ದಾವಣಗೆರೆ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ( Assembly Election) ಹತ್ತಿರ ಬರುತ್ತಿದ್ದಂತೆ ಪ್ರಚಾರ ಕಾರ್ಯ ಜೋರಾಗಿ ನಡೆಯುತ್ತಿದೆ. ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಹೊಸ ಹೊಸ ಯೋಜನೆಗಳನ್ನು (New Scheme) ಜಾರಿಗೆ ತರುವುದಾಗಿ ಭರವಸೆಗಳ ಸುರಿಮಳೆ ಸುರಿಸುತ್ತಿವೆ. ಈಗಾಗಲೆ ಪಂಚರತ್ನ ರಥಯಾತ್ರೆ (Pancharatna Rath Yatra) ಮೂಲಕ ರಾಜ್ಯಾದ್ಯಂತ ಪರ್ಯಟನೆ ಮಾಡುತ್ತಿರುವ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ (HD Kumaraswamy) ಕೂಡ ಇದರಿಂದ ಹೊರತಾಗಿಲ್ಲ. ಪಂಚರತ್ನ ರಥಯಾತ್ರೆ ಭಾಗವಾಗಿ ದಾವಣಗೆರೆಗೆ ಆಗಮಿಸಿರುವ ಎಚ್‌ಡಿಕೆ ಹಲವು ಹೊಸ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.
ವಿಧವೆಯರಿಗೆ 2000, ಹಿರಿಯ ನಾಗರಿಕರಿಗೆ 5000 ಮಾಸಾಶನ
2023ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ (JDS) ಪಕ್ಷ ಅಧಿಕಾರಕ್ಕೆ ಬಂದರೆ 800 ರೂಪಾಯಿ ಇರುವ ವಿಧವಾ ಮಾಸಾಶನವನ್ನು 2000 ರೂಪಾಯಿಗಳಿಗೆ ಏರಿಕೆ ಮಾಡುತ್ತೇವೆ. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ 5000 ರೂಪಾಯಿ ಮಾಸಾಶನ ನೀಡಲಾಗುವುದು ಎಂದು ದಾವಣಗೆರೆಯಲ್ಲಿ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.
30 ಬೆಡ್ ಆಸ್ಪತ್ರೆ ನಿರ್ಮಾಣ
ದಾವಣಗೆರೆಯಲ್ಲಿ ಪಂಚರತ್ನ ಕಾರ್ಯಕ್ರಮದ ಬಗ್ಗೆ ವಿವರಿಸಿದ ಕುಮಾರಸ್ವಾಮಿ, ಈ ಯೋಜನೆ ಕರ್ನಾಟಕ ಜನರ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಈ 5 ಕಾರ್ಯಕ್ರಮ ಜಾರಿಯಾದರೆ ಎಲ್ಲರ ಭವಿಷ್ಯ ಉಜ್ವಲ ಆಗುತ್ತದೆ. ಪ್ರತಿ ಗ್ರಾಮ ಪಂಚಾಯತ್ ಮೂಲಕ 12ನೇ ತರಗತಿಯವರೆಗೆ ಉಚಿತ ಶಿಕ್ಷಣ ನೀಡಲಾಗುವುದು. ಪ್ರತಿ ಗ್ರಾಮ ಪಂಚಾಯತಿಯಲ್ಲಿ 30 ಬೆಡ್ನ ಆಸ್ಪತ್ರೆ ತೆಗೆಯುತ್ತೇನೆ ಎಂದರು.
ಇದನ್ನೂ ಓದಿ: HD Kumaraswamy: ಕ್ಯಾನ್ಸರ್‌ನಿಂದ ಗಂಡನನ್ನು ಬದುಕಿಸಿಕೊಡಿ ಎಂದು ಕಣ್ಣೀರಿಟ್ಟ ಮಹಿಳೆಗೆ ಚಿಕಿತ್ಸೆಯ ಭರವಸೆ ನೀಡಿದ ಎಚ್‌ಡಿಕೆ
ಮಹಿಳೆಯರಿಗೆ ವಿವಿಧ ಯೋಜನೆ
ಜೆಡಿಎಸ್ ಅಧಿಕಾರಕ್ಕೆ ಬಂದರೆ ಮಹಿಳಾ ಸ್ತ್ರೀ ಶಕ್ತಿ ಸಂಘಗಳ ಸಂಪೂರ್ಣ ಸಾಲ ಮನ್ನಾ ಮಾಡುತ್ತೇನೆ. ವಯಸ್ಸಾದವರಿಗೆ ಪ್ರತಿ ತಿಂಗಳು 5 ಸಾವಿರ ರೂಪಾಯಿ ಕೊಡುತ್ತೇನೆ. ವಿಧವಾ ವೇತನವನ್ನು 2000ಕ್ಕೆ ಹೆಚ್ಚಿಸುತ್ತೇನೆ. ಈ ಎಲ್ಲಾ ಯೋಜನೆಗಳಿಗೆ 2 ಲಕ್ಷ ಕೋಟಿಗೂ ಅಧಿಕ ಹಣ ವ್ಯಯವಾಗುತ್ತದೆ. ಇದೆಲ್ಲಾ ಆಗಬೇಕೆಂದರೆ ನೀವು ನನಗೆ ಸಂಪೂರ್ಣ ಬೆಂಬಲ ಕೊಡಬೇಕು. 120 ಸ್ಥಾನಗಳನ್ನು ಗೆಲ್ಲುವ ಗುರಿಯಿಟ್ಟುಕೊಂಡಿದ್ದೇನೆ ಅದನ್ನ ನೆರವೇರಿಸಿ ಕೊಡಿ ಎಂದು ಮನವಿ ಮಾಡಿದರು.
ರೈತಬಂಧು ಕಾರ್ಯಕ್ರಮ ಜಾರಿ
ರಾಜ್ಯದಲ್ಲಿ ತೆಲಂಗಾಣ ಮಾದರಿಯ ರೈತಬಂಧು ಕಾರ್ಯಕ್ರಮ ಜಾರಿ ಮಾಡುತ್ತೇನೆ. ಬಿತ್ತನೆ ಮಾಡುವ ಕಾಲಕ್ಕೆ ಸರಿಯಾಗಿ ಪ್ರತಿ ವರ್ಷ ಹೆಕ್ಟೇರ್‌ಗೆ 10,000 ರೂಪಾಯಿ ಕೊಡಲಾಗುವುದು. ಹತ್ತು ಹೆಕ್ಟೇರ್ ಇದ್ದರೆ ಹತ್ತು ಲಕ್ಷ ಕೊಡಲಾಗುವುದು. ಬಿತ್ತನೆ ಬೀಜ, ರಸಗೊಬ್ಬರಕ್ಕಾಗಿ ರೈತರು ಖಾಸಗಿ ಮಂದಿ ಬಳಿ ಸಾಲ ಮಾಡಬಾರದು. ಐದು ಲಕ್ಷ ರೂಪಾಯಿ ಮೊತ್ತದ ಉಚಿತ ಮನೆ, ಒಂದರಿಂದ ದ್ವಿತೀಯ ಪಿಯುಸಿವರೆಗೆ ಉಚಿತ ಶಿಕ್ಷಣ, ರೈತರಿಗೆ ನಿತ್ಯ 24 ಗಂಟೆಯೂ ಉಚಿತ ವಿದ್ಯುತ್ ನೀಡಲಾಗುವುದು. ಪಂಚರತ್ನ ಯೋಜನೆಗಳನ್ನು ಜಾರಿ ಮಾಡುವುದು ನನ್ನ ಗುರಿ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ