ಮಂಗಳೂರು ಬಾಂಬ್ ಪತ್ತೆ, ಸ್ಪೋಟ ಒಂದು ಅಣಕು ಪ್ರದರ್ಶನ; ಇದು RSS​ ಸರ್ಕಾರವಲ್ಲ ಜನರ ಸರ್ಕಾರ; ಎಚ್ಡಿಕೆ

ನಿನ್ನೆ ನಿರ್ಜನ ಪ್ರದೇಶದಲ್ಲಿ ಬಾಂಬ್ ಸ್ಪೋಟ ನಿಷ್ಕ್ರಿಯಗೊಳಿಸಿದ ಪ್ರಕ್ರಿಯೆ ಗಮನಿಸಿದರೆ, ಗಣರಾಜ್ಯೋತ್ಸವ ಸಂದರ್ಭದಲ್ಲಿ ನಡೆಯುವ ಅಣಕು ಪ್ರದರ್ಶನ ರೀತಿ ಇತ್ತು ಎಂಬುದು ನನ್ನ ಭಾವನೆ.

news18-kannada
Updated:January 21, 2020, 5:22 PM IST
ಮಂಗಳೂರು ಬಾಂಬ್ ಪತ್ತೆ, ಸ್ಪೋಟ ಒಂದು ಅಣಕು ಪ್ರದರ್ಶನ; ಇದು RSS​ ಸರ್ಕಾರವಲ್ಲ ಜನರ ಸರ್ಕಾರ; ಎಚ್ಡಿಕೆ
ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ
  • Share this:
ಮಂಗಳೂರು(ಜ. 21): ರಾಜ್ಯದಲ್ಲಿ ತಲ್ಲಣ ಸೃಷ್ಟಿಸಿದ್ದ ಮಂಗಳೂರು ಬಾಂಬ್​ ಪತ್ತೆ ಪ್ರಕರಣ ಅಣಕು ಪ್ರದರ್ಶನದಂತೆ ಇದೆ. ಇದು ಉದ್ದೇಶಪೂರ್ವಕವಾಗಿ ಜನರಲ್ಲಿ ಭಯಮೂಡಿಸಲು ಯಾವುದೋ ಸಂಘಟನೆ ಮಾಡಿದ ಸಂಚಿನಂತೆ ಇದೆ ಎಂಬ ಸಂಶಯವನ್ನು ಮಾಜಿ ಸಿಎಂ ಕುಮಾರಸ್ವಾಮಿ ವ್ಯಕ್ತಪಡಿಸಿದ್ದಾರೆ. 

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ನಿರ್ಜನ ಪ್ರದೇಶದಲ್ಲಿ ಬಾಂಬ್ ಸ್ಪೋಟ ನಿಷ್ಕ್ರಿಯಗೊಳಿಸಿದ ಪ್ರಕ್ರಿಯೆ ಗಮನಿಸಿದರೆ, ಗಣರಾಜ್ಯೋತ್ಸವ ಸಂದರ್ಭದಲ್ಲಿ ನಡೆಯುವ ಅಣಕು ಪ್ರದರ್ಶನ ರೀತಿ ಇತ್ತು ಎಂಬುದು ನನ್ನ ಭಾವನೆ. ಮಾಧ್ಯಮಗಳ ವರದಿ ಪ್ರಕಾರ, ಕಬ್ಬಿಣದ ಬಾಕ್ಸ್​ನಲ್ಲಿ ಪಟಾಕಿ ತಯಾರು ಮಾಡಲು ಬಳಸುವ ಬಿಳಿ ಪೌಡರು ಇಟ್ಟಿದ್ದರು ಎಂದಿದ್ದಾರೆ. ಇದನ್ನು ನಿಷ್ಕ್ರಿಯಗೊಳಿಸಲು ಬೆಳಗ್ಗೆಯಿಂದ ಸಂಜೆಯವರೆಗೂ ಹರಸಾಹಸ ನಡೆಸಿದರು.  ಅಲ್ಲದೇ ಇದಕ್ಕೆ  ಸರಿಯಾದ ವ್ಯವಸ್ಥೆ ಇರಲಿಲ್ಲ. ಈ ರೀತಿ ಬಾಂಬ್ ನಿಷ್ಕ್ರಿಯ ಮಾಡಿದ್ದು, ಇದೇ ಮೊದಲು. ಅದರಲ್ಲಿ ಮುಖಕ್ಕೆ ಹಾಕಿಕೊಳ್ಳೋ ಪೌಡರ್ ಇತ್ತೋ ಏನೋ ತಿಳಿಯದು. ಬಾಂಬ್ ನಿಷ್ಕ್ರಿಯಗೊಳಿಸಲು ಪೊಲೀಸರು ಸಾಕಷ್ಟು ಶ್ರಮ ವಹಿಸಿದ್ದಾರೆ. ಅವರಿಗೆ ಮುಂದಿನ ದಿನಗಳಲ್ಲಿ ಬಹುಮಾನ ನೀಡಬೇಕಾಗುತ್ತದೆ ಎಂದು ಇದೇ ವೇಳೆ ಲೇವಡಿ ಮಾಡಿದರು.

ಬಾಂಬ್​ ಮೂಲಕ ರಾಜ್ಯದ ಜನರಲ್ಲಿ  ಸುಖಾ ಸುಮ್ಮನೆ  ಆತಂಕದ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ. ಈ ರೀತಿ ಭಯದ  ಸೃಷ್ಟಿಸಬೇಡಿ ಎಂದು ಈಗಾಗಲೇ  ಸರ್ಕಾರಕ್ಕೂ ಕೂಡ ತಿಳಿಸಿದ್ದೇನೆ. ಸಮುದಾಯ, ಧರ್ಮದ ಮಧ್ಯೆ ಸಾಮರಸ್ಯ ಹಾಳುಮಾಡಬೇಡಿ. ತಪ್ಪಿತಸ್ಥರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ. ಯಾರನ್ನೋ ಮೆಚ್ಚಿಸಲು ನೀವು ಕೆಲಸ ಮಾಡಬೇಡಿ. ಇದು ಆರ್​ಎಸ್​ಎಸ್​​ ಕಂಪನಿಯ ಸರ್ಕಾರವಲ್ಲ. ಅಧಿಕಾರಿಗಳು ಮುಲಾಜಿಲ್ಲದೆ ಕೆಲಸ ಮಾಡಿ, ತಪ್ಪಿತಸ್ಥರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಜನರನ್ನ ದಾರಿ ತಪ್ಪಿಸುವ ಪ್ರಹಸನವಾಗಬಾರದು ಎಂದರು.

ನಿನ್ನೆಯ ಪ್ರಹಸನದ ಬಗ್ಗೆ ಜನರ ಮುಂದೆ ಸತ್ಯ ತಿಳಿಸಬೇಕು. ಉದ್ದೇಶಪೂರ್ವಕವಾಗಿಯೇ ಈ ಕೃತ್ಯ ನಡೆಸಿರುವ ಅನುಮಾನವಿದೆ. ಕರಾವಳಿಯಲ್ಲಿ ಪದೇ ಪದೇ ಶಾಂತಿ ಕದಡುವ ವಾತಾವರಣ ನಿರ್ಮಾಣ ಮಾಡುವ ಮೂಲಕ ಜನರಲ್ಲಿ ಭಯ ಭೀತರನ್ನಾಗಿ ಮಾಡಲಾಗುತ್ತಿದೆ. ಇದರ ಹಿಂದೆ ಯಾವುದೇ ಸಂಘಟನೆ ಹುನ್ನಾರ ನಡೆಸಿರುವ ಸಾಧ್ಯತೆ ಇದೆ.  ಇದರಿಂದ ಕರಾವಳಿ ಆರ್ಥಿಕತೆ ಮೇಲೆ ಕೂಡ ಕುಂಠಿತ ಪರಿಣಾಮ ಬೀರಲಿದೆ. ಈ ಪ್ರಯತ್ನವನ್ನು ನಿಲ್ಲಿಸಿ ಎಂದು ಮನವಿ ಮಾಡಿದರು.

ಇದನ್ನು ಓದಿ: ಮುನಿಸು ಮರೆತು ಪಕ್ಷದ ಕೆಲಸ ಮಾಡುವಂತೆ ಕಾರ್ಯಕರ್ತರಿಗೆ ದೇವೇಗೌಡ ಮನವಿ; ಜ. 23ಕ್ಕೆ ಜೆಡಿಎಸ್​ ಸಮಾವೇಶ

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಈ ರೀತಿ ಅಶಾಂತಿ ವಾತಾವರಣ ನಿರ್ಮಾಣವಾಗುತ್ತಿದೆ. ನಾನು 14 ತಿಂಗಳು ಸಿಎಂ ಆಗಿದ್ದಾಗ ಈ ರೀತಿ ಪ್ರಕರಣ ಕಂಡಿಲ್ಲ. ಅದರಲ್ಲಿಯೂ ನಿನ್ನೆ ಬೆಳವಣಿಗೆ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದ್ದು, ಇದರ ವಾಸ್ತವತೆಯನ್ನು ಜನರ ಮುಂದೆ ಇಡಬೇಕು ಎಂದು ಸರ್ಕಾರದ ಮೇಲೆ ಶಂಕೆ ವ್ಯಕ್ತಪಡಿಸಿದರು.
 
First published:January 21, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ