ಹಾಸನ: ಕಳೆದ ಎರಡು ಮೂರು ದಿನಗಳಿಂದ ಹಾಸನ ಕ್ಷೇತ್ರದ (Hassan Constituency) ಜೆಡಿಎಸ್ (JDS) ಅಭ್ಯರ್ಥಿ ವಿಚಾರ ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ರೇವಣ್ಣ ಪತ್ನಿ ಭವಾನಿ ರೇವಣ್ಣ (Bhavani Revanna) ಹಾಸನ ಕ್ಷೇತ್ರದ ಅಭ್ಯರ್ಥಿ ನಾನೇ ಎಂದು ಸ್ವಯಂ ಘೋಷಣೆ ಮಾಡಿಕೊಂಡಿದ್ದರು. ಆದರೆ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಹಾಸನದಲ್ಲಿ ಸೂಕ್ತ ಅಭ್ಯರ್ಥಿ ಇದ್ದಾರೆ, ಅಲ್ಲಿಗೆ ಭವಾನಿ ರೇವಣ್ಣರನ್ನು ಅಭ್ಯರ್ಥಿಯನ್ನಾಗಿ ಮಾಡುವ ಅನಿವಾರ್ಯತೆ ಇಲ್ಲ ಎಂದು ಹೇಳಿದ್ದರು. ಕುಮಾರಸ್ವಾಮಿ ಈ ರೀತಿ ಹೇಳಿಕೆ ನೀಡುತ್ತಿದ್ದಂತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ, ಕುಮಾಸ್ವಾಮಿ ಅಥವಾ ರೇವಣ್ಣ ಆಗಲಿ ಬಿ ಫಾರ್ಮ್ ನೀಡುವುದಿಲ್ಲ, ಚುನಾವಣೆಗೆ ಬಿ ಫಾರ್ಮ್ ನೀಡುವವರು ಎಚ್ಡಿ ದೇವೇಗೌಡರು (HD Deve Gowda) ಎಂದು ಹೇಳಿದ್ದರು.
ಈಗಾಗಲೇ ಕುಟುಂಬ ರಾಜಕಾರಣದ ಹಣೆಪಟ್ಟಿ ಹೊತ್ತುಕೊಂಡಿರುವ ದೇವೇಗೌಡರ ಕುಟುಂಬಕ್ಕೆ ಹಾಸನ ಟಿಕೆಟ್ ಗೊಂದಲ ದೊಡ್ಡ ತಲೆ ನೋವು ತಂದಿತ್ತು. ಇದೀಗ ಈ ವಿವಾದವನ್ನು ಕೊನೆಗೊಳಿಸಲು ಸ್ವತಃ ಜೆಡಿಎಸ್ ವರಿಷ್ಠ ದೇವೇಗೌಡರೇ ಎಂಟ್ರಿ ಕೊಟ್ಟಿದ್ದು, ಹಾಸನ ಟಿಕೆಟ್ ವಿಚಾರವನ್ನು ಫೈನಲ್ ಮಾಡುತ್ತೇನೆ, ಇದರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ ಎಂದಿದ್ದಾರೆಂದು ತಿಳಿದುಬಂದಿದೆ.
ಹಾಸನ ಟಿಕೆಟ್ ವಿಚಾರವಾಗಿ ಕುಮಾರಸ್ವಾಮಿ ಮತ್ತು ರೇವಣ್ಣ ಕುಟುಂಬದ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಿರುವ ವಿಚಾರವನ್ನು ಆಪ್ತರು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ. ವಿಚಾರ ತಿಳಿದ ಕೂಡಲೇ ದೇವೇಗೌಡರು ಗೊಂದಲಕ್ಕೆ ತೆರೆ ಎಳೆಯಲು ಮುಂದಾಗಿದ್ದು, ಹಾಸನ ಟಿಕೆಟ್ ವಿಚಾರವನ್ನು ನಾನೇ ಫೈನಲ್ ಮಾಡುತ್ತೇನೆ. ಹಾಸನಕ್ಕೆ ಬಂದು ಗೊಂದಲಕ್ಕೆ ತೆರೆ ಎಳೆಯುತ್ತೇನೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಕಾರ್ಯಕರ್ತರಲ್ಲಿ ಗೊಂದಲ
ಹಾಸನ ಟಿಕೆಟ್ ವಿಚಾರವಾಗಿ ನಡೆಯುತ್ತಿರುವ ಗೊಂದಲಗಳನ್ನು ದೇವೇಗೌಡರ ಆಪ್ತರ ಗಮನಕ್ಕೆ ತಂದಿದ್ದಾರೆ. ದೊಡ್ಡಗೌಡರು ಹಾಸನದಲ್ಲಿ ತಮ್ಮದೇ ಆದ ಆಪ್ತ ಬಳಗವನ್ನ ಹೊಂದಿದ್ದಾರೆ. ಹಾಸನ ಜಿಲ್ಲೆ ಜೆಡಿಎಸ್ ಭದ್ರಕೋಟೆಯಾಗಿದೆ. ಇದೀಗ ಹಾಸನ ಟಿಕೆಟ್ ವಿಚಾರದಲ್ಲಿ ರೇವಣ್ಣ ಕುಟುಂಬ ಮತ್ತು ಕುಮಾರಸ್ವಾಮಿ ನಡುವಿನ ಹೇಳಿಕೆಗಳು ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿವೆ ಎಂಬ ವಿಚಾರವನ್ನುಆಪ್ತರು ದೇವೇಗೌಡರ ಗಮನಕ್ಕೆ ತಂದಿದ್ದಾರೆ.
ಮೊದಲ ಪಟ್ಟಿಯಲ್ಲಿ ಹಾಸನ ಟಿಕೆಟ್ ಘೋಷಣೆಯಾಗಿಲ್ಲ
ಈಗಾಗಲೆ 2023ರ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಪಕ್ಷ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಹಾಸನ ಕ್ಷೇತ್ರದ ಅಭ್ಯರ್ಥಿಯನ್ನ ಇನ್ನೂ ಘೋಷಣೆ ಮಾಡಿಲ್ಲ. ಇದರ ಬಗ್ಗೆ ಮಾತನಾಡಿದ್ದ ಕುಮಾರಸ್ವಾಮಿ ಅವರು, ಹಾಸದ ವಿಚಾರವನ್ನು ರೇವಣ್ಣ ನೋಡಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದರು. ಇದರ ಬೆನ್ನಲ್ಲೇ ಭವಾನಿ ರೇವಣ್ಣ ಹಾಸನದಲ್ಲಿ ನಾನೇ ಅಭ್ಯರ್ಥಿ ಎಂದು ಘೋಷಣೆ ಮಾಡಿಕೊಂಡಿದ್ದರು. ಆದರೆ ಕುಮಾರಸ್ವಾಮಿ ಭವಾನಿ ರೇವಣ್ಣರಿಗೆ ಟಿಕೆಟ್ ಸಿಗುವುದಿಲ್ಲ, ಅಲ್ಲಿ ಬೇರೆ ಅಭ್ಯರ್ಥಿ ಇದ್ದಾರೆ ಎಂದಿದ್ದರು.
ಸ್ವರೂಪ್ ಬೆಂಬಲಿಗರು ಹಿಂದೆ ಸರಿಯುವ ಸಾಧ್ಯತೆ
ಒಂದು ವೇಳೆ ಮುಂದಿನ ಚುನಾವಣೆಯಲ್ಲಿ ಭವಾನಿ ರೇವಣ್ಣರಿಗೆ ಟಿಕೆಟ್ ಕೊಟ್ಟರೆ ಹಾಸನ ಟಿಕೆಟ್ ಅಕಾಂಕ್ಷೆಯಾಗಿರುವ ಸ್ವರೂಪ್ರ ಬೆಂಬಲಿಗರು ಪಕ್ಷದಿಂದ ದೂರ ಸರಿಯುವ ಸಾಧ್ಯತೆ ಕೂಡ ಇದೆ. ಒಂದು ವೇಳೆ ಸ್ವರೂಪ್‌ಗೆ ಟಿಕೆಟ್ ಕೊಟ್ಟರೆ ರೇವಣ್ಣ ಕುಟುಂಬ ತಟಸ್ಥವಾಗುವ ಸಾಧ್ಯತೆ. ಇದು ಕ್ಷೇತ್ರದಲ್ಲಿನ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿದೆ. ಹಾಸನ ಟಿಕೆಟ್ ಹಂಚಿಕೆ ಗೊಂದಲ ಇಡೀ ಪಕ್ಷದ ಮೇಲೆ ಪರಿಣಾಮ ಬೀರುವ ಆತಂಕವಿದ್ದು, ಸಾಧ್ಯವಾದಷ್ಟು ಬೇಗ ಈ ಗೊಂದಲಕ್ಕೆ ತೆರೆ ಎಳೆದರೆ ಸೂಕ್ತ ಎಂದು ದೇವೇಗೌಡರಿಗೆ ಹಾಸನ ಜಿಲ್ಲೆಯ ಆಪ್ತರು ಮನವಿ ಮಾಡಿಕೊಂಡಿದ್ದಾರೆ.
ಹಾಸನ ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆಲುವು ಸಾಧಿಸಿದ್ದ ಎಚ್ಎಸ್ ಪ್ರಕಾಶ್ 2018ರ ಚುನಾವಣೆಯಲ್ಲಿ ಪ್ರೀತಂ ಗೌಡ ವಿರುದ್ಧ ಸೋಲು ಕಂಡ ಬಳಿಕ ನಿಧನರಾಗಿದ್ದರು. ಇದೀಗ ಅವರ ಪುತ್ರ ಎಚ್ಪಿ ಸ್ವರೂಪ್ ಹಾಸನದ ಟಿಕೆಟ್ ಅಕಾಂಕ್ಷೆಯಾಗಿದ್ದಾರೆ. ಅಲ್ಲದೆ ಇವರಿಗೆ ಅನುಕಂಪದ ಅಲೆ ಇದೆ. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಕಳೆದ ಚುನಾವಣೆ ಗೆದ್ದ ನಂತರ ಪ್ರೀತಂ ಗೌಡ ಕ್ಷೇತ್ರದಲ್ಲಿ ಮತ್ತಷ್ಟು ಪ್ರಾಬಲ್ಯ ಸಾಧಿಸಿದ್ದಾರೆ. ಹಾಗಾಗಿ ಸ್ವರೂಪ್ಗಿಂತಲೂ ಜಿಲ್ಲೆಯಲ್ಲಿ ಪ್ರಾಬಲ್ಯವಿರುವ ದೇವೇಗೌಡರ ಕುಟುಂಬಸ್ಥರನ್ನು ನಿಲ್ಲಿಸಬೇಕೆಂದು ಕೆಲವು ಜೆಡಿಎಸ್ ನಾಯಕರ ಅಭಿಪ್ರಾಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ