Rajya Sabha Election: ರಾಜ್ಯಸಭೆಗೆ ದೇವೇಗೌಡರ ಸ್ಪರ್ಧೆ; ನಾಳೆ ಜೆಡಿಎಸ್ ಅಂತಿಮ ನಿರ್ಧಾರ

ಶಾಸಕರ ಒತ್ತಡಕ್ಕೆ ಮಣಿದು ರಾಜ್ಯಸಭೆ ಪ್ರವೇಶಿಸಲು ದೇವೇಗೌಡರು ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ.

ಎಚ್.ಡಿ.ದೇವೇಗೌಡ

ಎಚ್.ಡಿ.ದೇವೇಗೌಡ

  • Share this:
ಬೆಂಗಳೂರು (ಜೂ. 4): ಜೂನ್ 19 ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಗೆ ಈಗಾಗಲೇ ಮೂರೂ ರಾಜಕೀಯ ಪಕ್ಷಗಳು ಭರ್ಜರಿ ಸಿದ್ದತೆಯಲ್ಲಿ ತೊಡಗಿವೆ. ಬಹಳ ಪ್ರಮುಖವಾಗಿ ಜೆಡಿಎಸ್ ಕೂಡ ಅಭ್ಯರ್ಥಿ ಆಯ್ಕೆಗೆ ಮುಂದಾಗಿದೆ. ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡಲು ನಾಳೆ ಮಾಜಿ ಸಿಎಂ ಕುಮಾರಸ್ವಾಮಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ.

ಬೆಂಗಳೂರಿನ ಜೆಪಿ ಭವನದಲ್ಲಿ ನಾಳೆ ಮಧ್ಯಾಹ್ನ 12.30ಕ್ಕೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿ ಯಾರಾಗಬೇಕು ಎಂಬುದರ ಬಗ್ಗೆ ತೀರ್ಮಾನ ಮಾಡಲಾಗುತ್ತದೆ. ಈಗಾಗಲೇ ರಾಜ್ಯಸಭೆಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಸ್ಪರ್ಧೆ ಮಾಡುವಂತೆ ಬಹುತೇಕ ಜೆಡಿಎಸ್ ಶಾಸಕರು, ಪರಿಷತ್ ಸದಸ್ಯರು ಒತ್ತಡ ಹಾಕುತ್ತಿದ್ದಾರೆ. ರಾಜ್ಯಸಭೆಗೆ ದೇವೇಗೌಡರೇ ಹೋಗಬೇಕೆಂದು ಶಾಸಕರ ಒತ್ತಡವಾಗಿದೆ. ಆದರೆ, ದೇವೇಗೌಡರು ಮಾತ್ರ ಸ್ಪರ್ಧೆ ಬಗ್ಗೆ ಇನ್ನೂ ಯಾವುದೇ ಆಸಕ್ತಿ ತೋರಿಲ್ಲ ಎಂದು ಹೇಳಲಾಗುತ್ತಿತ್ತು.

ಇದೀಗ ಶಾಸಕರ ಒತ್ತಡಕ್ಕೆ ಮಣಿದು ರಾಜ್ಯಸಭೆ ಪ್ರವೇಶಿಸಲು ದೇವೇಗೌಡರು ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಕುಪೇಂದ್ರ ರೆಡ್ಡಿ ಕೂಡ ರಾಜ್ಯಸಭೆ ಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ, ಆದರೆ, ದೇವೇಗೌಡರು ಸ್ಪರ್ಧೆ ಮಾಡಿದರೆ ನಮ್ಮದೇನು ತಕರಾರು ಇಲ್ಲ ಎಂದಿದ್ದಾರೆ. ಇನ್ನೂ ಜೆಡಿಎಸ್​ನಿಂದ ಯಾವುದೇ ಅಭ್ಯರ್ಥಿಆಯ್ಕೆಯಾಗಬೇಕಿದ್ದರೂ ಅವರ ಗೆಲುವಿಗೆ  48 ಮತಗಳು ಬೇಕು. ಸದ್ಯ  ಜೆಡಿಎಸ್ ನಲ್ಲಿ 34 ಜನ ಶಾಸಕರು ಇದ್ದು, ಇನ್ನೂ 14 ಶಾಸಕರ ಮತ ಬೇಕು. ಹೀಗಾಗಿ ಆ 14 ಶಾಸಕರ ಮತಗಳನ್ನು ಕಾಂಗ್ರೆಸ್ ನಿಂದ ಪಡೆಯಲು ಜೆಡಿಎಸ್ ಮನಸ್ಸು ಮಾಡಿದ್ದು, ಈ ಬಗ್ಗೆ ಕಾಂಗ್ರೆಸ್ ನಾಯಕರ ಜೊತೆ ಚರ್ಚಿಸಲು ಜೆಡಿಎಸ್ ಮುಂದಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: Rajya Sabha Election: ರಾಜ್ಯಸಭಾ ಟಿಕೆಟ್​ಗೆ ಬಿಜೆಪಿಯಲ್ಲಿ ಭಾರೀ ಪೈಪೋಟಿ; ಇಂದು ಮತ್ತೆ ಸಿಎಂ ಭೇಟಿಯಾದ ಉಮೇಶ್ ಕತ್ತಿ

ಹೀಗಾಗಿ, ನಾಳೆಯ ಸಭೆಯಲ್ಲಿ ರಾಜ್ಯಸಭೆಗೆ ಜೆಡಿಎಸ್ ನಿಂದ ಅಭ್ಯರ್ಥಿ ಯಾರು? ಶಾಸಕರ ಒತ್ತಡಕ್ಕೆ ಮಣಿದು ದೇವೇಗೌಡರು ಸ್ಪರ್ಧೆಗೆ ಒಪ್ಪಿಕೊಳ್ಳುತ್ತಾರಾ?  ಅಭ್ಯರ್ಥಿ ಗೆಲುವಿಗೆ ಕಾಂಗ್ರೆಸ್ ಸಹಕಾರ ಕೇಳುವ ಬಗ್ಗೆ ತೀರ್ಮಾನ ಮಾಡಲಾಗುತ್ತದೆ. ಅಲ್ಲದೆ ಪರಿಷತ್ ಸ್ಥಾನಕ್ಕೆ ಪಕ್ಷದ ನಡೆ ಏನು? ಪರಿಷತ್ ಚುನಾವಣೆಗೆ ಅಭ್ಯರ್ಥಿ ಕಣಕ್ಕಿಳಿಸಬೇಕಾ? ಎಂಬುದರ ಬಗ್ಗೆ ನಾಳೆಯ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಂತಿಮ ತೀರ್ಮಾನವಾಗಲಿದೆ. ಪರಿಷತ್ ಸ್ಥಾನವನ್ನು ಕಾಂಗ್ರೆಸ್ ಗೆ ಬಿಟ್ಟು ಕೊಟ್ಟು, ರಾಜ್ಯಸಭೆಗೆ ಸಹಕಾರ ಕೇಳುವ ಬಗ್ಗೆ ನಾಳೆಯ ಸಭೆಯಲ್ಲಿ ಜೆಡಿಎಸ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ.



First published: