HD Kumaraswamy: ರಾಜ್ಯಕ್ಕೆ ಬಂದ ಲೋಕಸಭೆ ಸ್ಪೀಕರ್​ಗೆ ಅಗೌರವ ಸಲ್ಲ: ಜಂಟಿ ಕಲಾಪಕ್ಕೆ ಜೆಡಿಎಸ್ ಹಾಜರಿ ಬಗ್ಗೆ ಕಾರಣ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

ಭಾರತದ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ 'ಪ್ರಜಾಪ್ರಭುತ್ವ ಮತ್ತು ಸಂಸದೀಯ ಮೌಲ್ಯಗಳ ರಕ್ಷಣೆಯ ಕುರಿತಾಗಿ ಇದೇ ಪ್ರಥಮ ಬಾರಿಗೆ ಕರ್ನಾಟಕ ವಿಧಾನಮಂಡಲ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಮಾತನಾಡಿದರು.

ಹೆಚ್​.ಡಿ. ಕುಮಾರಸ್ವಾಮಿ.

ಹೆಚ್​.ಡಿ. ಕುಮಾರಸ್ವಾಮಿ.

  • Share this:
    ಬೆಂಗಳೂರು: ಲೋಕಸಭೆ ಸ್ಪೀಕರ್ (Lok Sabha Speaker OM Birla) ಹಾಗೂ ಅವರು ಅಲಂಕರಿಸಿರುವ ಪೀಠಕ್ಕೆ ಅಗೌರವ ತೋರಬಾರದು ಎನ್ನುವ ಒಂದೇ ಕಾರಣಕ್ಕೆ ಇಂದು ನಡೆದ ವಿಧಾನಮಂಡಲ ಜಂಟಿ ಅಧಿವೇಶನ ಕಲಾಪದಲ್ಲಿ ಜೆಡಿಎಸ್ ಪಕ್ಷದ ಶಾಸಕರು ಪಾಲ್ಗೊಂಡಿದ್ದರು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳೂ ಆದ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಹೇಳಿದರು.

    ಕಲಾಪದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಕುಮಾರಸ್ವಾಮಿ ಅವರು, “ರಾಜ್ಯದ ಸಂಸದೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು ಲೋಕಸಭೆಯ ಸಭಾಧ್ಯಕ್ಷರನ್ನು ಆಹ್ವಾನಿಸಿ ಜಂಟಿ ಅಧಿವೇಶವನ್ನು ಆಯೋಜಿಸಿದ್ದರು. ಇಂಥ ಅಪರೂಪದ ಸಂದರ್ಭದಲ್ಲಿ ಗೈರು ಹಾಜರಾಗುವುದು ಎಂದರೆ ಲೋಕಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರಿದಂತೆ. ಹೀಗೆ ಆಗುವುದು ಬೇಡ ಹಾಗೂ ಸಂಸದೀಯ, ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿ ಹಿಡಿಯುವ ಏಕೈಕ ಉದ್ದೇಶದಿಂದ ಕಲಾಪದಲ್ಲಿ ನಮ್ಮ ಪಕ್ಷ ಭಾಗವಹಿಸಿತು” ಎಂದರು.

    ಸಂಸದೀಯ ವ್ಯವಸ್ಥೆಯಲ್ಲಿ ಈ ರೀತಿಯಲ್ಲಿ ಲೋಕಸಭೆಯ ಅಧ್ಯಕ್ಷರು ವಿಧಾನ ಮಂಡಲ ಜಂಟಿ ಕಲಾಪವನ್ನು ಉದ್ದೇಶಿಸಿ ಮಾತನಾಡಲು ಅವಕಾಶ ಇಲ್ಲ ಎನ್ನುವ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ಈ ಬಗ್ಗೆ ಸಾಂವಿಧಾನಿಕ ತಜ್ಞರೇ ಉತ್ತರ ನೀಡಲಿ ಎಂದರು. ಇನ್ನು, ಕಾಂಗ್ರೆಸ್ ಪಕ್ಷದ ಸದಸ್ಯರು ಜಂಟಿ ಕಲಾಪವನ್ನು ಬಹಿಷ್ಕರಿಸಿದ್ದರಲ್ಲಾ ಎಂಬ ಪ್ರಶ್ನೆಗೆ, ಅದು ಆ ಪಕ್ಷಕ್ಕೆ ಬಿಟ್ಟ ವಿಚಾರ. ನಮ್ಮ ಪಕ್ಷದ ನಿಲುವನ್ನು ನಾವು ತೆಗೆದುಕೊಂಡಿದ್ದೇವೆ ಎಂದು ಉತ್ತರಿಸಿದರು.

    ಸದನದ ಕಲಾಪದ ಬಗ್ಗೆ ಹೊರಗೆ ಮಾತನಾಡುವುದು ಸರಿಯಲ್ಲ. ಕಲಾಪ ಹೇಗೆ ನಡೆಯುತ್ತಿದೆ ಎಂಬುದು ರಾಜ್ಯದ ಜನತೆಗೆ ಚೆನ್ನಾಗಿ ಗೊತ್ತಾಗುತ್ತಿದೆ. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಆದರೆ, ಕಲಾಪದ ಬಗ್ಗೆ ಬಹಿರಂಗವಾಗಿ ಮಾತನಾಡಿ ಸದನಕ್ಕೆ ಅಗೌರವ ತೋರುವ ಅಥವಾ ಸದನ ಪಾವಿತ್ರ್ಯತೆಗೆ ಧಕ್ಕೆ ತರಬಾರದು ಎನ್ನುವುದು ನನ್ನ ನಿಲುವು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    ಭಾರತದ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ 'ಪ್ರಜಾಪ್ರಭುತ್ವ ಮತ್ತು ಸಂಸದೀಯ ಮೌಲ್ಯಗಳ ರಕ್ಷಣೆಯ ಕುರಿತಾಗಿ ಇದೇ ಪ್ರಥಮ ಬಾರಿಗೆ ಕರ್ನಾಟಕ ವಿಧಾನಮಂಡಲ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಮಾತನಾಡಿದರು.

    ಇದನ್ನು ಓದಿ: Speaker Om Birla: ಜಂಟಿ ಸದನ ಉದ್ದೇಶಿಸಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮಾತು; ಹಿಂದಿ ಭಾಷಣಕ್ಕೆ ಜೆಡಿಎಸ್ ಶಾಸಕ ಅನ್ನದಾನಿ ವಿರೋಧ!

    ಸಂವಿಧಾನವನ್ನು ರೂಪಿಸುವಾಗ, ನಮ್ಮ ಶಾಸಕರು ನಮ್ಮ ಜನರ ಸಾಮಾಜಿಕ-ಆರ್ಥಿಕ ಪ್ರಗತಿಯನ್ನು ಖಚಿತಪಡಿಸಿಕೊಳ್ಳಲು ನಮ್ಮ ಶಾಸಕಾಂಗವು ಹೆಚ್ಚು ಅರಿವು, ಶ್ರದ್ಧೆ, ಪ್ರಾಮಾಣಿಕತ ಮತ್ತು ಜವಾಬ್ದಾರಿಯುತವಾಗಿರಬೇಕು ಎಂಬ ಚಿಂತನೆಯೊಂದಿಗೆ ಇದರ ನಿರ್ಮಾತೃಗಳು ಕೆಲಸ ಮಾಡಿದರು. ಶಾಸಕಾಂಗವು ಹೆಚ್ಚು ಅರಿವು, ಶ್ರದ್ಧೆ, ಪ್ರಾಮಾಣಿಕತೆ ಜವಾಬ್ದಾರಿಯುತವಾಗಿರಬೇಕು. ಶಾಸಕರು ಶಾಸಕಾಂಗ ರೂಪಿಸುವ ಕಾನೂನುಗಳ ಬಗ್ಗೆ ಚರ್ಚೆ, ಚಿಂತನ ಮಂಥನ ನಡೆಸಬೇಕು. ಶಾಸಕಾಂಗಗಳು ರೂಪಿಸುವಲ್ಲಿ ಕಾನೂನು ಪರಿಣಾಮಕಾರಿ, ಸಮರ್ಥ ಇರಬೇಕು. ಆದರೆ ಸದನಗಳಲ್ಲಿ ಅಗತ್ಯ ಪ್ರಮಾಣದ ಚರ್ಚೆ, ಶಾಸಕರ ಭಾಗವಹಿಸುವಿಕೆ ನಡೆಯುತ್ತಿಲ್ಲ. ಇದು ಕಳವಳಕಾರಿ ಸಂಗತಿ. ಸದಸ್ಯರು ಉತ್ತಮ ನಡವಳಿಕೆ, ಸಭ್ಯತೆ, ಪ್ರಬುದ್ಧತೆ, ಔದಾರ್ಯ ಹೊಂದಿರಬೇಕು. ಪ್ರತಿಭಟನೆ ಸದನದ ಘನತೆಗೆ ಅನುಗುಣವಾಗಿ ಇರಬೇಕು. ಸಂಸತ್ತಿನ ನಿಯಮಗಳಿಗನುಸಾರ ಪ್ರತಿಭಟನೆಗಳಿರಬೇಕು ಎಂದು ಸ್ಪೀಕರ್ ಓಂ ಬಿರ್ಲಾ ಅವರು ಹೇಳಿದ್ದರು.

    ಓಂ ಬಿರ್ಲಾ ಹಿಂದಿ ಭಾಷಣಣಕ್ಕೆ ಜೆಡಿಎಸ್ ಶಾಸಕ ಅನ್ನದಾನಿ ವಿರೋಧ

    ಜಂಟಿ ಸದನ ಉದ್ದೇಶಿಸಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಹಿಂದಿಯಲ್ಲಿ ಭಾಷಣ ಆರಂಭಿಸಿದರು. ಆಗ ಹಿಂದಿ‌ ಭಾಷಣಕ್ಕೆ ಜೆಡಿಎಸ್ ಶಾಸಕ‌ ಅನ್ನದಾನಿ ಅವರು ವಿರೋಧ ವ್ಯಕ್ತಪಡಿಸಿದರು. ಕನ್ನಡ ಬಾವುಟ ಪ್ರದರ್ಶಿಸಿ, ಕನ್ನಡದಲ್ಲಿ ಭಾಷಣ ಮಾಡುವಂತೆ ಎದ್ದು ನಿಂತು ಕೂಗಿದರು. ಬಾವುಟ ಪ್ರದರ್ಶಿಸಿ, ಕರ್ನಾಟಕಕ್ಕೆ ಜೈ ಎಂದು ಘೋಷಣೆ ಕೂಗಿದರು.
    Published by:HR Ramesh
    First published: