• Home
  • »
  • News
  • »
  • state
  • »
  • ಸೂರಜ್ ರೇವಣ್ಣಗೆ ನಿರೀಕ್ಷಿತ ಗೆಲುವು; ದೇವೇಗೌಡರ ಕುಟುಂಬದ ಮತ್ತೊಬ್ಬರ ರಾಜಕೀಯ ಪಯಣ ಶುರು

ಸೂರಜ್ ರೇವಣ್ಣಗೆ ನಿರೀಕ್ಷಿತ ಗೆಲುವು; ದೇವೇಗೌಡರ ಕುಟುಂಬದ ಮತ್ತೊಬ್ಬರ ರಾಜಕೀಯ ಪಯಣ ಶುರು

ಗೆಲುವಿನ ಖುಷಿಯಲ್ಲಿ ರೇವಣ್ಣ ಕುಟುಂಬ

ಗೆಲುವಿನ ಖುಷಿಯಲ್ಲಿ ರೇವಣ್ಣ ಕುಟುಂಬ

ಸೂರಜ್ ರೇವಣ್ಣ ಮೇಲ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇದರಿಂದ ಒಂದೇ ಕುಟುಂಬದವರು ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ, ರಾಜ್ಯಸಭೆ ಪ್ರವೇಶ ಮಾಡಿದಂತಾಗಿದೆ.

  • Share this:

ಹಾಸನ : ರಾಜ್ಯದಲ್ಲೇ ಗಮನ ಸೆಳೆದಿದ್ದ ವಿಧಾನ ಪರಿಷತ್ ಚುನಾವಣೆಯಲ್ಲಿ ನಿರೀಕ್ಷೆಯಂತೆಯೇ ಜೆಡಿಎಸ್ ಅಭ್ಯರ್ಥಿ ಡಾ.ಆರ್.ಸೂರಜ್ ರೇವಣ್ಣ(Suraj Revanna)  ಜಯಭೇರಿ ಭಾರಿಸಿದ್ದಾರೆ. ಈ ಮೂಲಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ (HD DeveGowda) ಕುಟುಂಬದ ಮತ್ತೊಂದು ಕುಡಿಯ ರಾಜಕೀಯ ಪಯಣ ಶುರುವಾಗಿದೆ. ಡಿ.10 ರಂದು ನಡೆದಿದ್ದ ವಿಧಾನ ಪರಿಷತ್ ಚುನಾವಣೆ ಮತಎಣಿಕೆ (MLC Election Results) ಕಾರ್ಯ ಇಂದು ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಬಿಗಿ ಭದ್ರತೆಯ ನಡುವೆ ನಡೆಯಿತು. ಬೆಳಿಗ್ಗೆ 8 ಗಂಟೆಗೆ  257 ಮತಪೆಟ್ಟಿಗೆಗಳನ್ನು ತೆರೆದು ಮಿಶ್ರಣ ಮಾಡಿದ ನಂತರ 15  ಟೇಬಲ್‌ಗಳಿಗೂ ತಲಾ 250 ರಂತೆ ಮತಗಳನ್ನು ವಿಂಗಡನೆ ಮಾಡಲಾಯಿತು. ಬೆಳಿಗ್ಗೆ 10 ಗಂಟೆ ಸುಮಾರಿಗೆ ಶುರುವಾಯಿತು. ಆರಂಭದಿಂದಲೂ ಭರ್ಜರಿ ಮುನ್ನಡೆ ಕಾಯ್ದುಕೊಂಡ ಸೂರಜ್, ಅಂತಿಮವಾಗಿ 1533 ಮತಗಳ ಭಾರಿ ಅಂತರದಿಂದ ಗೆಲುವು ಸಾಧಿಸಿದರು.


ಎಚ್ಚರಿಕೆಯ ಹೆಜ್ಜೆಯಿಂದ ಗೆಲುವು


ಜೆಡಿಎಸ್ ಅಭ್ಯರ್ಥಿ ಡಾ.ಸೂರಜ್ 2281, ಕಾಂಗ್ರೆಸ್ ಅಭ್ಯರ್ಥಿ ಎಂ.ಶಂಕರ್ 748, ಬಿಜೆಪಿ ಅಭ್ಯರ್ಥಿ ಎಚ್.ಎಂ.ವಿಶ್ವನಾಥ್ 421 ಹಾಗೂ ಪಕ್ಷೇತರ ಅಭ್ಯರ್ಥಿ ಹೆಚ್.ಡಿ.ರೇವಣ್ಣ 18 ಮತಗಳನ್ನು ಪಡೆದಿದ್ದು, 103 ಮತಗಳು ತಿರಸ್ಕ್ರತವಾಗಿವೆ. 2015 ರ ಎಂ.ಎಲ್.ಸಿ. ಚುನಾವಣೆಯಲ್ಲಿ ಸೋಲು ಕಂಡಿದ್ದ ಜೆಡಿಎಸ್ ಈ ಬಾರಿಯ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿತ್ತು. ಆರಂಭದಿಂದಲೂ ಸಂಘಟನಾತ್ಮಕವಾಗಿ ಕೆಲಸ ಮಾಡಿದರು. ಸಂಸದರು, ಶಾಸಕರು, ಸ್ಥಳೀಯ ಮುಖಂಡರು, ಕಾರ್ಯಕರ್ತರು ಮತ್ತು ಚುನಾಯಿತ ಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಎಲ್ಲೂ ಕೂಡ ಕೊಂಚ ಲೋಪವಾಗದಂತೆ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದರಿಂದ, ಸೂರಜ್‌ಗೆ  ವಿಜಯಲಕ್ಷ್ಮಿ ಒಲಿದಿದೆ.


ಇದನ್ನೂ ಓದಿ: MLC Election Results: ಪರಿಷತ್ ಚುನಾವಣಾ ಫಲಿತಾಂಶ: ಯಾರಿಗೆ ಎಷ್ಟು ಸ್ಥಾನ? ಫೈನಲ್ ಪಟ್ಟಿ ಇಲ್ಲಿದೆ


ಜೆಡಿಎಸ್ ಮತ್ತೆ ಪ್ರಾಬಲ್ಯಮ ಮೆರೆದಿದೆ


ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್ ಪಕ್ಷದ ಬೆಂಬಲದಿಂದ ಗೆದ್ದಿದ್ದವರ ಮತಗಳು ಬೇರೆ ಕಡೆ ವಿಭಜನೆಯಾಗದಂತೆ ಗಮನ ಹರಿಸಿದ್ದೂ ಪಕ್ಷದ ಗೆಲುವಿಗೆ ಕಾರಣವಾಗಿದ್ದು, ಈ ಮೂಲಕ ತನ್ನ ಭದ್ರಕೋಟೆಯಲ್ಲಿ ಜೆಡಿಎಸ್ ಮತ್ತೆ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡಿದೆ. ಚುನಾವಣೆಯ ಆರಂಭದಿಂದಲೂ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು, ಜೆಡಿಎಸ್ ವಿರುದ್ಧ ಕುಟುಂಬ ರಾಜಕಾರಣ ಅಸ್ತ್ರ ಪ್ರಯೋಗ ಮಾಡಿದ್ದರು. ಇದೇ ಈ ಬಾರಿಯ ಚುನಾವಣೆಯಲ್ಲಿ ಅವರಿಗೆ ತಿರುಗುಬಾಣವಾಗಲಿದೆ. ದಳಪತಿಗಳ ನಡೆಯಿಂದ ಮತದಾರರು ರೋಸಿ ಹೋಗಿದ್ದು, ಮತದಾನದ ಮೂಲಕ ಉತ್ತರ ನೀಡಲಿದ್ದಾರೆ ಎಂದೂ ಟೀಕಿಸಿದ್ದರು. ಆದರೆ ಇದಾವುದಕ್ಕೂ ಮತದಾರರು ಮಣೆ ಹಾಕದೆ, ಎಲ್ಲರ ಲೆಕ್ಕಾಚಾರವನ್ನು ತಲೆಕೆಳಗಾಗಿಸಿ ಒಮ್ಮತದಿಂದ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ.


ಕುಟುಂಬ ರಾಜಕಾರಣ ಮುಂದುವರಿಕೆ 


ಜೆಡಿಎಸ್ ಬೆಂಬಲದಿಂದ ಗೆದ್ದವರ ಎಲ್ಲಾ ಮತಗಳ ಜೊತೆಗೆ ಉಳಿದ ಪಕ್ಷಗಳ ಕೆಲವು ಮತಗಳೂ ದಳದತ್ತ ವಾಲಿರುವುದು ಫಲಿತಾಂಶದಿಂದ ಸ್ಪಷ್ಟವಾಗಿದೆ. ರಾಜ್ಯ ರಾಜಕೀಯದಲ್ಲಿ ಸೂರಜ್ ದಾಖಲೆ ಗೆಲುವಿನ ಮೂಲಕ ದೊಡ್ಡಗೌಡರ ಕುಟುಂಬ ನೂತನ ದಾಖಲೆಯೊಂದನ್ನು ನಿರ್ಮಾಣ ಮಾಡಿದೆ. ಈವರೆಗೆ ದೇವೇಗೌಡರಾದಿಯಾಗಿ ಸಕ್ರಿಯ ರಾಜಕೀಯದಲ್ಲಿರುವ ಯಾವೊಬ್ಬ ಸದಸ್ಯರೂ ವಿಧಾನ ಪರಿಷತ್ ಪ್ರವೇಶ ಮಾಡಿರಲಿಲ್ಲ. ಇದೀಗ ಸೂರಜ್ ಮೊದಲಿಗರಾಗಿ ಮೇಲ್ಮನೆಗೆ ಎಂಟ್ರಿಕೊಟ್ಟಿದ್ದಾರೆ. ಇದರಿಂದ ಒಂದೇ ಕುಟುಂಬದವರು ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ, ರಾಜ್ಯಸಭೆ ಪ್ರವೇಶ ಮಾಡಿದಂತಾಗಿದೆ.


ಇದನ್ನೂ ಓದಿ: ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಸೋದರನಿಗೆ ಗೆಲುವು: ರಮೇಶ್ ಜಾರಕಿಹೊಳಿ ಬಗ್ಗೆ ಡಿಕೆಶಿ ವ್ಯಂಗ್ಯ!


1960ರ ದಶಕದಲ್ಲಿ ತಾಲೂಕು ಬೋರ್ಡ್ ಸದಸ್ಯರಾಗಿ ರಾಜಕೀಯ ಪ್ರವೇಶಿಸಿದ ದೇವೇಗೌಡರು ನಂತರ ಶಾಸಕರು, ಸಂಸದರಾಗಿ ಹಾಲಿ ರಾಜ್ಯಸಭೆ ಸದಸ್ಯರಾಗಿದ್ದಾರೆ. ಪುತ್ರರಾದ ಹೆಚ್.ಡಿ.ರೇವಣ್ಣ, ಹೆಚ್.ಡಿ.ಕುಮಾರಸ್ವಾಮಿ, ಸೊಸೆ ಅನಿತಾ ಕುಮಾರಸ್ವಾಮಿ ಶಾಸಕರಾಗಿದ್ದಾರೆ. ಮತ್ತೊಬ್ಬ ಸೊಸೆ ಭವಾನಿ ರೇವಣ್ಣ ಹಿಂದೆ ಜಿಪಂ ಸದಸ್ಯರಾಗಿದ್ದರು. ಪ್ರಜ್ವಲ್ ರೇವಣ್ಣ ಹಾಲಿ ಸಂಸದರಾಗಿದ್ದು, ಇದೀಗ ಸೂರಜ್ ರೇವಣ್ಣ ಪರಿಷತ್​ ಸದಸ್ಯ ರಾಗಿದ್ದಾರೆ.

Published by:Kavya V
First published: