ಬೆಂಗಳೂರು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi ) ಅವರ ಕುರಿತಂತೆ ಟೀಕೆ ಮಾಡುವ ಸಂದರ್ಭದಲ್ಲಿ ಬ್ರಾಹ್ಮಣದ (Brahmin) ಕುರಿತಂತೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ನೀಡಿದ್ದ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ನಿನ್ನೆಯಷ್ಟೇ ಗೋಕರ್ಣದಲ್ಲಿ (Gokarna) ಅರ್ಚಕರೊಬ್ಬರು ಸಹ ಕುಮಾರಸ್ವಾಮಿ (HD Kumaraswamy) ಅವರನ್ನು ನೇರ ಪ್ರಶ್ನೆ ಮಾಡಿ ಸ್ಪಷ್ಟನೆ ನೀಡುವಂತೆ ಹೇಳಿದ್ದರು. ಇತ್ತ ರಾಜ್ಯ ಬಿಜೆಪಿ ನಾಯಕರ ಹೆಚ್ಡಿಕೆ ಹೇಳಿಕೆಯನ್ನು ಖಂಡಿಸಿ ವಾಗ್ದಾಳಿ ನಡೆಸುತ್ತಿದ್ದಾರೆ. ಇದರ ನಡುವೆಯೇ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿ ಕುಮಾರಸ್ವಾಮಿ ಅವರು ಸರಣಿ ಟ್ವೀಟ್ ಮಾಡಿದ್ದಾರೆ. ವಿಧಾನಸೌಧದಲ್ಲಿ (Vidhana Soudha) ಬಿಜೆಪಿಯು ಪೇಶ್ವೆಗಳ ವಂಶಾವಳಿಯ ನಾಯಕನ ಪ್ರತಿಷ್ಠಾಪನೆ ಮಾಡಲು ಹೊರಟಿರುವ ನನ್ನ ಪ್ರಶ್ನೆಗೆ ಉತ್ತರ ಕೊಡುವ ದಮ್ಮು ತಾಕತ್ತು ತೋರಿಸುತ್ತಿಲ್ಲ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ ಸ್ಪಷ್ಟನೆ
ಪೇಶ್ವೆಗಳ ವಂಶಾವಳಿಗೆ ಸಂಬಂಧಪಟ್ಟ ವ್ಯಕ್ತಿಯನ್ನು ಬಿಜೆಪಿ ಮುಂದಿನ ಮುಖ್ಯಮಂತ್ರಿ ಮಾಡಲು ಹುನ್ನಾರ ನಡೆಸಿದೆ ಎಂಬುದು ನನ್ನ ಹೇಳಿಕೆ ಆಗಿತ್ತು. ನನ್ನ ಹೇಳಿಕೆಯಲ್ಲಿ ಗೊಂದಲ ಇಲ್ಲ, ಸ್ಪಷ್ಟತೆ ಇತ್ತು. ಕರ್ನಾಟಕ ರಾಜ್ಯದ ಮೇಲೆ, ಅದರಲ್ಲೂ ನಾವೆಲ್ಲರೂ ಶ್ರದ್ಧೆ, ಭಕ್ತಿಯಿಂದ ನಡೆದುಕೊಳ್ಳುವ ಶ್ರೀ ಶೃಂಗೇರಿ ಪೀಠ, ಮತ್ತೂ ಅಲ್ಲಿನ ದೇವಾಲಯಗಳ ಮೇಲೆ ಪೇಶ್ವೆಗಳಿಂದ ಪೈಶಾಚಿಕ ದಾಳಿ ನಡೆದಿತ್ತು. ಇದು ಇತಿಹಾಸ. ಈ ಇತಿಹಾಸವನ್ನು ತಿರುಚಿ ಹೇಳುವ ಅಗತ್ಯ ನನಗಿಲ್ಲ.
ನಾನು ಹೇಳಿದ್ದೇ ಒಂದು, ಕೆಲವರು ತಿರುಚಿ ಅಪಪ್ರಚಾರ ನಡೆಸುತ್ತಿರುವುದೇ ಇನ್ನೊಂದು. ಈ ಒಂದು ಇನ್ನೊಂದರ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಸತ್ಯಕ್ಕೂ ಸುಳ್ಳಿಗೂ ಇರುವಷ್ಟೇ ದೂರವಿದೆ. ಪಾಪ, ಕೆಲವರಿಗೆ ತಿರುಚುವುದೇ ಕೆಲಸ, ಅದೇ ಅವರಿಗೆ ಸರ್ವಸ್ವ. ನಾನು ಏನು ಮಾಡಲಿ? ಸತ್ಯ ಹೇಳಿದ್ದೇನೆ, ಚರ್ಚೆಯಾಗಲಿ.
ಶಿವಾಜಿ ಮಹಾರಾಜರು, ಜಗಜ್ಯೋತಿ ಬಸವೇಶ್ವರರು, ಗೌತಮ ಬುದ್ಧ, ಮಹಾತ್ಮ ಗಾಂಧೀಜಿ ಮತ್ತು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನೇ ಬಿಡದವರು ಇವರು. ಇನ್ನು ನನ್ನನ್ನು ಬಿಟ್ಟಾರೆಯೇ? ಕೀಳು ನಿಂದನೆ, ಚಿತಾವಣೆಯಷ್ಟೇ ಇವರ ಆಯುಧಗಳು. ನಿಂದನೆ ಮತ್ತು ನಿಂದಕರ ಬಗ್ಗೆ ನಾನು ಅಂಜುವ ಪೈಕಿ ಅಲ್ಲ.
ನಾನು ಎತ್ತಿದ ವಿಚಾರಕ್ಕೆ ಸಂಬಂಧವೇ ಇಲ್ಲದಂತೆ ಇವರು ಅವೇಶಭರಿತರಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಆದರೆ, ವಿಧಾನಸೌಧದಲ್ಲಿ ಬಿಜೆಪಿಯು ಪೇಶ್ವೆಗಳ ವಂಶಾವಳಿಯ ನಾಯಕನ ಪ್ರತಿಷ್ಠಾಪನೆ ಮಾಡಲು ಹೊರಟಿರುವ ನನ್ನ ಪ್ರಶ್ನೆಗೆ ಉತ್ತರ ಕೊಡುವ ದಮ್ಮು ತಾಕತ್ತು ತೋರಿಸುತ್ತಿಲ್ಲ, ಯಾಕೆ? ಇಂಥ ವಿಕೃತಿಗಳಿಗೆ ನಾನು ಸೊಪ್ಪು ಹಾಕುವುದಿಲ್ಲ.
ಜಗಜ್ಯೋತಿ ಬಸವೇಶ್ವರರು, ಗೌತಮ ಬುದ್ಧ, ಮಹಾತ್ಮ ಗಾಂಧೀಜಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದನ್ನೇ ನಾನು ಹೇಳಿದ್ದೇನೆ. ಇನ್ನು, ಬ್ರಾಹ್ಮಣ ಸಮೂಹವನ್ನು ನಿಂದಿಸುವ ಪ್ರಶ್ನೆ ಎಲ್ಲಿ? ನಾನು ನಿಂದಿಸಿಲ್ಲ, ನಿಂದಿಸುವುದೂ ಇಲ್ಲ. ಮತ್ತೆ ಮತ್ತೆ ಸ್ಪಷ್ಟನೆ ಅನಗತ್ಯ. 8/8
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) February 9, 2023
ಇದನ್ನೂ ಓದಿ: BS Yediyurappa: ರಾಜ್ಯ ರಾಜಕಾರಣಕ್ಕೆ 'ರಾಜಾಹುಲಿ' ರಿಟರ್ನ್ಸ್; ಬಿಎಸ್ವೈ ಜೊತೆ ವಿಜಯೇಂದ್ರಗೆ ಮತಬೇಟೆ ಹೊಣೆ!
ನನಗೆ ಸೋಲುವ ಭಯವಂತೆ, ಹತಾಶೆಯಂತೆ ಎಂದು ಬೊಗಳೆ ಬಿಟ್ಟುಕೊಂಡು ಕೇಕೆ ಹಾಕಿದರೆ ಜನ ನಂಬುವುದಿಲ್ಲ, ಅವರಿಗೂ ಗರ್ಭಗುಡಿಯಲ್ಲಿ ಏನು ನಡೆಯುತ್ತಿದೆ ಎಂಬುದು ಚೆನ್ನಾಗಿ ಗೊತ್ತು. ಸತ್ಯ ಸಾಯುವುದೂ ಇಲ್ಲ. ಅಲ್ಲವೇ? ಜಗಜ್ಯೋತಿ ಬಸವೇಶ್ವರರು, ಗೌತಮ ಬುದ್ಧ, ಮಹಾತ್ಮ ಗಾಂಧೀಜಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದನ್ನೇ ನಾನು ಹೇಳಿದ್ದೇನೆ. ಇನ್ನು, ಬ್ರಾಹ್ಮಣ ಸಮೂಹವನ್ನು ನಿಂದಿಸುವ ಪ್ರಶ್ನೆ ಎಲ್ಲಿ? ನಾನು ನಿಂದಿಸಿಲ್ಲ, ನಿಂದಿಸುವುದೂ ಇಲ್ಲ. ಮತ್ತೆ ಮತ್ತೆ ಸ್ಪಷ್ಟನೆ ಅನಗತ್ಯ ಎಂದು ಬರೆದುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ