HD Deve Gowda: ಸಾಮೂಹಿಕ ನಾಯಕತ್ವದ ಮೂಲಕ ಪಕ್ಷ ಬಲಗೊಳಿಸುತ್ತೇವೆ; ಎಚ್​ಡಿ ದೇವೇಗೌಡ

ನಮ್ಮ ಪಕ್ಷ ಎಂದರೆ ದೇವೇಗೌಡ, ಕುಮಾರಸ್ವಾಮಿಯಷ್ಟೇ ಆಗಬಾರದು. ಪಕ್ಷದಲ್ಲಿ ಸಮರ್ಥ ನಾಯಕರಿದ್ದಾರೆ. ಅವರನ್ನ ಹೇಗೆ ಬಳಸಿಕೊಳ್ಳಬೇಕೆಂಬ ಬಗ್ಗೆ ನಿರ್ಧರಿಸುತ್ತೇವೆ.

ಹೆಚ್.ಡಿ. ದೇವೇಗೌಡ

ಹೆಚ್.ಡಿ. ದೇವೇಗೌಡ

  • Share this:
    ಬೆಂಗಳೂರು (ಜೂ. 1):  ನಾನು ಪ್ರಧಾನಿಯಾಗಿ ಇಂದಿಗೆ 25 ವರ್ಷ ವಾಗಿದೆ. ಇದರ ಬೆಳ್ಳಿಹಬ್ಬ ಆಚರಣೆ ನಡೆಯುತ್ತಿದೆ. ನನಗೆ ಸಹಕಾರ ಕೊಟ್ಟು, ಕೈಲಾದ ಶಕ್ತಿ ತುಂಬಿದ್ದೀರ. ಇದಕ್ಕೆ ನಿಮಗೆ ನಾನು ಅಭಾರಿಯಾಗಿದ್ದೇನೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಎಲ್ಲರಿಗೂ ಧನ್ಯವಾದ ತಿಳಿಸಿದರು. ಬೆಳ್ಳಿ ಮಹೋತ್ಸವದ ಸಂಭ್ರಮದ ಹಿನ್ನಲೆ ಜೆಪಿ ಭವನದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿರುವ ಅವರು, ಸದ್ಯ ನನ್ನ ಮುಂದೆ ಇರುವುದು ಪ್ರಾದೇಶಿಕ ಪಕ್ಷವನ್ನು ಉಳಿಸುವ ಜವಾಬ್ದಾರಿ. ನಮ್ಮದು ಪ್ರಾದೇಶಿಕ ಪಕ್ಷವಾಗಿದ್ದು, ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಬೆಳೆಯ ಬೇಕಿದೆ ಎಂದರು. 

    ಎರಡು ತಿಂಗಳಲ್ಲಿ ಪಕ್ಷಕ್ಕೆ ಬಲ

    ತಮ್ಮ ಪಕ್ಷಕ್ಕೆ ಬಲಪಡಿಸಲು ಮುಖಂಡರನ್ನ ಒಟ್ಟಾಗಿ ಸೇರಿಸಿ ಶಕ್ತಿ‌ ತುಂಬುತ್ತೇನೆ. ಈ ಸಂಬಂಧ ಕುಮಾರಸ್ವಾಮಿ ಜೊತೆ ಚರ್ಚಿಸುತ್ತೇನೆ. ಪಕ್ಷದಲ್ಲಿನ ಹಳೆಯ ಘಟಕಗಳನ್ನು ಜೂನ್, ಜುಲೈನಲ್ಲಿ ಬದಲಾವಣೆ ಮಾಡುತ್ತೇವೆ. ಪ್ರತಿ ತಾಲೂಕು,ಜಿಲ್ಲಾ ಘಟಕ ಬಲಗೊಳಿಸುತ್ತೇವೆ. ರಾಜ್ಯ ಘಟಕವನ್ನೂ ಬಲಗೊಳಿಸುತ್ತೇವೆ. ಎರಡು ತಿಂಗಳಲ್ಲಿ ಹೊಸ ಘಟಕಗಳು ಇರಬೇಕು. ಜುಲೈ ನಂತರ ಸದಸ್ಯತ್ವ ಅಭಿಯಾನ ಮಾಡುತ್ತೇವೆ. ಸಾಮೂಹಿಕ ನಾಯಕತ್ವಕ್ಕೆ ‌ಹೆಚ್ಚಿನ ಒತ್ತು ಕೊಡುತ್ತೇವೆ ಎಂದು ತಿಳಿಸಿದರು.

    ಸಾಮೂಹಿಕ ನಾಯಕತ್ವಕ್ಕೆ ಒತ್ತು

    ನಮ್ಮ ಪಕ್ಷ ಎಂದರೆ ದೇವೇಗೌಡ, ಕುಮಾರಸ್ವಾಮಿಯಷ್ಟೇ ಆಗಬಾರದು. ಇದು ನನ್ನ ರಾಜಕೀಯ ಜೀವನದ ಉದ್ದೇಶ. ಪಕ್ಷದಲ್ಲಿ ಸಮರ್ಥ ನಾಯಕರಿದ್ದಾರೆ. ಅವರನ್ನ ಹೇಗೆ ಬಳಸಿಕೊಳ್ಳಬೇಕೆಂಬ ಬಗ್ಗೆ ನಿರ್ಧರಿಸುತ್ತೇವೆ. ಬಿಟ್ಟು ಹೋದವರ ಬಗ್ಗೆ ನಾನು ಮಾತನಾಡಲ್ಲ. ತಾಲೂಕು ಮಟ್ಟದಿಂದ ರಾಜ್ಯಮಟ್ಟದವರೆಗೆ ಬಲಗೊಳಿಸುತ್ತೇವೆ. ಯಾರು ಪ್ರಾಮಾಣಿಕರಿದ್ದಾರೆ ಅವರಿಗೆ ಅವಕಾಶ ಕೊಡುತ್ತೇವೆ. ಕುಮಾರಸ್ವಾಮಿ ನಾಯಕತ್ವದಲ್ಲಿ ಶಕ್ತಿ ತುಂಬುತ್ತೇನೆ ಎಂದರು.

    ಕಾರ್ಯಕರ್ತರನ್ನು ಒಗ್ಗೂಡಿಸುತ್ತೇವೆ

    ರಾಜ್ಯದಲ್ಲಿ ಇರುವ ಎರಡು ರಾಷ್ಟ್ರೀಯ ಪಕ್ಷಗಳ ಮಧ್ಯೆ ನಾವು ಉಳಿಯಬೇಕು. ಅವುಗಳ ಮಧ್ಯೆ ನಾವು ಬೆಳೆಯುವ ಆತ್ಮವಿಶ್ವಾಸವಿದೆ. ಅದಕ್ಕೆ ಸಾಮೂಹಿಕ ನಾಯಕತ್ವದಲ್ಲೇ ಹೋಗುತ್ತೇವೆ. ಎರಡು ತಿಂಗಳಲ್ಲಿ ಹೊಸ ರೂಪರೇಷೆ ಮಾಡುತ್ತೇವೆ. ಯುವ ಕಾರ್ಯಕರ್ತರನ್ನೂ ಒಟ್ಟುಗೂಡಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಇದನ್ನು ಓದಿ: ಎಚ್​.ಡಿ. ದೇವೇಗೌಡ ಪ್ರಧಾನಿಯಾಗಿ ಇಂದಿಗೆ 25 ವರ್ಷ; ನನಗೆ ನಿವೃತ್ತಿಯೇ ಇಲ್ಲ ಎಂದ ಮಣ್ಣಿನ ಮಗ!

    ಇದೇ ವೇಳೆ ರಾಜ್ಯದಲ್ಲಿ ಕೊರೋನಾ ನಿಯಂತ್ರಣ ಹಿನ್ನಲೆ ವಿಧಿಸಿರುವ ಲಾಕ್​ಡೌನ್​ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಲಾಕ್​ಡೌನ್​ ಮುಂದುವರೆಸುವಂತೆ ಸರ್ಕಾರದ ಮೂವರು ಮಂತ್ರಿಗಳು ತಿಳಿಸಿದ್ದಾರೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ನನ್ನ ಸಲಹೆಯೂ ಕೂಡ ಇದೆ ಆಗಿದೆ. ರಾಜ್ಯದಲ್ಲಿ ಸೋಂಕು ಕಡಿಮೆಯಾಗಿರಬಹುದು. ಆದರೆ ಸೋಂಕು ಬಹಳ ಅಪಾಯಕಾರಿ. ಈ ಹಿನ್ನಲೆ ಬಿಗಿ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.

    ಜೆಡಿಎಸ್​ ವರಿಷ್ಠ ದೇವೇಗೌಡರು ಪ್ರಧಾನ ಮಂತ್ರಿಯಾಗಿ ಅಧಿಕಾರಕ್ಕೆ ಏರಿ ಇಂದು 25 ವರ್ಷವಾಗಿದೆ. 1996ರಲ್ಲಿ ಅವರು ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ದೆಹಲಿ ರಾಜಕಾರಣದ ಬಗ್ಗೆ ಕಿಂಚಿತ್ತೂ ಅನುಭವವಿಲ್ಲದ ದೇವೇಗೌಡರು ಈ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದು ಆಕಸ್ಮಿಕವೂ ಹೌದು, ಅಚ್ಚರಿಯೂ ಹೌದು. ತೃತೀಯ ರಂಗದ ನಾಯಕರು ಸೇರಿ ದೇವೇಗೌಡರನ್ನು ಭಾರತದ ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದರು. ಕೇಂದ್ರದಲ್ಲಿ 11 ತಿಂಗಳ ಕಾಲ ತೃತೀಯ ರಂಗದ ಸರ್ಕಾರವನ್ನು ದೇವೇಗೌಡರು ಮುನ್ನಡೆಸಿ ಎರಡೂವರೆ ದಶಕಗಳೇ ಕಳೆದುಹೋಗಿವೆ. ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ದಿನದ ಬೆಳ್ಳಿ ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಭಾರತದ ಏಕೈಕ ಮಾಜಿ ಪ್ರಧಾನಿಯೆಂದರೆ ಅದು ದೇವೇಗೌಡರು.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
    Published by:Seema R
    First published: