ಮೈತ್ರಿ ಸರ್ಕಾರ ಸೋತಿಲ್ಲ, ಮುಂದಿನ ನಾಲ್ಕು ವರ್ಷವೂ ಕುಮಾರಸ್ವಾಮಿಯೇ ಸಿಎಂ; ಪರಮೇಶ್ವರ್

ಜಂಟಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಸಿಎಂ ಕುಮಾರಸ್ವಾಮಿ ಅವರು ಹಾಜರಿದ್ದರು. ಆದರೆ, ಮಾಧ್ಯಮಗಳ ಯಾವುದೇ ಪ್ರಶ್ನೆಗೂ ಅವರು ಪ್ರತಿಕ್ರಿಯೆ ನೀಡಲಿಲ್ಲ.

ಸಚಿವ ಸಂಪುಟ ಸಭೆಯಲ್ಲಿ ಸಿಎಂ ಎಚ್​ಡಿಕೆ, ಜಿ.ಪರಮೇಶ್ವರ್ ಮತ್ತು ಸಚಿವರು.

ಸಚಿವ ಸಂಪುಟ ಸಭೆಯಲ್ಲಿ ಸಿಎಂ ಎಚ್​ಡಿಕೆ, ಜಿ.ಪರಮೇಶ್ವರ್ ಮತ್ತು ಸಚಿವರು.

  • News18
  • Last Updated :
  • Share this:
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಕೇಂದ್ರದ ಆಡಳಿತಕ್ಕೆ ಜನರು ಮನ್ನಣೆ ನೀಡಿದ್ದಾರೆ. ಆದರೆ, ರಾಜ್ಯದ ಆಡಳಿತಕ್ಕೆ ಕಳೆದ ವರ್ಷವೇ ಮನ್ನಣೆ ನೀಡಿಯಾಗಿದೆ. ಹೀಗಾಗಿ ಮೈತ್ರಿ ಸರ್ಕಾರ ಸುಭದ್ರವಾಗಿ ಆಡಳಿತ ನಡೆಸಲಿದೆ. ಮುಂದಿನ ನಾಲ್ಕು ವರ್ಷಗಳ ಕಾಲ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಲಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.

ಅನೌಪಚಾರಿಕ ಸಚಿವ ಸಂಪುಟದ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರ ವಿಶ್ಲೇಷಣೆ ಅದು ಅವರ ವೈಯಕ್ತಿಕ. ಅವರೇ ಏನಾದರೂ ಹೇಳಿಕೊಳ್ಳಲಿ. ಆದರೆ, ರಾಜ್ಯದಲ್ಲಿ ಮೈತ್ರಿ ಸರ್ಕಾರ ನಾಲ್ಕು ವರ್ಷ ಸುಭದ್ರವಾಗಿರಲಿದೆ. ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ. ಈ ಬಗ್ಗೆ ಇಂದು ಬೆಳಗ್ಗೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಇಂದಿನ ಸಭೆಯಲ್ಲಿ ಲೋಕಸಭಾ ಚುನಾವಣೆಯ ಒಟ್ಟಾರೆ ಫಲಿತಾಂಶ, ರಾಜ್ಯದ ಫಲಿತಾಂಶಗಳ ಕುರಿತು ಚರ್ಚೆ ಹಾಗೂ ವಿಶ್ಲೇಷಣೆ ನಡೆಸಲಾಯಿತು. ಲೋಕಸಭಾ ಚುನಾವಣೆ ಫಲಿತಾಂಶ ಕೇಂದ್ರ ಸರ್ಕಾರಕ್ಕೆ ನೀಡಿದ ಜನಾದೇಶವೇ ಹೊರತು ರಾಜ್ಯ ಸರ್ಕಾರಕ್ಕೆ ಅಲ್ಲ ಎಂದು ಸಚಿವ ಸಂಪುಟವು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದೆ ಎಂದು ತಿಳಿಸಿದರು.

ಇದನ್ನು ಓದಿ: ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಆಲೋಚನೆಯಿಂದ ಹಿಂದೆ ಸರಿದ ವಿಶ್ವನಾಥ್​​

ಫಲಿತಾಂಶದ ನಂತರ ಸರ್ಕಾರದ ಕುರಿತು ಹೇಳಿಕೆಗಳು ಬರುತ್ತಿರುವ ಹಿನ್ನೆಲೆಯಲ್ಲಿ, ಇಂದಿನ ಸಭೆಯಲ್ಲಿ ಎಲ್ಲ ಸಚಿವರು ಮುಖ್ಯಮಂತ್ರಿಗಳಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎಲ್ಲ ಶಾಸಕರೂ ನಮ್ಮ ಜೊತೆಗಿದ್ದಾರೆ ಎಂದು ಮುಖ್ಯಮಂತ್ರಿಗಳಿಗೆ ತಿಳಿಸಿದ್ದೇವೆ. ಇದಕ್ಕೆ ಸಮನ್ವಯ ಸಮಿತಿ ಅಧ್ಯಕ್ಷರೂ ಸಹ ಸಹಮತ ವ್ಯಕ್ತಪಡಿಸಿದ್ದಾರೆ. ಸರ್ಕಾರ ಬೀಳಿಸಲು ವಿಪಕ್ಷ ನಡೆಸುವ ಷಡ್ಯಂತ್ರಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಅವರು ತಿಳಿಸಿದರು.
ಮೈತ್ರಿ ಸರ್ಕಾರವು ಮುಂದಿನ ನಾಲ್ಕು ವರ್ಷಗಳಲ್ಲಿ ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನೀಡಲಿದೆ. ಜನತೆಗೆ ನಿರಾಶೆ ಮಾಡುವುದಿಲ್ಲ ಎಂದು ನುಡಿದರು.

ಜಂಟಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಸಿಎಂ ಕುಮಾರಸ್ವಾಮಿ ಅವರು ಹಾಜರಿದ್ದರು. ಆದರೆ, ಮಾಧ್ಯಮಗಳ ಯಾವುದೇ ಪ್ರಶ್ನೆಗೂ ಅವರು ಪ್ರತಿಕ್ರಿಯೆ ನೀಡಲಿಲ್ಲ.

First published: