ಟೀಚರ್ಸ್​ ಡೇ | 'ರೊಟ್ಟಿ ಕದ್ದು ಬೆತ್ತದ ರುಚಿ ನೋಡಿದ್ದೆ': ನೆಚ್ಚಿನ ಮೇಷ್ಟ್ರನ್ನು ನೆನಪಿಸಿಕೊಂಡ ದೇವೇಗೌಡರು


Updated:September 5, 2018, 11:45 AM IST
ಟೀಚರ್ಸ್​ ಡೇ | 'ರೊಟ್ಟಿ ಕದ್ದು ಬೆತ್ತದ ರುಚಿ ನೋಡಿದ್ದೆ': ನೆಚ್ಚಿನ ಮೇಷ್ಟ್ರನ್ನು ನೆನಪಿಸಿಕೊಂಡ ದೇವೇಗೌಡರು
ಹೆಚ್.ಡಿ. ದೇವೇಗೌಡ

Updated: September 5, 2018, 11:45 AM IST
ನ್ಯೂಸ್​ 18 ಕನ್ನಡ

ಬೆಂಗಳೂರು(ಸೆ.05): ಇಂದು ಶಿಕ್ಷಕರ ದಿನ. ವಿದ್ಯಾರ್ಥಿಗಳೆಲ್ಲರೂ ತಮ್ಮ ಶಿಕ್ಷಕರಿಗೆ ಶುಭ ಹಾರೈಸಿದರೆ, ಶಿಕ್ಷಣ ಮುಗಿಸಿ ಉದ್ಯೋಗದಲ್ಲಿರುವವರು ಹಾಗೂ ಹಿರಿಯರು ತಮ್ಮ ಶಿಕ್ಷಕರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ತಮ್ಮ ಶಾಲಾ ದಿನಗಳನ್ನು ಮೆಲುಕು ಹಾಕುತ್ತಿದ್ದಾರೆ. ಬಾಲ್ಯದ, ಶಾಲೆ, ಕಾಲೇಜಿನಲ್ಲಿ ಕಳೆದ ಆ ಸವಿ ನೆನಪುಗಳನ್ನು ನೆನಪಿಸಿಕೊಳ್ಳುವಂತೆ ಮಾಡುತ್ತದೆ ಈ ದಿನ. ಈ ಶಿಕ್ಷಕರ ದಿನದಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್​ ನಾಯಕ ಹೆಚ್​. ಡಿ ದೇವೇಗೌಡ ಕೂಡಾ ತಮ್ಮ ಪ್ರಾಥಮಿಕ ಶಾಲೆಯ ದಿನಗಳನ್ನು ನೆನಪಿಸಿಕೊಂಡು ತಾವು ಕಲಿತ ಮಹತ್ವದ ಪಾಠದ ಕುರಿತಾಗಿ ತಿಳಿಸಿದ್ದಾರೆ.

ದೇವೇಗೌಡರು ಹೊಳೆನರಸೀಪುರದ ಹಳೆಕೋಟೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದರು. ಈ ಸಂದರ್ಭದಲ್ಲಾದ ಘಟನೆಯೊಂದನ್ನು ನೆನಪಿಸಿಕೊಂಡಿರುವ ದೇವೇಗೌಡರು "ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ವೇಳೆ ನನಗಲ್ಲಿ ಪರಮೇಶ್ವರಯ್ಯ ಎಂಬ ಶಿಕ್ಷಕರಿದ್ದರು. ಅವರು ಬಹಳ ಶಿಸ್ತಿನ ಮನುಷ್ಯರು. ಮಕ್ಕಳಲ್ಲಿ ಸದಭಿರುಚಿ ಮೂಡುವಂತೆ ಪಾಠ ಮಾಡುತ್ತಿದ್ದರು. ನನ್ನ ತಾಯಿ ಅವರ ಮನೆಗೆ ಹಾಲು, ತುಪ್ಪ, ಬೆಣ್ಣೆ, ತರಕಾರಿ ಕೊಡುತ್ತಿದ್ದರು. ಆದರೆ ಒಂದು ದಿನ ನಾನು ಮತ್ತು ಗೆಳೆಯರು ಅವರು ಮಧ್ಯಾಹ್ನದ ಊಟಕ್ಕೆ ತಂದಿದ್ದ ರೊಟ್ಟಿಯನ್ನು ಕದ್ದಿದ್ದೆವು" ಎಂದಿದ್ದಾರೆ.

ಮುಂದೇನಾಯ್ತು?

ಇದಾದ ಬಳಿಕ ಏನಾಯ್ತು ಎಂದು ಹೇಳಿರುವ ದೇವೇಗೌಡರು "ರೊಟ್ಟಿ ಕದ್ದ ಕುರಿತಾಗಿ ಕೇಳಿದಾಗ ಯಾರೂ ಒಪ್ಪಲಿಲ್ಲ. ನಾನು ಒಪ್ಪಿಕೊಂಡು ಬೆತ್ತದ ರುಚಿ ತಿಂದೆ. ಅವರ ಮನೆಯಲ್ಲಿ ಅವರ ಹೆಂಡತಿ ನನ್ನ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದರು ಹೀಗಾಗಿ ಮಾರನೇ ದಿನ ನನ್ನನ್ನು ಕರೆದು ಬುದ್ಧಿವಾದ ಹೇಳಿದರು. ಯಾವುದೇ ವಸ್ತುಗಳನ್ನು ಕದಿಯಬಾರದು, ಬೇರೆಯವರ ಹಣ ವಸ್ತುವಿಗೆ ಆಸೆಪಡುವ ಗುಣ ಬೆಳೆಸಿಕೊಳ್ಳಬೇಡ. ಈ ಮೂಲಕ ದೊಡ್ಡ ವ್ಯಕ್ತಿಯಾಗುತ್ತೀಯಾ ಎಂದು ತಿಳಿ ಹೇಳಿದ್ದರು. ಅವರ ಮಾತುಗಳು ನನ್ನ ಮನಸ್ಸು ನಾಟಿದ್ದವು. ಅಂದಿನಿಂದ ಅವರು ಹೇಳಿಕೊಟ್ಟ ದಾರಿಯಲ್ಲೇ ನಡೆದಿದ್ದೇನೆ. ನನ್ನದಲ್ಲದ ವಸ್ತುವಿಗೆ ಆಸೆ ಪಡುವುದಿಲ್ಲ. ಯಾರನ್ನೂ ದೂಷಿಸುವುದಿಲ್ಲ. ಯಾರಿಂದಲೂ ಹಣ ಪಡೆದರೂ ಹೇಳಿದ ಸಮಯಕ್ಕೆ ಹಿಂತಿರುಗಿಸುತ್ತೇನೆ" ಎಂದಿದ್ದಾರೆ.

ಇಷ್ಟೆಲ್ಲಾ ಆದ ಬಳಿಕ ದೇವೇಗೌಡರ ಅಚ್ಚು ಮೆಚ್ಚಿನ ಶಿಕ್ಷಕರು ಯಾರು ಎಂಬ ಪ್ರಶ್ನೆ ಕಾಡುವುದು ಸಹಜ. ಇದಕ್ಕೂ ಉತ್ತರಿಸಿರುವ ಅವರು "ಅಂದು ಇಂತಹ ಒಳ್ಳೆಯ ಪಾಠ ಕಲಿಸಿದ ಪರಮೇಶ್ವರಯ್ಯ ಮೇಷ್ಟ್ರೇ ನನ್ನ ನೆಚ್ಚಿನ ಶಿಕ್ಷಕ. ನಾನವರನ್ನು ಪ್ರತಿದಿನ ನೆನಪಿಸಿಕೊಳ್ಳುತ್ತೇನೆ" ಎಂದಿದ್ದಾರೆ.
First published:September 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ