HOME » NEWS » State » HD KUMARASWAMY HITS BACK TO NARENDRA MODI BJP GOVERNMENT FOR NOT SUPPLYING OXYGEN TO KARNATAKA SCT

HD Kumaraswamy: ಕನ್ನಡಿಗರು ತಬ್ಬಲಿಗಳೇ?; ರಾಜ್ಯಕ್ಕೆ ಆಕ್ಸಿಜನ್ ನೀಡದ ಕೇಂದ್ರ ಸರ್ಕಾರದ ವಿರುದ್ಧ ಹೆಚ್​.ಡಿ ಕುಮಾರಸ್ವಾಮಿ ಆಕ್ರೋಶ

HD Kumaraswamy: ಕೇಂದ್ರ ಸರ್ಕಾರದ ತಪ್ಪನ್ನು ಸಮರ್ಥಿಸಿಕೊಳ್ಳುತ್ತಿರುವವರು ಮೊದಲು ತಾವು ಕನ್ನಡಿಗರು ಎಂಬುದನ್ನು ಮೊದಲು ಅರಿಯಬೇಕು ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡಿದ್ದಾರೆ.

news18-kannada
Updated:May 13, 2021, 10:12 AM IST
HD Kumaraswamy: ಕನ್ನಡಿಗರು ತಬ್ಬಲಿಗಳೇ?; ರಾಜ್ಯಕ್ಕೆ ಆಕ್ಸಿಜನ್ ನೀಡದ ಕೇಂದ್ರ ಸರ್ಕಾರದ ವಿರುದ್ಧ ಹೆಚ್​.ಡಿ ಕುಮಾರಸ್ವಾಮಿ ಆಕ್ರೋಶ
ಹೆಚ್.ಡಿ. ಕುಮಾರಸ್ವಾಮಿ.
  • Share this:
ಬೆಂಗಳೂರು (ಮೇ 13): ಕರ್ನಾಟಕದಲ್ಲಿ ಆಕ್ಸಿಜನ್ ಕೊರತೆ ಹೆಚ್ಚಾಗಿದ್ದರಿಂದ ಕೇಂದ್ರ ಸರ್ಕಾರದ ಮುಂದೆ ಹೆಚ್ಚುವರಿ ಆಕ್ಸಿಜನ್​ಗೆ ಬೇಡಿಕೆ ಇಡಲಾಗಿತ್ತು. ಕರ್ನಾಟಕಕ್ಕೆ 1200 ಮೆಟ್ರಿಕ್‌ ಟನ್‌(MT) ಆಮ್ಲಜನಕ ಪೂರೈಸಬೇಕು ಎಂಬ ಹೈಕೋರ್ಟ್​ ಆದೇಶವನ್ನು ಸುಪ್ರೀಂ ಕೋರ್ಟ್​ ಎತ್ತಿ ಹಿಡಿದಿತ್ತು. ಆದರೂ ಕರ್ನಾಟಕಕ್ಕೆ ಕೇವಲ 120 ಮೆಟ್ರಿಕ್ ಟನ್ ಆಕ್ಸಿಜನ್ ಅನ್ನು ಮಾತ್ರ ಪೂರೈಕೆ ಮಾಡಲಾಗಿದೆ. ಈ ಬಗ್ಗೆ ಸರಣಿ ಟ್ವೀಟ್ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.

ಕರ್ನಾಟಕಕ್ಕೆ 1200 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆ ಮಾಡಬೇಕೆಂದು ಕೋರ್ಟ್‌ ಆದೇಶ ನೀಡಿದೆ. ಆ ಆದೇಶದ ನಂತರವೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಪೂರೈಸಿದ್ದು 120 MT ಮಾತ್ರ. ನಮಗಿಂತ ಕಡಿಮೆ ಪ್ರಕರಣಗಳಿರುವ ಉತ್ತರ ಪ್ರದೇಶಕ್ಕೆ 1680 MT ಪೂರೈಕೆ ಮಾಡಲಾಗಿದೆ. ಕೇಂದ್ರ ಸರ್ಕಾರ ತಾರತಮ್ಯದಲ್ಲಿ ಪಾರಮ್ಯ ಮೆರೆದಿದೆ. ಈ ಒಕ್ಕೂಟದಲ್ಲಿ ಕನ್ನಡಿಗರೇನು ತಬ್ಬಲಿ ಮಕ್ಕಳೇ? ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.




ಕರ್ನಾಟಕದ ವಿಚಾರದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ. ಸರ್ಕಾರವೇ ನೀಡಿರುವ ಅಂಕಿ ಅಂಶಗಳಿಂದ ಇದು ಬಯಲಾಗಿದೆ. ಕರ್ನಾಟಕ, ಕನ್ನಡಿಗರ ವಿಚಾರದಲ್ಲಿ ಕೇಂದ್ರಕ್ಕೆ ಈ ಮಟ್ಟಿಗಿನ ತಾತ್ಸಾರ ಏಕೆ? ಇಲ್ಲಿ ಬಿಜೆಪಿಯದ್ದೇ ಸರ್ಕಾರ ಇರುವುದಕ್ಕೋ? ಅತಿ ಹೆಚ್ಚು ಸಂಸದರು ಆಯ್ಕೆಯಾಗಿರುವುದಕ್ಕೋ? ಅಥವಾ ಯಡಿಯೂರಪ್ಪರನ್ನು ಖಳನಾಯಕರಾಗಿಸಲೋ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.


ಹೇಳತೀರದ ತಾರತಮ್ಯ ಮಾಡುತ್ತಿರುವ ಕೇಂದ್ರ ಸರ್ಕಾರ ಒಂದು ವಿಷಯವನ್ನು ಸ್ಪಷ್ಟವಾಗಿ ಅರಿಯಬೇಕು. ಇದು ಒಕ್ಕೂಟ ವ್ಯವಸ್ಥೆ. ಒಕ್ಕೂಟ ಸರ್ಕಾರ ಎಲ್ಲ ರಾಜ್ಯಗಳಿಗೂ ಸಮಾನ ಆದ್ಯತೆ ನೀಡಬೇಕು. ಅನಿವಾರ್ಯತೆಯಲ್ಲಿರುವವರ ಅಗತ್ಯಗಳನ್ನು ಮೊದಲು ಪೂರೈಸಬೇಕು. ಅದನ್ನು ಬಿಟ್ಟು ತಾತ್ಸಾರ ಮಾಡಿದರೆ ಜನ ಧಂಗೆ ಎದ್ದಾರು ಎಂದು ಎಚ್ಚರಿಸಿದ್ದಾರೆ.



ಲಸಿಕೆ ವಿಚಾರದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯವರೇ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. 3ಕೋಟಿ ಲಸಿಕೆಗೆ ಕೇಳಿದ್ದೇವೆ. 7 ಲಕ್ಷ ಡೋಸ್‌ ಸಿಕ್ಕಿದೆ. ಎರಡನೇ ಡೋಸ್‌ ಪಡೆಯುವವರಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ. ಮೊದಲ ಡೋಸ್‌ ಪಡೆಯುವವರು ಕಾಯಬೇಕು ಎಂದಿದ್ದಾರೆ. ಲಸಿಕೆಯ ವಿಚಾರದಲ್ಲಿಯೂ ಕೇಂದ್ರ ತಾರತಮ್ಯ ಮಾಡುತ್ತಿದೆ. ಬಿಜೆಪಿಯ ಪ್ರತಿಯೊಂದು ಧೋರಣೆಯನ್ನೂ ಬೆಂಬಲಿಸುವವರು, ಸಮರ್ಥಿಸಿಕೊಳ್ಳುತ್ತಿರುವವರು ವಿರೋಧ ಪಕ್ಷಗಳ ನ್ಯಾಯಯುತ ಸಲಹೆ, ಬೇಡಿಕೆಗಳನ್ನು ಅಡಿಗಡಿಗೂ ಟೀಕಿಸುವವರು ಕನ್ನಡಿಗರಿಗೆ ಆಗುತ್ತಿರುವ ಈ ಅನ್ಯಾಯವನ್ನು ಸಮರ್ಥಿಸಿಕೊಳ್ಳುವರೇ? ಆಮ್ಲಜನಕವಿಲ್ಲದೇ ಪ್ರಾಣ ಕಳೆದುಕೊಳ್ಳುತ್ತಿರುವ ಕನ್ನಡಿಗರ ಸಾವಿನ ಹೊಣೆಯನ್ನು ಹೊರುವರೇ? ಎಂದು ಹೆಚ್​ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.



ನ್ಯಾಯಾಲಯ ಹೇಳಿದ್ದ 1200MT ಬದಲಿಗೆ 120MT ಆಮ್ಲಜನಕ ಪೂರೈಕೆ ಮಾಡಲಾಗಿದೆ. ಸಿಎಂ, ಕೇಂದ್ರ ಸಚಿವರು, ಬಿಜೆಪಿ ಸಂಸದರು ನರೇಂದ್ರ ಮೋದಿಗೆ ಅಭಿನಂದಿಸಿದ್ದಾರೆ. ನಮಗೆ ಸಿಗಬೇಕಾಗಿದ್ದರಲ್ಲಿ ಮುರಿದುಕೊಂಡು ಕೊಟ್ಟದ್ದಕ್ಕೆ ಧನ್ಯವಾದ ಏಕೆ? ಬಿಜೆಪಿ ನಾಯಕರು, ಬಿಜೆಪಿ ಬೆಂಬಲಿಗರು ಈ ಗುಲಾಮಗಿರಿ ಬಿಡಬೇಕು. ಕೇಂದ್ರ ಸರ್ಕಾರ ತಾರತಮ್ಯ ಬಿಟ್ಟು ಕರ್ನಾಟಕದ ಅಗತ್ಯವನ್ನು ಪೂರೈಸಬೇಕು. ತಾನು ಸರ್ವಶಕ್ತ ಆಡಳಿತ ನಡೆಸುತ್ತಿರುವ ಧಿಮಾಕನ್ನು ಕೇಂದ್ರ ಬಿಡಬೇಕು. ಒಕ್ಕೂಟ ಸರ್ಕಾರ ನಡೆಸುತ್ತಿರುವ ವಾಸ್ತವ ಅರಿಯಬೇಕು ಎಂದು ಟ್ವೀಟಿಸಿದ್ದಾರೆ.



ಕೇಂದ್ರ ಸರ್ಕಾರದ ತಪ್ಪನ್ನು ಇಲ್ಲಿ ಸಮರ್ಥಿಸಿಕೊಳ್ಳುತ್ತಿರುವವರು ಮೊದಲು ತಾವು ಕನ್ನಡಿಗರು ಎಂಬುದನ್ನು ಮೊದಲು ಅರಿಯಬೇಕು. ಆಮ್ಲಜನಕ ಕರ್ನಾಟಕದ ಈ ಹೊತ್ತಿನ ಅಗತ್ಯ. ನಾವು ಪ್ರಶ್ನೆ ಮಾಡದೇ ಹೋದರೆ ಹೇಗೆ? ಇನ್ನು ಯಾವ ವಿಚಾರದಲ್ಲಿ ನಾವು ನ್ಯಾಯ ಪಡೆಯಲು ಸಾಧ್ಯ? ಪರಿಹಾರ, ಅನುದಾನಗಳಲ್ಲಿ ಕರ್ನಾಟಕಕ್ಕೆ ಈಗ ಆಗಿರುವ ಅನ್ಯಾಯ ಸಹಿಸಿದ್ದಾಗಿದೆ. ಜೀವದ ವಿಚಾರದಲ್ಲಿ ನಡೆಯುತ್ತಿರುವ ಈ ತಾರತಮ್ಯ ಸಹಿಸುವುದು ಬೇಡ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡಿದ್ದಾರೆ.
Published by: Sushma Chakre
First published: May 13, 2021, 10:12 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories