news18-kannada Updated:December 16, 2020, 12:03 PM IST
ಹೆಚ್ಡಿ ಕುಮಾರಸ್ವಾಮಿ- ನರೇಂದ್ರ ಮೋದಿ
ಬೆಂಗಳೂರು (ಡಿ. 16): ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅವರ ಹುಟ್ಟುಹಬ್ಬಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ರಾಜ್ಯದ ಸಚಿವರು, ಜೆಡಿಎಸ್ ನಾಯಕರು ಸೇರಿದಂತೆ ಕರ್ನಾಟಕದ ಅನೇಕ ಗಣ್ಯರು ಶುಭಾಶಯಗಳನ್ನು ಕೋರಿದ್ದಾರೆ. ಇದರ ನಡುವೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೂಡ ಹೆಚ್ಡಿ ಕುಮಾರಸ್ವಾಮಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ! ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅವರ ಹುಟ್ಟುಹಬ್ಬಕ್ಕೆ ನನ್ನ ಶುಭಾಶಯಗಳು. ದೇವರು ಉತ್ತಮ ಆಯುಷ್ಯ, ಒಳ್ಳೆಯ ಆರೋಗ್ಯವನ್ನು ನೀಡಿ ನಿಮ್ಮನ್ನು ಕಾಪಾಡಲಿ ಎಂದು ಪ್ರಧಾನಿ ಮೋದಿ ಶುಭಾಶಯಗಳನ್ನು ಕೋರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿರುವ ಟ್ವೀಟ್ ಅನ್ನು ಕರ್ನಾಟಕದ ಬಿಜೆಪಿ ನಾಯಕರು ಕೂಡ ರೀಟ್ವೀಟ್ ಮಾಡಿದ್ದಾರೆ. ಸಂಸದ ಬಿವೈ ರಾಘವೇಂದ್ರ ಕೂಡ ಈ ಟ್ವೀಟ್ ಅನ್ನು ಹಂಚಿಕೊಂಡಿದ್ದು, ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಭಗವಂತನ ಕೃಪೆಯಿಂದ ನಿಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಲಭಿಸಲಿ ಎಂದು ಹಾರೈಸಿದ್ದಾರೆ.
ಮಾಜಿ ಮುಖ್ಯಮಂತ್ರಿಗಳು, ಆತ್ಮೀಯರೂ ಆಗಿರುವ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಆಶೀರ್ವಾದ ಸದಾ ಇರಲಿ ಎಂದು ಹಾರೈಸುತ್ತೇನೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಶುಭಾಶಯ ಕೋರಿದ್ದರು.
ಜೆಡಿಎಸ್ ಶಾಸಕ ಸಾರಾ ಮಹೇಶ್ ಕೂಡ ಕುಮಾರಸ್ವಾಮಿ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಮಾಜಿ ಮುಖ್ಯಮಂತ್ರಿ ಹಾಗೂ ನಮ್ಮ ಪಕ್ಷದ ನಾಯಕರಾದ ಶ್ರೀ
ಹೆಚ್ಡಿ ಕುಮಾರಸ್ವಾಮಿ ಅವರಿಗೆ 61ನೇ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಜನಸೇವೆ ಮಾಡಲು ಇನ್ನೂ ಹೆಚ್ಚಿನ ಆಯಸ್ಸು ಮತ್ತು ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಾರಾ ಮಹೇಶ್ ಟ್ವೀಟ್ ಮಾಡಿದ್ದಾರೆ.
ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಕೂಡ ಹೆಚ್ಡಿ ಕುಮಾರಸ್ವಾಮಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಭಗವಂತ ತಮಗೆ ಉತ್ತಮ ಆಯುರಾರೋಗ್ಯ ನೀಡಿ ಇನ್ನಷ್ಟು ದೀರ್ಘಕಾಲ ನಾಡಿನ ಸೇವೆ ಮಾಡುವಂತಾಗಲಿ ಎಂದು ಹಾರೈಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಸಚಿವೆ ಶಶಿಕಲಾ ಜೊಲ್ಲೆ ಕೂಡ ಕುಮಾರಸ್ವಾಮಿ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ, ಟ್ವೀಟ್ ಮಾಡಿದ್ದಾರೆ.
1996ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದ ಹೆಚ್ಡಿ ಕುಮಾರಸ್ವಾಮಿ, 2004ರಲ್ಲಿ ರಾಮನಗರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. 2006ರಲ್ಲಿ ಬಿಜೆಪಿ ಜೊತೆಗೆ ಕೈಜೋಡಿಸಿ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾದರು. 2018ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಹೆಚ್ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. 2019ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಶಾಸಕರು ರಾಜೀನಾಮೆ ನೀಡಿ, ಬಿಜೆಪಿಗೆ ಸೇರಿದ್ದರಿಂದ ಬಹುಮತ ಕಳೆದುಕೊಂಡು ಹೆಚ್ಡಿ ಕುಮಾರಸ್ವಾಮಿ ರಾಜೀನಾಮೆ ನೀಡಬೇಕಾಯಿತು. ಜೊತೆಗೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಚಲನಚಿತ್ರ ನಿರ್ಮಾಪಕರಾಗಿಯೂ ಹೆಚ್ಡಿ ಕುಮಾರಸ್ವಾಮಿ ಗುರುತಿಸಿಕೊಂಡಿದ್ದಾರೆ.
Published by:
Sushma Chakre
First published:
December 16, 2020, 12:03 PM IST