ದಾವಣಗೆರೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಇಂದು 2023-24ನೇ ಸಾಲಿನ ಬಜೆಟ್ (India Budget 2023) ಮಂಡನೆ ಮಾಡಿದ್ದಾರೆ. ಕೇಂದ್ರ ಬಜೆಟ್ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರು, ಕೇಂದ್ರಕ್ಕೆ ಈಗ ಜ್ಞಾನೋದಯವಾಗಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಬಜೆಟ್ನಲ್ಲಿ ಹಣವಿಟ್ಟಿದೆ. ಆದರೆ ಚುನಾವಣೆ (Karnataka Election 2023) ಇದೆ ಅಂತ ರಾಜ್ಯಕ್ಕೆ ಅನೇಕ ಯೋಜನೆ ಘೋಷಣೆ ಮಾಡಿದ್ದಾರೆ. ಆದರೆ ಇದ್ಯಾವುದು ತಕ್ಷಣ ಕಾರ್ಯರೂಪಕ್ಕೆ ಬರೋಲ್ಲ ಎಂದು ಹೇಳಿದ್ದಾರೆ. ಆ ಮೂಲಕ ಜನರನ್ನ ಮರಳು ಮಾಡೋಕೆ ಈಗ ರಾಜ್ಯಕ್ಕೆ ಹಲವು ಯೋಜನೆ ಘೋಷಣೆ ಮಾಡಿದ್ದಾರೆ ಟೀಕಿಸಿದ್ದಾರೆ.
ಘೋಷಿತ ಯೋಜನೆಗಳು ಕಾರ್ಯರೂಪಕ್ಕೆ ಬರೋದಿಲ್ಲ
ದಾವಣೆಗೆರೆಯಲ್ಲಿ ಪಂಚರತ್ನ ಯಾತ್ರೆ ಕೈಗೊಂಡಿರುವ ಕುಮಾರಸ್ವಾಮಿ ಅವರು ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಕೇಂದ್ರ ಸರ್ಕಾರಕ್ಕೆ ಇವಾಗ ಜ್ಞಾನೋದಯ ಆಗಿದೆ. ಬರ ಪೀಡಿತ ಅಂತ ಹಣ ಇಟ್ಟಿರೋದಕ್ಕೆ ಕೇಂದ್ರ ಸರ್ಕಾರಕ್ಕೆ ಅಭಿನಂಧನೆ ಸಲ್ಲಿಸುತ್ತೇನೆ. ಚುನಾವಣೆ ಇದೆ ಅಂತ ರಾಜ್ಯಕ್ಕೆ ಅನೇಕ ಯೋಜನೆ ಘೋಷಣೆ ಮಾಡಿದ್ದಾರೆ. ಆದರೆ ಇದ್ಯಾವುದು ತಕ್ಷಣ ಕಾರ್ಯರೂಪಕ್ಕೆ ಬರುವುದಿಲ್ಲ.
ಜನರನ್ನ ಮರಳು ಮಾಡೋಕೆ ಈಗ ರಾಜ್ಯಕ್ಕೆ ಹಲವು ಯೋಜನೆ ಘೋಷಣೆ ಮಾಡಿದ್ದಾರೆ. ಮಹದಾಯಿ, ಭದ್ರಾ, ಕೃಷ್ಣ ಯೋಜನೆ ಘೋಷಣೆ ಮಾಡಿದ್ದಾರೆ. ಇದು ಮುಂದಿನ ಚುನಾವಣೆಗೆ ಜಾರಿಗೆ ಬರುತ್ತೆ. ನೆರೆ ಹಾವಳಿಯಾದಾಗ 5 ಲಕ್ಷ ರೂಪಾಯಿ, ಕೋವಿಡ್ನಲ್ಲಿ 1 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದರು. ಆದರೆ ಯಾರಿಗಾದರೂ ನೀಡಿದ್ದಾರಾ ಎಂದು ಪ್ರಶ್ನೆ ಮಾಡಿದರು.
ಜನರು ಬಿಜೆಪಿ ಸರ್ಕಾರವನ್ನು ತಿರಸ್ಕಾರ ಮಾಡಲು ನಿರ್ಧರಿಸಿದ್ದಾರೆ
ಅಲ್ಲದೆ, ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂಪಾಯಿ ಘೋಷಣೆ ಮಾಡಿರುವುದು ಕೇಂದ್ರ ಸರ್ಕಾರದಿಂದ ರಾಜ್ಯದ ಜನರಿಗೆ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ಕರ್ನಾಟಕ ಚುನಾವಣೆಯಿಂದ ರಾಜ್ಯಕ್ಕೆ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಈ ಯೋಜನೆಗಳು ಕಾಗದದಲ್ಲಿ ಮಾತ್ರ ಇರಲಿದೆ. ರಾಜ್ಯದಲ್ಲಿ ಚುನಾವಣೆ ಕೆಲವೇ ವರ್ಷ ಬಾಕಿ ಇದೆ. ಈಗಿನ ತೀರ್ಮಾನಗಳು ಜಾರಿ ಆಗುವುದು ಜೂನ್ ಬಳಿಕ, ಈಗ ಘೋಷಣೆ ಮಾಡಿರುವ ಯೋಜನೆಗಳು ಕಾರ್ಯರೂಪಕ್ಕೆ ಬರುವುದು ರಾಜ್ಯ ಜನರು ಚುನಾವಣೆಯಲ್ಲಿ ಯಾವ ರೀತಿ ತೀರ್ಮಾನ ಮಾಡ್ತಾರೆ ಅನ್ನೋದರ ಮೇಲೆ ತೀರ್ಮಾನ ಮಾಡ್ತಾರೆ.
ಚುನಾವಣೆ ಘೋಷಣೆ ಆದಮೇಲೆ ಕಾರ್ಯಕ್ರಮ ಜಾರಿಗೆ ತರಲು ಆಗೋದಿಲ್ಲ. ಎಲ್ಲರೂ ಚುನಾವಣೆಯಲ್ಲಿ ಬ್ಯುಸಿಯಾಗಿರುತ್ತಾರೆ. ಕಳೆದ 8 ವರ್ಷಗಳಿಂದ ಅಧಿಕಾರದಲ್ಲಿ ಇದ್ದು ಆಗ ಘೋಷಣೆ ಮಾಡದ ಯೋಜನೆಗಳು ಚುನಾವಣೆಗಾಗಿ ಈಗ ಘೋಷಣೆ ಮಾಡಿದ್ದಾರೆ. ಆದ್ದರಿಂದ ಇದಕ್ಕೆ ನಾನು ಹೆಚ್ಚು ಮಹತ್ವ ಕೊಡೋದಿಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವನ್ನು ತಿರಸ್ಕಾರ ಮಾಡ್ಬೇಕು ಅಂತ ಜನರು ತೀರ್ಮಾನ ಮಾಡಿದ್ದಾರೆ ಎಂದು ಹೇಳಿದರು.
ರೈತರನ್ನು ಎಲ್ಲೆಲ್ಲಿ ಕೊಲೆ ಮಾಡಬೇಕು ಅಲ್ಲಿ ಮಾಡೋದು ಕೇಂದ್ರದ ಯೋಜನೆ
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಹೆಚ್ಡಿ ರೇವಣ್ಣ, ಕೇಂದ್ರ ಸರ್ಕಾರದ ನಿರಾಶಾದಾಯಕ ಬಜೆಟ್ ನೀಡಿದೆ. ಜಿಲ್ಲಾ ಬ್ಯಾಂಕ್ ನಲ್ಲಿ ಜನರಿಗೆ ಸಾಲ ಸೌಲಭ್ಯ ಕಠಿಣಗೊಳಿಸಲಾಗಿದೆ. ರೈತರನ್ನು ಎಲ್ಲೆಲ್ಲಿ ಕೊಲೆ ಮಾಡಬೇಕು ಅಲ್ಲಿ ಮಾಡೋದು ಕೇಂದ್ರದ ಯೋಜನೆ. ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿತ್ತು, ಚುನಾವಣೆ ಕಾರಣದಿಂದ ಕೆಲ ಯೋಜನೆ ಕೊಡ್ತಾರೆ ಅದು ಜಾರಿಯಾಗಲ್ಲ. ಯಾವುದೇ ಯೋಜನೆ ಜಾರಿಯೇ ಆಗಲ್ಲ ಎಂದು ಲೇವಡಿ ಮಾಡಿದ್ದಾರೆ.
ಜನರ ಭರವಸೆ ಈಡೇರಿಕೆ ಬಗ್ಗೆ ನಾ ಮುಂದು ತಾ ಮುಂದು ರಾಷ್ಟ್ರೀಯ ಪಕ್ಷಗಳು ಹೊಡೆದಾಡಿಕೊಳ್ತಿವೆ. ಕೃಷಿ ಮತ್ತು ರೈತರಿಗೆ ಈ ಬಜೆಟ್ ನಿಂದ ಯಾವುದೇ ಅಂಶಗಳಿಲ್ಲ. ದೇವೇಗೌಡರ ಕಾಲದಲ್ಲಿ ಕೃಷಿ ಸಲಕರಣೆಗೆ ಹೆಚ್ಚಿನ ಸಬ್ಸಿಡಿ ಇತ್ತು, ಈಗ ಇದೆಲ್ಲಾ ಎಲ್ಲಿದೆ ಎಂದು ಟೀಕಿಸಿದರು.
ಚುನಾವಣಾ ರಾಜಕೀಯದ ಬಜೆಟ್ ಅಷ್ಟೇ
ಹಾಸನದಲ್ಲಿ ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣ, ಕೇಂದ್ರ ಸರ್ಕಾರದ್ದು ಚುನಾವಣಾ ಬಜೆಟ್. ಚುನಾವಣೆ ಸಂದರ್ಭದಲ್ಲಿ ಯಾವ ರೀತಿ ಮಾಡಬೇಕು ಎಂದು ಮೊದಲೇ ಪ್ಲಾನ್ ಮಾಡಿ ಮಾಡಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ಜಾರಿಯಾಗುತ್ತೆ ಎನ್ನೋದು ಮುಖ್ಯ. ಕೇವಲ ದೊಡ್ಡ ದೊಡ್ಡ ನಂಬರ್ ಹೇಳುತ್ತಾರೆ. ಆದರೆ ಜನರಿಗಾಗಲಿ ರಾಜ್ಯಕ್ಕೆ ಆಗಲಿ ಅನುಕೂಲ ಆಗಿಲ್ಲ. ಇದು ಚುನಾವಣಾ ರಾಜಕೀಯದ ಬಜೆಟ್ ಅಷ್ಟೇ.
ಇದನ್ನೂ ಓದಿ: Budget 2023: 2047ರ ವೇಳೆಗೆ ರಕ್ತಹೀನತೆಯನ್ನು ತೊಡೆದುಹಾಕಲು ಮಿಷನ್; ಬಜೆಟ್ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಿಕ್ಕಿದ್ದೇನು?
ಕೇಂದ್ರ ಇನ್ನೂ ನಮ್ಮ ಜಿಎಸ್ಟಿ ಎಷ್ಟು ಕೊಡಬೇಕಿತ್ತು ಎಷ್ಟು ಕೊಟ್ಟಿದಾರೆ. ಗುಜರಾತ್ಗೆ ಎಷ್ಟು ಕೊಟ್ಟಿದಾರೆ ,ಬೇರೆ ಬೇರೆ ರಾಜ್ಯಕ್ಕೆ ಎಷ್ಟು ಕೊಟ್ಟಿದಾರೆ. ಈ ಪಟ್ಟಿ ತೆಗೆದು ನೋಡಿದರೆ ನಮ್ಮ ರಾಜ್ಯಕ್ಕೆ ಆಗಿರುವುದು ಅನ್ಯಾಯ ಗೊತ್ತಾಗುತ್ತದೆ. ಕೇಂದ್ರ ಸರ್ಕಾರ ನಮ್ಮ ರಾಜ್ಯವನ್ನು ನಿರ್ಲಕ್ಷ್ಯ ಮಾಡಿ, ಕಡೆಗಣಿಸಿದೆ. ಕೇಂದ್ರದ ಯಾವುದೇ ಬಜೆಟ್ ಯಾವಾಗಲು ಕೂಡ ರೈತರ ಪರವಾಗಿ ಬಂದಿಲ್ಲ. ಇವರ ನಾಲ್ಕು ವರ್ಷದ ಬಜೆಟ್ ನೋಡಿ ಇದು ಕೇವಲ ನಂಬರ್ ಬಜೆಟ್. ಯಾವುದೇ ಯೋಜನೆಗಳು ಜಾರಿ ಆಗಿಲ್ಲ. ಹಾಗಾಗಿ ಇವರ ಮೇಲೆ ಜನರಿಗೆ ನಂಬಿಕೆ ಹೋಗಿದೆ. ಮುಂದಿನ ದಿನಗಳಲ್ಲಿ ಖಂಡಿತಾ ಜನರು ಬಿಜೆಪಿಯನ್ನು ತೆಗೆಯುವ ಕೆಲಸ ಮಾಡುತ್ತಾರೆ ಎಂದು ಟೀಕಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ