ರಾಯಚೂರು: ಹಾಸನ ವಿಧಾನಸಭಾ ಕ್ಷೇತ್ರದ (Hassan constituency) ಅಭ್ಯರ್ಥಿ ತಾವೇ ಎಂದು ಘೋಷಿಸಿಕೊಂಡಿದ್ದ ಭವಾನಿ ರೇವಣ್ಣರವರ (Bhavani Revanna) ಕನಸಿಗೆ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ (HD Kumaraswamy) ತಣ್ಣೀರೆರಚಿದ್ದಾರೆ. ಹಾಸನ ವಿಧಾನಸಭಾ ಕ್ಷೇತ್ರದಿಂದ ಭವಾನಿ ರೇವಣ್ಣರಿಗೆ ಟಿಕೆಟ್ ನೀಡಲು ನಿರ್ಧರಿಸಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ರಾಯಚೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವ ವೇಳೆ ಈ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ ನಾನು ನಿನ್ನೆ ಏನು ಹೇಳಬೇಕೋ ಅದನ್ನು ಹೇಳಿಯಾಗಿದೆ, ಎನ್ನುವ ಮೂಲಕ ಭವಾನಿ ರೇವಣ್ಣಗೆ ಟಿಕೆಟ್ ನೀಡುವುದಿಲ್ಲ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.
ಹಾಸನದಲ್ಲಿ ಜೆಡಿಎಸ್ನಿಂದ (JDS) ಮಹಿಳಾ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂಬ ಒತ್ತಾಯವಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈಗಾಗಲೆ ನಾಲ್ವರು ಮಹಿಳೆಯರಿಗೆ ಟಿಕೆಟ್ ಘೋಷಣೆ ಮಾಡಿದ್ದೇವೆ. ಕ್ಷೇತ್ರದಲ್ಲಿ ಸ್ಪರ್ಧಿಸಲು ಸಮರ್ಥ ಅಭ್ಯರ್ಥಿ ಇದ್ದಾಗ ಕುಟುಂಬದವರನ್ನು ಸ್ಪರ್ಧೆಗೆ ಇಳಿಸುವುದಿಲ್ಲ. ಇದರ ಬಗ್ಗೆ ನಿನ್ನೆಯೇ ಸ್ಪಷ್ಟನೆ ನೀಡಿದ್ದೇನೆ. ಪದೇ ಪದೇ ಇದರ ಬಗ್ಗೆ ಸಮಜಾಯಿಷಿ ಕೊಡಬೇಕಿಲ್ಲ ಎಂದು ಹೇಳಿದರು.
ಅಭಿಮಾನದಿಂದ ಕೆಲವರು ಟಿಕೆಟ್ ನೀಡಬೇಕೆಂದು ಒತ್ತಾಯಿಸಬಹುದು. ಆದರೆ ಯಾರೋ ನಾಲ್ಕೈದು ಜನರು ಹೇಳಿಕ ತಕ್ಷಣ ಟಿಕೆಟ್ ನೀಡುವುದಕ್ಕೆ ಆಗುವುದಿಲ್ಲ. ಪ್ರೀತಿ ವಿಶ್ವಾಸದಿಂದ ಮಾತನಾಡಿದರೆ ಅದನ್ನು ಅಭಿಪ್ರಾಯ ಎನ್ನುವುದಕ್ಕೆ ಆಗುವುದಿಲ್ಲ. ಟಿಕೆಟ್ ನೀಡುವ ವಿಚಾರದಲ್ಲಿ ಪಕ್ಷದ ಚೌಕಟ್ಟಿನಲ್ಲಿ ಕುಳಿತು ತೀರ್ಮಾನ ಮಾಡಲಾಗುವುದು ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಅನಿತಾ ಕುಮಾರಸ್ವಾಮಿ ಸ್ಪರ್ಧೆ ಅನಿವಾರ್ಯವಾಗಿತ್ತು
ಈ ಹಿಂದೆ ಅನಿತಾ ಕುಮಾರಸ್ವಾಮಿ ಅವರನ್ನು ಮಧುಗಿರಿಯಲ್ಲಿ ಕಣಕ್ಕಿಳಿಸಲು ಕಾರಣವಿತ್ತು. ಏಕೆಂದರೆ ಅಲ್ಲಿ ವೀರಭದ್ರಯ್ಯ ಅವರನ್ನ ಅಭ್ಯರ್ಥಿ ಎಂದು ತೀರ್ಮಾನಿಸಲಾಗಿತ್ತು. ಆದರೆ ಅವರು ಸರ್ಕಾರಿ ಅಧಿಕಾರಿಯಾಗಿದ್ದರು. ಆ ಸಂದರ್ಭದಲ್ಲಿ ಅವರ ರಾಜೀನಾಮೆಯನ್ನು ಸರ್ಕಾರ ಸ್ವೀಕರಿಸಲಿಲ್ಲ. ಹಾಗಾಗಿ ಅಲ್ಲಿಗೆ ಸೂಕ್ತ ಅಭ್ಯರ್ಥಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಉಪ ಚುನಾವಣೆಯಲ್ಲಿ ಮೂರ್ನಾಲ್ಕು ಸ್ಥಾನ ಗೆಲ್ಲಬೇಕಾಗಿದ್ದರಿಂದ ಅನಿವಾರ್ಯ ಕಾರಣದಿಂದ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿದ್ದೆವು. ನಂತರದ ಚುನಾವಣೆಯಲ್ಲಿ ವೀರಭದ್ರಯ್ಯ ಅವರಿಗೆ ಸೀಟು ಬಿಟ್ಟು ಕೊಡಲಾಗಿತ್ತು ಎಂದರು.
ಅನಿವಾರ್ಯತೆ ಇದ್ದರೆ ನಾನೇ ಹೇಳುತ್ತಿದ್ದೆ
ಪ್ರತಿಯೊಬ್ಬರಿಗೂ ಚುನಾವಣೆಗೆ ನಿಲ್ಲಬೇಕು ಎನ್ನುವ ಆಕಾಂಕ್ಷೆ ಇರುವುದು ಸಹಜ. ಭವಾನಿ ರೇವಣ್ಣರಿಗೂ ಇದೆ ಇದರಲ್ಲಿ ತಪ್ಪೇನಿಲ್ಲ. ಆದರೆ ಹಾಸನ ಕ್ಷೇತ್ರಕ್ಕೆ ಅವರ ಅನಿವಾರ್ಯತೆ ಇಲ್ಲ. ಆ ಕ್ಷೇತ್ರದಲ್ಲಿ ಇದ್ದಿದ್ದರೆ ನಾನೇ ಸ್ಪರ್ಧೆ ಮಾಡುವಂತೆ ಹೇಳುತ್ತಿದ್ದೆ. ಆದರೆ ಅಲ್ಲಿ ಈಗಾಗಲೇ ಒಬ್ಬ ಸಮರ್ಥ ಅಭ್ಯರ್ಥಿ ಇದ್ದಾರೆ. ಯಾವುದಾದರೂ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಇಲ್ಲದಿದ್ದಾಗ ನಮ್ಮ ಕುಟುಂಬ ತಲೆ ಕೊಟ್ಟಿದೆ. ಹಾಸನದಲ್ಲಿ ಆ ಪ್ರಶ್ನೆ ಇಲ್ಲ. ಕುಟುಂಬದಲ್ಲಿ ಸಂಘರ್ಷವಿಲ್ಲದೆ ಗೊಂದಲ ಬಗೆಹರಿಸುತ್ತೇನೆ ಎಂದು ಎಚ್‌ಡಿಕೆ ತಿಳಿಸಿದರು.
ಪ್ರಜ್ವಲ್ ರೇವಣ್ಣ ಹೇಳಿಕೆಗೆ ಬೆಂಬಲ
ಭವಾನಿ ರೇವಣ್ಣರಿಗೆ ಟಿಕೆಟ್ ನೀಡುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿರುವುದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿದ್ದ, ಹಾಸನ ಸಂಸದ ಪ್ರಜ್ವಲ್ ರೇವಣ್ಣ, ತಮ್ಮ ತಾಯಿಗೆ ಟಿಕೆಟ್ ನೀಡಬೇಕೋ ಅಥವಾ ಬೇಡವೋ ಎಂಬುದನ್ನು ರೇವಣ್ಣ ಅಥವಾ ಕುಮಾರಸ್ವಾಮಿ ನಿರ್ಧಾರ ಮಾಡಲು ಸಾಧ್ಯವಿಲ್ಲ, ದೇವೇಗೌಡರು ನಿರ್ಧಾರ ಮಾಡುತ್ತಾರೆ ಎಂದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, " ಪ್ರಜ್ವಲ್ ಹೇಳಿಕೆಯಲ್ಲಿ ತಪ್ಪೇನಿಲ್ಲ. ಬಿ.ಫಾರ್ಮ್ ಕೊಡುವುದು ದೇವೇಗೌಡರೆ. ಬಿ.ಫಾರ್ಮ್ಗೆ ಸಹಿ ಮಾಡುವುದು ಅವರೇ. ಆದರೆ ಯಾರು ಯಾವ ಕ್ಷೇತ್ರದಲ್ಲಿ ನಿಲ್ಲಬೇಕೆಂಬುದನ್ನು ಪಕ್ಷದ ಸಂಸದೀಯ ಮಂಡಳಿ ತೀರ್ಮಾನಿಸಲಿದೆ" ಎಂದು ಪ್ರಜ್ವಲ್ಗೆ ಟಾಂಗ್ ನೀಡಿದರು.
ಕುಟುಂಬದಲ್ಲಿ ಭಿನ್ನಾಭಿಪ್ರಾಯವಿಲ್ಲ
ಟಿಕೆಟ್ ವಿಚಾರದಲ್ಲಿ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಏರ್ಪಟ್ಟಿದೆಯೇ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಿಎಂ, ನಮ್ಮ ಕುಟುಂಬದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಬರಲ್ಲ. ಯಾವುದೇ ರೀತಿಯ ಸಂಘರ್ಷವೂ ಆಗಲ್ಲ. ಎಲ್ಲಾ ಕ್ಲಿಯರ್ ಮಾಡಲಾಗುವುದು. ಕುತೂಹಲಕ್ಕಾಗಲಿ, ಆತಂಕಕ್ಕಾಗಲಿ ನೀವೂ ಒಳಗಾಗಬೇಡಿ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ