ರಾಜ್ಯ ರಾಜಕಾರಣದ ಮೇಲೆ ಗ್ರಹಣದ ಛಾಯೆ: ತಿರುಪತಿಗೆ ದೇವೇಗೌಡರು, ಆಸ್ಪತ್ರೆಗೆ ಯಡಿಯೂರಪ್ಪ ಶಿಫ್ಟ್​

news18
Updated:July 26, 2018, 5:01 PM IST
ರಾಜ್ಯ ರಾಜಕಾರಣದ ಮೇಲೆ ಗ್ರಹಣದ ಛಾಯೆ: ತಿರುಪತಿಗೆ ದೇವೇಗೌಡರು, ಆಸ್ಪತ್ರೆಗೆ ಯಡಿಯೂರಪ್ಪ ಶಿಫ್ಟ್​
news18
Updated: July 26, 2018, 5:01 PM IST
ನ್ಯೂಸ್​ 18 ಕನ್ನಡ

ಬೆಂಗಳೂರು (ಜುಲೈ 26): ನಾಳೆ ರಕ್ತ ಚಂದ್ರ ಗ್ರಹಣ ಇರುವುದರಿಂದ ರಾಜ್ಯ ರಾಜಕಾರಣದ ಮೇಲೂ ಕರಿಛಾಯೆ ಆವರಿಸಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಕಾರಣ ಕಳೆದೊಂದು ತಿಂಗಳಿನಿಂದ ಚುರುಕುಗೊಂಡಿದ್ದ ರಾಜಕಾರಣ ನಾಳೆ ಸ್ತಬ್ಧವಾಗಲಿದೆ.

ಅದಕ್ಕೆ ಕಾರಣವೂ ಇಲ್ಲದಿಲ್ಲ. ಗ್ರಹಣದ ದಿನ  ಏನೇ ಮಾಡಿದರೂ ಕೈಗೂಡುವುದಿಲ್ಲ ಎಂಬ ಮಾತಿದೆ. ಅದನ್ನು ಬಲವಾಗಿ ನಂಬಿರುವ ರಾಜಕೀಯ ಪಕ್ಷಗಳ ನಾಯಕರು ನಾಳೆ ರಾಜಕೀಯವನ್ನು ಪಕ್ಕಕ್ಕಿಡಲಿದ್ದಾರೆ. ಈಗಾಗಲೇ ನಾಳೆ ಪಕ್ಷದ ಯಾವ ಕೆಲಸವನ್ನೂ ಮಾಡಬೇಡಿ ಎಂದು ಬಿಜೆಪಿಯವರಿಗೆ ಸೂಚನೆ ನೀಡಿರುವ ಯಡಿಯೂರಪ್ಪ ಪ್ರಕೃತಿ ಚಿಕಿತ್ಸೆ ಪಡೆಯಲು ಆಸ್ಪತ್ರೆ ಸೇರಿಕೊಂಡಿದ್ದಾರೆ. ಇನ್ನು, ಜೆಡಿಎಸ್​ ರಾಷ್ಟ್ರಾಧ್ಯಕ್ಷ ಎಚ್​.ಡಿ. ದೇವೇಗೌಡರು ದೋಷ ನಿವಾರಣೆಗಾಗಿ ನಾಳೆ ತಿಮ್ಮಪ್ಪನ ದರ್ಶನ ಮಾಡಲು ತಿರುಪತಿಯತ್ತ ಪ್ರಯಾಣ ಬೆಳೆಸುತ್ತಿದ್ದಾರೆ.

ಧಾರ್ಮಿಕತೆಯನ್ನು ತುಸು ಹೆಚ್ಚೇ ನಂಬುವ, ಆಚರಣೆಗಳನ್ನು ಪಾಲಿಸುವ ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಈಗಾಗಲೇ ನಾಳೆ ಪಕ್ಷದ ಪ್ರಚಾರಕ್ಕೆ ಸಂಬಂಧಿಸಿದ ಯಾವುದೇ ಕೆಲಸ ಮಾಡದಂತೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ತಾಕೀತು ಮಾಡಿದ್ದಾರೆ.

ನಾಳೆ ರಕ್ತ ಚಂದ್ರ ಗ್ರಹಣ ಇರುವುದರಿಂದ ದೋಷ ಪರಿಹಾರಕ್ಕಾಗಿ ಮಾಜಿ ಪ್ರಧಾನಿ ದೇವೇಗೌಡರ ಇಡೀ ಕುಟುಂಬವೇ ನಾಳೆ ತಿರುಪತಿ ದೇವರ ದರ್ಶನ ಪಡೆಯಲು ಹೊರಟಿದೆ. ಅದಕ್ಕಾಗಿ ಪದ್ಮನಾಭನಗರದ ನಿವಾಸಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಆಗಮಿಸಿದ್ದಾರೆ. ಸಚಿವ ಎಚ್​.ಡಿ. ರೇವಣ್ಣ ಕೂಡ ಕುಟುಂಬಸಮೇತರಾಗಿ ದೇವೇಗೌಡರ ನಿವಾಸಕ್ಕೆ ಆಗಮಿಸಿದ್ದಾರೆ.

ದೇವರ ಮೇಲೆ ಅಪಾರ ನಂಬಿಕೆಯಿರುವ ದೇವೇಗೌಡರ ಕುಟುಂಬ ಯಾವುದೇ ಒಳ್ಳೆಯ ಕೆಲಸಕ್ಕೆ ಹೋಗುವಾಗಲೂ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುತ್ತಾರೆ. ಈ ಬಾರಿಯ ಅಪರೂಪದ ಗ್ರಹಣದ ದಿನದಂದು ಸರ್ವದೋಷ ಪರಿಹಾರಕ್ಕೆಂದು ತಿಮ್ಮಪ್ಪನ ದರ್ಶನಕ್ಕೆ ಹೊರಟಿದ್ದಾರೆ.ಇಂದು ರಾತ್ರಿ ತಿರುಪತಿಯಲ್ಲಿ ಉಳಿದುಕೊಳ್ಳಲಿರುವ ದೇವೇಗೌಡರ ಕುಟುಂಬದವರು ನಾಳೆ ಬೆಳಗ್ಗೆ ತಿಮ್ಮಪ್ಪನ ದರ್ಶನ ಮಾಡಲಿದ್ದಾರೆ. ನಾಳೆ ಗ್ರಹಣ ಹಿನ್ನೆಲೆಯಲ್ಲಿ ಬಾಲಾಜಿ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಈ ಮೊದಲು ಅಮರನಾಥ ದೇವಾಲಯಕ್ಕೂ ದೇವೇಗೌಡರು ಕುಟುಂಬಸಮೇತ ಹೊರಡಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಅಲ್ಲಿ ಜೋರಾಗಿ ಮಳೆ ಬರಲಾರಂಭಿಸಿದ್ದರಿಂದ ಆ ಪ್ರಯಾಣವನ್ನು ರದ್ದುಗೊಳಿಸಿದ್ದರು.

ಸಚಿವ ಜಿ.ಟಿ. ದೇವೇಗೌಡ ಇಂದು ಗ್ರಹಣದ ಬಗ್ಗೆ ಹೇಳಿಕೆ ನೀಡಿದ್ದು, ಆಷಾಢದ ದಿನ ಯಾವುದಾದರೂ ಕೆಲಸ ಮಾಡಿದರೆ ಒಳ್ಳೆಯದೇ ಆಗುತ್ತದೆ. ಆಷಾಢ ಮಾಸ ಕೆಟ್ಟದೆಂಬುದು ಸುಳ್ಳು. ನನಗೆ ಇಂತಹ ಮೂಢನಂಬಿಕೆಗಳಲ್ಲಿ ನಂಬಿಕೆಯಿಲ್ಲ ಎಂದು ಹೇಳಿದ್ದಾರೆ.

ಒಟ್ಟಾರೆ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳ ನಾಯಕರೆಲ್ಲ ಚಂದ್ರ ಗ್ರಹಣದ ದಿನ ತಮ್ಮ ಕುಟುಂಬ ಮತ್ತು ವೈಯಕ್ತಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದರಿಂದ ರಾಜಕೀಯಕ್ಕೆ ಒಂದು ದಿನದ ವಿಶ್ರಾಂತಿ ಸಿಕ್ಕಂತಾಗಿದೆ.

 

 
First published:July 26, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ