ಧರ್ಮೇಗೌಡರನ್ನು ನೆನೆದು ಕಣ್ಣೀರು ಹಾಕಿದ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ

ಧರ್ಮೇಗೌಡರು ನನ್ನ ರಾಜಕೀಯ ಬದುಕಿನ ಮರೆಯಲಾಗದ ವ್ಯಕ್ತಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಭಗವಂತ‌ ಮೋಕ್ಷ ಕೊಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ. ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಸಿಗಲಿ.  ಅವರ ಮಕ್ಕಳು ಧರ್ಮೇಗೌಡರ ಹೆಸರು ಉಳಿಸಿಕೊಳ್ಳಲಿ ಎಂದು ನಾನು ಈ ಸಂದರ್ಭದಲ್ಲಿ ಹೇಳುತ್ತೇನೆ ಎಂದರು.

ಹೆಚ್.ಡಿ. ದೇವೇಗೌಡ

ಹೆಚ್.ಡಿ. ದೇವೇಗೌಡ

 • Share this:
  ಬೆಂಗಳೂರು(ಡಿ.29): ವಿಧಾನಪರಿಷತ್ ಉಪಸಭಾಪತಿ ಎಸ್​.ಎಲ್.ಧರ್ಮೇಗೌಡ ಅವರ ನಿಧನಕ್ಕೆ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ಧರ್ಮೇಗೌಡರನ್ನು ನೆನೆದು ಕಣ್ಣೀರು ಸಹ ಹಾಕಿದ್ದಾರೆ. ಧರ್ಮೇಗೌಡರ  ನಿಧನ ವೈಯಕ್ತಿಕವಾಗಿ ನನಗೆ ಬಹಳ ನೋವುಂಟು ಮಾಡಿದೆ. ಜೀವನದಲ್ಲಿ ಅತ್ಯಂತ ಘೋರವಾದ ಘಟನೆ ಇದು. ಅವರ ತಂದೆ ಕಾಲದಿಂದಲೂ 1972ರಲ್ಲಿ ವಿರೋಧ ಪಕ್ಷದ ನಾಯಕ‌ನ ಸಮಯದಿಂದಲೇ ಆ ಕುಟುಂಬಕ್ಕೂ ನನಗೂ ಮರೆಯಲಾದ ಬಾಂಧವ್ಯ ಇತ್ತು.  ಧರ್ಮೇಗೌಡರು ತಮ್ಮ ತಂದೆ ಹೆಸರನ್ನು ಉಳಿಸಿಕೊಂಡಿದ್ದರು ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಭಾವುಕರಾದರು.

  ಮುಂದುವರೆದ ಅವರು,  ಪಂಚಾಯತಿ, ಬ್ಯಾಂಕ್ ಚುನಾವಣೆಯಿಂದ ಹಿಡಿದು ಶಾಸಕರಾಗಿ, ವಿರೋಧ ಪಕ್ಷದ ಸದಸ್ಯರಾಗಿ, ಎಮ್‌ಎಲ್ ಸಿಯಾಗಿ, ಉಪ ಸಭಾಪತಿ ಯಾಗಿ ನಮ್ಮ ಜೊತೆಗಿದ್ದರು.  ಕೊನೆಯ ಘಟ್ಟದಲ್ಲಿ ನಡೆದ ಘಟನೆಗಳಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರು ಬಹಳ ಸೂಕ್ಷ್ಮ ಮನಸ್ಸಿನ ವ್ಯಕ್ತಿ. ಹೆಂಡತಿ ಮಕ್ಕಳಿಗೆ ಅಂತಿಮವಾಗಿ ಕಾಗದ ಬರೆದು ನೋವಿಂದ ಹೊರಟಿದ್ದಾರೆ ಎಂದು ಧರ್ಮೇಗೌಡರನ್ನು ನೆನೆದು ದೇವೇಗೌಡರು ಕಣ್ಣೀರು ಹಾಕಿದರು.

  ಉಪಸಭಾಪತಿ ಎಸ್​.ಎಲ್​.ಧರ್ಮೇಗೌಡ ನಿಧನಕ್ಕೆ ಎಚ್​.ಡಿ.ದೇವೇಗೌಡ, ಸಿಎಂ ಬಿಎಸ್​ವೈ ಸೇರಿ ಹಲವು ಗಣ್ಯರ ಸಂತಾಪ

  ಧರ್ಮೇಗೌಡರು ನನ್ನ ರಾಜಕೀಯ ಬದುಕಿನ ಮರೆಯಲಾಗದ ವ್ಯಕ್ತಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಭಗವಂತ‌ ಮೋಕ್ಷ ಕೊಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ. ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಸಿಗಲಿ.  ಅವರ ಮಕ್ಕಳು ಧರ್ಮೇಗೌಡರ ಹೆಸರು ಉಳಿಸಿಕೊಳ್ಳಲಿ ಎಂದು ನಾನು ಈ ಸಂದರ್ಭದಲ್ಲಿ ಹೇಳುತ್ತೇನೆ ಎಂದರು.

  ಈ ಘಟನೆ ಮರೆಯಲಾಗದ ನೋವು ತಂದಿದೆ. ಪರಿಷತ್ ಘಟನೆ ನಡೆಯುವ ದಿನ ಬೆಳಿಗ್ಗೆ ನನ್ನನ್ನು ಭೇಟಿಯಾಗಿದ್ದರು. ಅವರಿಗೆ ತುಂಬಾ ಸಲಹೆ ಕೊಟ್ಟಿದ್ದೆ ಅವತ್ತು. ಸಭಾಪತಿಯ ಸ್ಥಾನಕ್ಕೆ ನಿಮ್ಮನ್ನು ಕರೆದು ಕೂರುವ ಸನ್ನಿವೇಶ ಬಂದರೆ ಮಾತ್ರ ನೀವು ಹೋಗಿ ಕೂರಬೇಕು ಅಂತ ಹೇಳಿದ್ದೆ.  ಯಾರೇ ಒತ್ತಡ ಹಾಕಿದ್ರು ಕೂರಬಾರದು. ನಮಗೆ ಅದರ ಅವಶ್ಯಕತೆ ಇಲ್ಲ ಈ‌ ತಿಕ್ಕಾಟದಲ್ಲಿ ನಾವು ಬಲಿಪಶು ಆಗಬಾರದು ಅಂತ ಹೇಳಿದ್ದೆ. ಅವತ್ತೇ ಕೊನೆಯ ಬಾರಿ ಅವರ ಜೊತೆ ಮಾತನಾಡಿದ್ದು. ಅವತ್ತು ಜೊತೆಗೆ ಕೂತು ಕಾಫಿ ಕುಡಿದಿದ್ದೆವು ಎಂದು ಹೇಳಿದಾಗ ದೇವೇಗೌಡರ ಕಣ್ಣಂಚಲ್ಲಿ ನೀರು ಜಿನುಗಿತ್ತು.

  ಅಂತಿಮ ದರ್ಶನಕ್ಕೆ ಹೋಗುತ್ತೇನೆ. ಆದರೆ ಆರೋಗ್ಯದಲ್ಲಿ ಸ್ವಲ್ಪ ಏರು-ಪೇರಿದೆ. ನೋಡಿಕೊಂಡು ಹೋಗ್ತೇನೆ. ನಾನು ಯಾರನ್ನೂ ದೂರಲಿಕ್ಕೆ ಹೋಗುವುದಿಲ್ಲ ಅವತ್ತು ನಡೆದ ಘಟನೆಯಿಂದ ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.

  (ವರದಿ:ಆಶಿಕ್ ಮುಲ್ಕಿ)
  Published by:Latha CG
  First published: