ನೆರೆಗೆ ನಲುಗಿರುವ ಕರ್ನಾಟಕ ರಾಜ್ಯಕ್ಕೆ ಕೇಂದ್ರ ವಿಶೇಷ ಆರ್ಥಿಕ ಪ್ಯಾಕೇಜ್​ ನೀಡಬೇಕು; ಎಚ್.​​ಡಿ. ಕುಮಾರಸ್ವಾಮಿ ಆಗ್ರಹ

ಮುಂಗಾರು ಮಳೆಗೆ ನಲುಗಿರುವ ರಾಜ್ಯದ ಜನತೆ ಮತ್ತು ಜಾನುವಾರುಗಳ ರಕ್ಷಣೆಗೆ ಸರ್ಕಾರ ಸಮರೋಪಾದಿಯಲ್ಲಿ ಸ್ಪಂದಿಸುವ ಪರಿಹಾರ ಕಾಮಗಾರಿಗಳನ್ನು ಅನುಷ್ಠಾನ ಮಾಡುವಂತೆ ಆಗ್ರಹಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

news18-kannada
Updated:August 7, 2020, 11:52 AM IST
ನೆರೆಗೆ ನಲುಗಿರುವ ಕರ್ನಾಟಕ ರಾಜ್ಯಕ್ಕೆ ಕೇಂದ್ರ ವಿಶೇಷ ಆರ್ಥಿಕ ಪ್ಯಾಕೇಜ್​ ನೀಡಬೇಕು; ಎಚ್.​​ಡಿ. ಕುಮಾರಸ್ವಾಮಿ ಆಗ್ರಹ
ಕುಮಾರಸ್ವಾಮಿ
  • Share this:
ಬೆಂಗಳೂರು (ಆ.7): ಕರ್ನಾಟಕ ಬಹುತೇಕ ಭಾಗಗಳಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆ ಆಗುತ್ತಿದೆ. ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಮೈಸೂರು ಸೇರಿ ಸಾಕಷ್ಟು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಬಂದೊದಗಿದೆ. ಈ ಪರಿಸ್ಥಿತಿಯನ್ನು ಸರ್ಕಾರ ಉತ್ತಮವಾಗಿ ನಿರ್ವಹಿಸಬೇಕಿದೆ ಎಂದು ಮಾಜಿಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.  

ಪ್ರವಾಹಕ್ಕೆ ಸಿಲುಕಿರುವ ಮನುಷ್ಯರು ಹಾಗೂ ಜನರನ್ನು ರಕ್ಷಣೆ ಮಾಡುವಂತೆ ಎಚ್​ಡಿಕೆ ಹೇಳಿದ್ದಾರೆ. "ಮುಂಗಾರು ಮಳೆಗೆ ನಲುಗಿರುವ ರಾಜ್ಯದ ಜನತೆ ಮತ್ತು ಜಾನುವಾರುಗಳ ರಕ್ಷಣೆಗೆ ಸರ್ಕಾರ ಸಮರೋಪಾದಿಯಲ್ಲಿ ಸ್ಪಂದಿಸುವ ಪರಿಹಾರ ಕಾಮಗಾರಿಗಳನ್ನು ಅನುಷ್ಠಾನ ಮಾಡುವಂತೆ ಆಗ್ರಹಿಸುತ್ತೇನೆ,” ಎಂದಿದ್ದಾರೆ.

“ಈ ಬಾರಿಯೂ ರಾಜ್ಯ ಅತಿವೃಷ್ಟಿಯ ಸಂಕಷ್ಟಕ್ಕೆ ಸಿಲುಕಿದ್ದು, ವಿಶೇಷವಾಗಿ ರೈತರು ಕಂಗಾಲಾಗಿದ್ದಾರೆ. ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ  ಮುಂಗಾರಿನ ಅಬ್ಬರ ಭೀತಿಯ ವಾತಾವರಣ ಸೃಷ್ಟಿಸಿದೆ. ಜಿಲ್ಲಾವಾರು ವಿಶೇಷ ಕಾರ್ಯಪಡೆ ರಚಿಸುವ ಮೂಲಕ ನೆರೆ ಪರಿಸ್ಥಿತಿಯನ್ನು ನಿಭಾಯಿಸಬೇಕಿದೆ. ಅತಿವೃಷ್ಟಿ ಸಂತ್ರಸ್ತರಿಗೆ ಕೂಡಲೇ ಆಸರೆ ಕೇಂದ್ರಗಳನ್ನು ಸ್ಥಾಪಿಸಬೇಕು. ಬೆಳೆ ಹಾನಿಗೊಳಗಾದ ರೈತರಿಗೆ ಹಾಗೂ ಮನೆ-ಮಠ ಕಳೆದುಕೊಂಡವರಿಗೆ, ಜೀವ ಹಾನಿಗೊಳಗಾದವರಿಗೆ ತಡಮಾಡದೆ ಸರ್ಕಾರ ಸಹಾಯಹಸ್ತ ಚಾಚಬೇಕು,” ಎಂದು ಕುಮಾರಸ್ವಾಮಿ ಹೇಳಿದ್ದಾರೆ.


ಕೇಂದ್ರ ಸರ್ಕಾರ ರಾಜ್ಯಕ್ಕೆ ವಿಶೇಷ ಆರ್ಥಿಕ ಪ್ಯಾಕೇಜ್​ ನೀಡಬೇಕು ಎಂದು ಆಗ್ರಹಿಸಿರುವ ಕುಮಾರಸ್ವಾಮಿ, ಸತತ ನೆರೆಯಿಂದ ಸಂತ್ರಸ್ತರಾಗಿರುವ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡಲು ಕೇಂದ್ರ ಸರ್ಕಾರವು ರಾಜ್ಯಕ್ಕೆ ವಿಶೇಷ ಅರ್ಥಿಕ ನೆರವು ನೀಡಬೇಕು. ರಾಜ್ಯ ಸರ್ಕಾರ ಕೂಡ ಈ ಸಂಬಂಧ ಕೇಂದ್ರದ ಮೇಲೆ ಒತ್ತಡ ತರಬೇಕು ಎಂದು ಒತ್ತಾಯಿಸುತ್ತೇನೆ,” ಎಂದಿದ್ದಾರೆ.

“ಅತಿವೃಷ್ಟಿ ಸಂತ್ರಸ್ತರ ಪರಿಹಾರ ಕಾಮಗಾರಿಗಳಿಗೆ ಹಣಕಾಸಿನ ಕೊರತೆಯಾಗದಂತೆ ಸಕಾಲಿಕ ಎಚ್ಚರಿಕೆಯನ್ನು ಸರ್ಕಾರ ತೆಗೆದುಕೊಳ್ಳದಿದ್ದರೆ ಪರಿಸ್ಥಿತಿ ಬಿಗಡಾಯಿಸುತ್ತದೆ. ಒಂದು ಕಡೆ ಕೊರೋನಾ ಸೋಂಕಿನ ಭೀತಿ ಈಗ ನೆರೆಪೀಡಿತ ಪರಿಸ್ಥಿತಿ ಸರ್ಕಾರಕ್ಕೊಂದು ಅಗ್ನಿಪರೀಕ್ಷೆ. ಎಚ್ಚರ ತಪ್ಪಿದರೆ ಜನರ ಬದುಕು ಮೂರಾಬಟ್ಟೆಯಾಗುತ್ತದೆ. ಸಚಿವರು ಮತ್ತು ಅಧಿಕಾರಿಗಳು ಮಳೆ ಹಾನಿಗೊಳಗಾದ ಪ್ರದೇಶಗಳಿಗೆ ತೆರಳಿ ಅಲ್ಲಿಯೇ ಮೊಕ್ಕಾಂ ಮಾಡಿ ಪರಿಸ್ಥಿತಿಯ ಉಸ್ತುವಾರಿ ನೋಡಿಕೊಳ್ಳುವ ಮೂಲಕ ನೆರೆ ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ,” ಎಂದು ಅವರು ಹೇಳಿದ್ದಾರೆ.
Published by: Rajesh Duggumane
First published: August 7, 2020, 11:48 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading