ಬೆಂಗಳೂರು(ಜೂನ್ 09): ತಾನು ರಾಜ್ಯಸಭೆಗೆ ಹೋಗಲು ನೆರವಾಗುತ್ತಿರುವ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಧನ್ಯವಾದ ಹೇಳಿದ್ಧಾರೆ. ಇವತ್ತು ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮದು ಜಾತೀಯತೆ ವಿರುದ್ಧದ ಹೋರಾಟ ಎಂದು ಬಣ್ಣಿಸಿದರು.
ನಾನು ಜಾತ್ಯತೀತ ತತ್ವ ಅನುಸರಿಸಿಕೊಂಡು ಬಂದಿದ್ದೇನೆ. ಜಾತೀಯತೆ ವಿರುದ್ಧ ಹೋರಾಡಿಕೊಂಡು ಬಂದವನು ನಾನು. ದೇವೇಗೌಡರ ಬಗ್ಗೆ, ಜಾತ್ಯತೀತ ಹೋರಾಟಗಳ ಬಗ್ಗೆ ಭಾರತದಲ್ಲಿ ಯಾರೂ ಚಕಾರ ಎತ್ತಿಲ್ಲ. ಬಿಜೆಪಿ ವಿರುದ್ಧ ಹೋರಾಟ ಮಾಡಿದ್ದೇನೆ. ನನ್ನ ವಿರುದ್ಧ ಬಿಜೆಪಿ ಅಭ್ಯರ್ಥಿ ಹಾಕಿಲ್ಲ. ಆದರೂ ಯಾವುದೇ ದಾಕ್ಷಿಣ್ಯ ಇಲ್ಲದೇ ಎಂದು ಜಾತ್ಯತೀತತೆಯ ಪರವಾಗಿ ಹೋರಾಟ ಮುಂದುವರಿಸುತ್ತೇನೆ. ಇದು ನನ್ನ ಜೀವನದ ಕೊನೆಯ ಹೋರಾಟ ಎಂದು ಮಾಜಿ ಪ್ರಧಾನಿಗಳು ಪಣತೊಟ್ಟರು.
16ನೇ ಲೋಕಸಭೆ ಮುಕ್ತಾಯವಾಗುವ ದಿನ ನಾನು ಮಾತನಾಡುತ್ತಾ, ಮತ್ತೆ ಲೋಕಸಭೆಗೆ ಬರಲ್ಲ ಎಂದಿದ್ದೆ. ಬಹಳ ಮಂದಿಗೆ ಅಚ್ಚರಿ ಆಗಿತ್ತು. ಹಲವು ಮುಖಂಡರು ನನ್ನ ಮಾತು ಕೇಳಿ ಕೊಂಕು ಮಾತನಾಡಿದರು. ನಾನು ಮತ್ತೆ ಲೋಕಸಭಾ ಚುನಾವಣೆಗೆ ನಿಲ್ಲಬಾರದೆಂದಿದ್ದೆ. ಆದರೆ, ನಂತರದ ಲೋಕಸಭಾ ಚುನಾವಣೆಯ ವೇಳೆ ನಮ್ಮ ಪಕ್ಷದ ನಾಯಕರು ಒತ್ತಡ ಹಾಕಿ ನಿಲ್ಲಿಸಿದರು. ನಾನು ಸೋತೆ. ಆದರೆ ಅದರ ಹೊಣೆ ಯಾರ ಮೇಲೂ ಹಾಕಲ್ಲ. ಸೋಲು ವಿಧಿಯ ನಿಯಮ ಎಂದು ಹೆಚ್.ಡಿ.ಡಿ. ಹೇಳಿದರು.
ಇದನ್ನೂ ಓದಿ: ಬಹುತೇಕ ಆಗಸ್ಟ್ ನಂತರ ಶಾಲೆಗಳ ಆರಂಭ - ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ
ರಾಜ್ಯಸಭೆ ಪ್ರವೇಶಿಸಬಾರದೆಂದಿದ್ದೆ. ಚುನಾವಣೆಗೆ ನಿಲ್ಲಲು ನಿರಾಕರಿಸಿದ್ದೆ. ಆದರೆ, ಪಕ್ಷದ ಎಲ್ಲರೂ ಒಮ್ಮತದ ತೀರ್ಮಾನ ಮಾಡಿ ನನ್ನನ್ನು ಹೇಗಾದರೂ ಒಪ್ಪಿಸಲು ತೀರ್ಮಾನಿಸಿದ್ದರು. ಕಾಂಗ್ರೆಸ್ ಪಕ್ಷ ಕೂಡ ಒಬ್ಬರೇ ಅಭ್ಯರ್ಥಿ ಹಾಕಲು ನಿರ್ಧರಿಸಿತು. ಶನಿವಾರ ಸೋನಿಯಾ ಗಾಂಧಿ ಜೊತೆ ಮಾತನಾಡಿದೆ. ಅವರು ಕೂಡ ಬೆಂಬಲ ಕೊಡಲು ಒಪ್ಪಿದರು ಎಂದು ದೇವೇಗೌಡರು ತಿಳಿಸಿದರು.
ಲೋಕಸಭೆ ಚುನಾವಣೆಯಲ್ಲಿ ಸೋತ ನಂತರ ಸೋನಿಯಾ ಗಾಂಧಿ ಅವರು ನನ್ನ ಜೊತೆ ಮಾತನಾಡುತ್ತಾ, ಗೌಡರೇ ನಿಮ್ಮನ್ನು ಲೋಕಸಭೆಯಲ್ಲಿ ಮಿಸ್ ಮಾಡಿಕೊಳ್ಳುತ್ತೇನೆ. ಆದರೆ, ನಿಮಗೆ ನಮ್ಮ ಬೆಂಬಲ ಇದ್ದೇ ಇರುತ್ತದೆ ಎಂದು ಹೇಳಿದ್ದರು. ನಾನು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಧನ್ಯವಾದ ಹೇಳುತ್ತೇನೆ. ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರಿಗೂ ಆಭಾರಿಯಾಗಿದ್ಧೇನೆ ಎಂದರು.
ಇದನ್ನೂ ಓದಿ: ವಿಧಾನಪರಿಷತ್ ಚುನಾವಣೆ ದಿನಾಂಕ ಪ್ರಕಟ: ಜೂನ್ 29ಕ್ಕೆ 7 ಸ್ಥಾನಗಳಿಗೆ ಚುನಾವಣೆ
ಮಲ್ಲಿಕಾರ್ಜು ಖರ್ಗೆ ಸ್ಪರ್ಧೆ ಬಗ್ಗೆ ಮಾತನಾಡಿದ ದೇವೇಗೌಡರು, ತಾವು ಮತ್ತು ಖರ್ಗೆ ಒಟ್ಟಿಗೆ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಅವರೂ ಕೂಡ ರಾಜ್ಯಸಭೆಗೆ ಹೋಗುತ್ತಿರುವುದು ಬಲ ಸಿಕ್ಕಂತಾಗಿದೆ. ಅವರಿಗೂ ತಾನು ಅಭಿನಂದಿಸುವುದಾಗಿ ತಿಳಿಸಿದರು.
ಲೋಕಸಭೆ ಚುನಾವಣೆಯ ಸೋಲಿನ ಬಗ್ಗೆ ಪರಾಮರ್ಶಿಸಿದ ಅವರು ಸೋಲು ಗೆಲುವು ಇದ್ದದ್ದೇ. ಹೋರಾಟ ಮುಖ್ಯ ಎಂದು ವಿಶ್ಲೇಷಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ