ಜೂನ್ 29ರಂದು ನಡೆಯಬೇಕಿದ್ದ ಧರಣಿಯನ್ನು ಹಿಂಪಡೆಯಲಾಗಿದೆ; ಹೆಚ್​.ಡಿ. ದೇವೇಗೌಡ ಸ್ಪಷ್ಟನೆ

ಇಂದು ಟ್ವೀಟ್ ಮಾಡಿರುವ ದೇವೇಗೌಡರು, ಜೂನ್ 29ರಂದು ಮುಖ್ಯಮಂತ್ರಿಗಳ ಮನೆಯ ಎದುರು ನಡೆಯಬೇಕಾಗಿದ್ದ ಧರಣಿಯನ್ನು ಹಿಂಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಹೆಚ್​.ಡಿ.  ದೇವೇಗೌಡ

ಹೆಚ್​.ಡಿ. ದೇವೇಗೌಡ

  • Share this:
ಬೆಂಗಳೂರು (ಜೂ. 28): ಮಂಡ್ಯ ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ ಜೆಡಿಎಸ್ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಇದನ್ನು ಖಂಡಿಸಿ ಜೂ. 29ರಂದು ಧರಣಿ ನಡೆಸಲಿದ್ದೇವೆ ಎಂದು ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದರು. ಆದರೆ, ಇದೀಗ ತಮ್ಮ ಬಹುಪಾಲು ಬೇಡಿಕೆಗಳಿಗೆ ಸರ್ಕಾರ ಒಪ್ಪಿರುವುದರಿಂದ ಧರಣಿಯನ್ನು ವಾಪಾಸ್ ಪಡೆದಿರುವುದಾಗಿ ದೇವೇಗೌಡರು ಸ್ಪಷ್ಟಪಡಿಸಿದ್ದಾರೆ.

ಕೆ.ಆರ್.ಪೇಟೆ ಕ್ಷೇತ್ರದ ಕ್ರಷರ್ ಮಾಲೀಕ ಎಚ್.ಟಿ. ಮಂಜುಗೆ ಕ್ರಷರ್ ನಿಲ್ಲಿಸುವಂತೆ ಕಿರುಕುಳ ನೀಡುವ ಮೂಲಕ ನಾರಾಯಣ ಗೌಡರು ರಾಜಕೀಯ ದ್ವೇಷ ಸಾಧಿಸುತ್ತಿದ್ದಾರೆ. ಮಂಜು ಅವರು ಕ್ರಷರ್ ನಿಲ್ಲಿಸಿದ್ದಾರೆ‌. ಸಕ್ರಮವಾಗಿರುವ ಅವರ ಕ್ರಷರ್​ಗೆ ಅನುಮತಿ ಕೊಡಿಸಿ, ರಾಜಕೀಯ ದ್ವೇಷ ಸಾಧಿಸುತ್ತಿರುವ ನಾರಾಯಣಗೌಡ ಅವರಿಗೆ ತಿಳಿ ಹೇಳುವಂತೆ ಸಿಎಂಗೆ ಬರೆದ ಪತ್ರದಲ್ಲಿ ದೇವೇಗೌಡರು ಆಗ್ರಹಿಸಿದ್ದರು. ಇಲ್ಲದಿದ್ದರೆ ಜೂ.29ರಂದು ಸಿಎಂ ಯಡಿಯೂರಪ್ಪನವರ ಮನೆ ಮುಂದೆ ಧರಣಿ ಕೂರುವುದಾಗಿ ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ: ಬೆಂಗಳೂರಿನ ಸೈಕ್ಲಿಂಗ್ ಪ್ರಿಯರಿಗೆ ಗುಡ್ ನ್ಯೂಸ್; ಏರ್​ಪೋರ್ಟ್​ನಲ್ಲೂ ಸೈಕಲ್ ಸವಾರಿಗೆ ಅವಕಾಶ!

ಆದರೆ, ಇದಕ್ಕೆ ಪ್ರತಿಕ್ರಿಯಿಸಿದ್ದ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ, ದೇವೇಗೌಡರು ನನಗೆ ತಂದೆಯ ಸಮಾನ. ನಾನು ಅವರಿಂದಲೇ ರಾಜಕೀಯಕ್ಕೆ ಬಂದವನು. ಕಲ್ಲು ಗಣಿಗಾರಿಕೆ ವಿಚಾರದಲ್ಲಿ ಅವರು ನನ್ನ ಮೇಲೆ ಮಾಡಿರುವ ಆರೋಪ ಸತ್ಯವಲ್ಲ. ಯಾರೋ ಅವರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಇಂತಹ ವಿಷಯಕ್ಕೆಲ್ಲ ಅವರು ಧರಣಿ ಕೂರುವ ನಿರ್ಧಾರ ಮಾಡಬಾರದು. ಈ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡುತ್ತೇನೆ.ಕ್ರಷರ್ ಮಾಲೀಕ ಮಂಜು ಅಕ್ರಮವಾಗಿ ಕಲ್ಲು ಕ್ವಾರೆ ನಡೆಸಿದ್ದಾರೆ. ರಾಯಲ್ಟಿ ಕಟ್ಟಲ್ಲ, ಮೈಸೂರಿನಲ್ಲಿ ಅಕ್ರಮ ಹಣದಲ್ಲಿ ಮನೆ ಕಟ್ಟಿದ್ದಾರೆ. ಇವರ ಕ್ವಾರೆಯಿಂದ ಸಾಹುಕಾರ್ ಚೆನ್ನಯ್ಯ ನಾಲೆ ಹಾಳಾಗಿದೆ. ಇದಕ್ಕೆ ದಾಖಲೆಗಳಿವೆ ಎಂದು ಹೇಳಿದ್ದರು.ಇಂದು ಈ ಬಗ್ಗೆ ಟ್ವೀಟ್ ಮಾಡಿರುವ ದೇವೇಗೌಡರು, ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರು ಹಾಗೂ ಗಣಿ ಮತ್ತು ಭೂವಿಜ್ಞಾನ ಸಚಿವರು ಮಂಡ್ಯ ಜಿಲ್ಲೆಯ ರಾಜಕೀಯ ವಿದ್ಯಮಾನಗಳ ಕುರಿತು ನಮ್ಮ ಬೇಡಿಕೆಗಳಿಗೆ ಭಾಗಶಃ ಒಪ್ಪಿದ್ದಾರೆ. ಆದ್ದರಿಂದ ಜೂನ್ 29ರಂದು ಮುಖ್ಯಮಂತ್ರಿಗಳ ಮನೆಯ ಎದುರು ನಡೆಯಬೇಕಾಗಿದ್ದ ಧರಣಿಯನ್ನು ಹಿಂಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
First published: