ರಾಯಚೂರು : ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೂ (Assembly Election) ಮುನ್ನ ರಾಜಕೀಯ ನಾಯಕರ ನಡುವಿನ ಟಾಕ್ ವಾರ್ (Talk War) ರಾಜ್ಯದಲ್ಲಿ ಶುರುವಾಗಿದೆ. ಸಿದ್ದರಾಮಯ್ಯ (Siddaramaiah) ಬಿಜೆಪಿ (BJP) ಮತ್ತು ಜೆಡಿಎಸ್(JDS) ಪಕ್ಷಗಳ ವಿರುದ್ಧ ಹೋದಲ್ಲೆಲ್ಲಾ ವಾಗ್ದಾಳಿ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರವನ್ನು ಭ್ರಷ್ಟಾಚಾರ, ಕಮಿಷನ್ ಆರೋಪಗಳಿಂದ ತೆಗೆಳಿ ಟೀಕಿಸಿದರೆ, ಜೆಡಿಎಸ್ ಪಕ್ಷವನ್ನು ಗೆದ್ದೆತ್ತಿನ ಬಾಲ ಹಿಡಿಯುವ ಪಕ್ಷ, ಸ್ವಂತ ಸರ್ಕಾರ ರಚನೆ ಮಾಡಲಾಗಲ್ಲ ಎಂದೆಲ್ಲಾ ಹೀಯಾಳಿಸುತ್ತಿದ್ದಾರೆ. ಇದಕ್ಕೆ ಎಚ್ಡಿ ಕುಮಾರಸ್ವಾಮಿ (HD Kumaraswamy) ಕೂಡ ಕೌಂಟರ್ ಕೊಡುತ್ತಿರುತ್ತಾರೆ. ಇಂದೂ ಕೂಡ ಇವರಿಬ್ಬರ ನಡುವಿನ ವಾಗ್ವಾದ ಮುಂದುವರಿದಿದ್ದು, ಕುಮಾರಸ್ವಾಮಿ ಸಿದ್ದರಾಮಯ್ಯನವರಿಗೆ ತಾಕತ್ತಿದ್ದರೆ ಸ್ವಂತ ಪಕ್ಷ ಕಟ್ಟಿ ನಾಲ್ಕು ಸ್ಥಾನ ಗೆದ್ದು ತೋರಿಸಲಿ ಎಂದು ಸವಾಲೆಸೆದಿದ್ದಾರೆ.
ಪಂಚರತ್ನ ರಥಯಾತ್ರೆಯ ಭಾಗವಾಗಿ ರಾಯಚೂರಿನಲ್ಲಿರುವ ಮಿಟ್ಟಿಲಾಪುರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಎಚ್ಡಿ ಕುಮಾರಸ್ವಾಮಿ , ಮಾಜಿ ಸಿಎಂ ಸಿದ್ದರಾಮಯ್ಯ ಜೆಡಿಎಸ್ ವಿರುದ್ಧ ಹೇಳಿಕೆ ನೀಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಅವರಿಗೆ ನಿಜವಾಗಿ ತಾಕತ್ತಿದ್ದರೆ ಸ್ವಂತ ಪಕ್ಷ ಕಟ್ಟಿ ನಾಲ್ಕು ಸ್ಥಾನವನ್ನು ಗೆದ್ದು ತೋರಿಸಲಿ ಎಂದು ಕಿಡಿ ಕಾರಿದರು.
ಸಿದ್ದರಾಮಯ್ಯನವರು ತಮ್ಮ ರಾಜಕೀಯ ಜೀವನದುದ್ದಕ್ಕೂ ಬೇರೆಯವರು ಕಟ್ಟಿದ ಪಕ್ಷದಲ್ಲೇ ಅಧಿಕಾರ ಅನುಭವಿಸುತ್ತಿದ್ದಾರೆ. ಆದರೆ ಸ್ವಂತ ಪಕ್ಷ ಕಟ್ಟಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದು ತಮ್ಮ ಸಾಮರ್ಥ್ಯ ಪ್ರದರ್ಶಿಸಲಿ. ಅದನ್ನು ಬಿಟ್ಟು ಹೋದಲೆಲ್ಲಾ ಜೆಡಿಎಸ್ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ಕರಾಮಯ್ಯನರಿಗಿದು ಕಡೆಯ ಚುನಾವಣೆ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊನೆಯ ಚುನಾವಣೆ ಎಂದು ಮಗ ಯತೀಂದ್ರ ಮೂಲಕ ಹೇಳಿದ್ದಾರೆ. ಆ ತಾಯಿ ಚಾಮುಂಡೇಶ್ವರಿಯೇ ಅವರ ಬಾಯಿಂದ ಹೇಳಿಸಿದ್ದಾರೆ. ಇದು ನಿಜವಾಗಿಯೂ ಅವರ ಕಡೆಯ ಚುನಾವಣೆ ಆಗಲಿದೆ. ಕೋಲಾರದಲ್ಲಿಅವರ ಸೋಲು ನಿಶ್ಚಿತ. ಮುಂದೆ ಅವರು ರಾಜಕೀಯ ದಿಂದ ದೂರ ಉಳಿಯಲೇಬೇಕಾಗುತ್ತದೆ. ಮಾಜಿ ಸಿಎಂ ಪುತ್ರ ಯತೀಂದ್ರ ಸತ್ಯವನ್ನೇ ನುಡಿದಿದ್ದಾರೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಎದುರಿಸಲು ಜೆಡಿಎಸ್ನಿಂದ ಮಾತ್ರ ಸಾಧ್ಯ
ಬಿಜೆಪಿಯನ್ನು ರಾಷ್ಟ್ರಮಟ್ಟದಲ್ಲಿ ಎದುರಿಸಲು ಕಾಂಗ್ರೆಸ್ಗೆ ಸಾಧ್ಯವಿಲ್ಲ. ಆ ಪಕ್ಷವೇ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕೆ ಹೆಣಗಾಡುತ್ತಿದೆ. ಈ ಸಂದರ್ಭದಲ್ಲಿ ಬಿಜೆಪಿಯನ್ನು ಜೆಡಿಎಸ್ ಪಕ್ಷ ಮಾತ್ರ ರಾಷ್ಟ್ರಮಟ್ಟದಲ್ಲಿ ಎದುರಿಸಲು ಸಾಧ್ಯವಿದೆ. ಬೇರೆ ರಾಜ್ಯಗಳ ಸಮಾನ ಮನಸ್ಕ ಪಕ್ಷಗಳೊಂದಿಗೆ ಸೇರಿ ಮುಂದಿನ ಲೋಕಸಭೆ ಚುನಾವಣೆ ಹೊತ್ತಿಗೆ ರಣತಂತ್ರ ರೂಪಿಸುತ್ತೇವೆ ಎಂದಿದ್ದಾರೆ.
ಡಿಕೆಶಿ ವಿರುದ್ಧವೂ ತಿರುಗೇಟು
ಈ ಬಾರಿ ಚುನಾವಣೆ ಸೋತರೆ ಜೆಡಿಎಸ್ ಪಕ್ಷವನ್ನು ವಿಸರ್ಜಿಸುವುದಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಹಾಗಾಗಿ, ಜೆಡಿಎಸ್‌ನವರೆಲ್ಲಾ ಈಗಲೇ ಕಾಂಗ್ರೆಸ್ ಸೇರಿಕೊಳ್ಳಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಜ್ಯದ ಜನತೆ ನನಗೆ ಆಶೀರ್ವಾ ಮಾಡಿ ಅಧಿಕಾರಕ್ಕೆ ಕೊಟ್ಟರೆ, ನಾನು ರೈತರ, ಬಡ ಕುಟುಂಬದ ಬಡತನ ಹೋಗಲಾಡಿಸದಿದ್ದರೆ, ಐದು ವರ್ಷ ಆಡಳಿತ ನಡೆಸಿದ ಮೇಲೆ ಕೆಲಸ ಮಾಡಿಲ್ಲ ಎಂದರೆ ಪಕ್ಷವನ್ನು ವಿಸರ್ಜನೆ ಮಾಡ್ತೀನಿ ಎಂದು ಹೇಳಿದ್ದೆ. ಬಹುಶಃ ಡಿಕೆ ಶಿವಕುಮಾರ್ಗೆ ಅರ್ಥವಾಗಿಲ್ಲ. ನಾನು ಕೆಲಸ ಮಾಡಬೇಕಾದರೆ ಸಂಪೂರ್ಣ ಬಹುಮತ ಕೊಡಿ ಅಂತಾ ಹೇಳಿದ್ದೆ. ಆದ್ರೆ ಕಾಂಗ್ರೆಸ್ ನವರು ಪಕ್ಷ ವಿಸರ್ಜನೆ ಮಾಡ್ತೀವಿ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಅಮಿತ್ ಷಾ ಆಗಮನದಿಂದ ಏನೂ ಪ್ರಯೋಜನ
ಅಮಿತ್ ಶಾ ಅದ್ಯಾವುದೋ ಸೊಸೈಟಿ ಉದ್ಘಾಟನೆಗೆ ಬಂದಿದ್ದಾರೆ. ಖಾಸಗಿ ಕೆಲಸದ ಮೇಲೆ ಅವರು ಬಂದಿದ್ದಾರೆ. ಇದರಿಂದ ಏನು ಪ್ರಯೋಜನ ಇಲ್ಲ ಅವರು ಧಾರವಾಡದಲ್ಲಿ ಮಹದಾಯಿ ಬಗ್ಗೆ ಏನ್ ಮಾಡಿದ್ದಾರೆ? ನಮ್ಮ ರಾಜ್ಯಕ್ಕೆ ಇವರು ಅನ್ಯಾಯ ಮಾಡಿದ್ದಾರಷ್ಟೆ. ಎರಡು ಪಕ್ಷಗಳ ಸಾಧನೆ ಏನು ಅಂತಾ ಜನರಿಗೆ ಗೊತ್ತಿದೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ