ಬೇರೆಯವರಂತೆ ಗದರಿಸಿ ಕೆಲಸ ಮಾಡಿಸಲ್ಲ: ಅಧಿಕಾರಿಗಳಿಗೆ ಹೆಚ್​ಡಿಕೆ ಕಿವಿಮಾತು; ಸಿದ್ದರಾಮಯ್ಯಗೂ ತಿರುಗೇಟು


Updated:June 25, 2018, 1:25 PM IST
ಬೇರೆಯವರಂತೆ ಗದರಿಸಿ ಕೆಲಸ ಮಾಡಿಸಲ್ಲ: ಅಧಿಕಾರಿಗಳಿಗೆ ಹೆಚ್​ಡಿಕೆ ಕಿವಿಮಾತು; ಸಿದ್ದರಾಮಯ್ಯಗೂ ತಿರುಗೇಟು
ಸಹಕಾರಿ ಸಂಸ್ಥೆಗಳೊಂದಿಗಿನ ಸಭೆಯಲ್ಲಿ ಹೆಚ್.ಡಿ. ಕುಮಾರಸ್ವಾಮಿ

Updated: June 25, 2018, 1:25 PM IST
- ರಮೇಶ್ ಹಿರೇಜಂಬೂರು, ನ್ಯೂಸ್18 ಕನ್ನಡ

ಬೆಂಗಳೂರು(ಜೂನ್ 25): ರೈತರ ಸಂಪೂರ್ಣ ಸಾಲ ಮನ್ನಾ ಮಾಡುತ್ತೇನೆಂದು ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯನ್ನು ಈಡೇರಿಸಲು ಹೆಚ್​ಡಿಕೆ ಈಗ ಹರಸಾಹಸ ಮಾಡುತ್ತಿದ್ದಾರೆ. ಸಾಲಮನ್ನಾಗೆ ಹಣಕಾಸಿನ ತೊಡಕಿನ ಜೊತೆಗೆ ಸಮ್ಮಿಶ್ರ ಸರಕಾರದೊಳಗೇ ಕೆಲವರಿಂದ ವಿರೋಧ ವ್ಯಕ್ತವಾಗುತ್ತಿದೆ. ಆದರೂ ಕುಮಾರಸ್ವಾಮಿ ತಮ್ಮದೇ ಶೈಲಿಯಲ್ಲಿ ಸಮಸ್ಯೆ ನಿವಾರಿಸುವ ಪ್ರಯತ್ನ ಮಾಡುತ್ತಿದ್ಧಾರೆ. ಜುಲೈ 5ರಂದು ಬಜೆಟ್ ದಿನವೇ ಸಾಲ ಮನ್ನಾ ಘೋಷಣೆ ಮಾಡುವುದು ಖಚಿತವೆನ್ನಲಾಗಿದೆ. ಆದರೆ, ಸಾಲ ಮನ್ನಾ ಫಲವು ಬಡ ರೈತರಿಗೆ ತಲುಪುವ ನಿಟ್ಟಿನಲ್ಲಿ ಯೋಜನೆ ರೂಪಿಸುವ ಕೆಲಸ ಮಾಡುತ್ತಿದ್ದಾರೆ. ಪಂಜಾಬ್ ಸರಕಾರ ಮಾಡಿದ ರೀತಿಯಲ್ಲಿ ಸಾಲ ಮನ್ನಾ ಮಾಡುವ ಚಿಂತನೆಯೂ ಇದೆ. ಈ ನಿಟ್ಟಿನಲ್ಲಿ ಸಾಲ ಮನ್ನಾದ ರೂಪುರೇಷೆ ರಚಿಸಲು ಇಂದು ಸಹಕಾರಿ ಬ್ಯಾಂಕ್, ಅಪೆಕ್ಸ್ ಬ್ಯಾಂಕ್ ಹಿರಿಯ ಅಧಿಕಾರಿಗಳ ಜೊತೆ ಸಿಎಂ ಹೆಚ್​ಡಿ ಕುಮಾರಸ್ವಾಮಿ ವಿಧಾನಸೌಧದಲ್ಲಿ ಸಭೆ ನಡೆಸಿದ್ದಾರೆ. ಈ ಅಧಿಕಾರಿಗಳ ಜೊತೆ ಸಚಿವರಾದ ಬಂಡೆಪ್ಪ ಕಾಂಶೆಂಪೂರ್, ಶಿವಶಂಕರ್ ರೆಡ್ಡಿ, ಶಿವಾನಂದ ಪಾಟೀಲ್ ಮೊದಲಾದವರೂ ಉಪಸ್ಥಿತರಿದ್ದಾರೆ.

ಅಧಿಕಾರಿಗಳ ಮೇಲೆ ಹೆಚ್​ಡಿಕೆ ಬೇಸರ:

ಸಾಲ ಮನ್ನಾ ವಿಚಾರದಲ್ಲಿ ಸರಕಾರದ ಯೋಜನೆಗೆ ಅಧಿಕಾರಿಗಳೇ ಅಡ್ಡಗಾಲು ಹಾಕುತ್ತಿದ್ದಾರೆಂದು ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಅಧಿಕಾರಿಗಳು ಸಲ್ಲದ ಹೇಳಿಕೆ ನೀಡುತ್ತಿರುವ ಮಾಹಿತಿ ತನಗೆ ಸಿಕ್ಕಿದೆ. ಸಾಲ ಮನ್ನಾ ವಿಚಾರದಲ್ಲಿ ಬಡ್ಡಿ ಕಡಿಮೆ ಮಾಡದಂತೆ ಬ್ಯಾಂಕ್​ನವರಿಗೆ ಕುಮ್ಮಕ್ಕು ಕೊಡಲಾಗುತ್ತಿದೆ. ಈ ಸರಕಾರ ಎಷ್ಟು ದಿನ ಇರುತ್ತೋ ಗೊತ್ತಿಲ್ಲವೆಂದೂ ಮಾತನಾಡುತ್ತಿದ್ಧಾರೆ. ಯಾರಾರು ಏನೇನು ಮಾಡುತ್ತಿದ್ಧಾರೆಂಬ ಮಾಹಿತಿ ಪಡೆಯಲು ತನ್ನದೇ ಸೋರ್ಸ್ ಇದೆ ಎಂದು ಸಿಎಂ ವ್ಯಗ್ರಗೊಂಡಿದ್ದಾರೆ.

ಬೇರೆಯವರಂತೆ ದುರಹಂಕಾರ, ಗಡಸು ಧ್ವನಿಯಲ್ಲಿ ಅಧಿಕಾರಿಗಳಿಗೆ ಗದರಿಸಿ ತಾನು ಕೆಲಸ ಮಾಡಿಸಲ್ಲ. ಸಾಫ್ಟ್ ಆಗಿ ಹ್ಯಾಂಡಲ್ ಮಾಡುತ್ತೀನಿ. ಸಾಲ ಮನ್ನಾದಿಂದ ಬಡ ರೈತನಿಗೆ ಅನುಕೂಲವಾಗಬೇಕು ಎಂಬುದು ನನ್ನ ಉದ್ದೇಶ ಎಂದು ಹೆಚ್​ಡಿಕೆ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆಯೂ ಅವರು ಪರೋಕ್ಷವಾಗಿ ಸಿಟ್ಟು ತೋರ್ಪಡಿಸಿದ್ದಾರೆ.

ಹಕ್ಕುಚ್ಯುತಿ ಗುರಾಣಿ:
Loading...

ಹೊಸ ಬಜೆಟ್ ಬೇಡ; ಹಿಂದಿನ ಸರಕಾರದ ಬಜೆಟನ್ನೇ ಅನುಷ್ಠಾನಗೊಳಿಸಲಿ ಎಂದು ಸಿದ್ದರಾಮಯ್ಯ ವ್ಯಕ್ತಪಡಿಸಿದ್ದ ಅಭಿಪ್ರಾಯಕ್ಕೆ ಪ್ರತಿಯಾಗಿ ಕುಮಾರಸ್ವಾಮಿ ಅವರು ಹಕ್ಕುಚ್ಯುತಿ ಅಸ್ತ್ರ ಬಳಸಿದ್ದಾರೆ. ಕಳೆದ ಬಾರಿ ಇದ್ದವರ ಪೈಕಿ 100 ಶಾಸಕರು ಈ ಬಾರಿ ಸೋತಿದ್ದಾರೆ. ಕಳೆದ ಸರಕಾರದ ಬಜೆಟ್​ನ್ನೇ ಅಂಗೀಕರಿಸಿ ಲೇಖಾನುದಾನ ಪಡೆಯುವುದಾದರೆ ಈಗಿನ 100 ಶಾಸಕರಿಗೆ ತೊಂದರೆಯಾಗುತ್ತದೆ. ಅವರೇನಾದರೂ ಹಕ್ಕುಚ್ಯುತಿ ತಂದರೆ ಏನು ಮಾಡೋದು? ಅದಕ್ಕಾಗಿಯೇ ಹೊಸ ಬಜೆಟ್ ಮಂಡನೆ ಮಾಡುತ್ತಿದ್ದೇನೆ ಎಂದು ಕುಮಾರಸ್ವಾಮಿ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ಧಾರೆ.

ಸಾಲ ಮನ್ನಾ ವಿಚಾರದಲ್ಲಿ ವಿಧಾನಸೌಧದಲ್ಲಿ ನಡೆದ ಸಭೆ


ರೈತರಿಗೆ ಸಿಹಿ ಸುದ್ದಿ: ಕಾಶೆಂಪೂರ್
ಈ ಬಜೆಟ್​ನಲ್ಲಿ ಸಾಲ ಮನ್ನಾ ಘೋಷಣೆಯಾಗುತ್ತದೆಂಬ ಸುದ್ದಿಗೆ ಪೂರಕವಾಗಿ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ಹೇಳಿಕೆ ನೀಡಿದ್ಧಾರೆ. ಸಿಎಂ ಕುಮಾರಸ್ವಾಮಿ ಅವರು ರೈತರಿಗೆ ಸಿಹಿ ಸುದ್ದಿ ಕೊಡುತ್ತಾರೆ ಎಂದು ಸಹಕಾರ ಸಚಿವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕುಗಳ ಸಾಲ ಮನ್ನಾ ಆಗುತ್ತದೆ. ಬೆಳೆ ಸಾಲ ಮಾತ್ರ ಸದ್ಯಕ್ಕೆ ಮಾಡಲಾಗುತ್ತದೆ. ಬೆಳೆ ಸಾಲದ ವಿಚಾರದಲ್ಲಿ ಸಣ್ಣ ರೈತರಷ್ಟೇ ಅಲ್ಲ ಎಲ್ಲಾ ರೈತರ ಸಾಲವನ್ನೂ ಮನ್ನಾ ಮಾಡಲಾಗುತ್ತದೆ. ಎರಡನೇ ಹಂತದಲ್ಲಿ ಕೃಷಿ ಉಪಕರಣಗಳ ಖರೀದಿ ಸಾಲದ ಮನ್ನಾ ಬಗ್ಗೆ ಚಿಂತನೆ ನಡೆದಿದೆ ಎಂದು ಬಂಡೆಪ್ಪ ಕಾಶೆಂಪೂರ್ ಹೇಳಿದ್ದಾರೆ.

ಮೊದಲ ಹಂತದಲ್ಲಿ ಸಣ್ಣ ರೈತರ ಸಾಲ ಮನ್ನಾ..?
ಎಲ್ಲಾ ರೈತರ ಸಾಲ ಮನ್ನಾ ಮಾಡಿದರೆ ಸರಕಾರಕ್ಕೆ ದೊಡ್ಡ ಹೊರೆ ಬೀಳಲಿದೆ. ಹೀಗಾಗಿ, ಮೂರು ಹಂತಗಳಲ್ಲಿ ಸಾಲ ಮನ್ನಾ ಮಾಡುವ ಕುರಿತು ಚರ್ಚೆಯಾಗಿದೆ. ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕುಗಳಲ್ಲಿರುವ ಸಣ್ಣ ರೈತರ(5 ಎಕರೆ ಒಳಗಿನ ಜಮೀನು ಹೊಂದಿರುವವರು) ಸಾಲ ಮನ್ನಾಗೆ 22,000 ಕೋಟಿ ರೂ. ಆಗುತ್ತದೆ. ಇದನ್ನು ಮೊದಲ ಹಂತದಲ್ಲಿ ಮಾಡುವ ಸಾಧ್ಯತೆ ಇದೆ. ಮೊದಲ ಹಂತದ ಸಾಲ ಮನ್ನಾ ವಿಚಾರದಲ್ಲಿ ಬ್ಯಾಂಕುಗಳಿಗೆ ಹಣ ಪಾವತಿ ಮಾಡಲು ಗಡುವು ತೆಗೆದುಕೊಳ್ಳುವ ಚರ್ಚೆಯೂ ನಡೆದಿದೆ. ದೊಡ್ಡ ರೈತರ ಸಾಲ ಹಾಗೂ ಕೃಷಿ ಉಪಕರಣಗಳಿಗೆ ಮಾಡಿದ ಸಾಲಗಳನ್ನ ಎರಡು ಮತ್ತು ಮೂರನೇ ಹಂತದಲ್ಲಿ ಮನ್ನಾ ಮಾಡಲು ಸರಕಾರ ಯೋಜಿಸಿದೆ ಎನ್ನಲಾಗಿದೆ.
First published:June 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...