ಹಾಸನ: ಜಿಲ್ಲೆಯಲ್ಲಿ ಜೆಡಿಎಸ್ ಪಂಚರತ್ನ ರಥಯಾತ್ರೆ (JDS Pancharatna Yatra) ಭರ್ಜರಿಯಾಗಿ ನಡೆಯುತ್ತಿದೆ. ಅರಸೀಕೆರೆ, ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆ ಸಾಗಿದ್ದು, ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರು ಬರುತ್ತಿದ್ದಂತೆ ಕಾರ್ಯಕರ್ತರು ಪಟಾಕಿ ಸಿಡಿಸಿ, ಜೈಕಾರ ಹಾಕಿ ಅದ್ಧೂರಿಯಾಗಿ ಸ್ವಾಗತ ಕೋರಿದ್ದಾರೆ. ಈ ವೇಳೆ ಮಾತನಾಡಿದ ಹೆಚ್‌ಡಿ ಕುಮಾರಸ್ವಾಮಿ ಅವರು, ಬಿಜೆಪಿಯವರು (BJP) ನಮ್ಮನ್ನು ಕಾಂಗ್ರೆಸ್ (Congress) ಬಿ ಟೀಂ ಅಂತಾರೆ. ಕಾಂಗ್ರೆಸ್‌ನವರು ನಮ್ಮನ್ನು ಬಿಜೆಪಿ ಬಿ ಟೀಂ ಅಂತಾರೆ. ನಾವು ನಾಡಿನ ಜನತೆಯ ಬಿ ಟೀಂ ಅಂತ ಹೆಚ್‌ಡಿಕೆ ಟಾಂಗ್ ಕೊಟ್ಟರು. ಇದೇ ವೇಳೆ ರೈತನ ಮನೆ ಗಂಡು ಮಕ್ಕಳ ಸಂಕಷ್ಟಕ್ಕೆ ಮಿಡಿದ ಕುಮಾರಸ್ವಾಮಿ ಅವರು, ನಮ್ಮ ಪಕ್ಷ ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚನೆ ಮಾಡಿದರೆ ರೈತ ಮಕ್ಕಳನ್ನು (Farmer) ಮದುವೆಯಾಗುವ ಹೆಣ್ಣು ಮಕ್ಕಳಿಗೆ ಸರ್ಕಾರದಿಂದ ಎರಡು ಲಕ್ಷ ರೂಪಾಯಿ ಹಣ ನೀಡುತ್ತೇವೆ. ಈ ಬಗ್ಗೆ ಎಷ್ಟು ಕೋಟಿ ಹಣ ಖರ್ಚು ಆಗಬಹುದು ಎಂಬ ಮಾಹಿತಿಯನ್ನು ಪಡೆದುಕೊಂಡಿದ್ದೇನೆ ಎಂದು ಭರವಸೆ ನೀಡಿದ್ದಾರೆ.
ರೈತನ ಮನೆ ಗಂಡು ಮಕ್ಕಳ ಸಂಕಷ್ಟಕ್ಕೆ ಮಿಡಿದ ಕುಮಾರಸ್ವಾಮಿ
ಜೆಡಿಎಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ ಅವರು, ಇತ್ತೀಚೆಗೆ ಜನರು ನಮ್ಮ ತಲೆಗೆ ಒಂದು ಸಮಸ್ಯೆಯನ್ನು ಪದೇ ಪದೇ ಗಮನಕ್ಕೆ ತರುತ್ತಿದ್ದಾರೆ. ನಾನು ಎಲ್ಲೆ ಹೋದರು ಚೀಟಿ ಕೊಡುತ್ತಿದ್ದಾರೆ. ನಮ್ಮ ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ. ನಮ್ಮ ಊರಿನಲ್ಲಿ 30-40 ಜನ ಯುವಕರಿಗೆ ಮದುವೆಯಾಗಿಲ್ಲ ಅಂತ ಹೇಳಿದ್ದಾರೆ. ಆ ಮೂಲಕ ಇದಕ್ಕೆ ಒಂದು ಪರಿಹಾರ ಹುಡುಕಲು ಕೇಳ್ತಿದ್ದಾರೆ.
ಮೊನ್ನೆ ಅದಿಚುಂಚನಗಿರಿ ಮಠದಲ್ಲಿ ವಧು-ವರರ ಸಮಾವೇಶ ಏರ್ಪಡಿಸಲಾಗಿತ್ತು. ಈ ವೇಳೆ ಮಠದಲ್ಲಿ ಕೇವಲ 700-800 ಹೆಣ್ಣು ಮಕ್ಕಳು ಮಾತ್ರ ಬಂದರೂ, ಯುವಕರು 7-8 ಸಾವಿರ ಮಂದಿ ಬಂದ ಕಾರಣ ಲಾಠಿ ಚಾರ್ಜ್ ಮಾಡಬೇಕಾಯಿತು. ನೀವು ಅನ್ನದಾತರು, ನಿಮ್ಮ ಬದುಕು ಈ ರೀತಿ ಆದರೆ ದೇಶಕ್ಕೆ ಭವಿಷ್ಯವಿಲ್ಲ, ಆದ್ದರಿಂದ ರೈತ ಮಕ್ಕಳನ್ನು ಮದುವೆಯಾಗುವ ಹೆಣ್ಣು ಮಗಳಿಗೆ ಎರಡು ಲಕ್ಷ ರೂಪಾಯಿ ಹಣ ನೀಡುವ ತೀರ್ಮಾನ ಮಾಡಿದ್ದೇವೆ ಎಂದು ಘೋಷಣೆ ಮಾಡಿದರು.
ಇದಕ್ಕೂ ಮುನ್ನ ಮಾಜಿ ಸಚಿವ ಎ ಮಂಜು ಜೆಡಿಎಸ್ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ ಅವರು, ಇದು ಈಗಾಗಲೇ ಅಧಿಕೃತವಾಗಿ ತೀರ್ಮಾನ ಆಗಿದೆ. ಪಕ್ಷ ಸೇರ್ಪಡೆ ದಿನಾಂಕವನ್ನು ರೇವಣ್ಣ ಅವರು ತೀರ್ಮಾನ ಮಾಡಬೇಕು. ಯಾಕೆಂದರೆ ಅವರು ಎಲ್ಲವನ್ನು ಪಂಚಾಂಗ ನೋಡಿಯೇ ತೀರ್ಮಾನ ಮಾಡುತ್ತಾರೆ. ಪಂಚಾಂಗ ಏನಿರುತ್ತೆ ಅದರ ಮೇಲೆ ತೀರ್ಮಾನ ಆಗುತ್ತೆ, ಎಲ್ಲವೂ ಸುಮಗವಾಗಿ ಆಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುಮಲತಾ ಬಿಜೆಪಿ ಸೇರ್ಪಡೆ ಅಚ್ಚರಿ ತಂದಿಲ್ಲ
ಮಂಡ್ಯ ಸಂಸದೆ ಬಿಜೆಪಿ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಮಂಡ್ಯ ರಾಜಕೀಯವಾಗಿ ಬೆಳವಣಿಗೆ ಏನಿದೆ ಗಮನಿಸಿದ್ದೇನೆ. ನರೇಂದ್ರ ಮೋದಿ ಅವರು ಬರುವ ಸಂದರ್ಭದಲ್ಲಿ ಅಲ್ಲಿಯ ಸಂಸದರು ಬಿಜೆಪಿ ಸೇರುವಂತಹದ್ದು, ನಾನೇನು ಮಹತ್ವ ಕೊಡಲ್ಲ. ಅದರ ಅವಶ್ಯಕತೆ ಕೂಡ ಇಲ್ಲ.
ಮಂಡ್ಯ ಜಿಲ್ಲೆಯ ಜನತೆ ತೀರ್ಮಾನ ಮಾಡುತ್ತಾರೆ. ಈ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಮಂಡ್ಯ ಜಿಲ್ಲೆಯ ಜನ ತೀರ್ಮಾನ ಮಾಡಬೇಕು, ಮಂಡ್ಯ ಜಿಲ್ಲೆಯ ಜನಕ್ಕೆ ಬಿಟ್ಟಿದ್ದೀನಿ. ಸ್ವಾಭಿಮಾನದ ವಿಷಯ ಅವರನ್ನು ಕೇಳಬೇಕು ನಾನು ಏಕೆ ಹೇಳಲಿ. ನನಗೆ ಬಹಳ ದಿವಸದ ಹಿಂದೆನೇ ಈ ಬೆಳವಣಿಗೆ ಗೊತ್ತಿತ್ತು. ನನಗೇನು ಇದು ಅಚ್ಚರಿ ಮೂಡಿಲ್ಲ. ಬಿಜೆಪಿಗೆ ಶಕ್ತಿ ಬರಬಹುದೇನಪ್ಪಾ ಗೊತ್ತಿಲ್ಲ, ಬಹಳ ಜನ ಆಸೆ ಇಟ್ಟುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: Madal Virupakshappa: ಲೋಕಾಯುಕ್ತ ಕಚೇರಿಗೆ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ಹಾಜರು; ವಕೀಲರು ಹೇಳಿದ್ದೇನು?
ಇದೇ ವೇಳೆ ಸುಮಲತಾ ಅವರು ವಿಧಾಸಸಭಾ ಚುನಾವಣೆಗೆ ಸ್ಪರ್ಧೆ ಮಾಡ್ತಾರೆ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಯಾರು ಎಲ್ಲಿ ಬೇಕಾದರೂ ಚುನಾವಣೆಗೆ ನಿಲ್ಲಬಹುದು. ಈ ದೇಶದ ಸಂವಿಧಾನದ ವ್ಯವಸ್ಥೆಯಲ್ಲಿ ಚುನಾವಣೆಗೆ ನಿಲ್ಲಲು ಎಲ್ಲರಿಗೂ ಹಕ್ಕಿದೆ. ಚುನಾವಣೆಗೆ ಯಾರು ನಿಲ್ಲುತ್ತಾರೆ, ನಿಲ್ಲಲ್ಲ, ಯಾರು ನಿಲ್ಲಬಾರದು ಅನ್ನೋದನ್ನು ಕಾರ್ಯಕರ್ತರು ತೀರ್ಮಾನ ಮಾಡುತ್ತಾರೆ.
ಮಂಡ್ಯದಲ್ಲಿ ಬಿಜೆಪಿಗೆ ಶಕ್ತಿ ಎಷ್ಟು ವೃದ್ಧಿಯಾಗುತ್ತೆ ನೋಡೋಣಾ ಎಂದು ಸವಾಲು ಎಸೆದರು. ಅಲ್ಲದೆ, ಪಂಚರತ್ನ ಯೋಜನೆಗಳು ಅನುಷ್ಠಾನಕ್ಕೆ ಬರಬೇಕಾದರೆ ಎಂದರೆ 123 ಸ್ಥಾನ ಗೆಲ್ಲಬೇಕು. ಆ 123 ಗುರಿ ನಾನು ಮುಟ್ಟಬೇಕಾದರೆ ಹಾಸನದಲ್ಲಿ ಏಳಕ್ಕೆ ಏಳು ಸ್ಥಾನ ಗೆಲ್ಲಬೇಕು ಅದು ನನ್ನ ಗುರಿ. ಅದನ್ನ ಹೊರತುಪಡಿಸಿ ಯಾರ ಬಗ್ಗೆಯೂ ಚರ್ಚೆ ಮಾಡುವ ಅವಶ್ಯಕತೆ ಇಲ್ಲ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ