರೇ ನಿಮ್ಮ ನಾಲಿಗೆ ಮೇಲೆ ಹಿಡಿತವಿರಲಿ. ನನ್ನ ಜನತಾದರ್ಶನ ಕಾರ್ಯಕ್ರಮವನ್ನು ಕಾಂಗ್ರೆಸ್ ನಾಯಕರು ಸಹಿಸಲೇ ಇಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಗ್ರಾಮ ಪಂಚಾಯಿತಿ ಚುನಾವಣೆ ಸಮಯ ಇದೆ. ಈ ಸಂದರ್ಭದಲ್ಲಿ ವಿಲೀನದ ಕತೆ ಯಾಕೆ ಹುಟ್ಟಿದೆ? ನಾವು ಬೇರೆ ಪಕ್ಷದೊಂದಿಗೆ ವಿಲೀನವಾಗೋ ಮಾತೇ ಇಲ್ಲ. ರಾಜ್ಯ ರಾಜಕಾರಣ ನಮ್ಮ ಸುತ್ತಲೇ ಸುತ್ತುವರಿಯುತ್ತದೆ. ಯಾವುದೇ ಕಾರಣಕ್ಕೂ ನಾನು ರಾಜಕೀಯದಿಂದ ದೂರವಾಗುವುದಿಲ್ಲ. ಸಿದ್ದರಾಮಯ್ಯ ಸ್ವತಂತ್ರ ದುಡಿಮೆ ಮೇಲೆ ಬಹುಮತ ಪಡೆದಿಲ್ಲ. ಯಡಿಯೂರಪ್ಪ ಕೆಜೆಪಿ ಮಾಡಿದ್ದಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ರಾಜ್ಯದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಏನು ಅಂತ ಗೊತ್ತು. ಅವರೀಗ ನಮ್ಮ ಶಾಸಕರ ಮನೆ ಬಾಗಿಲಿಗೆ ಹೋಗುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ30-40 ಸ್ಥಾನಗಳಿಗೆ ಬರುತ್ತಾರೆ ಎಂದು ಕುಮಾರಸ್ವಾಮಿ ಕಾಂಗ್ರೆಸ್​ಗೆ ಲೇವಡಿ ಮಾಡಿದ್ದಾರೆ.
Published by:Sushma Chakre
First published: