‘ಕೊಟ್ಟವ ಕೋಡಂಗಿ, ಇಸ್ಕೊಂಡವ ಈರಭದ್ರ’ – ಜಿಎಸ್​ಟಿ ವಿಚಾರದಲ್ಲಿ ಕೇಂದ್ರದ ವಿರುದ್ಧ ಹೆಚ್​ಡಿಕೆ ಆಕ್ರೋಶ

ರಾಜ್ಯಗಳಿಗೆ ಸಾಲ ಕೊಡಿಸುವ ಬದಲು ಕೇಂದ್ರವೇ ಆರ್​ಬಿಐನಿಂದ ಸಾಲ ಪಡೆದು ರಾಜ್ಯಗಳಿಗೆ ಜಿಎಸ್ಟಿ ನಷ್ಟ ಪರಿಹಾರ ತುಂಬಿ ಕೊಡಲಿ ಎಂದೂ ಹೆಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿ ಸರಣಿ ಟ್ವೀಟ್ ಮಾಡಿದ್ದಾರೆ.

ಹೆಚ್.ಡಿ. ಕುಮಾರಸ್ವಾಮಿ

ಹೆಚ್.ಡಿ. ಕುಮಾರಸ್ವಾಮಿ

  • Share this:
ಬೆಂಗಳೂರು(ಆ. 29): ಕೇಂದ್ರ ಸರ್ಕಾರ ರಾಜ್ಯದ ಪಾಲಿನ ಜಿಎಸ್​ಟಿ ಹಣ ಕೊಡದಿರುವುದಕ್ಕೆ ಪ್ರತಿಪಕ್ಷಗಳು ಕೇಂದ್ರದ ವಿರುದ್ದ ಪುಲ್ ಗರಂ ಆಗಿವೆ. ಇಂದು ಕೇಂದ್ರ ಸರ್ಕಾರದ ವಿರುದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ನಷ್ಟ ತುಂಬಿಕೊಡುವ ಬದ್ಧತೆಯಿಂದ ಹಿಂದೆ ಸರಿದಿರುವ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳ ಮೇಲೆ ಗದಾ ಪ್ರಹಾರ ಮಾಡುವ ಮೂಲಕ  ಹೊಣೆಗೇಡಿತನ ಪ್ರದರ್ಶಿಸಿರುವುದು  ತೀವ್ರ ಖಂಡನೀಯ ಎಂದಿರುವ ಕುಮಾರಸ್ವಾಮಿ , ಈ ಕೊರೋನಾ ಸಂಕಷ್ಟ 'ದೇವರ ಅಸಮಾನ್ಯ ಆಟ' ಎನ್ನುವ ಮೂಲಕ ಒಕ್ಕೂಟ ವ್ಯವಸ್ಥೆಯ ರಾಜ್ಯಗಳ ಬಹುದೊಡ್ಡ ನಂಬಿಕೆಗೆ ಕೊಡಲಿಪೆಟ್ಟು ಕೊಟ್ಟಿದೆ ಎಂದು ಆರೋಪಿಸಿದ್ದಾರೆ.

ಸುಲಭದ ಬಡ್ಡಿದರದಲ್ಲಿ ಸಾಲ ತೆಗೆದುಕೊಳ್ಳಿ. ಪಡೆದ ಸಾಲವನ್ನು ರಾಜ್ಯಗಳೇ ತೀರಿಸಿ ಎನ್ನುವ ಆಯ್ಕೆ ಮುಂದಿಟ್ಟು  ರಾಜ್ಯಗಳ ಆರ್ಥಿಕತೆಗೆ ಕೇಂದ್ರ ಸರ್ಕಾರ 'ಕೊಳ್ಳಿ ' ಇಟ್ಟಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದಾರೆ.

ಅಲ್ಲದೆ ಯಾವುದೇ ಪ್ರಲೋಭನೆ ಒಡ್ಡುವ ಮೂಲಕ ರಾಜ್ಯಗಳ ಆರ್ಥಿಕತೆಯ ವ್ಯವಸ್ಥೆ ಮೇಲೆ ನಿಯಂತ್ರಣ ಸಾಧಿಸುವ ಕಾನೂನು, ತಿದ್ದುಪಡಿ ಮಸೂದೆಗಳು ಭವಿಷ್ಯದಲ್ಲಿ ಒಕ್ಕೂಟ ವ್ಯವಸ್ಥೆಯನ್ನು ಶಿಥಿಲಗೊಳಿಸುವ ಅಪಾಯ ಇಲ್ಲದಿಲ್ಲ ಎಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಪಾದಿಸಿದ್ದರು. ಇಂತಹದೊಂದು ಅಪಾಯ ಈಗ ಎದುರಾಗಿದೆ ಎಂದು ಮಾಜಿ ಸಿಎಂ ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಜಿಎಸ್‌ಟಿ ವಿಚಾರದಲ್ಲಿ ಬಿಜೆಪಿ ನಾಯಕರು ರಾಜ್ಯಕ್ಕೆ ಬಗೆದಿರುವ ದ್ರೋಹವನ್ನು ಸಹಿಸಲು ಸಾಧ್ಯವಿಲ್ಲ; ಸಿದ್ದರಾಮಯ್ಯ

ಈಗ ಸಂಗ್ರಹವಾಗಿರುವ ತೆರಿಗೆಯಲ್ಲಿ ರಾಜ್ಯ ಸರ್ಕಾರಗಳಿಗೆ ಪರಿಹಾರ ನೀಡಲು 97 ಸಾವಿರ ಕೋಟಿ ರೂ ಹಾಗೂ ಆದಾಯ ಕೊರತೆ ಎದುರಾಗಲಿರುವ 2.35 ಲಕ್ಷ ಕೋಟಿ ರೂಪಾಯಿಗಳನ್ನು ರಾಜ್ಯಗಳು ಸಾಲ ಪಡೆಯುವ ಆಯ್ಕೆಗಳನ್ನು ಮುಂದಿಟ್ಟಿದೆ. ಇನ್ನು, ಈಗ ಕೊಟ್ಟವ ಕೋಡಂಗಿ; ಇಸ್ಕೊಂಡವ ಈರಭದ್ರ” ಎಂಬಂತೆ ರಾಜ್ಯ ಸರ್ಕಾರಗಳು ಕಣ್ಣು ಬಾಯಿ ಬಿಡುತ್ತಿವೆ. ಈಗ ಕೊರೋನಾ ನೆಪ ಮುಂದಿಟ್ಟು ಅನ್ಯಾಯ ಮಾಡಿಬಿಟ್ಟರೆ ರಾಜ್ಯಸರ್ಕಾರಗಳು ಏನು ಮಾಡಬೇಕು? ಕೋವಿಡ್ 19  ಮತ್ತು ನೆರೆಯಿಂದ ಬಳಲಿರುವ  ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿವೆ. ತಾಳ ತಪ್ಪಿದ ಕೇಂದ್ರ ಸರ್ಕಾರದ ದಿಕ್ಕೆಟ್ಟ ಅರ್ಥವ್ಯವಸ್ಥೆ ಮತ್ತು ಮುನ್ನೋಟದ ಅಂದಾಜು ಗ್ರಹಿಸದ ವೈಫಲ್ಯದ ಫಲವಾಗಿ ರಾಜ್ಯ ಸರ್ಕಾರಗಳು ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡ ಪರಿಸ್ಥಿತಿಗೆ ಸಿಲುಕಿ ನಲುಗುತ್ತಿವೆ ಎಂದು ಆಕ್ರೋಶ ಪಟ್ಟಿದ್ದಾರೆ.















ರಾಜ್ಯಗಳಿಗೆ ಸಾಲ ಕೊಡಿಸುವ ಬದಲು ಕೇಂದ್ರವೇ ಆರ್​ಬಿಐನಿಂದ ಸಾಲ ಪಡೆದು ರಾಜ್ಯಗಳಿಗೆ ನಷ್ಟ ಪರಿಹಾರ ತುಂಬಿ ಕೊಡಲಿ ಎಂದೂ ಹೆಚ್.ಡಿ. ಕುಮಾರಸ್ವಾಮಿ ತಮ್ಮ ಟ್ವೀಟ್​ಗಳ ಮೂಲಕ ಒತ್ತಾಯ ಮಾಡಿದ್ದಾರೆ.
Published by:Vijayasarthy SN
First published: