HDK Vs Siddaramaiah: ಸುಳ್ಳನ್ನು ಪದೇಪದೆ ಹೇಳುತ್ತಾ ಜನರನ್ನು ದಾರಿ ತಪ್ಪಿಸುವ ʼಸಿದ್ದಕಲೆʼ ಅವರಿಗೆ ಚೆನ್ನಾಗಿ ಸಿದ್ಧಿಸಿದೆ; ಸಿದ್ದರಾಮಯ್ಯ ವಿರುದ್ಧ ಎಚ್ಡಿಕೆ ಕಿಡಿ

ಯಾರೋ ಕಟ್ಟಿದ ಹುತ್ತಕ್ಕೆ ಹೊಕ್ಕು ರಾಜಕೀಯ ಮರುಹುಟ್ಟು ಪಡೆದು ಉಂಡ ಮನೆಗೆ ಕನ್ನ ಕೊರೆಯುವ ಮುನ್ನ ತಮ್ಮ ಹೇಳಿಕೆಗಳ ಬಗ್ಗೆ ಎಚ್ಚರಿಕೆ ವಹಿಸಲಿ. ಸಮಾಜದ ಶಾಂತಿಗೆ ಕೊಳ್ಳಿ ಇಡುವ ದುಸ್ಸಾಹಸಕ್ಕೆ ಕೈ ಹಾಕಿದರೆ ಜನರೇ ಉತ್ತರ ಕೊಡುತ್ತಾರೆ. ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ವಿಕೃತ ಆನಂದ ಅನುಭವಿಸುವುದು ಹೇಯ. ಮುಗ್ಧ ಜನರಲ್ಲಿ ಜಾತಿಯ ವಿಷಬೀಜ ಬಿತ್ತುವುದು ರಾಜಕೀಯ ನಿಕೃಷ್ಟತೆಯ ಪರಮಾವಧಿ ಎಂದು ಎಚ್​ಡಿಕೆ ಕಿಡಿ ಕಾರಿದ್ದಾರೆ.

ಸಿದ್ದರಾಮಯ್ಯ - ಎಚ್​ಡಿಕೆ

ಸಿದ್ದರಾಮಯ್ಯ - ಎಚ್​ಡಿಕೆ

  • Share this:
    ಬೆಂಗಳೂರು: ಜಾತಿ ಸಮೀಕ್ಷೆ ವರದಿ (Caste Survey Report) ಬಿಡುಗಡೆ ವಿಚಾರವಾಗಿ ಮಾಜಿ ಸಿಎಂಗಳಾದ ಸಿದ್ದರಾಮಯ್ಯ (Siddaramaiah) ಹಾಗೂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರ ನಡುವಿನ ವಾಕ್ಸಮರ ಮುಂದುವರೆದಿದೆ. ನಾನು ಸಿಎಂ ಆಗಿದ್ದಾಗ ಈ ವರದಿ ಬಂದಿರಲಿಲ್ಲ. ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ವರದಿ ಬಂದಿತ್ತು. ಆದರೆ, ಅವರು ವರದಿ ಬಿಡುಗಡೆ ಮಾಡಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರೆ, ಈ ವರದಿ ಸಿದ್ದರಾಮಯ್ಯ ಅವರ ಕಾಲದಲ್ಲಿಯೇ ಬಂದಿತ್ತು ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ. ಇದೀಗ ಮತ್ತೆ ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಅವರು ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದಾರೆ. 

    ಇಂದು ಸಿದ್ದರಾಮಯ್ಯ ಮಾತಿಗೆ ಕುಮಾರಸ್ವಾಮಿ ಅವರು ಟ್ವಿಟ್​ ಮೂಲಕ ತಿರುಗೇಟು ನೀಡಿದ್ದಾರೆ. ಸುಳ್ಳನ್ನು ಪದೇಪದೆ ಹೇಳುತ್ತಾ ಜನರನ್ನು ದಾರಿ ತಪ್ಪಿಸುವ ʼಸಿದ್ದಕಲೆʼ ಅವರಿಗೆ ಚನ್ನಾಗಿ ಸಿದ್ಧಿಸಿದೆ ಎಂಬುದನ್ನು ನಾನು ಬಲ್ಲೆ. ನಿತ್ಯವೂ ʼಸುಳ್ಳಿನ ಜಪʼ ಮಾಡುವುದೇ ಅವರಿಗೆ ನಿತ್ಯ ಕಾಯಕ. ಇದು ಸತ್ಯಕ್ಕೆ ಮತ್ತು ರಾಜ್ಯಕ್ಕೆ ಎಸಗುವ ಅಪಚಾರ ಹಾಗೂ ಶಾಂತ ಸಮಾಜವನ್ನು ಒಡೆಯುವ ಹುನ್ನಾರ. ನಾನು ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಸಿದ್ದರಾಮಯ್ಯ ಅವರು ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರು. ಆಗ ಕಾಂತರಾಜು ಅವರ ವರದಿಯ ಬಗ್ಗೆ ಅವರು ಪ್ರಸ್ತಾಪವನ್ನೇ ಮಾಡಲಿಲ್ಲ ಮತ್ತೂ ಚರ್ಚೆ ಮಾಡುವ ಧೈರ್ಯವನ್ನೇಕೆ ತೋರಲಿಲ್ಲ? ಹೀಗಾಗಿ ಕೋಪದ ಪ್ರಶ್ನೆ ಎಲ್ಲಿಂದ ಬರುತ್ತದೆ? ಎಂದು ಪ್ರಶ್ನೆ ಮಾಡಿದ್ದಾರೆ.

    ಆ ವರದಿಯಲ್ಲಿ ಸಹಿಯೇ ಇಲ್ಲ ಎಂದು ಸ್ವತಃ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರೇ ಹೇಳಿಬಿಟ್ಟಿದ್ದಾರೆ. ಮುಖ್ಯಮಂತ್ರಿ ಆಗಿದ್ದವರು, ಈಗ ಪ್ರತಿಪಕ್ಷ ನಾಯಕರೂ ಆಗಿರುವ ʼರಾಜಕೀಯ ಪಂಡಿತʼರಿಗೆ ಹೇಳಿಕೆ ನೀಡುವ ಮುನ್ನ ಆ ಬಗ್ಗೆ ಕನಿಷ್ಠ ಸಾಮಾನ್ಯ ಪ್ರಜ್ಞೆ ಇರಬೇಕಾಗಿತ್ತು. ಜಾತಿ ಗಣತಿ ವರದಿ ಬಗ್ಗೆ ಇಷ್ಟೆಲ್ಲ ಪ್ರೀತಿ- ಕಾಳಜಿ ತೋರುವ ಈ ಮಹಾನುಭಾವರು, ನಿನ್ನೆಯವರೆಗೂ ನಡೆದ ವಿಧಾನಮಂಡಲ ಕಲಾಪದಲ್ಲಿ ಏಕೆ ಪ್ರಸ್ತಾಪ ಮಾಡಲಿಲ್ಲ? ತಮ್ಮ ಪಕ್ಷದಲ್ಲೇ ತಮಗೆ ಬೀಳುತ್ತಿರುವ ಒಳ ಏಟುಗಳ ಹೊಡೆತ ತಾಳಲಾಗದೆ, ಅದೆಲ್ಲವನ್ನೂ ಮುಚ್ಚಿಟ್ಟುಕೊಳ್ಳಲು ಬಹಿರಂಗವಾಗಿ ಬೊಬ್ಬೆ ಹೊಡೆಯವುದು ಹತಾಶೆ ಮತ್ತು ರಾಜಕೀಯ ಅವಕಾಶವಾದಿತನವಷ್ಟೇ ಎಂದು ಎಚ್​ಡಿಕೆ ಅವರು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.



    ಇದನ್ನು ಓದಿ: Siddaramaiah: ಕುಮಾರಸ್ವಾಮಿ ಸಿಎಂ ಆಗಿದ್ದಾಗ ಸಚಿವ ಪುಟ್ಟರಂಗಶೆಟ್ಟಿಗೆ ಹೆದರಿಸಿ ಜಾತಿ ಸಮೀಕ್ಷೆ ವರದಿ ಬರದಂತೆ ತಡೆದರು; ಸಿದ್ದರಾಮಯ್ಯ ನೇರ ಆರೋಪ

    ಇಂತಹ ಪ್ರಮುಖ ವರದಿಯನ್ನು ಸಲ್ಲಿಸಬೇಕಾದ್ದು ಮುಖ್ಯಮಂತ್ರಿಗಳಿಗೇ ವಿನಾಃ ಸಚಿವರಿಗಲ್ಲ. ಸುದೀರ್ಘ ರಾಜಕೀಯ ಅನುಭವ, ಸಂಸದೀಯ ಚರಿತ್ರೆ ಇದ್ದರಷ್ಟೇ ಸಾಲದು, ಕೊಂಚ ಸಾಮಾನ್ಯ ಜ್ಞಾನವೂ ಇರಲಿ. ಪದೇಪದೆ ʼಸಿದ್ದಹಸ್ತಿಕೆʼ ತೋರುವ ಪ್ರಯತ್ನ ಬೇಡ. ಯಾರೋ ಕಟ್ಟಿದ ಹುತ್ತಕ್ಕೆ ಹೊಕ್ಕು ರಾಜಕೀಯ ಮರುಹುಟ್ಟು ಪಡೆದು ಉಂಡ ಮನೆಗೆ ಕನ್ನ ಕೊರೆಯುವ ಮುನ್ನ ತಮ್ಮ ಹೇಳಿಕೆಗಳ ಬಗ್ಗೆ ಎಚ್ಚರಿಕೆ ವಹಿಸಲಿ. ಸಮಾಜದ ಶಾಂತಿಗೆ ಕೊಳ್ಳಿ ಇಡುವ ದುಸ್ಸಾಹಸಕ್ಕೆ ಕೈ ಹಾಕಿದರೆ ಜನರೇ ಉತ್ತರ ಕೊಡುತ್ತಾರೆ. ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ವಿಕೃತ ಆನಂದ ಅನುಭವಿಸುವುದು ಹೇಯ. ಮುಗ್ಧ ಜನರಲ್ಲಿ ಜಾತಿಯ ವಿಷಬೀಜ ಬಿತ್ತುವುದು ರಾಜಕೀಯ ನಿಕೃಷ್ಟತೆಯ ಪರಮಾವಧಿ ಎಂದು ಎಚ್​ಡಿಕೆ ಕಿಡಿ ಕಾರಿದ್ದಾರೆ.

    ಸಿದ್ದರಾಮಯ್ಯ ಹೇಳಿದ್ದೇನು?

    ಜಾತಿ ಸಮೀಕ್ಷೆ ವರದಿ (Caste Survey Report) ವಿಚಾರವಾಗಿ ಇಂದು ಮತ್ತೊಮ್ಮೆ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ ಅವರು, ಜಾತಿ‌ ಸಮೀಕ್ಷೆ ವರದಿ ನಾನು ಸಿಎಂ ಆಗಿದ್ದಾಗ ಪೂರ್ಣವಾಗಿರಲಿಲ್ಲ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಪೂರ್ಣವಾಯ್ತು. ಪುಟ್ಟರಂಗಶೆಟ್ಟಿ ಹಿಂದುಳಿದ ವರ್ಗಗಳ ಸಚಿವನಾಗಿದ್ದರು. ವರದಿ ಪೂರ್ಣವಾಗಿದೆ ಎಂದು ಮಾಹಿತಿ ನೀಡಿದರು. ಬಿಡುಗಡೆಗೆ ಪ್ರಯತ್ನ ಮಾಡಲು ಹೋಗಿದ್ದ ಪುಟ್ಟರಂಗಶೆಟ್ಟಿ. ಆದರೆ ಕುಮಾರಸ್ವಾಮಿ ಬಿಡುಗಡೆ ಮಾಡಲಿಲ್ಲ. ಸಚಿವ ಪುಟ್ಟರಂಗಶೆಟ್ಟಿಗೆ ಕುಮಾರಸ್ವಾಮಿ ಅವರು ಹೆದರಿಸಿ ಬಿಟ್ಟಿದ್ರು. ಕುಮಾರಸ್ವಾಮಿಗೆ ಹೆದರಿ ಪುಟ್ಟರಂಗಶೆಟ್ಟಿ ಜಾತಿ ಸಮೀಕ್ಷೆ ವರದಿ ಬಿಡುಗಡೆ ಗೋಜಿಗೆ ಹೋಗಲಿಲ್ಲ. ಇದನ್ನು ಹೇಳಿದರೆ ಕುಮಾರಸ್ವಾಮಿಗೆ ಕೋಪ ಬರುತ್ತದೆ. ಇದ್ದಿದ್ದು ಇದ್ದ ಹಾಗೆ ಹೇಳಿದರೆ ಕೋಪ ಬರುತ್ತದೆ ಎಂದು ಹೇಳುವ ಮೂಲಕ ಕುಮಾರಸ್ವಾಮಿಗೆ ಅವರಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು. ಸಿದ್ದರಾಮಯ್ಯ ಕೂತ್ಕೊಂಡು ಜಾತಿ ಸಮೀಕ್ಷೆ ವರದಿ ಬರೆಸಿಬಿಟ್ಟಿದ್ದಾನೆ ಎನ್ನುತ್ತಾರೆ. ಎಲ್ಲ ಜನಾಂಗದ ಸರ್ವೆ ಅದು. ಯಾರಿಗೂ ಅನ್ಯಾಯ ಮಾಡುವ ಉದ್ದೇಶ ಇಲ್ಲ. ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ ಎಂದು ಹೇಳಿದರು.
    Published by:HR Ramesh
    First published: