HOME » NEWS » State » HD KUMARASWAMY ANGRY ON BS YEDIYURAPPA GOVERNMENT FOR HARASSING PEOPLE IN THE NAME OF KARNATAKA LOCKDOWN SCT

HD Kumaraswamy: ಲಾಕ್​ಡೌನ್ ಹೆಸರಲ್ಲಿ ಜನರ ಮೇಲೆ ದರ್ಪ ತೋರುವುದನ್ನು ನಿಲ್ಲಿಸಿ, ಪ್ಯಾಕೇಜ್ ಘೋಷಿಸಿ; ಹೆಚ್​.ಡಿ. ಕುಮಾರಸ್ವಾಮಿ ಒತ್ತಾಯ

Karnataka Lockdown: ಜನಸಂಚಾರವನ್ನು ತಡೆಯುವುದೇ ಲಾಕ್ ಡೌನ್ ಎಂದು ಭಾವಿಸಿರುವ ಸರ್ಕಾರ ಸಂಕಷ್ಟದಲ್ಲಿ ನಾಗರಿಕರನ್ನು ಮರೆತಿರುವುದು ದುರಂತ. ನಾವು ಸೂಚಿಸಿದ ಲಾಕ್ ಡೌನ್ ಇದಾಗಿರಲಿಲ್ಲ ಎಂದು ಹೆಚ್​.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

news18-kannada
Updated:May 10, 2021, 10:40 AM IST
HD Kumaraswamy: ಲಾಕ್​ಡೌನ್ ಹೆಸರಲ್ಲಿ ಜನರ ಮೇಲೆ ದರ್ಪ ತೋರುವುದನ್ನು ನಿಲ್ಲಿಸಿ, ಪ್ಯಾಕೇಜ್ ಘೋಷಿಸಿ; ಹೆಚ್​.ಡಿ. ಕುಮಾರಸ್ವಾಮಿ ಒತ್ತಾಯ
ಮಾಜಿ ಸಿಎಂ ಎಚ್​​ಡಿ ಕುಮಾರಸ್ವಾಮಿ.
  • Share this:
ಬೆಂಗಳೂರು (ಮೇ 10): ಇಂದಿನಿಂದ ಕರ್ನಾಟಕದಲ್ಲಿ 14 ದಿನಗಳ ಕಾಲ ಲಾಕ್​ಡೌನ್ ಘೋಷಣೆಯಾಗಿದೆ. 2 ದಿನಗಳ ಹಿಂದಿನಿಂದಲೇ ಪೊಲೀಸರು ಕಾರ್ಯೋನ್ಮುಖರಾಗಿದ್ದು, ಸಕಾರಣವಿಲ್ಲದೆ ರಸ್ತೆಗಿಳಿದವರಿಗೆ ಲಾಠಿ ರುಚಿ ತೋರಿಸುತ್ತಿದ್ದಾರೆ. ಈಗಾಗಲೇ ಸಾವಿರಾರು ವಾಹನಗಳನ್ನು ಸೀಜ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದು, ಲಾಕ್​ಡೌನ್​ನಿಂದ ಜೀವನ ನಡೆಸಲು ಸಮಸ್ಯೆ ಉಂಟಾಗಿರುವ ವರ್ಗಕ್ಕೆ ಸರ್ಕಾರ ಪರಿಹಾರ ಘೋಷಣೆ ಮಾಡಬೇಕು, ಮನೆಯಿಂದ ಹೊರಗೆ ಬರುವ ಜನರ ಮೇಲೆ ದರ್ಪ ತೋರಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಲಾಕ್ ಡೌನ್ ಅಲ್ಲದ ಕಠಿಣ ಲಾಕ್ ಡೌನ್ ಅನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಜನ ಹೊರಗೆ ಬಂದರೆ ದನಕ್ಕೆ ಬಡಿದಂತೆ ಬಡಿಯುವ ಲಾಕ್ ಡೌನ್ ಇಂದಿನಿಂದ ಜಾರಿಗೆ ಬರಲಿದೆ. ಜನಸಂಚಾರವನ್ನು ತಡೆಯುವುದೇ ಲಾಕ್ ಡೌನ್ ಎಂದು ಭಾವಿಸಿರುವ ಸರ್ಕಾರ ಸಂಕಷ್ಟದಲ್ಲಿ ನಾಗರಿಕರನ್ನು ಮರೆತಿರುವುದು ದುರಂತ. ನಾವು ಸೂಚಿಸಿದ ಲಾಕ್ ಡೌನ್ ಇದಾಗಿರಲಿಲ್ಲ. ನಾವು ಹೇಳಿದ್ದು ಜನಹಿತದ ಲಾಕ್ ಡೌನ್ ಆಗಿತ್ತು. ಆದರೆ ಸರ್ಕಾರ ಜನಸಾಮಾನ್ಯರಿಗೆ ಇನ್ನಷ್ಟು ತೊಂದರೆ ಮಾಡುತ್ತಿದೆ ಎಂದು ಹೆಚ್​.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.




ಲಾಕ್ ಡೌನ್‌ನಿಂದ ಜೀವ ಉಳಿಸಿ ಎಂದು ಮೊದಲೇ ಹೇಳಿದ್ದೆ. ಆದರೆ ಜೀವನಕ್ಕೆ ಆಗುವ ತೊಂದರೆಗಳಿಗೆ ಪರಿಹಾರ ಕ್ರಮಗಳಿರಬೇಕು. ಜನರ ಅಗತ್ಯವನ್ನು ಸರ್ಕಾರ ಭರಿಸಬೇಕೆಂದು ಹೇಳಿದ್ದೆ. ಆದರೆ, ಪರಿಹಾರ ಕ್ರಮಗಳಿಂದ ವಿಮುಖವಾಗಿ ಸರ್ಕಾರ ಬೇಜವಾಬ್ದಾರಿತನ ತೋರಿದೆ. ಜನರಿಗೆ ಎಲ್ಲಿ ಪರಿಹಾರ ನೀಡಬೇಕಾಗುತ್ತದೆಯೋ, ಜೀವನ ನಿರ್ವಹಣೆಗೆ ನೆರವು ನೀಡಬೇಕಾಗಿ ಬರುತ್ತದೆಯೋ ಎಂಬ ದುರಾಲೋಚನೆ ಮಾಡಿರುವ ಸರ್ಕಾರ ಲಾಕ್ ಡೌನ್ ಎಂಬ ಪದವನ್ನು ಧೈರ್ಯದಿಂದ ಹೇಳುತ್ತಲೇ ಇಲ್ಲ. ಕಠಿಣ ನಿಯಮ ಎಂದು ಹೇಳಿ ಲಾಕ್ ಡೌನ್ ನಿಂದ ದೂರ ನಿಂತಿದೆ. ಕೇಂದ್ರ ಸರ್ಕಾರವೂ ಇದೇ ನಡೆಯನ್ನು ಅನುಸರಿಸಿ ಜವಾಬ್ದಾರಿಯಿಂದ ನುಣುಚಿಕೊಂಡಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟೀಕಿಸಿದ್ದಾರೆ.


ಲಾಕ್ ಡೌನ್ ಎಂದರೆ ಜನ ಹೊರ ಹೋಗಲಾಗದ ಪರಿಸ್ಥಿತಿಯಾಗಿದೆ. ಬದುಕಿನ ಅಗತ್ಯವನ್ನು ದುಡಿದುಕೊಳ್ಳಲಾಗದ ದುಸ್ಥಿತಿ ನಿರ್ಮಾಣವಾಗಿದೆ. ಸರ್ಕಾರವೇ ಇದಕ್ಕೆ ಹೊಣೆ. ಹಾಗಾಗಿ, ಸರ್ಕಾರವೇ ಅವರಿಗೆ ಪರಿಹಾರ ನೀಡಬೇಕು ಎಂಬುದು ನನ್ನ ನಿಲುವು ಮತ್ತು ಸಲಹೆ. ಸರ್ಕಾರ ಸಂಪೂರ್ಣ ಲಾಕ್ ಡೌನ್ ಘೋಷಿಸಬೇಕಿತ್ತು ಮತ್ತು ಅದಕ್ಕೆ ಪರಿಹಾರ ನೀಡಬೇಕಿತ್ತು. ಆದರೆ ಈವರೆಗೆ ಪರಿಹಾರ ಪ್ಯಾಕೇಜ್ ನ ಮಾತೇ ಇಲ್ಲ ಎಂದು ಹೆಚ್​.ಡಿ. ಕುಮಾರಸ್ವಾಮಿ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.



ಮಹಾರಾಷ್ಟ್ರ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಕೇಂದ್ರವನ್ನು ಕಾಯದೇ ಲಾಕ್ ಡೌನ್ ಮಾಡಿವೆ. ಜನರಿಗೆ ಆಹಾರ ಸೇರಿದಂತೆ ಪರಿಹಾರ ಘೋಷಿಸಿವೆ. ಆಂಧ್ರಪ್ರದೇಶದಲ್ಲಿ ಸೋಂಕಿತರಿಗೆ ಉಚಿತ ಚಿಕಿತ್ಸೆ ಸಿಗುತ್ತಿದೆ. ಇದು ಸರ್ಕಾರಗಳ ಜವಾಬ್ದಾರಿಯುತ ನಡೆ. ಆದರೆ, ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೇಂದ್ರ ಸರ್ಕಾರದ ದುರ್ನಡತೆಯನ್ನು ರಾಜ್ಯ ಸರ್ಕಾರ ಅನುಸರಿಸಬಾರದು ಎಂದು ಹೆಚ್​.ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.



ಸರ್ಕಾರ ಹಾಗೂ ಪೊಲೀಸರು ಮನೆಯಿಂದ ಹೊರಗೆ ಬರುವ ಜನರ ಮೇಲೆ ದರ್ಪ ಪ್ರದರ್ಶಿಸುವುದನ್ನು ಬಿಡಲಿ. ಜನ ಹೊರಗೆ ಬಾರದಂತೆ ಅವರ ಅಗತ್ಯಗಳನ್ನು ಪೂರೈಸಲಿ. ಪರಿಹಾರ ಒದಗಿಸುವ ಕ್ರಮಗಳತ್ತ ಸರ್ಕಾರ ಗಮನಹರಿಸಬೇಕು. ನೆರೆಯ ರಾಜ್ಯಗಳು ಅನುಸರಿಸುತ್ತಿರುವ ಕ್ರಮಗಳನ್ನು ರಾಜ್ಯ ಅವಲೋಕಿಸಬೇಕು. ಜನರ ಆರೋಗ್ಯ ಎಷ್ಟು ಮುಖ್ಯವೋ ಜನರ ಬದುಕೂ ಅಷ್ಟೇ ಮುಖ್ಯವಾಗಬೇಕು ಎಂದು ಹೆಚ್​.ಡಿ. ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.
Published by: Sushma Chakre
First published: May 10, 2021, 10:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories